ನೆಮ್ಮದಿಯ ಗುರುತಾಗಿರುವ ‘ನಗುವ ಬುದ್ದ’
– ರತೀಶ ರತ್ನಾಕರ.
ಡೊಳ್ಳು ಹೊಟ್ಟೆ, ಬೋಳು ತಲೆ, ಜೋತು ಬಿದ್ದಿರುವ ದೊಡ್ಡ ಕಿವಿಗಳು, ಕೈಯಲ್ಲಿ ಇಲ್ಲವೇ ಕುತ್ತಿಗೆಯಲ್ಲಿ ದಪ್ಪ ಮಣಿಗಳಿರುವ ಸರ, ಮೈಯನ್ನು ಅರೆಮುಚ್ಚುವ ನಿಲುವಂಗಿ, ಇವೆಲ್ಲದಕ್ಕಿಂತ ಮಿಗಿಲಾಗಿ ಮುಕದಲ್ಲಿ ಚೆಂದದ ನಗು. ಆ ನಗುವನ್ನು ಕಂಡರೆ ಮನದಲ್ಲಿ ಏನೋ ಒಂದು ಬಗೆಯ ನೆಮ್ಮದಿ. ಒಟ್ಟಾರೆಯಾಗಿ ಆ ಮೂರ‍್ತಿಯ ಕಂಡರೆ ನಲಿವು. ಅದೇ ‘ನಗುವ ಬುದ್ದನ‘ (Laughing Buddha) ಮೂರ‍್ತಿ.
ಎರಡು ಕೈಗಳನ್ನು ಮೇಲೆತ್ತಿಕೊಂಡು, ಅಂಗೈಯನ್ನು ಬಾನಿಗೆ ತೋರಿಸುತ್ತಾ ನಿಂತಿರುವ ನಗುವ ಬುದ್ದರ ಮೂರ‍್ತಿ, ಇಲ್ಲವೇ ಇನ್ಯಾವುದಾದರು ಬಗೆಯಲ್ಲಿ ಇರುವ ಮೂರ‍್ತಿಯನ್ನು ಹಲವು ಕಡೆಗಳಲ್ಲಿ ಕಾಣಬಹುದು. ಈ ನಗುವ ಬುದ್ದ ಒಬ್ಬ ಬೌದ್ದ ಬಿಡುಗ(monk)ರು. ಇವರು ಬುದ್ದನ ಮತ್ತೊಂದು ರೂಪ ಎಂಬ ಅನಿಸಿಕೆ ಹಲವುಕಡೆ ಇದೆ. ಆದರೆ ದಿಟವಾದ ಗೌತಮ ಬುದ್ದರೇ ಬೇರೆ ಈ ಬೌದ್ದ ಬಿಡುಗರೇ ಬೇರೆ. ನಗುವ ಬುದ್ದರನ್ನು ‘ಬುದೈ‘(Budai) ಇಲ್ಲವೇ ‘ಪುತಾಯ್'(Putai) ಎಂದು ಚೀನಾದಲ್ಲಿ ಕರೆದರೆ, ‘ಹೊತೈ'(Hotei) ಎಂದು ಜಪಾನಿಗರು ಕರೆಯುತ್ತಾರೆ. ಇನ್ನು ವಿಯೇಟ್ನಾಂ ಕಡೆಯಲ್ಲಿ ‘ಬೋದಾಯ್'(Bo-Dai) ಎಂದು ಕರೆಯುತ್ತಾರೆ. ಆದರೆ ನಗು ಮೋರೆಯ ಹೊತ್ತ ಈ ಮೂರ‍್ತಿ ಎಲ್ಲಾಕಡೆಗಳಲ್ಲಿ ‘ನಗುವ ಬುದ್ದ’ ಎಂದೇ ಚಿರಪರಿಚಿತ.
ಚೀನಾದ ಜನಪದ ಮತ್ತು ಹಳಮೆಯ ಸೆಲೆಗಳು ತಿಳಿಸಿರುವಂತೆ, ನಗುವ ಬುದ್ದರ ಕಾಲ ಸುಮಾರು 10 ನೇ ನೂರೇಡು. ಚೀನಾದ ಮೂಡಣ ದಿಕ್ಕಿನ ಕರಾವಳಿಯಲ್ಲಿರುವ ‘ಪುನ್-ಗ್ವಾ'(Fenghua) ಎಂಬುದು ಇವರ ಹುಟ್ಟೂರು. ಇವರ ಬೌದ್ದ ಹೆಸರು ‘ಕ್ವಾಯ್ಚಿ‘(Qieci), ಅಂದರೆ ‘ಆಣೆ ಮಾಡು’ ಎಂದು. ಒಂದು ದೊಡ್ಡ ಬಟ್ಟೆಯ ಚೀಲದೊಡನೆ ಯಾವಾಗಲು ಕಾಣಿಸಿಕೊಳ್ಳುತ್ತಿದ್ದರಿಂದ ‘ಬುದೈ’ ಎಂದರೆ ‘ಬಟ್ಟೆಯ ಚೀಲ’ ಎಂದು ಮಂದಿಯು ಕರೆಯುತ್ತಿದ್ದರು. ಕೊನೆಗೆ ಅದೇ ಹೆಸರು ಉಳಿದುಕೊಂಡಿತು.
ಒಳ್ಳೆಯ ಮತ್ತು ಒಲುಮೆಯ ನಡತೆಯನ್ನು ಹೊಂದಿದ್ದ ಇವರನ್ನು ಮಂದಿಯು ತುಂಬಾ ಮೆಚ್ಚುತ್ತಿದ್ದರು. ನಗು ಮೋರೆಯೊಂದಿಗೆ ಊರೂರು ತಿರುಗುತ್ತಿದ್ದ ಇವರು, ತಾವು ಹೊತ್ತು ತರುವ ಬಟ್ಟೆಯ ಚೀಲದಲ್ಲಿ ಬಡ ಮಕ್ಕಳಿಗೆಂದು ತಿಂಡಿ ಇಲ್ಲವೇ ಉಡುಗೊರೆಗಳನ್ನು ತರುತ್ತಿದ್ದರು. ಹಾದಿಯಲ್ಲಿ ಸಿಕ್ಕ ಮಕ್ಕಳಿಗೆ ತಿಂಡಿಯನ್ನು ಕೊಟ್ಟು, ಅವನ್ನು ನಗಿಸಿ ಮುಂದೆ ಸಾಗುತ್ತಿದ್ದರು. ಇದಲ್ಲದೇ, ತನ್ನ ಮಾತಿನ ಚಳಕದಿಂದ ಬೌದ್ದ ದರ‍್ಮದ ಹಿರಿಮೆಯನ್ನು ಮಂದಿಗೆ ತಿಳಿಸುತ್ತಿದ್ದರು. ಚೀನಿಯರ ನೆಚ್ಚಿನ ಬೌದ್ದ ಬಿಡುಗರಾಗಿದ್ದ ಇವರು ಇಂದು ಚೀನಿಯರ ನಡೆ-ನುಡಿಯಲ್ಲಿ ‘ನೆಮ್ಮದಿ’ಯ ಗುರುತಾಗಿ ಉಳಿದಿದ್ದಾರೆ.
ಜಾನಪದದಲ್ಲಿ ಹಾಸುಹೊಕ್ಕಿರುವ ನಗುವ ಬುದ್ದ:
– ನಗುವ ಬುದ್ದರ ಹೊಟ್ಟೆಯನ್ನು ಸವರಿದರೆ ಸಿರಿ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಚೀನಾ ಹಾಗು ಜಪಾನಿನವರಲ್ಲಿ ಈಗಲೂ ಇದೆ.
– ಈತನೇ ಮುಂದೆ ಹುಟ್ಟಿಬರುವ ‘ಮೈತ್ರೇಯ ಬುದ್ದ’ ಎಂದು ಬೌದ್ದ ದರ‍್ಮದವರು ನಂಬುತ್ತಾರೆ. “ಮುಂದೆ ತಾನು ಮೈತ್ರೇಯ ಬುದ್ದನಾಗಿ ಹುಟ್ಟಿಬರುವೆ, ಎಂದು ನಗುವ ಬುದ್ದರೇ ಸಾಯುವ ಮುನ್ನ ಹೇಳುತ್ತಾರೆ.” ಹೀಗೆಂದು ಬೌದ್ದರ ಬಜನೆಯ ಹಾಡುಗಳಲ್ಲಿ ಬರುತ್ತದೆ.
– ಬೌದ್ದದರ‍್ಮದ ಕಲಿಕೆಮನೆಗಳೆಂದು ಕರೆಸಿಕೊಳ್ಳುವ ‘ಜೆನ್‘(Zen)ಗಳಲ್ಲಿ, ಮಕ್ಕಳಿಗೆ ಬೌದ್ದ ದರ‍್ಮದ ಹಿರಿಮೆಯನ್ನು ಹೇಳಿಕೊಡುಲು ಬಳಸುವ ಸಣ್ಣ ಕತೆಗಳಲ್ಲಿ ಬುದೈ ಪಾತ್ರ ಬರುತ್ತದೆ. ಆ ಕತೆಯು ಹೀಗಿದೆ. ‘ಮಕ್ಕಳಿಗೆ ತಿಂಡಿಯನ್ನು ಹಂಚುತ್ತಾ ಮುಂದೆ ಸಾಗುತ್ತಿದ್ದ ಬುದೈರನ್ನು ‘ಜೆನ್’ನ ಮೇಲುಗರೊಬ್ಬರು ನಿಲ್ಲಿಸಿ, (1)”ಜೆನ್‍ನ ಹೆಚ್ಚುಗಾರಿಕೆ ಏನು?” ಎಂದು ಕೇಳುತ್ತಾರೆ. ಬುದೈ ಅವರು ತಾವು ಹೊತ್ತಿದ್ದ ಬಟ್ಟೆಯ ಚೀಲವನ್ನು ಕೆಳಗಿಳಿಸುತ್ತಾರೆ. ಸುಮ್ಮನೆ ಕೆಲ ಹೊತ್ತು ನಿಲ್ಲುತ್ತಾರೆ. ಬಳಿಕ (2)”ಜೆನ್ ಅನ್ನು ಅರಿಯುವುದಾದರು ಹೇಗೆ?” ಎಂದು ತಿರುಗಿ ಮೇಲುಗರನ್ನು ಕೇಳಿ, ಬಟ್ಟೆಯ ಮೂಟೆಯನ್ನು ಹೆಗಲಿಗೇರಿಸಿಕೊಂಡು, ಮತ್ತೇನು ನುಡಿಯದೇ ನಗುತ್ತಾ ಮುಂದೆ ಸಾಗುತ್ತಾರೆ.’
ಈ ಕತೆಯ ಹುರುಳು ಹೀಗಿದೆ. (1) ಜೆನ್ ನ ಹೆಚ್ಚುಗಾರಿಕೆ ಏನೆಂದರೆ ತಲೆಯಲ್ಲಿ ಹೊತ್ತಿರುವ ಚಿಂತೆಯ ಮೂಟೆಯನ್ನು ಕೆಳಗಿಳಿಸುವುದು. ಯಾವುದೇ ಗೊಂದಲವಿಲ್ಲದೇ ಇರುವುದು. ಇನ್ನು (2) ಜೆನ್ ಅನ್ನು ಅರಿಯುವುದು ಹೇಗೆಂದರೆ ಉಳಿದ ಮಂದಿಯ ಗೊಂದಲವನ್ನು ಹೋಗಲಾಡಿಸುವ ಹೊರೆಯನ್ನು ಹೊರುವುದು. ಮಂದಿಯ ಗೊಂದಲವನ್ನು ಬಗೆಹರಿಸಲು ನೆರವು ನೀಡುವುದು.
ಬುದೈ ಅವರ ಮೂರ‍್ತಿಯನ್ನು ಮನೆ, ಅಂಗಡಿ, ಊಟದ ಮನೆ, ಕೆಲಸ ಮಾಡುವ ಜಾಗಗಳಲ್ಲಿ ಇಟ್ಟರೆ ಅಲ್ಲಿ ನೆಮ್ಮದಿ ನೆಲೆಸುತ್ತದೆ, ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಈಗಲೂ ಇದೆ. ಅದಕ್ಕಾಗಿಯೇ ಇವರ ಮೂರ‍್ತಿಗಳು ಹಲವೆಡೆ ಕಾಣಸಿಗುತ್ತವೆ. ಮಕ್ಕಳ ಮೆಚ್ಚಿನ ಬಿಡುಗರಾಗಿದ್ದ ಬುದೈ ಇಂದಿಗೂ ದೊಡ್ಡತನ, ನೆಮ್ಮದಿ, ಕನಿಕರ, ಮಿಗಿತೆ, ತಾಳ್ಮೆ, ನಗು ಹೀಗೆ ಹಲವು ಒಳ್ಳೆಯತನಗಳ ಗುರುತಾಗಿದ್ದಾರೆ.
(ಮಾಹಿತಿ ಸೆಲೆ: thedailyenlightenment.com, wikipedia)
(ಚಿತ್ರ ಸೆಲೆ: peaceloveenlightenment.tumblr.com, fengshui-import.com)
ಇತ್ತೀಚಿನ ಅನಿಸಿಕೆಗಳು