ದಿ ತಾವೋ ಆಪ್ ಪಿಸಿಕ್ಸ್ – ಕಿರುನೋಟ 3

ಕೆ.ಎಸ್.ಮಲ್ಲೇಶ್.

 

(ಬರಹ ಮುಂದುವರೆದಿದೆ…)

ಸಂಬಂದಿತ ಸ್ರುಶ್ಟಿ ಸ್ವರೂಪ ಮತ್ತು ಸಾಪೇಕ್ಶ ಗುಣ 20ನೆಯ ಶತಮಾನದ ಪೂರ‍್ವದ ಬೌತವಿಜ್ನಾನ ವಿಶ್ವದ ವಿವಿದ ವಸ್ತುಸ್ತಿತಿಗಳನ್ನು ನಿರೂಪಿಸುವಾಗ ಕಾಲ ದೇಶ ಮುಂತಾದ ಅನೇಕ ಗುಣಗಳನ್ನು ಪ್ರತ್ಯೇಕವೆಂದೂ ಸ್ವತಂತ್ರ ಅಸ್ತಿತ್ವವುಳ್ಳವೆಂದೂ ಗುರುತಿಸಿತ್ತು. ಇಡೀ ವಿಶ್ವಕ್ಕೆ ಒಂದೇ ಗಡಿಯಾರವೆಂದು ನ್ಯೂಟನ್ ಕಾಲದಲ್ಲಿ ತಿಳಿಯಲಾಗಿತ್ತು. ವಸ್ತು ಆಕ್ರಮಿಸುವ ದೇಶ ಅತವಾ ಜಾಗವೂ ಕಾಲದಂತೆಯೇ ಸ್ವತಂತ್ರ. ತಕ್ಕಡಿಯಲ್ಲಿ ತೂಗಿದಾಗ ಒಂದು ವಸ್ತುವಿಗಿರುವ ದ್ರವ್ಯರಾಶಿ ಹಾಗೂ ಚಲಿಸುತ್ತಿದ್ದಾಗ ವಸ್ತುವಿಗಿರುವ ಶಕ್ತಿ ಕೂಡ ಕಾಲ ದೇಶಗಳಂತೆಯೇ ಸ್ವತಂತ್ರ ನಿರಪೇಕ್ಶ ಪರಿಮಾಣಗಳೆಂದು ಗುರುತಿಸಲ್ಪಟ್ಟಿದ್ದವು.

ಆದರೆ 20ನೆಯ ಶತಮಾನದ ಆರಂಬದಲ್ಲಿಯೇ ಪ್ರಚುರಗೊಂಡ ಐನ್‍ಸ್ಟೈನರ ಸಾಪೇಕ್ಶತಾ ಸಿದ್ದಾಂತ ಈ ಪರಿಮಾಣಗಳೆಲ್ಲವೂ ಸಾಪೇಕ್ಶವೆಂದೂ ಸ್ವತಂತ್ರವಲ್ಲವೆಂದೂ ಸಾರಿತು. ದ್ರವ್ಯರಾಶಿ ಮತ್ತು ಶಕ್ತಿ ಎನ್ನುವುದು ಒಂದೇ ಗುಣದ ಎರಡು ಹೆಸರುಗಳೆಂದಿತು. ಕಾಲ ದೇಶವನ್ನು ದೇಶ ಕಾಲವನ್ನು ಅವಲಂಬಿಸಿವೆಯೆಂದಿತು. ಈ ಸಿದ್ದಾಂತವನ್ನು ತನ್ನ ಬಾಗವಾಗಿಸಿಕೊಂಡು ರೂಪುಗೊಂಡ ಆದುನಿಕ ಬೌತವಿಜ್ನಾನ ವಸ್ತುಸ್ತಿತಿಯ ವರ‍್ತನೆಗಳನ್ನು ನಿರ‍್ದೇಶಿಸುವ ಅನೇಕ ಗುಣಗಳು ಒಂದನ್ನೊಂದು ಅವಲಂಬಿಸಿವೆಯೆಂದು ತೀರ‍್ಮಾನಿಸಿತು.

20ನೆಯ ಶತಮಾನದ ಕಾಲಚಕ್ರ ಉರುಳುತ್ತಿದ್ದಂತೆಯೇ ಆದುನಿಕ ಬೌತವಿಜ್ನಾನದಲ್ಲೂ ಸಾಕಶ್ಟು ಪ್ರಗತಿಯುಂಟಾಯಿತು.ಕ್ವಾಂಟಂ ಸಿದ್ದಾಂತಕ್ಕೆ ಸಾಪೇಕ್ಶತಾ ಸಿದ್ದಾಂತವನ್ನು ಅಳವಡಿಸಿ ಸಾಪೇಕ್ಶ ಕ್ವಾಂಟಂ ಸಿದ್ದಾಂತವನ್ನು ಕಟ್ಟಿ ಇನ್ನಶ್ಟು ಸಂಶೋದನೆಗಳನ್ನು ಕೈಗೊಳ್ಳಲಾಯಿತು. ಕಣಕ್ಕೊಂದು ಪ್ರತಿಕಣವಿದೆ, ಬಲಕ್ಶೇತ್ರಗಳೇ ಎಲ್ಲೆಲ್ಲೂ ವ್ಯಾಪಕವಾಗಿ ಹರಡಿ ವಿಶ್ವಸ್ರುಶ್ಟಿಯಲ್ಲಿನ ಸಕಲ ಕಣಗಳೂ ಈ ಬಲಕ್ಶೇತ್ರಗಳ ಅವತಾರಗಳೇ ಎಂದೂ ಈ ಕ್ಶೇತ್ರಗಳಲ್ಲಿ ಅಂತರ‍್ಗತವಾದ ಶಕ್ತಿಯೇ ಕಣ ಪ್ರತಿಕಣಗಳಾಗಿ ಕಾಣಿಸಿಕೊಳ್ಳಲು ಸಾದ್ಯವೆಂದೂ ಪ್ರಾಯೋಗಿಕವಾಗಿ ಗ್ರಹಿಸಲಾಯಿತು.

ಹೀಗೆ ನ್ಯೂಟನ್ ಕಾಲದ ತರ‍್ಕಾದಾರಿತ ಜ್ನಾನಕ್ಕೆ ವಿರುದ್ದ ನಿರ‍್ಣಯ ತಾಳಿದ ಆದುನಿಕ ಬೌತವಿಜ್ನಾನ ಇಡೀ ಸ್ರುಶ್ಟಿಯೇ ಒಂದು ತೆರನಾದ ಒಳಸಂಬಂದವನ್ನು ಹೊಂದಿದ್ದು ವಸ್ತುಸ್ತಿತಿಯ ಅನೇಕ ವರ‍್ತನೆಗಳು ಒಂದನ್ನೊಂದು ಅವಲಂಬಿಸಿವೆಯೆಂಬ ಅರಿವನ್ನು ಸಾರಿತು. ಸ್ರುಶ್ಟಿಯ ಬಗೆಗೆ ಇಂತಹದೇ ಅನುಬವವನ್ನು ದರ‍್ಶನಗಳೂ ಕಂಡಿವೆ ಎನ್ನುತ್ತ ಎರಡನೆಯ ಸಾಮ್ಯವನ್ನು ಕಾಣುವ ಕಾಪ್ರ ಉದಾಹರಣೆಯಾಗಿ ಹಿಂದೂ ದರ‍್ಶನ ಸ್ರುಶ್ಟಿಯ ಅತ್ಯುನ್ನತ ನಿಜಸ್ತಿತಿಯೇ ಬ್ರಹ್ಮ, ಉಳಿದೆಲ್ಲವೂ ಈ ಬ್ರಹ್ಮದ ಬಿನ್ನ ರೂಪಗಳು, ಅವತಾರಗಳು ಎಂದು ನಿರ‍್ಣಯಿಸಿದೆ ಎನ್ನುತಾರೆ. ಇದನ್ನೇ ಪ್ರತಿಬಿಂಬಿಸುವ ಇನ್ನಿತರ ದರ‍್ಶನಗಳ
ನಿರ‍್ಣಯಗಳನ್ನೂ ದಾಕಲಿಸುವ ಕಾಪ್ರ ಕ್ರುತಿಯ ಒಂದುಕಡೆ ದಾರ‍್ಶನಿಕರು ಬೇರೆ ಬೇರೆ ಪ್ರದೇಶಗಳಲ್ಲಿ, ಬಿನ್ನ ಕಾಲಗಟ್ಟಗಳಲ್ಲಿ, ಬಿನ್ನ ಸಾಮಾಜಿಕ, ಸಾಂಸ್ಕ್ರುತಿಕ ನೆಲೆಗಟ್ಟುಗಳಲ್ಲಿದ್ದರೂ ಅವರ ದರ‍್ಶನಗಳು ಸರಿ ಸುಮಾರು ಒಂದೇ ಆಗಿರುವುದನ್ನೂ ಗುರುತಿಸುತ್ತಾರೆ.

ಜಗವೇ ನಾಟಕ ರಂಗ:

ಸ್ತೂಲ ಜಗತ್ತಿನ ಕೆಲವು ಕ್ರಿಯೆಗಳಲ್ಲಿ ಇನ್ನಿತರ ವಸ್ತುಗಳ ಜೊತೆ ಪ್ರತ್ಯಕ್ಶವಾಗಿ ಬಾಗವಹಿಸಿ ಅಲ್ಲಿನ ಬದಲಾವಣೆಗಳಿಗೆ ನಾವೂ ಕಾರಣರಾಗುತ್ತೇವೆ. ನಾವು ಬಾಗವಹಿಸದೆ ಕೇವಲ ಪ್ರೇಕ್ಶಕರಾಗಿ ನೋಡುವಂತಹ ಕ್ರಿಯೆಗಳೂ ಇವೆಯೆಂದು ತಿಳಿದಿದ್ದೇವೆ. ಆಕಾಶದಲ್ಲಿ ಹಾರುತ್ತಿರುವ ವಿಮಾನವೊಂದನ್ನು ನೆಲದಮೇಲೆ ನಿಂತು ನೋಡುವ ಅದರ ಶಬ್ದವನ್ನು ಕೇಳುವ ಸಂದರ‍್ಬದಲ್ಲಿ ನಮ್ಮ ನೋಡುವಿಕೆಯ ಕಾರಣದಿಂದಾಗಿ ವಿಮಾನದ ಹಾರುವ ಗತಿ ಬದಲಾಗುವುದಿಲ್ಲವೆಂದು ಗೊತ್ತು.

ನೋಡುತ್ತಿರುವ ನಾವು ಮತ್ತು ಹಾರುತ್ತಿರುವ ವಿಮಾನ ಎರಡು ಪ್ರತ್ಯೇಕ ಸ್ವತಂತ್ರ ವಸ್ತುಸ್ತಿತಿಗಳೆಂಬುದು ನಮ್ಮ ಸಾಮಾನ್ಯ ತಿಳುವಳಿಕೆ. ಬೌತವಿಜ್ನಾನದ ಪ್ರಕಾರ ನಾವು ನೋಡುವ ನೋಟಕ್ಕೆ ಅತವಾ ಕೇಳುವ ದ್ವನಿಗೆ ಮಾದ್ಯಮವೊಂದರ ಅಗತ್ಯವಿದೆ. ಈ ಗ್ರಹಿಕೆಯ ಕ್ರಿಯೆಯಲ್ಲಿ ವಸ್ತು, ವೀಕ್ಶಕ ಮತ್ತು ಮಾದ್ಯಮ ಮೂರೂ ಇವೆ. ವಿಮಾನ ಸ್ತೂಲಕಾಯವಾದ ಕಾರಣ ನಮ್ಮ ನೋಡುವ ಕ್ರಿಯೆಯಿಂದ ಗತಿ ಬದಲಾಯಿಸಲಿಲ್ಲವೆಂಬುದು ತಾರ‍್ಕಿಕ ಅರಿವು.

ಸೂಕ್ಶ್ಮಜಗತ್ತಿನಲ್ಲಿಯೂ ಕ್ರಿಯೆಗಳನ್ನು ಅರಿತುಕೊಳ್ಳಲು ವಸ್ತು, ವೀಕ್ಶಕ ಮತ್ತು ಮಾದ್ಯಮಗಳು ಬೇಕು. ಆದರೆ ಸ್ತೂಲ ಜಗತ್ತಿನಂತೆ ಇಲ್ಲಿ ನಾವು ಅತವಾ ನಾವು ನೋಡಬಯಸಲು ಉಪಯೋಗಿಸುವ ಸೂಕ್ಶ್ಮದರ‍್ಶಕ ಕೇವಲ ವೀಕ್ಶಕರಾಗಿಯಶ್ಟೇ ಇರುತ್ತೇವೆ. ಚಲಿಸುತ್ತಿರುವ ಎಲೆಕ್ಟ್ರಾನೊಂದನ್ನು ಅದರ ಗತಿ ಬದಲಿಸದೆ ಕೇವಲ ನೋಡುತ್ತೇವೆ ಎನ್ನುವುದು ಸಾದ್ಯವಿಲ್ಲ. ನೋಡುವುದಕ್ಕಾಗಿ ಬಳಸುವ ಮಾದ್ಯಮ ಎಲೆಕ್ಟ್ರಾನಿನ ಸ್ತಿತಿಯನ್ನೇ ಬದಲಿಸಿಬಿಡುತ್ತದೆ.

ಕ್ವಾಂಟಂ ಬೌತವಿಜ್ನಾನ ಈ ಸತ್ಯವನ್ನೇ ತನ್ನ ಮೂಲತತ್ವಗಳಲ್ಲಿ ಅಳವಡಿಸಿಕೊಂಡಿದೆ. ಇಶ್ಟೇ ಅಲ್ಲದೆ ಒಂದುಗುಣವನ್ನು ಅಳೆಯುವ ವ್ಯವಸ್ತೆಯಲ್ಲಿ ಅಳೆಯಲಾಗದ ಪ್ರತಿಗುಣವೊಂದಿದೆ. ಸ್ರುಶ್ಟಿಯಲ್ಲಿಯೇ ಅಂತರ‍್ಗತವಾಗಿರುವ ಇಂತಹ ಅನಿಶ್ಚಯತೆಯನ್ನು ಗುರುತಿಸುವುದೂ ವೀಕ್ಶಕನೇ. ಈ ವಿವೇಕವನ್ನು ಬಳಸಿ ಸೂಕ್ತವ್ಯವಸ್ತೆಯನ್ನು ರೂಪಿಸಿ ಎಶ್ಟರ ಮಟ್ಟಿಗೆ ತಾನು ಅಬ್ಯಸಿಸುವ ಕ್ರಿಯೆಯನ್ನು ತನ್ನ ಉಪಕರಣಗಳಿಂದ ನಗಣ್ಯವೆನಿಸುವಶ್ಟು ಕ್ಶೀಣ ಪ್ರಬಾವಕ್ಕೆ ಒಳಪಡಿಸಿ ಎಶ್ಟು ನಿಕರವಾಗಿ ಪರಿಮಾಣಗಳನ್ನು ಅಳೆಯಬಹುದೆಂದು ನಿರ‍್ದರಿಸುವ ಸಾಮತ್ರ್ಯವೂ ಇವನದೇ ಎನ್ನುವುದನ್ನು ಕ್ವಾಂಟಂ ವಿಜ್ನಾನ ತನ್ನ
ಸಿದ್ದಾಂತದ ಮೂಲಕ ವ್ಯಕ್ತಗೊಳಿಸುತ್ತದೆ.

ಹೀಗೆ ಆದುನಿಕ ಬೌತವಿಜ್ನಾನ ತನ್ನ ಮುಂದುವರಿದ ಅದ್ಯಯನದಲ್ಲಿ ವೀಕ್ಶಕರೂ ಕ್ರಿಯೆಯ ಅವಿಬಾಜ್ಯ ಬಾಗವಾಗಿ ಇಡೀ ಸ್ರುಶ್ಟಿಯೇ ವಸ್ತುಸ್ತಿತಿಗಳನ್ನೂ ನೋಡುಗರನ್ನೂ ಪ್ರತ್ಯಕ್ಶವಾಗಿ ಒಳಗೊಂಡಂತಹ ಕ್ರಿಯಾಸಮುಚ್ಚಯವೆಂದು ಗುರುತಿಸಿದೆ. ದರ‍್ಶನಗಳಂತೂ ತಮ್ಮೊಳಗೆ ಅನೇಕ ಪ್ರಬೇದಗಳನ್ನು ಹೊಂದಿದ್ದರೂ ಮೇಲಿನ ಅನುಬವವನ್ನೇ ಒಕ್ಕೊರಲಿನಿಂದ ಸಾರಿವೆ. ಜಗತ್ತೇ ನಾಟಕರಂಗ, ನಾವೇ ಪಾತ್ರದಾರಿಗಳು ನಾವೇ ವೀಕ್ಶಕರು ಎನ್ನುವುದೇ ಹಿಂದೂ ಬೌದ್ದ ದರ‍್ಶನಗಳ ಅನುಬವಸಾರ.

ಕಾಪ್ರ ಇದನ್ನೇ ಎರಡೂ ಜ್ನಾನಗಳಲ್ಲಿರುವ ಮತ್ತೊಂದು ಸಾಮ್ಯವೆಂದು ಗುರುತಿಸಿ ಪೌರ‍್ವಾತ್ಯ ದರ‍್ಶನಗಳು ಒಂದು ಹೆಜ್ಜೆ ಮುಂದೆ ಸಾಗಿ ಸ್ರುಶ್ಟಿಯ ಈ ಸಮ್ಯಕ್ ರಚನೆಯಲ್ಲಿ ಮಾನವ ವಿವೇಕವೂ ಮಿಳಿತವಾಗಿದೆ ಆದರೆ ವಿಜ್ನಾನಕ್ಕಿನ್ನೂ ವಿವೇಕವನ್ನು ಒಂದು ಪರಿಮಾಣಾತ್ಮಕ ಗುಣವನ್ನಾಗಿ ನೋಡಲು, ಸ್ರುಶ್ಟಿಯೊಳಗೆ ಅಂತರ‍್ಗತವಾಗಿದೆಯೆಂದು ತಿಳಿಯಲು ಸಾದ್ಯವಾಗಿಲ್ಲವೆಂದು ಅಬಿಪ್ರಾಯಪಡುತ್ತಾರೆ.

ನಿರಂತರ ಬದಲಾವಣೆ:
ಪ್ರಕ್ರುತಿಯ ಶಾಶ್ವತ ಸ್ವರೂಪವೆಂದರೆ ನಿರಂತರ ಕ್ರಿಯಾತ್ಮಕ ಬದಲಾವಣೆ ಎಂದು ತಾವೋ ಗ್ರಹಿಸಿದರೆ ಬಲಕ್ಶೇತ್ರಗಳ ನಿರಂತರ ಅಂತಕ್ರಿಯೆಯೆಂದು ಆದುನಿಕ ಬೌತವಿಜ್ನಾನ ಗ್ರಹಿಸುತ್ತದೆ. ಅಪಬ್ರಂಶ ನೋಟ ಸ್ರುಶ್ಟಿಯ ನೈಜರೂಪದ ದರ‍್ಶನವಾಗಬೇಕಾದರೆ ವಿಶೇಶ ಅಂತರ‍್ದ್ರುಶ್ಟಿಯಿಂದ ಸಾದ್ಯ. ಸಾಮಾನ್ಯ ದ್ರುಶ್ಟಿಗೆ ಗೋಚರವಾಗುವುದು ಸ್ರುಶ್ಟಿಯ ನೈಜರೂಪವಲ್ಲ ಕೇವಲ ಅದರ ಅಪಬ್ರಂಶವೆಂದು ಸುಮಾರು ಎಲ್ಲ ದರ‍್ಶನಗಳೂ ಅರುಹುತ್ತವೆ. ಆದುನಿಕ ಬೌತ ವಿಜ್ನಾನದಲ್ಲಿನ ಸಾಪೇಕ್ಶ ಸಿದ್ದಾಂತವೂ ಕೂಡ ಸ್ರುಶ್ಟಿಯ ಗಟನೆಗಳನ್ನು ಕಾಲದೇಶಗಳೆರಡನ್ನೂ ಒಳಗೊಂಡ 4-ದಿಶೆಯ ಚೌಕಟ್ಟಿನಲ್ಲಿ ಸರಿಯಾಗಿ ಗ್ರಹಿಸಬಹುದು ಎನ್ನುತ್ತ ನಮ್ಮ ಸಾಮಾನ್ಯ ಗ್ರಹಿಕೆ 3-ದಿಶೆಯ ದೇಶವನ್ನುಳ್ಳ ಚೌಕಟ್ಟನ್ನು ಆದಾರಿಸಿದೆ, ಇದರಿಂದಾಗಿ ನಮ್ಮ ವಿವರಣೆ ನಿಕರವಾಗಿರದೆ ಅಂದಾಜಾಗಿದ್ದು ಅನೇಕ ಸಾರಿ ಅಪೂರ‍್ಣವೂ ದೋಶಯುಕ್ತವೂ ಆಗಿರುತ್ತದೆ ಎಂದು ಹೇಳುವ ಮೂಲಕ ದರ‍್ಶನಗಳ ಅನುಬವವನ್ನೇ ವಿಜ್ನಾನವೂ ಪ್ರತಿದ್ವನಿಸಿದೆ ಎನ್ನಿಸುತ್ತದೆ.

ಸಾರಾಂಶ:
ಆದುನಿಕ ಬೌತವಿಜ್ನಾನಕ್ಕೂ ಪೌರ‍್ವಾತ್ಯ ದರ‍್ಶನಗಳಿಗೂ ಇರುವ ಸಾಮ್ಯಗಳನ್ನು ಕಾಪ್ರ ತಮ್ಮ ಕ್ರುತಿಯಲ್ಲಿ ಗುರುತಿಸಿದ್ದನ್ನು ಕುರಿತು ಇಲ್ಲಿ ಪ್ರಸ್ತಾಪಿಸಿದೆ. ತಾರ‍್ಕಿಕ ನೋಟವನ್ನು ಬೀರಿ ವಿಜ್ನಾನಿ ಹೊರಜಗತ್ತಿನ ವಿಶ್ಲೇಶಣೆ ಮಾಡಿದರೆ ದಾರ‍್ಶನಿಕರು ಬಾವನಾತ್ಮಕ ಒಳನೋಟಗಳನ್ನು ಬೆಂಬತ್ತಿ ಅನುಬವಗಳನ್ನು ಪಡೆದಿದ್ದಾರೆ. ಬಿನ್ನದಾರಿಗಳಲ್ಲಿ ಸಾಗಿದರೂ ವಿಶ್ವಕ್ಕೊಂದು ನೈಜಸ್ತಿತಿಯಿದೆ ಅದನ್ನು ಪರಿಪೂರ‍್ಣವಾಗಿ ಕಾಣಬೇಕೆನ್ನುವುದೇ ಇಬ್ಬರ ಏಕೈಕ ಆಂತಿಕ ಗುರಿ. ಒಂದು ಹೋಲಿಕೆಯಿಟ್ಟು ಹೇಳುವುದಾದರೆ ವಿಶ್ವವೆಂಬ ವ್ರುಕ್ಶವನ್ನು ಅರಿಯಲು ವಿಜ್ನಾನಿಗಳು ರೆಂಬೆ ಕೊಂಬೆಗಳನ್ನು ಅದ್ಯಯನ ಮಾಡಿದರೆ ದಾರ‍್ಶನಿಕರು ಬೇರುಗಳನ್ನು ಹಿಡಿದರೆನ್ನಬಹುದು.

20ನೆಯ ಶತಮಾನದ ಪೂರ‍್ವದಲ್ಲಿದ್ದ ಬೌತವಿಜ್ನಾನವೂ ಇದೇ ಗುರಿಯನ್ನಿಟ್ಟುಕೊಂಡು ಸಾಗಿತ್ತಾದರೂ ಮುಂದುವರಿದ ವೈಜ್ನಾನಿಕ ಪ್ರಯೋಗಗಳೇ ಅದರ ತತ್ವಗಳಲ್ಲಿನ ದೋಶಗಳನ್ನೂ ಮಿತಿಗಳನ್ನೂ ಪ್ರಮಾಣಿಸಿ ತೋರಿಸಿದವು. ಆದರೆ ಆ ಸಂದರ‍್ಬದಲ್ಲಿಯೇ ಸಂಕ್ರಮಣ ಸ್ತಿತಿಯಲ್ಲಿಯೇ ರೂಪುಗೊಂಡ ಆದುನಿಕ ಬೌತವಿಜ್ನಾನ ತನ್ನ ಹೊಚ್ಚ ಹೊಸ ಹಾಗೂ ಪರಿಶ್ಕ್ರುತ ನಿಯಮಗಳ ಬೆಳಕಿನಲ್ಲಿ ಜಗತ್ತಿನ ಸೂಕ್ಶ್ಮ ಹಾಗೂ ಸ್ತೂಲ ರಚನೆಗಳೆಲ್ಲವನ್ನೂ ಅರಿತುಕೊಳ್ಳುವ ಪ್ರಯತ್ನಗಳಿಗೆ ಕೈಹಾಕಿ ಯಶಸ್ಸುಗಳಿಸಲಾರಂಬಿಸಿತು. ಇಂತಹ ಯಶಸ್ಸಿಗೆ ಕಾರಣರಾದ ಅನೇಕ ವಿಜ್ನಾನಿಗಳು ಪೌರ‍್ವಾತ್ಯ ದರ‍್ಶನಗಳನ್ನು ಅದ್ಯಯನ ಮಾಡಿದಾಗ ಅಲ್ಲಿನ ಅನುಬವಗಳಲ್ಲೂ ವೈಜ್ನಾನಿಕ ನಿಲುವುಗಳಲ್ಲೂ ಸಾಮ್ಯಗಳೆಂದು ತೋರಿದ್ದನ್ನು ವಿವಿದ ಸಂದರ‍್ಬಗಳಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದರು.

ಆದುನಿಕ ಬೌತವಿಜ್ನಾನದಲ್ಲೇ ಸಾಕಶ್ಟು ಸಂಶೋದನೆಗೈದಿದ್ದ ಕಾಪ್ರ ಹಲವು ವರ‍್ಶಗಳಕಾಲ ಎರಡೂ ಜ್ನಾನದಾಗರಗಳನ್ನು ಆಸಕ್ತಿಯಿಂದ ಅದ್ಯಯನ ಮಾಡಿ ಹಿರಿಯ ವಿಜ್ನಾನಿಗಳಲ್ಲದೆ ಸ್ವತಹ ತಾವೂ ಕಂಡ ಸಾಮ್ಯಗಳನ್ನು ವಿವರಣಾತ್ಮಕವಾಗಿ ‘ದಿತಾವೋ ಆಪ್ ಪಿಸಿಕ್ಸ್’ ಕ್ರುತಿಯಲ್ಲಿ ದಾಕಲಿಸಿದ್ದಾರೆ. ಎರಡೂ ಜ್ನಾನಗಳಲ್ಲಿನ ತಾತ್ವಿಕ ನೆಲೆಗಟ್ಟುಗಳನ್ನು ಓದುಗರಿಗೆ ಪರಿಚಯಿಸಿ ಸಾಮ್ಯಗಳನ್ನು ವ್ಯಾಕ್ಯಾನಿಸಿದ್ದೇನೆಯೇ ಹೊರತು ಕಟ್ಟುನಿಟ್ಟಾಗಿ ಪ್ರಮಾಣೀಕರಿಸಿಲ್ಲವೆಂದು ವಿನೀತವಾಗಿ ಹೇಳುವ ಕಾಪ್ರ ತಮ್ಮ ಅನುಬವವೇ ಓದುಗರಿಗೂ ಆಗಬಹುದೆಂಬ ವಿಶ್ವಾಸಹೊಂದಿದ್ದಾರೆ.

ಸಾಮ್ಯಗಳನ್ನು ಪರಿಶೋದಿಸುವ ಉದ್ದೇಶದಿಂದ ಹೊರಡುವ ಕಾಪ್ರ ತಮ್ಮ ಕ್ರುತಿಯಲ್ಲೊಂದು ಕಡೆ ವಿಜ್ನಾನ ಮತ್ತು ದರ‍್ಶನ ಮನಸ್ಸಿನ ಅತವಾ ವಿವೇಕದ ಪರಸ್ಪರ ಪೂರಕ ರೂಪಗಳು. ವಿಜ್ನಾನಕ್ಕೆ ದರ‍್ಶನ ಬೇಕಿಲ್ಲ, ದರ‍್ಶನಕ್ಕೆ ವಿಜ್ನಾನ ಬೇಕಿಲ್ಲ ಎಂದು ವಿಜ್ನಾನಿಯಂತೆ ನಿರ‍್ಬಾವುಕರಾಗಿ ಕಡಾಕಂಡಿತವಾಗಿ ನುಡಿದರೂ, ಮಾನವರಿಗೆ ಆಂತರ‍್ಯದ ಸ್ವರೂಪವನ್ನು ತಿಳಿಯಲು ದರ‍್ಶನ ಬೇಕು, ಆದುನಿಕ ಬದುಕಿಗಾಗಿ ವಿಜ್ನಾನ ಬೇಕು ಎನ್ನುವಲ್ಲಿ ದಾರ‍್ಶನಿಕರಂತೆ ನುಡಿಯುತ್ತಾರೆ ಎನಿಸುತ್ತದೆ.

ವೈಜ್ನಾನಿಕ ಬಾವವು ತಾರ‍್ಕಿಕ, ಆಕ್ರಮಣಕಾರಕ ಮತ್ತು ಪುರುಶ ಪ್ರವ್ರುತ್ತಿಯುಳ್ಳದ್ದಾದರೆ ದಾರ‍್ಶನಿಕ ಬಾವವು ಸಹ್ರುದಯತೆಯ, ಮ್ರುದುತ್ವದ ಹಾಗೂ ಸ್ತ್ರೀ ಪ್ರವ್ರುತ್ತಿಯುಳ್ಳದ್ದೆಂದು ಪರಿಗಣಿಸುವ ಕಾಪ್ರ ವೈಜ್ನಾನಿಕ ಮನೋಬಾವನೆಯನ್ನೇ ಮುಂದಿಟ್ಟುಕೊಂಡು ಯಾಂತ್ರಿಕವೂ ವಿಬಜಿತವೂ ಆಗಿರುವಂತಹ ಸಾಮಾಜಿಕ ವ್ಯವಸ್ತೆಯೆಡೆಗೆ ಇಡೀ ಸಮಶ್ಟಿಯ ಬದುಕು ದಾವಿಸುತ್ತಿದೆ. ದಾರ‍್ಶನಿಕ ಬಾವವನ್ನೂ ಒಳಗೊಂಡಂತಹ ನಡತೆಗಳನ್ನು ಅಳವಡಿಸಿಕೊಂಡು ಸಾಗುವಂತಾದರೆ ಪ್ರಕ್ರುತಿಯಲ್ಲಿನ ಪರಿಪೂರ‍್ಣತೆಯನ್ನೂ ನಮ್ಮೆಲ್ಲರ ಬದುಕಿನಲ್ಲಿ ಸಾಮರಸ್ಯವನ್ನೂ ಕಾಣಲು ಸಾದ್ಯವೆಂಬ ಆಶಾಬಾವನೆಯನ್ನು ಕ್ರುತಿಯ ಕೊನೆಯಲ್ಲಿ ವ್ಯಕ್ತಪಡಿಸುತ್ತಾರೆ.

ಹನ್ನೆರಡನೆಯ ಶತಮಾನದಲ್ಲೊಂದು ಕ್ರಾಂತಿಯಾಗಿ ಬಸವಣ್ಣ ಅಲ್ಲಮ ಅಕ್ಕಮಹಾದೇವಿಯವರೇ ಮುಂತಾದವರಿಂದ ಹೊಸ ದರ‍್ಶನವೊಂದು ಈ ನಾಡಿನಲ್ಲಿ ಮೈದಳೆದಿತ್ತು. ಮುಕ್ತ ಚಿಂತನೆಗಳ ಮೂಲಕ ಲೌಕಿಕದಲ್ಲಿ ಕಾಯಕ ನಿಶ್ಟರಾಗಿ ವೈಚಾರಿಕ ದಾರ‍್ಶನಿಕ ನಿಲುವುಗಳೆರಡನ್ನೂ ಅನುಬವಮಂಟಪದ ಅಂಗಳದಲ್ಲಿ ಮುಕಾಮುಕಿಯಾಗಿಸಿ, ಜಂಗಮಕ್ಕೆ ತಮ್ಮನ್ನು ಅರ‍್ಪಿಸಿಕೊಂಡು ಶರಣತ್ವ ಪಡೆದ ಈ ಮಹಾಚೇತನಗಳು, ಕಾಲವನ್ನು ಬದಿಗಿಟ್ಟು ನೋಡುವುದಾದರೆ ಕಾಪ್ರರ ಆಶಯಗಳಿಗೆ ಸಾಕ್ಶಿಯೆಂಬಂತೆ ಪರಿಪೂರ‍್ಣವಾಗಿ ಬದುಕಿದ್ದರು ಎನ್ನುವುದಕ್ಕೆ ಇತಿಹಾಸವೇ ಸಾಕ್ಶಿಯಾಗಿದೆ. ಎರಡೂ ಜ್ನಾನಗಳು ಶರಣರ ಬದುಕಿನಲ್ಲಿ ಸಮ್ಮಿಳಿತವಾಗಿತ್ತು ಎನ್ನುವುದಕ್ಕೆ ಬಸವಣ್ಣನವರ ಮುಂದಿನ ವಚನವನ್ನೇ ಗಮನಿಸಬಹುದು.

ಅಯ್ಯಾ ನೀನು ನಿರಾಕಾರವಾಗಿದ್ದಲ್ಲಿ ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ, ಅಯ್ಯಾ ನೀನು ಆಕಾರವಾಗಿದ್ದಲ್ಲಿ ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ, ಅಯ್ಯಾ ನೀನು ನಾಟ್ಯಕ್ಕೆ ನಿಂದಲ್ಲಿ ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ, ಅಯ್ಯಾ ನೀನೆನ್ನ ಭವವ ಕೊಂದಹೆನೆಂದು ಜಂಗಮ ಲಾಂಛನವಾಗಿ ಬಂದಲ್ಲಿ, ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ, ಕೂಡಲಸಂಗಮದೇವಾ

ಹಾಗೆಯೇ,

ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ, ಮೂಡಲಿ ಮಂಗಳ ಮತಿ
ಮತಿಯಲ್ಲಿ, ಕವಿ ಋಷಿ ಸಂತರ ಆದರ್ಶದಲಿ ಸರ್ವೋದಯವಾಗಲಿ ಸರ್ವರಲಿ

ಎಂದು ರಾಶ್ಟ್ರಕವಿ ಕುವೆಂಪು ಹೊಂದಿದ್ದ ಆಶಯವನ್ನೇ ಕಾಪ್ರ ತಾವೂ ಪುನರುಚ್ಚರಿಸಿದ್ದಾರೆ ಎನ್ನಿಸುತ್ತದೆ.

(ಚಿತ್ರಸೆಲೆ: ವಿಕಿಪೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: