ಆಯಗಳ ಅರಿವು

ಅಮರ್.ಬಿ.ಕಾರಂತ್.

ಬಯ್ಗಿನ ತುಂತುರು ಮಳೆಯಲಿ, ಬಿಸಿ ಕಾಪಿಯನು ಹೀರುತ್ತಾ, ಚಳಿಕಾಯಿಸುತ್ತಾ, ಮಾಡಲು ಬೇರೆ ಕೆಲಸವಿಲ್ಲದಿದ್ದಾಗ, ಸುಮ್ಮನೆ ಹೀಗೊಂದು ಹೊಳಹನ್ನು ಒಣರಿರಿ (think).

ನೀವು ಒಂದು ಇರುವೆ. ಒಂದು ಹಾಳೆಯ ಮೇಲೆ ನಿಂತಿದ್ದೀರಿ. ನಿಮ್ಮ ಸುತ್ತಲು ಸಲೆಗೀಟನ್ನು (Square Line) ಹಾಕಲಾಗಿದೆ. ನಿಮಗೆ ಹಾರುವ ಕಸುವಿಲ್ಲ. ನೆಗೆಯಲೂ ಬರುವುದಿಲ್ಲ. ಎಲ್ಲಿಗೆ ಹೋಗಬೇಕೆಂದಿದ್ದರೂ ನಡೆದೇ (ತೆವಳಿದಂತ ನಡೆ) ಹೋಗಬೇಕು. ಹೀಗಿರುವಾಗ ಒಂದು ಕೇಳ್ವಿ ನಿಮಗೆ. ಆ ಗೆರೆಯನ್ನು ಮೆಟ್ಟದೆ, ಇನಿತು ತಾಂಕಿಸದೆ, ಆ ಗೆರೆಯನ್ನು ದಾಟಬಲ್ಲಿರಾ?

ant
“ಯಾಕಾಗಬಾರದು? ನನ್ನ ಕಾಲ್ಗಳನ್ನು ಚೂರು ಮೇಲಕ್ಕೆತ್ತಿ, ಗೆರೆದಾಟುತ್ತಿದ್ದಂತೆಯೇ, ನೆಲಕ್ಕೆ ಇರಿಸುವೆ! ಆಗ ನಾನು ಗೆರೆಯನ್ನು ತುಳಿಯದೆ ದಾಟಬಲ್ಲೆ,” ಎಂದು ನಿಮಗೆ ಅನಿಸಬಹುದು. ಮತ್ತೊಮ್ಮೆ ಓರಿರಿ. ನಿಮ್ಮ ಕಾಲ್ಗಳನ್ನು ಮೇಲೆತ್ತಲೂ ನಿಮ್ಮಲ್ಲಿ ಕಸುವಿಲ್ಲ. ನಿಮಗೆ ಕಾಣುವುದು ಬರೇ ಎಡ, ಬಲ, ಮುಂದೆ, ಹಿಂದೆ. ಮೇಲೆ, ಕೆಳಗೆ ಎಂಬ ಆಯ (Dimension) ನಿಮ್ಮ ನಿಲುಕಿಗೆ ಸಿಗದು. ಅದರ ಅರಿವೂ ನಿಮಗಿರದು. ಈಗ ಹೇಗೆ ಆ ಗೆರೆಯನ್ನು ತುಳಿಯದೇ, ಇಲ್ಲ, ಅದನ್ನು ಸೀಳದೆ, ಗೆರೆದಾಟಬಲ್ಲಿರಿ? ಆಗದು ಎಂದು ಅನಿಸುತ್ತಿದೆಯೇ?

ಹವ್ದು. ನಿಮ್ಮ ಆಯದ ನಿಲುಕು ಬರಿದೇ ಮುಂದೆ, ಹಿಂದೆ, ಎಡ, ಬಲಕ್ಕೆ ಇದ್ದರೆ, ಮೇಲಿನ ಮತ್ತು ಕೆಳಗಿನ ನಿಲುಕನ್ನು ನೀವೆಂದೂ ಪಡೆಯಲಾರಿರಿ. ಒಂದೊಮ್ಮೆ ನಿಮ್ಮ ಹುಟ್ಟಿನಿಂದಲೂ ಈ ಮೇಲೆ, ಕೆಳಗಿನ ಆಯವನ್ನು ಎಂದೂ ಕಂಡಿರದಿದ್ದರೆ, ಆ ಮೂರನೆ ಆಯದ ಉನ್ನಿಕೆಯೂ (imagination) ನಿಮಗೆ ಸಿಗದು. ಒಂದುವೇಳೆ ನಿಜದಲ್ಲಿ ನೀವು ಈ ಇರುವೆಯಾಗಿದ್ದಲ್ಲಿ, ಆ ಗೆರೆಯನ್ನು ಸೀಳಿ ಹಾದುಹೋಗದೆ ಗೆರೆದಾಟಲಾರಿರಿ. ಆ ಇರುವೆಯ ಇರುವಿಕೆಯ ಅರಿವು ಮೂಡುವುದು ಆ ಎರಡು ಆಯಗಳ ಹಾಳೆಯಲ್ಲಶ್ಟೇ. ಮೇಲಣ, ಕೆಳಗಣ ಎಂಬ ಮೂರನೆಯ ಆಯವನ್ನು ಆ ಇರುವೆಯೆಂದೂ ಕಾಣದು. ಅಲ್ಲವೇ?

ಈಗ ನಿಮಗಿನ್ನೂ ಬಿಡುವಿದ್ದರೆ, ಇದಕ್ಕೆ ಹೋಲುವ ಮತ್ತೊಂದು ಓರುವ ಆರಯ್ಕೆಯನ್ನು (thinking experiment) ಮಾಡಿರಿ. ಆ ಇರುವೆಯಹಾಗೆ ನೀವೂ ಮೇಲಿನ ಆಯಗಳ ಕುರುಡುತನಕೆ ಗುರಿಯಾಗಿದ್ದರೆ? ನಮ್ಮ ಇಡಿಯೆಡೆಗೆ ಮೂರಕ್ಕಿಂತಲೂ ಹೆಚ್ಚಿನ ಆಯಗಳಿದ್ದು, ಅವು ನಮ್ಮ ಅರಿವಿಗೆ ಬಾರದೆ ಇದ್ದರೆ? (ಹೊತ್ತನ್ನು ನಾಲ್ಕನೆಯ ಆಯವೆಂದು ಅರಕೆಗಾರರು ಬಗೆದಿದ್ದರೂ, ನಾನು ಇಲ್ಲಿ ಬರೀ ಇಂಬಿನ ಆಯಗಳ (Spatial Dimensions) ಕುರಿತಶ್ಟೇ ಹೇಳುತ್ತಿದ್ದೇನೆ). ಆಗ ಏನಾಗಬಹುದು?

ನಾವೆಂದೂ ಒಣರದ, ಕಾಣದ ಒಂದು ಮೇಲಿನ ಆಯದ ಇರುವಿಕೆಯು ನಮ್ಮ ಇಡಿಯೆಡೆಯಲ್ಲಿದೆ (Universe); ನಾವು ಮೂರು ಆಯಗಳಿಗೂ ಮೀರಿದ ಉಸಿರುಗಗಳು; ನಮ್ಮ ಮಯ್ಯ ಪಡೆಕಗಳಿಗೆ (receptors), ನಮ್ಮೊಳಗಿನ ಮೆದುಳಿನ ಹೊಳಹುಗಳಿಗೆ ನಿಲುಕದ ನಿಜವೊಂದಿರಲೂ ಸಾಕು, ಎಂಬ ತಿರುಳು ಹೊರಹೊಮ್ಮುತ್ತದೆ! ನಾವೆಶ್ಟೇ ತಡಕಾಡಿದರೂ, ಊಕಪಟ್ಟರೂ (effort), ನಮಗೆ ಕಾಣುವುದೆಲ್ಲವೂ ಅರೆನಿಜದ್ದಾಗಿದ್ದು, ತಿಳಿಯಾದ ನಿಜ (Clear Truth) ಈ ಮೇಲಿನ ಆಯಗಳನ್ನು (Higher Dimension) ನಮ್ಮ ಎಣಿಕೆಯಲ್ಲಿ ತೆಗೆದುಕೊಂಡಗಾಲೇ ಕಾಣಸಿಗುತ್ತದೆ.

ಮಳೆಯು ಇನ್ನೂ ನಿಲ್ಲದೆ ಹೆಚ್ಚಾಗಿ, ನೀವು ಹೊರಹೋಗುವ ಹೊಂಚನ್ನೇ ಹೊಸಕುಹಾಕಿದ್ದರೆ, ಇನ್ನೊಂದು ಹೊಳಹಿನತ್ತ ವಾಲಿರಿ. ಒಂದುವೇಳೆ, ನಮ್ಮ ಓರುವ ಆರಯ್ಕೆಯಲ್ಲಿ ಬರುವ ಇರುವೆಗೆ ರೆಕ್ಕೆಬಲಿತು ಬಂದರೆ? ಇಲ್ಲ, ನಾವೇ ಅದರ ಮಯ್ಗೊಂದು ಹಾರುವ ಬಿಣಿಗೆಯನ್ನು (Flying Machine) ಕಟ್ಟಿದರೆ? ಅದು ಆ ಗೆರೆಯನ್ನು ತಾಂಕದಯೇ ದಾಟಿ ಹಾರಬಲ್ಲದು!

ಎಂದೂ ಉನ್ನಿಸದ ಮೂರನೆಯ ಆಯವನ್ನು ಪುಗಿದು (accessed) ಈ ಇರುವೆ, ಉಳಿದೆಲ್ಲಾ ಇರುವೆಗಳಿಗಿಂತ ಪೆರ‍್ಕಸುವಿನ (More Energetic) ಇರುವೆಯಾಗಿ ಬದುಕುತ್ತದೆ! (ಗೆರೆಯನ್ನು ತಾಂಕಿಸದೆ ದಾಟಬಲ್ಲ ಇರುವೆಯು ಉಳಿದವರಿಗಿಂತ ಹೆಚ್ಚಿನ ಕಸುವನ್ನು ಹೊಂದಿರುವಂತದ್ದು. ಒಂದ್ಲೆಕ್ಕದಲ್ಲಿ, “ಕಡವರು/ದೇವರು”!).  ಹಾಗೆಯೇ, ಒಂದೊಮ್ಮೆ, ನಿಮ್ಮ ಗೆಳೆಯ/ಗೆಳತಿಗೋ, ನೆರೆಹೊರೆಯವರಿಗೋ, ನೆಂಟರಿಗೋ, ಗೊತ್ತಿಲ್ಲದ ಯಾವನಿಗೋ/ಯಾವಳಿಗೋ ಆ ಮೇಲಿನ ಆಯದ ನಿಲುಕು ಸಿಕ್ಕರೆ? ಅವರು ನಿಮಗಿಂತ ಹೆಚ್ಚಿನ ಕಸುವುಳ್ಳವರೂ, ಅರಿವುಳ್ಳವರೂ, ಸುತ್ತಣದ ಆಗುಹಗಳಮೇಲೆ ಹೆಚ್ಚಿನ ಹಿಡಿತವುಳ್ಳವರೂ ಆಗುತ್ತಾರೆ. “ದೇವರು”ಗಳಾಗುತ್ತಾರೆ!

ಇವಿಶ್ಟೂ ಬರಿದೇ ಓರುವ ಆರಯ್ಕೆಯ ಆಟವಲ್ಲ. ಇಂದಿನ ಗೆತ್ತ ಇರುವರಿಮೆಯ (Theoretical Physics) ಕೆಲವೊಂದು ಕಟ್ಟಲೆಗಳು, ನಮ್ಮ ಇಡಿಯೆಡೆಯಲ್ಲಿ ಮೂರಕ್ಕೂ ಹೆಚ್ಚಿನ ಇಂಬಿನ ಆಯಗಳು ಇರುವುದನ್ನು ಮುನ್ಹೊಳಹಿಸುತ್ತವೆ (Predict). ಈ ಕಟ್ಟಲೆಗಳಲ್ಲಿ ಹಿರಿಯದೂ, ಗಟ್ಟಿಯಾದ ಲೆಕ್ಕಸಾಟಿಕೆಗಳಿಂದ (Equations) ಹೆಚ್ಚು ನಂಬತಕ್ಕದೂ ಆದ ನೂಲ್ಗಟ್ಟಲೆಯು (String Theory), ನಮ್ಮ ಮಿಗಿಲ್ಬಾನಿನಲ್ಲಿ ಹನ್ನೊಂದು ಆಯಗಳಿವೆಯೆಂದು ಸಾರುತ್ತಿದೆ.

ಉಳಿದ ಏಳು ಆಯಗಳ (ಮೂರು ಕಾಣುವ ಹಾಗು ಹೊತ್ತಿನ ಆಯವನ್ನು ಹೊರತುಪಡಿಸಿ) ಪೊಳಕು (Shape) ಹಾಗು ಅಳತೆಯ ಬಗೆ ಹೇಗಿದೆಯೆಂದು ನೂಲ್ಗಟ್ಟಲೆಯಲ್ಲೇ ಹಲವು ಹೊಳಹುಗಳಿದ್ದರೂ, ಇದ್ಯಾವುವೂ ಅರಕೆಮನೆಯಲ್ಲಿನ ಆರಯ್ಕೆಯಿಂದ (Experiment) ನಿಂದರಿಕೆಗೊಂಡಿಲ್ಲ (Prove). ಆದರೆ ನೂಲ್ಗಟ್ಟಲೆಯು, ಇಡಿಯೆಡೆಯ ಸಾಕಶ್ಟು ಗುಟ್ಟುಗಳನ್ನು ರಟ್ಟುಮಾಡುವಲ್ಲಿ, ಉಳಿದ ಕಟ್ಟೆಲೆಗಳಿಗಿಂತಲೂ ಒಂದು ಹೆಜ್ಜೆ ಮುಂದಿದೆ. ಮುಂದೊಂದು ದಿನ ಈ ಕಟ್ಟಲೆಯು ನನ್ನಿಗೆಯ್ದಲ್ಲಿ, ನಮ್ಮ ಸುತ್ತಣದಲ್ಲಿ ನಾವಿರಿಸಿರುವ ನಂಬಿಕೆಗಳೆಲ್ಲವೂ ತಲೆಕೆಳಗಾಗಿ ನಿಲ್ಲುವುದರಲ್ಲಿ ಅಯ್ಬಿಲ್ಲ (No Doubt).

(ತಿಟ್ಟಸೆಲೆ: d0server1.fnal.gov)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: