ಅಂಬಾರಿಯ ಕತೆ, ಆನೆಗಳ ತಯಾರಿ, ಜಂಬೂಸವಾರಿ!
‘ಮಯ್ಸೂರು ದಸರಾ ಎಶ್ಟೊಂದು ಸುಂದರ…’ ಹಾಡಿನಲ್ಲಿ ಬಣ್ಣಿಸಿದ್ದಕ್ಕಿಂತಲೂ ಒಂದು ಕಯ್ ಮೇಲೆ ಮಯ್ಸೂರು ದಸರಾದ ಸೊಬಗು. ನಿಜಕ್ಕೂ ಇದರ ಸೊಬಗನ್ನು ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ದಸರಾ ನಮ್ಮ ನಾಡಹಬ್ಬ. ಇದಕ್ಕೆ ಸಾಕ್ಶಿಯಾಗುವ ಮಯ್ಸೂರಿನಲ್ಲಿ ದಸರಾ ಹಬ್ಬವನ್ನು ವಿಶೇಶ ರೀತಿಯಲ್ಲಿ ನಡೆಸಿಕೊಂಡು ಹೋಗಲಾಗುತ್ತದೆ. ಈ ಸೊಬಗನ್ನು ನೋಡಲು ಜಗತ್ತಿನ ಮೂಲೆಮೂಲೆಗಳಿಂದ ಬಂದ ಮಂದಿ ಒಂದೆಡೆ ಸೇರುತ್ತಾರೆ. ಈ ಕಾರಣಕ್ಕೆ ಮಯ್ಸೂರು ದಸರಾ ಜಗತ್ತಿನೆಲ್ಲೆಡೆ ಹೆಸರುವಾಸಿ. ದಸರಾದ ಮುಕ್ಯ ಸೆಳೆತ ಜಂಬೂಸವಾರಿ. ಸಿಂಗಾರಗೊಂಡ ಆನೆಗಳು ಚಿನ್ನದ ಅಂಬಾರಿಯನ್ನು ಹೊತ್ತು ನಡೆಸುವ ಮೆರವಣಿಗೆ. ದಸರಾ ಹಬ್ಬಕ್ಕೆ ಕಳೆ ಇರುವುದೇ ಈ ಅಂಬಾರಿಯಿಂದ ಎಂದರೆ ತಪ್ಪಾಗಲಾರದು.
ಮೈಸೂರಿಗೆ ಅಂಬಾರಿ ಹೇಗೆ ಬಂತು?
ಸುಮಾರು 15 ನೇ ನೂರೇಡಿನಲ್ಲಿ ವಿಜಯನಗರದ ಅರಸರು ದಸರಾ ಹಬ್ಬವನ್ನು ಆರಂಬಿಸಿದರು. ಅವರ ರಾಜದಾನಿಯಾದ ಹಂಪಿಯಲ್ಲಿ ದಸರಾ ನಡೆಯುತ್ತಿತ್ತು. ಈಗಿರುವ ಅಂಬಾರಿಯನ್ನೇ ಆಗಲೂ ಮೆರವಣಿಗೆಗೆ ಬಳಸಲಾಗುತ್ತಿತ್ತು. ವಿಜಯನಗರ ಅರಸು ಮನೆತನದ ಮೊದಲಿಗರಾದ ಹಕ್ಕ-ಬುಕ್ಕರಿಗೆ ಈ ಅಂಬಾರಿಯು ಕಂಪಿಲ ದೊರೆಗಳಿಂದ ಬಂದಿತ್ತು. ಹೆಚ್ಚಿನವರಿಗೆ ಗಂಡುಗಲಿ ಕುಮಾರರಾಮನ ಪರಿಚಯವಿದೆ. ಈತ 13 ನೇ ನೂರೇಡಿನ ಹೆಸರುವಾಸಿ ದೊರೆ. ಈತನ ಕಾಲದಲ್ಲಿಯೂ ಈ ಅಂಬಾರಿಯಲ್ಲಿ ದುರ‍್ಗಾದೇವಿಯನ್ನು ಇರಿಸಿ ಪೂಜಿಸಲಾಗುತ್ತಿತ್ತು. ಅಂಬಾರಿಯಲ್ಲಿ ದುರ‍್ಗಾದೇವಿಯನ್ನು ಇಟ್ಟು ಪೂಜಿಸುವ ಸಂಪ್ರದಾಯವನ್ನು ಕುಮಾರರಾಮನ ತಂದೆಯಾಗಿದ್ದ ಕಂಪಿಲರಾಯನು ಶುರುಮಾಡುತ್ತಾನೆ.
ಕಂಪಿಲರಾಯನ ತಂದೆಯಾದ ಮುಮ್ಮಡಿ ಸಿಂಗ ನಾಯಕನ ಕಾಲದಲ್ಲಿ ಈ ಅಂಬಾರಿಯು ಈಗಿನ ಮಹಾರಾಶ್ಟ್ರದ ದೇವಗಿರಿಯಲ್ಲಿ ಇತ್ತು. ಶತ್ರುಗಳ ದಾಳಿಗೆ ದೇವಗಿರಿ ನಗರವು ನಾಶವಾಗುತ್ತದೆ. ಆಗ ಮುಮ್ಮಡಿ ಸಿಂಗ ನಾಯಕನು ಅಂಬಾರಿಯನ್ನು ಹೊತ್ತೊಯ್ದು ಬಳ್ಳಾರಿಯ ರಾಮದುರ‍್ಗದ ಕೋಟೆಯಲ್ಲಿ ಬಚ್ಚಿಡುತ್ತಾನೆ. ಬಳಿಕ ಈತನ ಮಗನಾದ ಕಂಪಿಲರಾಯನು ಗಟ್ಟಿಯಾದ ನಾಡನ್ನು ಕಟ್ಟಿದ ಮೇಲೆ ಅಂಬಾರಿಯನ್ನು ಹೊರತಂದು ದುರ‍್ಗಾದೇವಿಯನ್ನಿಟ್ಟು ಪೂಜಿಸುವ ಸಂಪ್ರದಾಯವನ್ನು ತರುತ್ತಾನೆ. ಇದು ಗಂಡುಗಲಿ ಕುಮಾರರಾಮನ ಕಾಲದವರೆಗೂ ಮುಂದುವರೆಯುತ್ತದೆ.
1327 ರಲ್ಲಿ ದೆಹಲಿ ಸುಲ್ತಾನರ ದಾಳಿಗೆ ಕುಮಾರರಾಮನು ಸಾವನ್ನಪ್ಪುತ್ತಾನೆ. ಅಲ್ಲಿಗೆ ಕಂಪಿಲರ ಆಡಳಿತ ಕೊನೆಗೊಳ್ಳುತ್ತದೆ. ಆ ಹೊತ್ತಿನಲ್ಲಿ ಕಂಪಿಲರ ಅರಮನೆಯ ಸಂಪತ್ತನ್ನು ಕಾಪಾಡುವ ಹೊಣೆಹೊತ್ತ ಹಕ್ಕ-ಬುಕ್ಕರು, ದೆಹಲಿ ಸುಲ್ತಾನರ ಕೈಗೆ ಸಿಗದಂತೆ ಅಂಬಾರಿಯನ್ನು ಮುಚ್ಚಿಟ್ಟು ಕಾಪಾಡುತ್ತಾರೆ. ಬಳಿಕ ಹಕ್ಕ-ಬುಕ್ಕರು ಸೇರಿ ಗಟ್ಟಿಯಾದ ವಿಜಯನಗರ ಸಾಮ್ರ್ಯಾಜ್ಯವನ್ನು ಕಟ್ಟಿದ ಮೇಲೆ ಅಂಬಾರಿಯನ್ನು ಹೊರತರುತ್ತಾರೆ. ವಿಜಯನಗರದ ಮೊದಲ ದೊರೆಗಳಲ್ಲಿ ಒಬ್ಬನಾದ ಬುಕ್ಕನು ಈಗಿನ ಹಂಪಿಯನ್ನು ಎರಡನೇ ರಾಜದಾನಿಯನ್ನಾಗಿ ಮಾಡಿ ಅಂಬಾರಿಯನ್ನು ಅಲ್ಲಿಗೆ ಸಾಗಿಸುತ್ತಾನೆ. ಅಲ್ಲಿ ಹಂಪಿಯ ದಸರಾ ಹಬ್ಬವನ್ನು ಆರಂಬಿಸಿ ಅಂಬಾರಿಯಲ್ಲಿ ದೇವರನ್ನಿಟ್ಟು ಮೆರೆಸಲಾಗುತ್ತದೆ.
ವಿಜಯನಗರದ ಮನೆತನ ಕೊನೆಯಾದ ಮೇಲೆ ಅಂಬಾರಿಯನ್ನು ಕಾಪಾಡಲು ಆಂದ್ರಪ್ರದೇಶದ ಪೆನಗೊಂಡಕ್ಕೆ ಸಾಗಿಸಲಾಯಿತು. ಬಳಿಕ ಅಂಬಾರಿಯನ್ನು ಕಾಪಾಡುವ ಹೊಣೆ ಶ್ರೀರಂಗಪಟ್ಟಣದ ದೊರೆಗಳಾಗಿದ್ದ ಒಡೆಯರ ಹೆಗಲಿಗೆ ಬಂದಿತು. ಹೀಗೆ ಒಡೆಯರೊಂದಿಗೆ ಅಂಬಾರಿಯು ಮೈಸೂರು ನಗರಕ್ಕೆ ಬರುತ್ತದೆ. ಸುಮಾರು 800 ವರುಶಗಳ ಹಳಮೆಯನ್ನು ಹೊಂದಿರುವ ಅಂಬಾರಿಯೂ ನಾಡಿನ ಏಳುಬೀಳುಗಳನ್ನು ದಾಟಿಕೊಂಡು ಬಂದು, ಇಂದು ನಮ್ಮ ನಾಡಹಬ್ಬದ ಹೆಮ್ಮೆಯ ಗರಿಯಾಗಿ ಮೆರೆಯುತ್ತಿದೆ.
ಆನೆಗಳ ತಯಾರಿ ಹೇಗಿರುತ್ತೆ?
ಶ್ರೀರಂಗಪಟ್ಟಣದಲ್ಲಿ ಸುಮಾರು 1610 ರಲ್ಲಿ ರಾಜ ಒಡೆಯರ್ ಅವರಿಂದ ಮೊದಲ್ಗೊಂಡ ದಸರಾ ಹಬ್ಬ, ಇಂದಿನ ವರೆಗೂ ಬಕ್ತಿ ಬಾವದ ಬಾಗವಾಗಿ ಮೆರೆಯುತ್ತಾ ಬಂದಿದೆ. ಆದರೆ ಮಯ್ಸೂರಿನ ದಸರಾದಲ್ಲಿ ಎಲ್ಲರ ಗಮನ ಸೆಳೆಯುವುದು ಮಾತ್ರ ಚಿನ್ನದ 750 ಕೆ.ಜಿ. ತೂಕದ ಅಂಬಾರಿ ಮತ್ತು ಅಂಬಾರಿಯನ್ನು ಹೊತ್ತು ನಡೆವ ಆನೆಗಳು. ಒಂದರ‍್ತದಲ್ಲಿ ಆನೆಗಳೇ ಜಂಬೂಸವಾರಿಯ ರೂವಾರಿಗಳು. ಹೀಗಾಗಿ ಆನೆಗಳು ಇರದ ದಸರಾವನ್ನು ಊಹಿಸಲೂ ಸಾದ್ಯವಿಲ್ಲ. ಸತತವಾಗಿ ತಯಾರಿಯನ್ನು ನಡೆಸಿ ಬೇರೆ ಬೇರೆ ಶಿಬಿರಗಳಿಂದ ತಂಡಗಳಾಗಿ ಆನೆಗಳು ಮಯ್ಸೂರಿಗೆ ಕಾಲಿಡುತ್ತಿದ್ದಂತೆ ದಸರಾ ಹಬ್ಬಕ್ಕೆ ಕಳೆಕಟ್ಟುತ್ತದೆ. ಈ ಬಾರಿ ಮೊದಲನೇ ತಂಡವಾಗಿ ಅರ‍್ಜುನ, ಬಲರಾಮ, ಸರಳ, ಗಜೇಂದ್ರ, ಅಬಿಮನ್ಯು, ವರಲಕ್ಶ್ಮಿ, ಶ್ರೀರಾಮ, ಬಳಿಕ ಎರಡನೇ ತಂಡವಾಗಿ ವಿಜಯ, ವಿಕ್ರಮ, ಹರ‍್ಶ, ಗೋಪಿ, ಗೋಪಾಲಸ್ವಾಮಿ, ಪ್ರಶಾಂತ, ದುರ‍್ಗಾಪರಮೇಶ್ವರಿ ಆನೆಗಳು ಬಂದಿವೆ. ಹೀಗೆ ಬರುವ ಆನೆಯ ಪಡೆಗೆ ಅರಮನೆ ಅಂಗಣದಲ್ಲಿ ಹಲವು ಬಗೆಯ ಉಪಚಾರಗಳನ್ನು ಕೊಟ್ಟು ಬಹಳಶ್ಟು ಆದರದಿಂದ ನೋಡಿಕೊಳ್ಳಲಾಗುತ್ತದೆ. ದಿನನಿತ್ಯ ಗೋದಿ, ಉದ್ದು, ಕುಸಲಕ್ಕಿ, ಈರುಳ್ಳಿ, ಹಸಿ ತರಕಾರಿಗಳು, ತೆಂಗಿನಕಾಯಿ, ಬೆಣ್ಣೆ, ಬತ್ತ, ಕಬ್ಬು, ಬೆಲ್ಲ, ಹಿಂಡಿ, ಉಚ್ಚೆಳ್ಳು ಇದರ ಜೊತೆಗೆ ಹಸಿರ ಮೇವುಗಳಾಗಿ ಮರದ ಸೊಪ್ಪು, ಹುಲ್ಲನ್ನೂ ನೀಡಲಾಗುತ್ತದೆ. ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಆನೆಗೆ ಅಂಬಾರಿಯಶ್ಟೇ ತೂಕದ ಮರದ ಹಲಗೆಯನ್ನು ಹೊರಿಸಿದರೆ, ಉಳಿದ ಆನೆಗಳಿಗೆ ಮರಳಿನ ಮೂಟೆಗಳನ್ನು ಹೊರಿಸಿ ತಯಾರಿ ನಡೆಸಿ ಜಂಬೂಸವಾರಿಗೆ ಸಜ್ಜುಗೊಳಿಸುತ್ತಾರೆ. ಕಳೆದ ವರುಶದಂತೆ ಈ ವರುಶವೂ ಕೂಡ ಅರ‍್ಜುನ ಆನೆ ಅಂಬಾರಿಯನ್ನು ಹೊತ್ತು ಸಾಗಲಿದ್ದಾನೆ.
ಜಂಬೂಸವಾರಿ:
ದಸರಾ ಹಬ್ಬದ ದಿನದ ಮದ್ಯಾಹ್ನದ ಬಳಿಕ ಅರಮನೆಯ ಬಲರಾಮ ದ್ವಾರದಲ್ಲಿ ಸಂಪ್ರಾದಾಯಕ ವಿದಿವಿದಾನಗಳು ಮುಗಿದಮೇಲೆ ಅರಮನೆಯ ಒಳಾವರಣದಲ್ಲಿ ಜಂಬೂಸವಾರಿ ಮೊದಲ್ಗೊಳ್ಳುತ್ತದೆ. ಅಂಬಾರಿ ಸಾಗುವ ಇಕ್ಕೆಲಗಳಲ್ಲಿಯೂ ನೆರೆಯುವ ಲಕ್ಶಾಂತರ ಮಂದಿಯ ನಡುವೆ ಚಿನ್ನದ ಅಂಬಾರಿ ಮೆರವಣಿಗೆ ನಡೆಯುತ್ತದೆ. ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಕುಳ್ಳಿರಿಸಿ ರಾಜಬೀದಿಯಲ್ಲಿ ನಡೆಯುವ ಸೊಗಸು ದಸರಾಕ್ಕೆ ದೊಡ್ಡ ಗರಿ ಮೂಡಿಸಿದೆ. ಅರಮನೆ ಆವರಣದಿಂದ ಬನ್ನಿಮಂಟಪದತ್ತ ಸಾಗುವ ನೋಟ ಕಣ್ಮನ ತಣಿಸುತ್ತಿವೆ. ಚಿನ್ನ, ಬೆಳ್ಳಿ, ಮುತ್ತಿನ ಸರ, ಹೂವಿನ ಹಾರದಿಂದ ಸಿಂಗರಿಸಿದ ಅಂಬಾರಿಯನ್ನು ಹೊತ್ತ ಆನೆ ಮತ್ತು ಜೊತೆಗೆ ಇತರೆ ಹನ್ನೊಂದು ಆನೆಗಳು, ಸೇರಿದಂತೆ ಜಂಬೂಸವಾರಿಯಲ್ಲಿ ಒಟ್ಟು ಹನ್ನೆರಡು ಸಿಂಗಾರಗೊಂಡ ಆನೆಗಳ ಮೆರವಣಿಗೆ ನೋಡುಗರಿಗೆ ಬೆರಗು ಮೂಡಿಸುವಂತದ್ದು. ಅಲ್ಲದೇ ಈ ಮೆರವಣಿಗೆಯಲ್ಲಿ ಅರಮನೆಯ ಆನೆ, ಕುದುರೆಗಳೂ ಪಾಲ್ಗೊಳ್ಳುತ್ತವೆ. ಇದರ ಜೊತೆಗೆ ಕೊನೆಯಿಲ್ಲದಶ್ಟು ಮನರಂಜನೆ.
ಮೆರವಣಿಗೆಯ ಜೊತೆ ಸಾಗುವ ಕಂಸಾಳೆ ಕುಣಿತ, ತಾಳವಾದ್ಯ, ಕುಶಾಲ ತೋಪುಗಳ ಸದ್ದು, ಕಲಾತಂಡಗಳ ಕುಣಿತ, ಬಿತ್ತಿ ಚಿತ್ರಗಳು, ಮಂದಿಯನ್ನು ಸೆಳೆಯುವಂತದ್ದು. ಕನ್ನಡ ನಾಡ ಮೂಲೆ ಮೂಲೆಗಳಿಂದ ಬರುವ ಕಲಾತಂಡಗಳು ತಮ್ಮ ಕಲೆಯನ್ನು ಹೊರಹಾಕಿದರೆ, ದಮಾಮಿ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ಕುದುರೆ ಕುಣಿತ, ಬೇಡರ ಕುಣಿತ, ಗಾರುಡಿ ಗೊಂಬೆ, ಹುಲಿವೇಶ, ಸಂಬಾಳ ವಾದನ ಮನಕೆ ಮುದ ನೀಡುತ್ತದೆ. ಕನ್ನಡ ನಾಡ ಕಾಪುಗರ ಪಂಜಿನ ಕವಾಯಿತು ನಡೆಸಿದರೆ, ಇಂದಿನ ಸೆಳೆತಗಳಾದ (ಲೇಸರ್ ಶೋ, ಮೋಟಾರ್ ಸೈಕಲ್ ಚಳಕಗಳು ಮತ್ತು ಸರ‍್ಕಸ್)ಗಳು ಕಣ್ಮನಕೆ ನಲಿವು ತುಂಬುವಂತಹದ್ದು.
(ಮಾಹಿತಿ ಸೆಲೆ: wiki_Dasara, wiki_Vijayanagara_Dynasty, Vijayanagara_Origin, sanjevani)
(ಚಿತ್ರ ಸೆಲೆ: mysoredasara.org, newskarnataka.com)
ಇತ್ತೀಚಿನ ಅನಿಸಿಕೆಗಳು