ಯೋಜನಾ ಆಯೋಗ ರದ್ದಾಗಿದ್ದು ಒಳ್ಳೆಯದೆ

– ಚೇತನ್ ಜೀರಾಳ್.

PLanning15 ಆಗಸ್ಟ್ 2014 ರಂದು ಬಾರತದ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತಮ್ಮ ಬಾಶಣದಲ್ಲಿ ಪ್ಲಾನಿಂಗ್ ಕಮಿಶನ್ ಆಪ್ ಇಂಡಿಯಾವನ್ನು ಮುಚ್ಚುವುದಾಗಿ ಹೇಳಿದರು. ಇಲ್ಲಿಯವರೆಗೂ ಕೆಲಸ ಮಾಡುತ್ತಿದ್ದ ಬಾರತ ಸರಕಾರದ ಸಂಸ್ತೆಯೊಂದನ್ನು ಮುಚ್ಚುವುದರ ಬಗ್ಗೆ ಅದು ಸ್ವಾತಂತ್ರ್ಯ ದಿನಾಚರಣೆಯಂದು ಹೇಳಿದ್ದು ಮತ್ತಶ್ಟು ಗಮನ ಸೆಳೆದಿದ್ದು ಸುಳ್ಳಲ್ಲ. ಪ್ಲಾನಿಂಗ್ ಕಮಿಶನ್ನಿನ ಮೂಲ ಹುಡುಕಿದರೆ ಕಾಣುವುದು ಸೋವಿಯತ್ ಒಕ್ಕೂಟದಲ್ಲಿ.

ಏನಿದು ಪ್ಲಾನಿಂಗ್ ಕಮಿಶನ್ ಆಪ್ ಇಂಡಿಯಾ?
ನಾವು ನಮ್ಮ ಶಾಲಾ ದಿನಗಳಲ್ಲಿ ಸಮಾಜದ ಪುಸ್ತಕದಲ್ಲಿ ಹೆಚ್ಚಾಗಿ ಪಂಚ ವಾರ‍್ಶಿಕ ಯೋಜನೆಯ ಬಗ್ಗೆ ಓದಿರುವುದು ನೆನೆಪಿರಬಹುದು. ಈ ಐದು ವರ‍್ಶದ ಯೋಜನೆಯನ್ನು ಪ್ಲಾನಿಂಗ್ ಕಮಿಶನ್ ಆಪ್ ಇಂಡಿಯಾದವರು ಜಾರಿಗೆ ತರುತ್ತಿದ್ದರು. ಪ್ಲಾನಿಂಗ್ ಕಮಿಶನ್ ಆಪ್ ಇಂಡಿಯಾ ಬಾರತ ಸರಕಾರದ ಸಂಸ್ತೆ. ಇದರ ಹಲವು ಕೆಲಸಗಳಲ್ಲಿ ಮುಕ್ಯವಾಗಿ ಗುರುತಿಸಿಕೊಂಡಿದ್ದು ಐದು ವರ‍್ಶದ ಯೋಜನೆಯ ಮೂಲಕ, ಇದು ಈ ಸಂಸ್ತೆ ಮಾಡುತ್ತಿದ್ದ ಹಲವು ಕೆಲಸಗಳಲ್ಲಿ ಒಂದು. ಈ ಸಂಸ್ತೆಯನ್ನು ಸಂವಿದಾನದ ಕಲಂ 39 ರ ಅನ್ವಯ ಹುಟ್ಟು ಹಾಕಲಾಯಿತು. ಈಗ ಈ ಸಂಸ್ತೆಯನ್ನು 2014 ರಲ್ಲಿ ಮುಚ್ಚಲಾಗುತ್ತಿದೆ. ಹಣಕಾಸಿನ ವಿಶಯದಲ್ಲಿ ಯೋಜನೆಗಳನ್ನು ತಯಾರಿಸುವ ಕೆಲಸ 1938ರಲ್ಲಿ ಅಂದಿನ ಕಾಂಗ್ರೆಸ್ ಮುಂದಾಳಾಗಿದ್ದ ಶ್ರೀ ಸುಬಾಶ್ ಚಂದ್ರ ಬೋಸ್ ಅವರು ಮೊದಲಿಟ್ಟರು. ಅಲ್ಲಿಂದ 1944 – 1946 ರ ವರೆಗೆ ಬ್ರಿಟೀಶ್ ಸರಕಾರ ಯೊಜನಾ ಸಂಸ್ತೆಯೊಂದನ್ನು ಆರಂಬಿಸಿತ್ತು.

ಬಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಔಪಚಾರಿಕವಾಗಿ ಯೋಜನಾ ಆಯೋಗವೊಂದನ್ನು ಅಳವಡಿಸಿಕೊಳ್ಳಲಾಯಿತು. ಈ ಸಂಸ್ತೆಯು ನೇರವಾಗಿ ಪ್ರದಾನಮಂತ್ರಿಗಳಿಗೆ ವರದಿ ಒಪ್ಪಿಸುತ್ತದೆ. ಈ ಸಂಸ್ತೆಯನ್ನು 15 ಮಾರ‍್ಚ್ 1950 ರಲ್ಲಿ ಹುಟ್ಟುಹಾಕಲಾಯಿತು. ಅಂದಿನ ಪ್ರದಾನಮಂತ್ರಿಗಳಾಗಿದ್ದ ಶ್ರೀ ಜವಾಹರ್ ಲಾಲ್ ನೆಹರು ಅವರು ಈ ಸಂಸ್ತೆಯ ಮೇಲಾಳಾಗಿದ್ದರು. ಗಮನಿಸಬೇಕಾದ ಅಂಶವೆಂದರೆ ಈ ಸಂಸ್ತೆಯ ಹುಟ್ಟು ಸಂವಿದಾನದ ಅತವಾ ಯಾವುದೇ ಕಟ್ಟಳೆಯ ನಿಬಂದನೆಗೆ ಒಳಪಟ್ಟಿಲ್ಲ, ಬದಲಾಗಿ ಇದು ಕೇಂದ್ರ ಸರಕಾರದ ಒಂದು ಕೈಯ್ಯಾಗಿ ಕೆಲಸ ಮಾಡುತ್ತಿತ್ತು.
ಈ ಸಂಸ್ತೆ ಮೊದಲ ಐದು ವರ‍್ಶದ ಯೋಜನೆಯನ್ನು 1951 ರಲ್ಲಿ ಕ್ರುಶಿ ಕ್ಶೇತ್ರದ ಬೆಳವಣೆಗೆಗೆ ಗಮನಹರಿಸಲು ತಯಾರಿಸಲಾಯಿತು. ಇಲ್ಲಿಯವರೆಗೂ ಒಟ್ಟು ಹನ್ನೆರಡು ಐದು ವರ‍್ಶದ ಯೋಜನೆಗಳನ್ನು ತಯಾರಿಸಲಾಗಿದೆ. ಕೊನೆಯ ಐದು ವರ‍್ಶದ ಯೊಜನೆ 2012 – 2014 ರವರೆಗೆ ಇತ್ತು. ಈಗ ಈ ಸಂಸ್ತೆಯನ್ನು ಮುಚ್ಚಿರುವುದರಿಂದ ಈ ಯೋಜನೆಯ ಅನ್ವಯ ಕೆಲಸಗಳು ನಡೆಯುವುದು ಅನುಮಾನ.

ಪ್ಲಾನಿಂಗ್ ಕಮಿಶನ್ನಿನ ಮುಕ್ಯ ಕೆಲಸಗಳೇನು?
1950 ರ ಸರಕಾರದ ಗೊತ್ತುವಳಿಯ ಅನ್ವಯ ಪ್ಲಾನಿಂಗ್ ಕಮಿಶನ್ ಗೆ ಈ ಕೆಳಗಿನ ಕೆಲಸಗಳನ್ನು ಗೊತ್ತುಪಡಿಸಲಾಗಿತ್ತು:

  • ದೇಶದ ಸಂಪತ್ತು, ಬಂಡವಾಳ ಹಾಗೂ ಮಾನವ ಸಂಪನ್ಮೂಲದ ಬೆಲೆಕಟ್ಟುವಿಕೆ, ಇದರ ಜೊತೆಗೆ ನುರಿತ ಕೆಲಸಗಾರರ ಮಾಹಿತಿ ಹಾಗೂ ಈ ಕೆಲಸಗಾರರ ಸಂಕ್ಯೆಯನ್ನು ದೇಶದ ಅವಶ್ಯಕತೆಯಂತೆ ಹೇಗೆ ಹೆಚ್ಚಿಸಬಹುದು ಅನ್ನುವುದರ ಬಗ್ಗೆ ಕೆಲಸ ಮಾಡುವುದು
  • ದೇಶದ ಸಂಪತ್ತನ್ನು ಸಮರ‍್ಪಕವಾಗಿ ಬಳಸುವ ಬಗ್ಗೆ ಯೋಜನೆ ತಯಾರಿಸುವುದು
  • ಯೋಜನೆಗಳಿಗೆ ಹಂತಗಳನ್ನು ಗುರುತಿಸುವುದು ಹಾಗೂ ಯಾವ ಹಂತಕ್ಕೆ ಎಶ್ಟು ಮಹತ್ವ ಹಾಗೂ ಪ್ರತಿ ಹಂತ ಮುಗಿಸಲು ಬೇಕಿರುವ ಸಂಪನ್ಮೂಲಗಳನ್ನು ಸೂಚಿಸುವುದು
  • ಆರ‍್ತಿಕತೆಯ ಮುಂದುವರಿಕೆಗೆ ಇರುವ ಅಡತಡೆಗಳನ್ನು ಗುರುತಿಸುವುದು
  • ದೇಶದ ಸಾಮಾಜಿಕ-ರಾಜಕೀಯ ಪರಿಸ್ತಿತಿಯ ಅನುಗುಣವಾಗಿ ಯೋಜನೆಗಳನ್ನು ಯಶಸ್ವಿಯಾಗಿ ಮುಗಿಸಲು ಬೇಕಿರುವ ಸ್ತಿತಿಗಳನ್ನು ಕಂಡುಹಿಡಿಯುವುದು
  • ಯೋಜನೆಗಳನ್ನು ಮುಗಿಸಲು ಬೇಕಿರುವ ಯಂತ್ರಗಳು, ಕಾಲದಿಂದ ಕಾಲಕ್ಕೆ ಯೋಜನೆಯ ಮುಂದುವರಿಕೆಯ ಬಗ್ಗೆ ಮಾಹಿತಿ ಕಲೆಹಾಕಿ, ಯೋಜನೆಗಳು ಮುಗಿಸಲು ಬೇಕಿರುವ ವಾತಾವರಣವನ್ನು ಒದಗಿಸುವುದು
  • ಯೋಜನೆಗಳನ್ನು ಯಶಸ್ವಿಯಾಗಿ ಮುಗಿಸಲು ಕಾಲದಿಂದ ಕಾಲಕ್ಕೆ ಶಿಪಾರಸ್ಸುಗಳನ್ನು ಮಾಡುವುದು. ಸಂಸ್ತೆ ಮಾಡುವ ಶಿಪಾರಸ್ಸುಗಳು ಸದ್ಯದ ಹಣಕಾಸಿನ ಪರಿಸ್ತಿತಿ, ಸದ್ಯದ ನೀತಿಗಳು, ಯೋಜನೆಗಳಿಗೆ ಬೇಕಿರುವ ಕ್ರಮಗಳು ಹೀಗೆ ಹಲವು ಶಿಪಾರಸ್ಸುಗಳನ್ನು ನೀಡುತ್ತದೆ. ಹಾಗೂ ಕೇಂದ್ರ ಅತವಾ ರಾಜ್ಯ ಸರಕಾರಗಳು ತಾವು ಕೇಳಿರುವ ಸಮಸ್ಯೆಗಳಿಗೆ ಉತ್ತರ ಕೊಡುವುದು.

ಕೇಂದ್ರಿಕ್ರುತ ಯೋಜನಾ ಸಂಸ್ತೆ:
ಬಾರತವನ್ನು ರಾಜ್ಯಗಳ ಒಕ್ಕೂಟ ಎಂದು ಕರೆಯಲಾಗುತ್ತದೆ. ರಾಜ್ಯಗಳಿಗೆ ತನ್ನದೇ ಆದ ಹಕ್ಕುಗಳಿದ್ದರೂ, ಕೇಂದ್ರ ಏಕಮುಕವಾಗಿ ತನಗೆ ಬೇಕಾದಾಗ ರಾಜ್ಯಗಳ ಹಕ್ಕನ್ನು ಮೀರಿ ತನ್ನ ನಿರ‍್ದಾರ ತಗೆದುಕೊಂಡಿರುವ ಹಲವಾರು ಎತ್ತುಗೆಗಳು ನಮ್ಮ ಮುಂದಿವೆ. ಪ್ಲಾನಿಂಗ್ ಕಮಿಶನ್ನಿನ ಯೋಚನೆ ಹಾಗೂ ಯೋಜನೆಗಳಲ್ಲಿಯೇ ನಾವು ಕೇಂದ್ರಿಕ್ರುತ ವ್ಯವಸ್ತೆಯನ್ನು ಕಾಣಬಹುದು. ಯೋಜನಾ ಸಂಸ್ತೆಯನ್ನು ಶುರು ಮಾಡಿದಾಗ ಕೇಂದ್ರ ಮತ್ತು ರಾಜ್ಯಗಳ ಆಡಳಿತ ವಲಯದಲ್ಲಿ ಏಕರೀತಿಯ ನೀತಿ (Policy) ಗಳನ್ನು ಹೊಂದಿರ ತಕ್ಕದ್ದು, ಎಲ್ಲಾ ರಾಜ್ಯಗಳು ಒಂದೇ ಬಗೆಯಲ್ಲಿ (Identical) ಇಲ್ಲದಿದ್ದರೂ ಎಲ್ಲ ರಾಜ್ಯಗಳನ್ನು ಒಂದೇ (Similar) ಎಂದು ಹೋಲಿಸಿಕೊಳ್ಳಬಹುದು ಎನ್ನುವುದು ಪ್ಲಾನಿಂಗ್ ಕಮಿಶನ್ನಿನ ಯೋಚನೆಯಾಗಿತ್ತು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಎಲ್ಲಾ ರಾಜ್ಯಗಳಲ್ಲೂ ಒಂದೇ ತರಹದ ಸ್ತಿತಿಯಿದ್ದು, ಎಲ್ಲಾ ರಾಜ್ಯಗಳಲ್ಲೂ ಒಂದೇ ತರಹದ ಆಡಳಿತ ಗುರಿ ಹಾಗೂ ಎಲ್ಲಾ ರಾಜ್ಯಗಳಿಗೂ ಒಂದೇ ತರಹದ ಹಣಕಾಸು ಸಹಾಯ ನೀಡಿದರೆ ಸಾಕು ಎನ್ನುವುದು ಪ್ಲಾನಿಂಗ್ ಕಮಿಶನ್ನಿನ ಯೋಚನೆಯಾಗಿತ್ತು.

ಯೋಜನಾ ಆಯೋಗವು ತನ್ನ ಕೆಲಸವನ್ನು ಸುಲಬ ಮಾಡಿಕೊಳ್ಳಲು ಕೇಂದ್ರ, ರಾಜ್ಯ ಹಾಗೂ ಜಂಟಿ ಪಟ್ಟಿಗಳನ್ನು ಒಟ್ಟುಗೂಡಿಸಿಕೊಂಡಿತು. ರಾಜ್ಯಗಳು ರಾಜ್ಯ ಹಾಗೂ ಜಂಟಿ ಪಟ್ಟಿಯಲ್ಲಿ ಕೆಲಸ ಮಾಡುವ ಹಕ್ಕು ಹೊಂದಿದ್ದರೂ, ಅದರ ನಿಯಂತ್ರಣ ಕೇಂದ್ರದ ಕೈಯಲ್ಲಿ ಆಗುವಂತೆ ಮಾಡಿತು. ಹಾಗಾಗಿ ಇಂದು ಪ್ಲಾನಿಂಗ್ ಕಮಿಶನ್ ಯಾವುದೇ ಯೋಜನೆಯನ್ನು ಮಾಡಿದರೂ, ಅದನ್ನು ಜಾರಿಗೆ ತರಲು ಒಂದೇ ತರಹದ ಆಡಳಿತ ನೀತಿ ಹಾಗೂ ಹಣಕಾಸನ್ನು ಎಲ್ಲಾ ರಾಜ್ಯಗಳಿಗೂ ಕೊಡುತ್ತದೆ. ಎತ್ತುಗೆಗೆ ಒಂದು ರಾಜ್ಯದಲ್ಲಿ ಎಲ್ಲಾ ಮನೆಗಳಲ್ಲೂ ಬಚ್ಚಲು ಮನೆ ಇದ್ದು, ಇನ್ನೊಂದು ರಾಜ್ಯದಲ್ಲಿ ತುಂಬಾ ಕಡಿಮೆ ಬಚ್ಚಲು ಮನೆಗಳಿದ್ದು, ಈ ಬಾರಿ ಯೋಜನಾ ಆಯೋಗ ಬಾರತ ಎಲ್ಲಾ ರಾಜ್ಯಗಳಲ್ಲಿರುವ ಮನೆಗಳಲ್ಲೂ ಬಚ್ಚಲು ಮನೆ ಹೊಂದಿರಬೇಕು ಎಂದು ಗುರಿ ನಿಗದಿ ಮಾಡಿ, ಅದಕ್ಕೆ ಇಂತಿಶ್ಟು ಹಣ ಎಂದು ಪ್ರತಿ ರಾಜ್ಯಕ್ಕೂ ಸಮನಾಗಿ ಹಂಚುತ್ತದೆ.ಈಗ ಸಮಸ್ಯೆ ಎಂದರೆ ಮೊದಲನೆಯ ರಾಜ್ಯದ ಎಲ್ಲ ಮನೆಗಳಲ್ಲೂ ಬಚ್ಚಲು ಮನೆ ಇದ್ದರೂ, ರಾಜ್ಯಕ್ಕೆ ಈ ಯೋಜನೆಯನ್ನು ತಿರಸ್ಕರಿಸುವ ಹಕ್ಕಿಲ್ಲ ಅತವಾ ಇದಕ್ಕಾಗಿ ಮೀಸಲಿಟ್ಟ ಹಣವನ್ನು ಬೇರೆ ಯೋಜನೆಗಳಿಗೆ ಕರ‍್ಚು ಮಾಡುವ ಶಕ್ತಿ ಇಲ್ಲ. ಒಂದು ವೇಳೆ ರಾಜ್ಯ ಈ ಹಣವನ್ನು ಬಳಸದೆ ಹೋದರೆ ಕೇಂದ್ರ ಈ ಹಣವನ್ನು ಹಿಂದಕ್ಕೆ ಪಡೆದುಕೊಳ್ಳುತ್ತದೆ. ಇದು ಯೋಜನಾ ಆಯೋಗ ಕೆಲಸ ಮಾಡುವ ಪರಿ.

ಕೇಂದ್ರೀಕ್ರುತ ವ್ಯವಸ್ತೆಯನ್ನು ಹೊಂದಿರುವ ಯೋಜನಾ ಆಯೋಗದ ವಿರುದ್ದ ಈ ಹಿಂದೆ 1984 ರಲ್ಲಿ ಅಂದಿನ ತಮಿಳುನಾಡು ಸರಕಾರ ನಾಲ್ಕನೇ ಯೋಜನಾ ಆಯೋಗಕ್ಕೆ ಒಂದು ಮನವಿಯನ್ನು ಸಲ್ಲಿಸುತ್ತದೆ, ಅದರಲ್ಲಿ ಒಕ್ಕೂಟ ವ್ಯವಸ್ತೆಯ ಬಗ್ಗೆ ಹೇಳುತ್ತಾ “ಸಂವಿದಾನದ ಯೋಜನೆಗಳ ಅನ್ವಯ, ಸಂಪನ್ಮೂಲಗಳನ್ನು ವಿಕೇಂದ್ರಿಕರಣಗೊಳಿಸುವ ಮೂಲಕ ರಾಜ್ಯಗಳಿಗೆ ಹೆಚ್ಚಿನ ಹಣಕಾಸಿನ ಸ್ವಾತಂತ್ರ್ಯವನ್ನು ನೀಡಬೇಕು ಆದರೆ ಅದರ ಬದಲಾಗಿ ನಿಯಮ ಬದ್ದ ಅನುದಾನ ಸಂವಿದಾನದ ಆಶಯಕ್ಕೆ ಮಾರಕ” ಎಂದಿತ್ತು.

ಹೀಗೆ ಪ್ರತಿ ಯೋಜನೆಯನ್ನು ತನ್ನ ಮೂಗಿನ ನೇರಕ್ಕೆ ನೋಡುವ, ಆ ಯೋಜನೆಯನ್ನು ಮಾಡಿದರೆ ಮಾತ್ರ ಹಣ ನೀಡುವುದಾಗಿ ಹೇಳುವ, ಆ ಯೋಜನೆಯಿಂದ ಒಂದು ರಾಜ್ಯಕ್ಕೆ ಒಳಿತಾಗುತ್ತದೋ? ಅಸಲಿಗೆ ಆ ಯೋಜನೆ ಆ ರಾಜ್ಯಕ್ಕೆ ಅವಶ್ಯಕವೇ ಎಂದು ನೋಡದೆ ಪ್ರತಿಯೊಂದನ್ನು ಗಂಟಲಲ್ಲಿ ತುರುಕಿದಂತೆ ಯೋಜನೆಗಳನ್ನು ರಾಜ್ಯದ ಒಪ್ಪಿಗೆ ಪಡೆಯದೇ ಜಾರಿಗೆ ತರಲು ಹೇಳುವುದು ಯೋಜನಾ ಆಯೋಗ ಮತ್ತು ಕೇಂದ್ರ ಸರಕಾರ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವಂತೆ ಮಾಡಿದೆ.

ವಿಕೇಂದ್ರಿಕರಣವಾಗಬೇಕಿದೆ:
ನಿಜವಾದ ಒಕ್ಕೂಟ ವ್ಯವಸ್ತೆಯಲ್ಲಿ ಒಂದು ರಾಜ್ಯಕ್ಕೆ ತನ್ನ ಒಳಿತಿಗೆ ಬೇಕಿರುವ ಯೋಜನೆಗಳನ್ನು ಹಾಗೂ ಅದಕ್ಕೆ ಬೇಕಿರುವ ಸಂಪನ್ಮೂಲವನ್ನು ಕೂಡಿಸಿಕೊಳ್ಳುವ ಹಕ್ಕು ಇರಬೇಕು. ಆದರೆ ಇಂದು ರಾಜ್ಯ ತಾನು ಸಂಗ್ರಹಿಸುವ ಬಹುಪಾಲು ಹಣವನ್ನು ಕೇಂದ್ರಕ್ಕೆ ಕೊಡುತ್ತದೆ, ಅದು ಮತ್ತೆ ಯೋಜನಾ ಆಯೋಗದ ಯೋಜನೆಯ ಮೂಲಕ ಒಂದುಶ್ಟನ್ನು ವಾಪಸ್ ಪಡೆದುಕೊಳ್ಳುತ್ತದೆ. ಆದರೆ ಸರಿಯಾಗಿ ನೋಡಿದರೆ ರಾಜ್ಯಕ್ಕೆ ತಾನು ಸಂಗ್ರಹಿಸುವ ಹಣವನ್ನು ತಾನು ಬಳಸಿಕೊಳ್ಳುವ ಅದಿಕಾರ ಇರಬೇಕು, ಅದಕ್ಕಾಗಿ ಕೇಂದ್ರದ ಮುಂದೆಯಾಗಲಿ, ಅತವಾ ಯೋಜನಾ ಆಯೋಗದ ಮುಂದೆಯಾಗಲಿ ಮಂಡಿಯೂರಿ ಬೇಡುವ ಪರಿಸ್ತಿತಿ ಬೇಕಾಗಿಲ್ಲ.

ಮೊದಲನೆಯದಾಗಿ ಯೋಜನಾ ಆಯೋಗವೇ ಒಕ್ಕೂಟ ವ್ಯವಸ್ತೆಯಲ್ಲಿ ಅನವಶ್ಯಕ. ಒಂದು ವೇಳೆ ಇದ್ದರೆ, ಅದು ಕೇವಲ ಯೋಜನೆಗಳನ್ನು ತಯಾರಿಸುವ ಹಕ್ಕನ್ನು ಮಾತ್ರ ಹೊಂದಿರಬೇಕು, ಅದು ನೀಡುವ ಶಿಪಾರಸ್ಸನ್ನು ರಾಜ್ಯ ಒಪ್ಪಿಕೊಳ್ಳುವ ಅತವಾ ಬೇಡವೆನ್ನುವ ಹಕ್ಕು ಹೊಂದಿರಬೇಕು. ಅದಕ್ಕಾಗಿ ಮೊದಲು ಕೇಂದ್ರ, ಜಂಟಿ ಪಟ್ಟಿಯಲ್ಲಿರುವ ಹಲವು ವಿಶಯಗಳು ರಾಜ್ಯದ ಪಟ್ಟಿಗೆ ಬರಬೇಕಾಗಿದೆ.

ಇಂದು ಯೋಜನಾ ಆಯೋಗವೇನೋ ರದ್ದಾಗಿದೆ, ಆದರೆ ಪ್ರದಾನ ಮಂತ್ರಿಗಳು ಅದರ ಬದಲಾಗಿ ಮತ್ತೊಂದು ಸಂಸ್ತೆಯನ್ನು ಕಟ್ಟುವುದಾಗಿ ಹೇಳಿದ್ದಾರೆ. ಆದರೆ ಅದು ಕೂಡ ಈಗಿರುವ ಯೋಜನಾ ಆಯೋಗ ಎಂಬ ಅನೆಗೆ ಬಿಳಿ ಬಣ್ಣ ಬಳಿದು ಹೊಸ ಆನೆ ಎಂದು ತೋರಿಸುವ ಪ್ರಯತ್ನವಾಗದಿರಲಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: