ಮತ್ತೊಂದು ಹಣಕಾಸು ಹಿಂಜರಿತ ಎದುರಾಗಲಿದೆಯೇ?

 ಅನ್ನದಾನೇಶ ಶಿ. ಸಂಕದಾಳ.

south-korea

ಸೆಪ್ಟಂಬರ್ 1 ರಂದು ಹೊರಬಂದ ತೆಂಕಣ ಕೊರಿಯಾದ ವ್ಯಾಪಾರ ವಹಿವಾಟಿನ ಅಂಕಿ-ಅಂಶಗಳು ಎಲ್ಲರನ್ನು ಅಚ್ಚರಿಗೊಳಿಸಿವೆ. ಆ ನಾಡಿನ ಹಣಕಾಸಿನ ಸ್ತಿತಿ ಬಗ್ಗೆ ಅಶ್ಟೇನೂ ಒಳ್ಳೆಯ ಅನಿಸಿಕೆಗಳನ್ನು ಹೊಂದಿರದ ಹಣಕಾಸರಿಗರನ್ನೂ (economic forecasters ) ಆ ಅಂಕಿ-ಅಂಶಗಳು ಅಚ್ಚರಿಗೊಳಿಸಿವೆ. ತೆಂಕಣ ಕೊರಿಯಾದ ಹೊರಮಾರುಗೆಯ (export) ವಹಿವಾಟುಗಳು ಬಹು ದೊಡ್ಡಮಟ್ಟದ ಇಳಿಕೆಯನ್ನು ಕಂಡಿದೆ. ಕಳೆದ ವರ‍್ಶದ ಇದೇ ತಿಂಗಳಿಗೆ ಹೋಲಿಸಿ ನೋಡಿದರೆ ಹೊರಮಾರುಗೆಯು ಶೇ 14.7 ರಶ್ಟು ಇಳಿಕೆ ಕಂಡಿದೆ – ಹತ್ತತ್ರ 40 ಬಿಲಿಯನ್ ಡಾಲರ್ ನಶ್ಟು! ಕೆಲವೇ ಕೆಲವು ಸೀಳುನೋಡುಗರು (analysts) ಶೇ 6 ಕ್ಕಿಂತಾ ಹೆಚ್ಚು ಇಳಿಕೆ ಕಾಣುತ್ತದೆ ಎಂದು ಎಣಿಸಿದ್ದರು. ಮಾರ‍್ಗನ್ ಸ್ಟ್ಯಾನ್ಲೇ (Morgan Stanley) ಎಂಬ ‘ಹೂಡಿಕೆ ಹಣಮನೆ’ (investment bank) ತೆಂಕಣ ಕೊರಿಯಾದ ಬೆಳವಣಿಗೆಯ ತನ್ನ ಮುನ್ಸೂಚನೆಯನ್ನು ಶೇ 2.5 ರಿಂದ ಶೇ 2.3 ಕ್ಕೆ ತಗ್ಗಿಸಿದೆ.

ಹೊರಮಾರುಗೆಯು ತೆಂಕಣ ಕೊರಿಯಾದ ‘ಒಟ್ಟು ಮಾಡುಗೆಯ ಬೆಲೆ’ಗೆ (GDP) ಸರಿ ಸುಮಾರು ಶೇ 50 ರಶ್ಟು ಕಾಣಿಕೆ ನೀಡುತ್ತದೆ. ಜಪಾನಿನ ಸಲುವಳಿಯಾದ (currency) ‘ಯೆನ್’ ಎದಿರು ತೆಂಕಣ ಕೊರಿಯಾದ ಸಲುವಳಿ ‘ವೊನ್’ ಕುಸಿತ ಕಾಣುತ್ತಿದೆ. ಈ ಬೆಳವಣಿಗೆ ಮುಕ್ಯವಾದ ಹೊರಮಾರುಗೆ ವಹಿವಾಟುಗಳ ಮಾರುಕಟ್ಟೆಗಳಲ್ಲಿ ತೆಂಕಣ ಕೊರಿಯಾಗೆ ಹಿನ್ನಡೆಯನ್ನುಂಟು ಮಾಡಿದೆ. ಚೀನಾದವರು ಪದೇ ಪದೇ ತಮ್ಮ ಸಲುವಳಿಯಾದ ‘ಯುವಾನ್’ ನ ಬೆಲೆತಗ್ಗಿಸುತ್ತಿರುವುದು ಕೂಡ ತೆಂಕಣ ಕೊರಿಯಾದವರಿಗೆ ತೊಂದರೆ ಉಂಟುಮಾಡಿದೆ. ಯಾಕೆಂದರೆ ಅವರ ಶೇ 25 ರಶ್ಟು ಹೊರಮಾರುಗೆಯ ವಹಿವಾಟುಗಳು ಚೀನಾದ ಜೊತೆಯೇ ಇದೆ. ತಾತ್ಕಾಲಿಕವಾಗಿ ಬಿಡುಗಡೆ ಮಾಡಿರುವ ತೆಂಕಣ ಕೊರಿಯಾದ ಕಾರು ಮಾರಾಟದ ಅಂಕಿ-ಅಂಶಗಳು ಆಗಸ್ಟ್ ತಿಂಗಳಿಗೆ ಶೇ 33 ರಶ್ಟು ಇಳಿಕೆ ತೋರಿಸುತ್ತಿವೆ. ಮತ್ತೊಂದೆಡೆ ಜಗತ್ತಿನ ಚೂಟಿಯುಲಿಯ (smartphone) ಮಾರುಕಟ್ಟೆಯಲ್ಲಿ ತನ್ನದೇ ಪಾರುಪತ್ಯ ಇರಬೇಕೆಂಬ ಆಸೆ ಹೊಂದಿರುವ ಚೀನಾ, ತೆಂಕಣ ಕೊರಿಯಾದ ಸ್ಯಾಮ್ಸಂಗ್ ಕೂಟದವರಿಗೆ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ. ಆದ್ದರಿಂದ ಚೂಟಿಯುಲಿಗಳ ಹೊರಮಾರುಗೆ ಹೆಚ್ಚಾದರೂ, ಅಗ್ಗದ ಬೆಲೆಗೆ ದಕ್ಕುತ್ತಿರುವ ಚೀನಾದಲ್ಲಿ ತಯಾರಾದ ಚೂಟಿಯುಲಿಗಳು ತೆಂಕಣ ಕೊರಿಯಾದ ಗಳಿಕೆಯನ್ನು ಕಡಿತಗೊಳಿಸಿವೆ.

ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯು ಪದೇ ಪದೇ ಕಡಿಮೆ ಆಗುತ್ತಿರುವುದು ತೆಂಕಣ ಕೊರಿಯಾಗೆ ತಲೆಬಿಸಿ ಮಾಡಿದೆ. ಪೆಟ್ರೋಲಿನಿಂದ ತಯಾರು ಮಾಡುವ ಮಾಡುಗೆಗಳು ಆ ನಾಡಿನ ಹೊರಮಾರುಗೆಯಲ್ಲಿ ಹೆಚ್ಚಿನ ಕಾಣಿಕೆ ನೀಡುತ್ತವೆ. ತೈಲ ಬೆಲೆ ಇಳಿಕೆಯಿಂದ ಈ ಮಾಡುಗೆಗಳ ಬೆಲೆಯೂ ಕಡಿಮೆಯಾಗಿವೆ. ಪೆಟ್ರೋಲಿನ ಮಾಡುಗೆಗಳ ಬೆಲೆ ಹೋದ ವರುಶದ ಆಗಸ್ಟ್ ತಿಂಗಳಿನಿಂದ ಶೇ 40 ರಶ್ಟು ತಗ್ಗಿದೆ. ಇಶ್ಟೆಲ್ಲಾ ಇದ್ದರೂ, ಈ ಬೆಳವಣಿಗೆಗಳಿಂದ ತೆಂಕಣ ಕೊರಿಯಾದವರು ಕಳವಳ ಪಡುವಂತದ್ದೇನಿಲ್ಲ ಎಂಬ ಕೆಲ ಅನಿಸಿಕೆಗಳು ಅಲ್ಲಿ ಕೇಳಿ ಬರುತ್ತಿವೆ. ಒಳತರಿಸಿಕೊಳ್ಳುವ (import) ಕಚ್ಚಾ ಸರಕುಗಳ ಬೆಲೆ ಕಡಿಮೆ ಆಗುವುದರಿಂದ, ತೆಂಕಣ ಕೊರಿಯಾದಲ್ಲಿನ ಮಾಡುಗಗಾರರಿಗೆ (manufacturers) ಮಾಡುಗೆಗಳ (products) ವೆಚ್ಚ ತಗ್ಗಿಸುತ್ತಾ ಅನುಕೂಲ ಮಾಡಿಕೊಡುತ್ತದೆ. ಕಳೆದ ಆಗಸ್ಟ್ ತಿಂಗಳಲ್ಲಿ ತೆಂಕಣ ಕೊರಿಯಾದ ಹಣಕಾಸಿನ ಮಂತ್ರಿ ಚೊಯ್ ಕ್ಯುಂಗ್-ಹ್ವಾನ್ (Choi Kyung-hwan) ಅವರು ಚೀನಾದ ಸಲುವಳಿ ‘ಯುವಾನ್’ ನ ಬೆಲೆ ತಗ್ಗಿದರೆ ಅದು ‘ವರ’ವೇ ಎಂದು ಹೇಳಿದ್ದಾರೆ. ಚೀನಾದ ಹೊರಮಾರುಗೆ ಹೆಚ್ಚಾಗುತ್ತಿದ್ದರೆ, ಅದು ಮಾಡುಗೆಗಳಿಗೆ ಬೇಕಾಗುವ ನಡುವಣ (intermediate) ವಸ್ತುಗಳಾದ ಬಿಡಿ ಇಲೆಕ್ಟ್ರಾನಿಕ್ ವಸ್ತುಗಳ ಬೇಡಿಕೆಯನ್ನು ಹೆಚ್ಚಿಸುತ್ತದೆ. ತಮ್ಮ ನಾಡಿನಿಂದ ಚೀನಾಗೆ ಎಲೆಕ್ಟ್ರಾನಿಕ್ ವಸ್ತುಗಳೇ ಹೆಚ್ಚಾಗಿ ಹೊರಮಾರಾಟವಾಗುವದರಿಂದ ತೆಂಕಣ ಕೊರಿಯಾಗೆ ಅದು ಒಳ್ಳೆಯದೇ ಎಂಬ ಅನಿಸಿಕೆ ಹ್ವಾನ್ ಅವರದ್ದು.

ಆದರೆ ಮಾರುಕಟ್ಟೆಯನ್ನು ಸತತವಾಗಿ ಗಮನಿಸುತ್ತಿರುವವರು ಹ್ವಾನ್ ಅವರ ಅನಿಸಿಕೆಯನ್ನು ಅಶ್ಟಾಗಿ ಒಪ್ಪುತ್ತಿಲ್ಲ. ಯಾಕೆಂದರೆ ತೆಂಕಣ ಕೊರಿಯಾ ಹೊರಮಾರುಗೆಯಲ್ಲಿ ಕಂಡಿರುವ ಇಳಿಕೆ ಗಂಬೀರವಾಗಿದೆ. ತೆಂಕಣ ಕೊರಿಯಾದ ಹೊರಮಾರುಗೆಯ ಅಂಕಿ-ಅಂಶಗಳು ಕೇವಲ ಚೀನಾವನ್ನು ಮಾತ್ರ ಆದರಿಸಿ ಹೇಳಲಾಗುತ್ತಿಲ್ಲ. ಯುರೋಪ್ ನಾಡುಗಳಿಗೂ ತೆಂಕಣ ಕೊರಿಯಾದ ಹೊರಮಾರುಗೆ ವಹಿವಾಟುಗಳು ಶೇ 21 ರಶ್ಟು ಇಳಿಕೆ ಕಂಡಿದೆ.  ‘ಮಾಡುವಿಕೆ ಸರಪಳಿಯಲ್ಲಿ'(production chain) ತೆಂಕಣ ಕೊರಿಯಾದ ಮಾಡುಗವಲಯವು ಮೊದಲ ಸ್ತಾನ ಹೊಂದುತ್ತದೆ. ತೆಂಕಣ ಕೊರಿಯಾದ ಹೆಚ್ಚಿನ ಹೊರಮಾರಾಟಗಳು ಚೀನಾದ ಚೂಟಿಯುಲಿಗಳಿಗೆ ಮತ್ತು ಅಮೆರಿಕಾದ ಮಡಿಲೆಣಿಗಳಿಗೆ (laptops) ಬೇಕಾಗುವ ಬಿಡಿ ಇಲೆಕ್ಟ್ರಾನಿಕ್ ವಸ್ತುಗಳದ್ದಾಗಿವೆ. ಚೀನಾ ಮತ್ತು ಅಮೆರಿಕಾದಲ್ಲೇ ಬೇಡಿಕೆಯು ಕುಸಿತ ಕಂಡಾಗ, ಸಹಜವಾಗಿ ಅದು ಬಿಡಿ ಇಲೆಕ್ಟ್ರಾನಿಕ್ ವಸ್ತುಗಳ ಬೇಡಿಕೆಯನ್ನೂ ತಗ್ಗಿಸುತ್ತದೆ. ಅಂದರೆ, ತೆಂಕಣ ಕೊರಿಯಾವು ಜಾಗತಿಕ ಕೈಗಾರಿಕಾ ವಲಯದ ಆಗುಹೋಗುಗಳನ್ನು ಬಹು ಬೇಗನೇ ಸೆರೆಹಿಡಿದು ತೋರಿಸುತ್ತದೆ. ಆದರಿಂದಲೇ ಜಾಗತಿಕ ವ್ಯಾಪಾರ ವಹಿವಾಟುಗಳ ನಂಬತಕ್ಕ ‘ಮುನ್ನಾಗುಹತೋರುಕ’ವೆಂದೇ (bellwether) ತೆಂಕಣ ಕೊರಿಯಾ ಹೆಸರು ಪಡೆದಿದೆ.

ತೆಂಕಣ ಕೊರಿಯಾದ ಹಣಕಾಸು ಸ್ತಿತಿ ಏಪ್ರಿಲ್-ಜೂನ್ ತಿಂಗಳು ನಡುವೆ ಕೇವಲ ಶೇ 0.3 ರಶ್ಟು ಮಾತ್ರ ಏರಿಕೆ ಕಂಡಿದೆ. ಈ ನಾಡಿನ ಸರಕಾರವು ತನ್ನ ಏಳಿಗೆ ಗುರಿಯನ್ನು ಶೇ 3.8 ರಿಂದ ಶೇ 3.1 ಕ್ಕೆ ತಗ್ಗಿಸಿದೆ. ಈ ನಾಡಿನ ಸೆಂಟ್ರಲ್ ಬ್ಯಾಂಕ್ ಆದ ‘ಬ್ಯಾಂಕ್ ಆಪ್ ಕೊರಿಯಾ’ ವು ಬಡ್ಡಿ ದರವನ್ನು ಇಲ್ಲಿಯವರೆಗೂ ತಲುಪದಂತ ಶೇ 1.5 ಕ್ಕೆ ಇಳಿಸಿದೆ. ಈ ಬಡ್ಡಿದರವು ಇನ್ನೂ ಕಡಿಮೆ ಆಗುವ ಲಕ್ಶಣಗಳೂ ಇವೆ. ಉಳಿದ ನಾಡುಗಳ ಸೆಂಟ್ರಲ್ ಬ್ಯಾಂಕ್ ಗಳೂ ಈ ‘ಮುನ್ನಾಗುಹತೋರುಕ’ ಬೆಳವಣಿಗೆಗಳನ್ನು ಗಮನಿಸದೇ ಇರಲಾರವು.

( ಮಾಹಿತಿ ಸೆಲೆ : economist.com)

(ಚಿತ್ರ ಸೆಲೆ : home.myhughesnet.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: