ಪ್ರಾಂಕ್ ಪರ‍್ಟ್ – ಹೊಸ ಬಂಡಿಗಳ ಹಬ್ಬ

ಜಯತೀರ‍್ತ ನಾಡಗವ್ಡ.

IAA-2015_autoshow_frankfurt_2015

ಜರ‍್ಮನಿ ಎಂದ ಕೂಡಲೇ ನೆನಪಿಗೆ ಬರುವುದು ಬಗೆ ಬಗೆಯ ಬ್ರೆಡ್, ಬೇಕರಿ ತಿಂಡಿಗಳು, ಹೊಸ ಚಳಕದ ಸರಕುಗಳು. ಜಗತ್ತಿಗೆ ಹೊಸ ಚಳಕದ ಅರಿವು ನೀಡುತ್ತಲೇ ಬಂದಿರುವ ಯೂರೋಪ್ ಒಕ್ಕೂಟದ ಈ ಹಿರಿಯ ನಾಡು ಜರ‍್ಮನಿ ಕಾರುಗಳನ್ನು ತಯಾರಿಸುವುದರಲ್ಲೂ ಹೆಸರುವಾಸಿ.

ಪೋಕ್ಸ್‌ವ್ಯಾಗನ್(Volkswagen), ಮರ‍್ಸಿಡಿಸ್(Mercedes), ಬಿಎಮ್‌ಡಬ್ಲ್ಯೂ(BMW), ಅವ್ಡಿ(Audi), ಪೋರ‍್ಶ್(Porsche), ಒಪೆಲ್(Opel) ಹೀಗೆ ಹತ್ತಾರು ದೊಡ್ಡ ದೊಡ್ಡ ಕಾರು ಕೂಟಗಳ ತವರು ಜರ‍್ಮನಿ. ಇದೀಗ ಜರ‍್ಮನಿಯಲ್ಲಿ ಜಗತ್ತಿನ ಬಲು ದೊಡ್ಡ ತಾನೋಡಗಳ ತೋರ‍್ಪು(International Auto Exhibition-2015) ನಡೆಯುತ್ತಿದೆ. ಜರ‍್ಮನಿಯ ಹಣಕಾಸಿನ ನೆಲೆವೀಡು ಎಂದೇ ಕ್ಯಾತಿ ಪಡೆದಿರುವ ಊರು ಪ್ರಾಂಕ್ ಪರ‍್ಟ್(Frankfurt) ಇದರ ಆತಿತ್ಯ ವಹಿಸಿದೆ.

ಜರ‍್ಮನಿ ಅಲ್ಲದೇ ಅಮೇರಿಕಾ, ಜಪಾನ್, ಇಟಲಿ, ಪ್ರಾನ್ಸ್, ಕೊರಿಯಾ, ಚೀನಾ, ಇಂಡಿಯಾ, ರಶಿಯಾ ಮುಂತಾದ ದೇಶಗಳ ಕಾರು, ಆಟೋಟದ ಬಂಡಿ, ಹಲಬಳಕೆಯ ಬಂಡಿ ತಯಾರಕರು, ಬಿಡಿಬಾಗ ತಯಾರಿಸುವ ಕೂಟದವರು ಇಲ್ಲಿ ಪಾಲ್ಗೊಂಡಿದ್ದಾರೆ. ಇದೇ ಸೆಪ್ಟೆಂಬರ್ ತಿಂಗಳ 15ನೇ ತಾರೀಕು ಶುರುವಾದ ಈ ತೋರ‍್ಪು 27ನೇ ತಾರೀಕಿನವರೆಗೂ ನಡೆಯಲಿದೆ. ಮೊದಲೆರಡು ದಿನ ಸುದ್ದಿಗಾರರು, ಮಾದ್ಯಮದ ಮಂದಿಗೆ ಮೀಸಲಿದ್ದು ಉಳಿದ ದಿನ ಇತರರಿಗೆ ತೆರೆದುಕೊಂಡಿರಲಿದೆ.

ಮುಂಬರುವ ದಿನಗಳಲ್ಲಿ ಮನುಶ್ಯರ ಓಡಾಟದ ಬಗೆಯನ್ನೇ ಬದಲಿಸಲಿರುವ ಓಡಿಸುಗನಿಲ್ಲದ ಕಾರು, ಹೊಗೆಯುಗುಳದ ಬೆರಕೆ ಬಂಡಿಗಳು, ಮಿಂಚಿನ ಕಸುವಿನ ಬಂಡಿಗಳು ಮಂದಿಯ ಕಣ್ಸೆಳೆಯುತ್ತಿವೆ. ಒಬ್ಬರನ್ನೊಬ್ಬರು ಮೀರಿಸುವಂತಹ ಹೊಸ ಹೊಸ ಚಳಕಗಳೊಂದಿಗೆ ಬಂಡಿ ತಯಾರಕ ಕೂಟಗಳು ಇಲ್ಲಿ ಪಯ್ಪೋಟಿ ನಡೆಸುತ್ತಿವೆ. ಮುಂಬೊತ್ತಿನ ಹೊಳಹಿನ ಬಂಡಿಗಳಿಗೂ ಇಲ್ಲಿ ಕೊರತೆಯಿಲ್ಲ. ಬಿಡಿಬಾಗ ತಯಾರಿಸುವ ಕೂಟಗಳು ಕೂಡ ನಮ್ಮ ಬಿಡಿಬಾಗ ಬಳಸಿ ನಿಮ್ಮ ಕಾರುಗಳ ಅಳವುತನ, ಕಸುವು, ತಿರುಗುಬಲ ಹೆಚ್ಚಿಸಿ, ಹೊಗೆಯುಳುವಿಕೆ ಕಡಿತಗೊಳಿಸಲಾಗಿದೆ ಎಂದು ತಮ್ಮ ಚಳಕ, ಅರಿವುಗಳನ್ನು ತೋರ‍್ಪಡಿಸುತ್ತಿವೆ. ಈ ತಾನೋಡಗಳ ಹಬ್ಬದಲ್ಲಿ ಮಂದಿಯ ಮನಸೆಳೆದ ಕೆಲವು ಬಂಡಿಗಳ ಬಗ್ಗೆ ಕಿರು ನೋಟ ಈ ಕೆಳಗೆ ನೀಡಲಾಗಿದೆ.

ಇಂಡಿಯಾದ ಕಣ್ಣಿನಿಂದ ನೋಡಿದರೆ ಸುಜುಕಿ ಕೂಟ ಈ ತೋರ‍್ಪಿನಲ್ಲಿ ಪಾಲ್ಗೊಂಡು, ಹೊಸ ಪೀಳಿಗೆಯ ಬಾಲೆನೊ (Baleno) ಕಾರನ್ನು ಮುಂದಿಟ್ಟಿದೆ. ಈ ಹಿಂದೆ ಇಂಡಿಯಾದಲ್ಲಿ ಸೇಡಾನ್ ಮಾದರಿಯಲ್ಲಿ ಬಿಡುಗಡೆಯಾಗಿದ್ದ ಬಾಲೆನೊ ಕಾರು ಇದೀಗ ಕಿರು ಹಿಂಗದ ಕಾರಾಗಿ ಇಂಡಿಯಾ ಸೇರಿದಂತೆ ಇತರೆ ದೇಶಗಳಲ್ಲಿ ಮಾರಾಟಗೊಳ್ಳಲಿದೆ. ಮುಂದಿನ ತಿಂಗಳ 26ನೇ ತಾರೀಕು ಹೊಸ ತಲೆಮಾರಿನ ಬಾಲೆನೊ ಇಂಡಿಯಾದಲ್ಲಿ ಬೀದಿಗಿಳಿಯುವ ಮುಹೂರ‍್ತವನ್ನು ನಿರ‍್ದರಿಸಲಾಗಿದೆ.

Baleno2
ಬಾಲೆನೊ ಎರಡು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಬಿಣಿಗೆಗಳ ಆಯ್ಕೆಯಲ್ಲಿ ಬರಲಿದೆ.  ಸ್ವಿಪ್ಟ್, ರಿಟ್ಜ್ ಮುಂತಾದ ಕಾರುಗಳಲ್ಲಿರುವ ಕೆ-12(K12) ಬಿಣಿಗೆ ಇದರಲ್ಲಿರಲಿದೆ. 1ಲೀ ಅಳತೆಯ ಬೂಸ್ಟರ್ ಜೆಟ್ (Booster Jet) ಎಂಬ ಇನ್ನೊಂದು ಪೆಟ್ರೋಲ್ ಬಿಣಿಗೆ ಹೊಸದಾಗಿ ಬೆಳೆಸಲಾಗಿದ್ದು, ಎರಡನೇ ಪೆಟ್ರೋಲ್ ಆಯ್ಕೆಯಾಗಿ ಸಿಗಲಿದೆ. 110 ಕುದುರೆಬಲ ಮತ್ತು 170 ನ್ಯೂಟನ್ ಮೀ. ಗಳಶ್ಟು ಸೆಳೆಬಲ ಉಂಟು ಮಾಡಲಿರುವ ಈ ಬೂಸ್ಟರ್ ಜೆಟ್ ಬಿಣಿಗೆ ಎಲ್ಲೆಡೆ ಸುದ್ದಿ ಮಾಡುತ್ತಿದೆ. ಡೀಸೆಲ್‌ಬಾಲೆನೊಗಳಲ್ಲಿ 1.3 ಲೀಟರ್‌ನ ಸುಜುಕಿರವರ ನೆಚ್ಚಿನ ಬಿಣಿಗೆ ಮುಂದುವರೆಯಲಿದೆ.

ಎಸ್‌ಕ್ರಾಸ್, ಸಿಯಾಜ್ ಬಂಡಿಗಳನ್ನು ಮಾರಲೆಂದು ತೆರೆಯಲಾದ ಹೊಸ ನೆಕ್ಸಾ(NEXA) ಮಳಿಗೆಗಳಲ್ಲಿಯೇ ಹೊಸ ಬಾಲೆನೊ ಮಾರಾಟಗೊಳ್ಳುವುದು ಕಚಿತವಾಗಿದೆ. ಹ್ಯುಂಡಾಯ್‌ನ ಆಯ್-20 (Hyundai i20) ಮತ್ತು ಹೊಂಡಾ ಜಾಜ್‌ಗೆ (Jazz) ಇದು ಸೆಡ್ಡು ಹೊಡೆಯಬಹುದು.

ಜರ‍್ಮನಿಯ ಕ್ಯಾತ ಪೋಕ್ಸ್‌ವ್ಯಾಗನ್ ಇಂಡಿಯಾವನ್ನು ಚಿತ್ತದಲ್ಲಿರಿಸಿ ಹೊಸದಾಗಿಸಿದ ತಿಗುವಾನ್(Tiguan) ಎಂಬ ಆಟೋಟದ ಬಳಕೆಯ(SUV) ಕಾರೊಂದನ್ನು ನನ್ನ ಮಳಿಗೆಯಲ್ಲಿ ತೋರ‍್ಪಡಿಸುತ್ತಿದೆ. ಹೊಸದಾಗಿಸಿದ ತಿಗುವಾನ್ 1.4, 1.6 ಹಾಗೂ 2 ಲೀಟರ್ ಹೀಗೆ ಮೂರು ಬಗೆಯ ಡೀಸೆಲ್ ಬಿಣಿಗೆಗಳ ಆಯ್ಕೆಯಲ್ಲಿ ಬರುವ ಸುದ್ದಿಯಿದೆ. ಇಂಡಿಯಾ ಸೇರಿದಂತೆ ಇತರೆ ದೇಶಗಳಲ್ಲೂ ತಿಗುವಾನ್ ಮುಂದಿನ ವರುಶ ಮಾರಾಟಕ್ಕೆ ಅಣಿಯಾಗಲಿದೆಯಂತೆ. ಈ ಮೂರು ಬಿಣಿಗೆಯ ಆಯ್ಕೆಯಲ್ಲಿ ಎರಡು ಇಂಡಿಯಾಕ್ಕೆ ಬರಲಿದ್ದು, ಅವುಗಳ್ಯಾವುವು ಎಂಬ ಸುದ್ದಿಯನ್ನು ಪೋಕ್ಸ್‌ವ್ಯಾಗನ್ ಬಿಟ್ಟುಕೊಟ್ಟಿಲ್ಲ.

tiguan

(ತಿಗುವಾನ್ / Tiguan)

ಇವುಗಳನ್ನು ಹೊರತು ಪಡಿಸಿ ಇಂಡಿಯಾದ ಮಾರುಕಟ್ಟೆಗಾಗಿಯೇ ಮಾಡಿದ ಹೊಸದಾದ ಯಾವುದೇ ಬಂಡಿಗಳು ಈ ಹಬ್ಬದಲ್ಲಿ ಕಂಡುಬಂದಿಲ್ಲ. ಟಾಟಾ ಒಡೆತನದ ಜ್ಯಾಗ್ವಾರ್ ಲ್ಯಾಂಡ್‌ರೋವರ್(Jaguar Land Rover) ಈ ತೋರ‍್ಪಿನಲ್ಲಿ ಪಾಲ್ಗೊಂಡು ತನ್ನ ಹೊಸ ಜಾಗತಿಕ ಬಂಡಿಗಳ ಮೂಲಕ ಮಂದಿಯನ್ನು ಸೆಳೆಯುತ್ತಿದೆ. ಇಂಡಿಯಾದ ಇನ್ನೊಂದು ದೊಡ್ಡ ಕೂಟ ಮಹೀಂದ್ರಾ ಮತ್ತು ಮಹೀಂದ್ರಾ ಈ ತೋರ‍್ಪಿನಲ್ಲಿ ಕಂಡು ಬಂದಿಲ್ಲವಾದರೂ ತನ್ನ ಒಡೆತನದ ಸ್ಯಾಂಗ್‌ಯೊಂಗ್ ಮೋಟಾರ‍್ಸ್ (Ssangyong Motors) ಮೂಲಕ ತನ್ನ ಇರುವಿಕೆಯನ್ನು ತೋರಿಸಿದೆ. ಯೂರೋಪ್, ಜಪಾನ್, ಚೀನಾ, ಕೊರಿಯಾ ಮತ್ತು ಬಡಗಣ ಅಮೇರಿಕಾದ ನಾಡುಗಳಲ್ಲಿ ಅಶ್ಟಾಗಿ ಜಾಗತಿಕ ಮಾದರಿಗಳನ್ನು ಸಿದ್ದಪಡಿಸದ ಟಾಟಾ ಮತ್ತು ಮಹೀಂದ್ರಾ ಕೂಟಗಳು ಇಲ್ಲಿ ಕಾಣದೇ ಇರುವುದಕ್ಕೆ ಮುಕ್ಯ ಕಾರಣವೆನಿಸುತ್ತದೆ.

3

ತೋರ‍್ಪಿನಲ್ಲಿ ಮಿನುಗುತ್ತಿರುವ ಇತರೆ ಕಾರುಗಳು:

2016ರಲ್ಲಿ ಬಿಡುಗಡೆಯಾಗಲಿರುವ ನಾಲ್ಕನೇ ತಲೆಮಾರಿನ ಟೊಯೊಟಾ ಪ್ರಿಯಸ್(Prius) ಬೆರಕೆ(Hybrid) ಕಾರು ತೋರ‍್ಪಿನಲ್ಲಿ ಕಂಗೊಳಿಸುತ್ತಿದೆ. ಸಾಕಶ್ಟು ಅರಕೆ ಮಾಡಿ ಬಂಡಿಯ ಉರುವಲು ಬಳಕೆ 10% ರಶ್ಟು ಕಡಿಮೆ ಮಾಡಿದ್ದೇವೆ ಎಂದು ಟೊಯೊಟಾದವರು ಹೇಳಿಕೊಂಡಿದ್ದಾರೆ.

prius(ಪ್ರಿಯಸ್ / Prius)

ದುಬಾರಿ ಸಿರಿತನದ ಕಾರು ತಯಾರಕ ಪೋರ‍್ಶ್ ಮಿಶನ್-ಇ (Porsche Mission-E) ಎಂಬ ಹೊಸ ಹೊಳಹಿನ ಬೆರಕೆ (Hybrid Concept) ಕಾರೊಂದನ್ನು ಮುಂದಿಟ್ಟು ಟೆಸ್ಲಾ(Tesla) ಕೂಟದ ಪಯ್ಪೋಟಿಗೆ ತೊಡೆತಟ್ಟಿದೆ. ಈ ಕಾರಿನ ಕಸುವು 600 ಕುದುರೆಬಲ ಮತ್ತು ವೇಗ ಪ್ರತಿ ಗಂಟೆಗೆ 155 ಮಯ್ಲಿ. 2018ರವರೆಗೆ ಇದು ಬಿಡುಗಡೆಯ ಬಾಗ್ಯ ಕಾಣಲಿದ್ದು, ಕೊಳ್ಳುಗರು 2018ರ ಹೊತ್ತಿಗೆ ಕಾಯಬೇಕು.

porsche missionE(ಪೋರ‍್ಶ್ ಮಿಶನ್-ಇ / Porsche Mission-E)

ಜಿಎಮ್ ಗುಂಪಿಗೆ ಸೇರಿದ ಒಪೆಲ್(Opel) ಕೂಟ ಹೊಸದಾಗಿಸಿದ ಅಸ್ಟ್ರಾ(Astra) ಬಂಡಿಯನ್ನು ತೋರ‍್ಪಡಿಸುತ್ತಿದೆ. ಜಗತ್ತಿನ ತಾನೋಡ ಕೂಟದ ಮೇಲಾಳಿನ ಹುದ್ದೆಗೇರಿದ ಮೊದಲ ಹೆಣ್ಣು ಎಂದು ಹೆಸರುಗಳಿಸಿರುವ ಮ್ಯಾರಿ ಬರ್ರಾ(Mary Barra) ಹೇಳಿದಂತೆ ಹೊಸ ಅಸ್ಟ್ರಾ ಈ ಮೊದಲಿಗಿಂತ 200 ಕೆ.ಜಿ. ತೂಕ ಕಳೆದುಕೊಂಡು ಮತ್ತಶ್ಟು ಹಗುರವಾಗಿದೆಯಂತೆ. ಆಪಲ್ ಮತ್ತು ಅಂಡ್ರಾಯ್ಡ್ ಚೂಟಿಯುಲಿ ಬಳಕೆದಾರರು ತಮ್ಮ ಚೂಟಿಯುಲಿಯನ್ನು ಅಸ್ಟ್ರಾ ಬಂಡಿಯ ತೋರುಮಣೆಗೆ ಜೋಡಿಸಿಕೊಳ್ಳುವ ಏರ‍್ಪಾಟನ್ನು ನೀಡಲಾಗಿರುವ ಈ ಕಾರು ಅಕ್ಟೊಬರ್-10ರಿಂದ ಯೂರೋಪ್‌ನ ಹಲವೆಡೆ ಮಾರಾಟಕ್ಕೆ ಸಿದ್ದ.

ಇವಲ್ಲದೇ ಟೊಯೊಟಾ ಸಿ-ಹೆಚ್‌ಆರ್(C-HR) ಹೊಳಹಿನ ಬಂಡಿ, ತಯ್ವಾನ್ ಮೂಲದ ತಂಡರ್ ಪವರ್ (Thunder Power)ಕಾರು, ಡಾಯ್ಮಲರ್‌ನ ಸ್ಮಾರ‍್ಟ್ ಪೊರ‍್ಟ್‌ವೊ (Smart Fortwo), ಲ್ಯಾಂಬೊರ‍್ಗಿನಿ ಹುರಾಕಾನ್ ಎಲ್ಪಿ-610 ಸ್ಪಾಯ್ಡರ್ (Lamborgini Hurracan LP-610 SpyDer), ಮರ‍್ಸಿಡಿಸ್‌ನ ಎಸ್-500(S-500), ನಿಸಾನ್ ಇನ್ಪಿನಿಟಿಯ ಕ್ಯೂ-30(Infiniti Q30),  ಹ್ಯುಂಡಾಯ್ ಕೂಟದ ಎನ್-50(N-50) ಎಂಬ ರೇಸ್ ಕಾರು ಇವುಗಳು ಸಾಕಶ್ಟು ಸದ್ದು ಮಾಡುತ್ತಿವೆ.

ಇದೇ 27ನೇ ತಾರೀಕು ಕೊನೆಗೊಳ್ಳಲಿರುವ ಈ ತೋರ‍್ಪಿಗೆ ಸಂಬಂದಿಸಿದ ಟಿಕೆಟ್ ಮತ್ತು ಇತರೆ ಹೆಚ್ಚಿನ ಮಾಹಿತಿ ಬೇಕಿದಲ್ಲಿ http://www.iaa.de ಈ ಮಿಂದಾಣಕ್ಕೆ ಬೇಟಿ ಕೊಡಬಹುದು. ತಾನೋಡಗಳ ಜಗತ್ತಿಗೆ ಹೊಸ ದಿಕ್ಕನ್ನೇ ತೋರಿಸಲಿರುವ ಈ ತೋರ‍್ಪು ಇಂಡಿಯಾಕ್ಕೆ ಎಶ್ಟು ಮಹತ್ವವಾಗಲಿದೆ ಎಂಬುದಕ್ಕೆ ಕಾದು ನೋಡೋಣ.

(ತಿಟ್ಟ ಮತ್ತು ಮಾಹಿತಿ ಸೆಲೆಗಳು: www.iaa.de, www.autocarsindia.com, auto.economic.indiatimes.com)Categories: ಅರಿಮೆ

ಟ್ಯಾಗ್ ಗಳು:, , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s