ಕೆಲಸದ ತಂಡಗಳಲ್ಲಿ ಹೊಂದಿಕೆ ಮೂಡಿಸುವುದು ಹೇಗೆ?

– ರತೀಶ ರತ್ನಾಕರ.

The group of athletes in the sky.

ಅದು ಎರಡು ದಿನಗಳ ತಿರುಗಾಟ, ಕಂಪನಿಯವರೇ ದುಡ್ಡುಹಾಕಿ ಇಡೀ ತಂಡವನ್ನು ತುಮಕೂರು ಬಳಿಯ ರೆಸಾರ‍್ಟ್ ಒಂದಕ್ಕೆ ಕಳುಹಿಸಿತ್ತು. ಕಂಪನಿಯ ಎಂದಿನ ಕೆಲಸವನ್ನು ಮಾಡಲು ಬೇಕಾದ ಪಾಲ್ಗೊಳ್ಳುವಿಕೆ, ಅರಿವನ್ನು ಹಂಚುವುದು, ಮುಂದಾಳುತನ, ಕೆಲಸದಲ್ಲಿ ಒಬ್ಬರಿಗೊಬ್ಬರು ನೆರವಾಗುವುದು, ಹೀಗೆ ತಂಡ ಕಟ್ಟುವಿಕೆ(team building)ಗೆ ಬೇಕಾದ ಕಲಿಕೆಯನ್ನು ಕೊಡುವ ಏರ‍್ಪಾಡನ್ನು ಮಾಡಲಾಗಿತ್ತು. ಕಲಿಸುಗರು ಮಾಡಿಸುತ್ತಿದ್ದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ, ಕೆಲಸದಿಂದಾಚೆಗಿನ ಆ ಎರಡು ದಿನಗಳು ಮಜವಾಗಿತ್ತು. ತಿರುಗಾಟವನ್ನು ಮುಗಿಸಿ ಕೆಲಸಕ್ಕೆ ಮರಳಿದ ಒಂದು ವಾರದ ತನಕ ಅದರ ಗುಂಗಿನಲ್ಲೇ ಇದ್ದೆವು. ತಂಡದ ಮಾಡುಗತನವನ್ನು (productivity) ಹೆಚ್ಚಿಸಲು ಮತ್ತು ಕೆಲಸಗಾರರನ್ನು ಹುರಿದುಂಬಿಸಲು, ಆರಾರು ತಿಂಗಳಿಗೊಮ್ಮೆ ಹೀಗೆ ತಿರುಗಾಟಕ್ಕೆ ಕಳುಹಿಸಲಾಗುವುದು ಎಂದು ಕಂಪನಿಯ ಮೇಲುಗರಿಂದ ತಿಳಿಯಿತು. ಮುಂದಿನ ತಿರುಗಾಟ ಯಾವಾಗ ಬರುವುದೋ ಎಂದು ಎದುರು ನೋಡುತ್ತಿದ್ದೆವು. ಆದರೆ ಆರು ತಿಂಗಳಾದ ಮೇಲೆ ಹಣಕಾಸಿನ ಕೊರತೆಯಿಂದಾಗಿ ಈ ಬಾರಿಯ ತಿರುಗಾಟವನ್ನು ರದ್ದುಮಾಡಲಾಗಿದೆ ಎಂಬ ಸುದ್ದಿ ಬಂತು. ಆಗ ನಮಗಾದ ಬೇಸರ ಹೇಳತೀರದು. ‘ಇದೊಂದು ಕಂಪನಿ… ಎಶ್ಟು ಕೆಲಸ ಮಾಡಿದ್ರು ಮೇಲೇರಿಕೆ(promotion) ಇಲ್ಲ, ಸರಿಯಾಗಿ ಸಂಬಳ ಕೊಡಲ್ಲ, ಕೆಲಸದವರನ್ನ ಹುರಿದುಂಬಿಸಲ್ಲ… ಅದ್ರ ಜೊತೆಗೆ ಇದ್ದಿದ್ದೊಂದು ತಿರುಗಾಟನೂ ನುಂಗಿ ನೀರು ಕುಡಿದಿದೆ.’ ಎಂದು ಹಿಡಿಹಿಡಿ ಶಾಪ ಹಾಕಿದ್ವು. ಒಂದು ತಿರುಗಾಟದ ರುಚಿ ಕಂಡಿದ್ದ ನಮಗೆ ಮತ್ತೊಮ್ಮೆ ಆ ತಿರುಗಾಟಕ್ಕೆ ಕಳಿಸುತ್ತಿಲ್ಲ ಎಂಬ ಬೇಜಾರು ಹಲವು ವಾರಗಳವರಗೆ ಇತ್ತು.

ಕೆಲಸ ಮಾಡುವ ಬೇರೆ ಬೇರೆ ತಂಡಗಳನ್ನು ಹುರಿದುಂಬಿಸಲು ಕಂಪನಿಗಳು ಇಲ್ಲವೇ ತಂಡದ ಮೇಲುಗರು ಇಂತಹ ಹಲವಾರು ಚಟುವಟಿಕೆಗಳನ್ನು ಕೈಗಿತ್ತಿಕೊಳ್ಳುತ್ತಾರೆ. ಆದರೆ ಅವುಗಳಿಂದ ಸಿಗುವ ಹುರಿದುಂಬಿಕೆ, ಮೇಲಿನ ಕತೆಯಲ್ಲಿ ನಮಗಾದಂತೆ, ಕೆಲವು ವಾರಗಳವರೆಗೆ ಮಾತ್ರ ಇರುತ್ತದೆ. ಅಂತಹದ್ದೇ ಇಲ್ಲವೇ ಅದಕ್ಕಿಂತ ಚೆನ್ನಾಗಿರುವ ಚಟುವಟಿಕೆಗಳನ್ನು ಕಂಪನಿಗಳಾಗಲಿ ಮೇಲುಗರಾಗಲಿ ಆಗಾಗ ಮಾಡಿಸುತ್ತಿರಬೇಕು. ಇಂತಹ ಚಟುವಟಿಕೆಗಳಿಗೆ ಹಣದ ಕೊರತೆ ಇಲ್ಲವೇ ಇನ್ಯಾವುದೇ ಅಡ್ಡಿ ಆತಂಕಗಳು ಎದುರಾಗುವುದು ತೀರಾ ಸಾಮಾನ್ಯ. ಹಾಗೇನಾದರು ಆಗಿ ಚಟುವಟಿಕೆಗಳನ್ನು ಮಾಡಿಸದೇ ಹೋದಲ್ಲಿ ಕೆಲಸಗಾರರು ಹುರುಪನ್ನು ಕಳೆದುಕೊಳ್ಳುತ್ತಾರೆ. ತಂಡದ ಕೆಲಸಗಾರರು ಹುರುಪನ್ನು ಕಳೆದುಕೊಂಡರೆ ಅದು ತಂಡದ ಮಾಡುಗತನ ಮತ್ತು ಒಳಿತಿಗೆ ಪೆಟ್ಟುಕೊಡುತ್ತದೆ. ಇದರಿಂದ ಕೆಲಸಗಾರರಿಗೂ ಒಳ್ಳೆಯದಲ್ಲ, ಕಂಪನಿಗೂ ಒಳ್ಳೆಯದಲ್ಲ.

ಹಾಗಾದರೆ ತಂಡ ಕಟ್ಟುವಿಕೆ ಹಾಗು ಹುರಿದುಂಬಿಕೆಗೆ ಪದೇ ಪದೇ ಮಾಡಬಹುದಾದ, ನಾಟುವಂತಹ ಚಟುವಟಿಕೆ ಯಾವುದು? ಇದಕ್ಕೆ ಬಗೆಹರಿಕೆ ಹುಡುಕುತ್ತ ಹಲವಾರು ಅರಕೆಗಳನ್ನು (research) ನಡೆಸಲಾಗಿದೆ. ಅವುಗಳಿಂದ ಹೊರಬಂದ ದಿಟವೆಂದರೆ: ಯಾವುದೇ ತಂಡದ ಒಳಿತಿಗೆ, ಕಟ್ಟುವಿಕೆಗೆ ಹಾಗು ಹುರಿದುಂಬಿಕೆಗೆ ಇರುವ ತುಂಬಾ ಒಳ್ಳೆಯ ಚಟುವಟಿಕೆ ಎಂದರೆ ‘ಊಟ‘! ಹೌದು, ಸಾವಿರಾರು ರೂಪಾಯಿ ಹಣವನ್ನು ತೆತ್ತು, ಊರಿನಿಂದ ಆಚೆಗೆ ಕರೆದೊಯ್ದು, ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿಸುವುದಕ್ಕಿಂತ, ತಂಡದವರೆಲ್ಲಾ ಒಟ್ಟಿಗೆ ಕೂತು ಊಟ ಇಲ್ಲವೇ ಕಾಪಿ-ತಿಂಡಿಗಳನ್ನು ಮಾಡುವುದು ತಂಡದ ಬೆಳವಣಿಗೆಗೆ ಹೆಚ್ಚು ಒಳಿತು ಎಂದು ಅರಕೆಗಳು ತೋರಿಸಿಕೊಟ್ಟಿವೆ.

ನ್ಯೂಯಾರ‍್ಕ್ ನ ಕಾರ‍್ನೆಲ್ ಕಲಿಕೆವೀಡಿನ ಅರಕೆಗಾರರಾದ ಕೆವಿನ್ ನಿಪಿನ್ ಅವರು ಹೇಳುವಂತೆ. ತಂಡ ಕಟ್ಟುವಿಕೆಗೆ ಬರಿ ಊಟ ಮಾಡುವುದು ಒಂದೇ ಅಲ್ಲ, ತಂಡದವರೆಲ್ಲ ಸೇರಿ ತಾವೇ ಅಡುಗೆಯನ್ನು ಮಾಡಿ ಊಟ ಮಾಡುವುದು ಇನ್ನೂ ಒಳ್ಳೆಯದು ಎಂದಿದ್ದಾರೆ. ಈ ಕುರಿತು ಒಂದು ಅರಕೆಯನ್ನು ಮಾಡಲು ಅಮೇರಿಕಾದ ಹಲವಾರು ‘ಬೆಂಕಿ ಆರಿಸುವವರ ತಂಡಗಳನ್ನು (fire brigade)’ ಅವರು ಬೇಟಿ ಮಾಡಿದ್ದಾರೆ. ಬೆಂಕಿ ಆರಿಸುವವರ ಹೆಚ್ಚಿನ ತಂಡಗಳಲ್ಲಿ, ತಂಡದವರೆಲ್ಲ ಸೇರಿ ಬೇಕಾದ ಅಡುಗೆಯನ್ನು ಮಾಡಿ ಕಚೇರಿಯಲ್ಲಿಯೇ ಊಟಮಾಡುತ್ತಾರೆ. ಅಂದಿನ ಊಟಕ್ಕೆ ಮಾಡಬೇಕಾದ ತಿನಿಸುಗಳು ಯಾವುವು ಎಂದು ತೀರ‍್ಮಾನಿಸಿ, ಒಬ್ಬರಿಗೊಬ್ಬರು ಕೆಲಸಗಳನ್ನು ಹಂಚಿಕೊಂಡು, ನಲಿವಿನಿಂದ ಅಡುಗೆಯನ್ನು ಮಾಡಿ ಒಟ್ಟಿಗೆ ಊಟ ಮಾಡುತ್ತಾರೆ. ಕೆಲವರು ಮನೆಯಿಂದ ಊಟ ತಂದರೂ ಅಡುಗೆ ಮಾಡುವವರ ಜೊತೆಸೇರಿ ಕೆಲಸಮಾಡಿ, ಮನೆಯಿಂದ ತಂದ ಬುತ್ತಿಯ ಜೊತೆಗೆ ಅಲ್ಲಿನ ಊಟವನ್ನು ಮಾಡುತ್ತಾರೆ. ಹೀಗಿರುವಾಗ ಅಲ್ಲೊಂದು ತೊಡಕು ಎದುರಾಗಿತ್ತು. ಹೆಚ್ಚಿನವರು ಬಾಡೂಟ ಮಾಡುವವರೇ ಇದ್ದದ್ದರಿಂದ ಒಂದಿಬ್ಬರು ಹಸಿರೂಟ ಮಾಡುವವರಿಗೆ ಇವರ ಜೊತೆ ಅಡುಗೆ ಮತ್ತು ಊಟಕ್ಕೆ ಸೇರಿಕೊಳ್ಳಲು ಆಗುತ್ತಿರಲಿಲ್ಲ. ಆಗ ಆ ತಂಡದಲ್ಲಿ ಹಸಿರೂಟದವರ ಅಡುಗೆಗೆಂದೇ ಬೇರೊಂದು ಒಲೆ, ಪಾತ್ರೆಗಳನ್ನು ಮೀಸಲಿಡುವ ನಿಯಮ ಮಾಡಿಕೊಂಡು ಅವರನ್ನೂ ಆ ಚಟುವಟಿಕೆಯಲ್ಲಿ ಸೇರಿಸಿಕೊಳ್ಳಲಾಯಿತು. ತಂಡದ ಈ ಒಗ್ಗಟ್ಟು, ಹಂಚಿ ಕೆಲಸಮಾಡುವ ಪರಿಪಾಟ, ತೊಡಕುಗಳನ್ನು ತಾವೇ ಬಗೆಹರಿಸಿಕೊಂಡು ಒಂದು ತಂಡವಾಗಿ ಕೆಲಸಮಾಡುವ ಗುಣ, ಪಾಲ್ಗೊಳ್ಳುವಿಕೆ, ಇವೆಲ್ಲವೂ ಬರೀ ಅಡುಗೆ ಮತ್ತು ಊಟದಲ್ಲಿ ಅಲ್ಲದೇ ತಮ್ಮ ಎಂದಿನ ಕೆಲಸದಲ್ಲಿಯೂ ಕಾಣತೊಡಗಿದೆ.

team lunch table

ಚಿಕಾಗೋ ನಗರದ ಕಂಪನಿಯೊಂದರಲ್ಲಿ ಆಳೊದಗ(recruiter)ರಾಗಿರುವ ಮಿರಾ ಆಂಡರ‍್ಸನ್ ಅವರೂ ಕೂಡ, ತಂಡ ಕಟ್ಟುವಿಕೆಗೆ ಯಾವುದ್ಯಾವುದೋ ಆಟಗಳನ್ನು ಆಡುವುದಕ್ಕಿಂತ ಒಟ್ಟಿಗೆ ಕೂತು ಊಟ ಮಾಡುವುದು ಹೆಚ್ಚು ಒಳ್ಳೆಯದು ಎನ್ನುತ್ತಾರೆ. ಒಮ್ಮೆ ಒಂದು ತಂಡಕ್ಕೆ ಅಡುಗೆ ಮತ್ತು ಊಟದ ಚಟುವಟಿಕೆಯನ್ನು ಇಟ್ಟಾಗ ತಂಡದ ಎಲ್ಲರೂ ಹುರುಪಿನಿಂದ ಪಾಲ್ಗೊಂಡಿದ್ದನ್ನು ನೆನೆಯುತ್ತಾರೆ. ಅದರಲ್ಲೂ ತಂಡದ ಕೆಲವು ಹಿರಿಯ ಕೆಲಸಗಾರರಿಗೆ ಅಡುಗೆಯ ಬಗ್ಗೆ ಅಶ್ಟಾಗೆ ಗೊತ್ತಿರಲಿಲ್ಲ, ಆದರೆ ಆಗಶ್ಟೆ ತಂಡಕ್ಕೆ ಸೇರಿದ ಹೊಸ ಕೆಲಸಗಾರರೊಬ್ಬರಿಗೆ ಅಡುಗೆಯು ಕರಗತವಾಗಿತ್ತು. ಆಗ ಆ ಹೊಸಬರು ಅಡುಗೆಯ ಮುಂದಾಳ್ತನವನ್ನು ವಹಿಸಿಕೊಂಡು ಉಳಿದವರೊಂದಿಗೆ ಸೇರಿ ಅಡುಗೆ ಮಾಡಿ ಮುಗಿಸಿದರು. ಈ ಚಟುವಟಿಕೆ ಆಗುವುದಕ್ಕಿಂದ ಮುಂಚೆ ತಂಡದ ಎಂದಿನ ಕೆಲಸದಲ್ಲಿ ತೊಡಗಿಕೊಳ್ಳಲು ಆ ಹೊಸಬರು ಒದ್ದಾಡುತ್ತಿರುವುದನ್ನು ಆಂಡರ‍್ಸನ್ ಅವರು ಕೆಲದಿನಗಳಿಂದ ಗಮನಿಸಿದ್ದರು. ಆದರೆ ಅಡುಗೆಯ ಚಟುವಟಿಕೆಯಾಗಿ ಕೆಲವೇ ದಿನಗಳಲ್ಲಿ ತಮ್ಮ ಎಂದಿನ ಕೆಲಸದಲ್ಲಿ ಹೊಸಬರು ಹೆಚ್ಚಿನ ಹುರುಪನ್ನು ತೋರಿಸಿ, ಕೆಲಸದಲ್ಲಿ ತೊಡಗಿಕೊಂಡದ್ದನ್ನು ತಿಳಿಸುತ್ತಾರೆ. ಅದಕ್ಕೆ ತಕ್ಕಂತೆ ತಂಡದ ಹಿರಿಯ ಕೆಲಸಗಾರರೂ ಹೊಂದಿಕೊಂಡು ಬೇಕಾದ ನೆರವನ್ನು ನೀಡುತ್ತಿರುವುದನ್ನು ಗಮನಿಸಿದ್ದಾರೆ. ಒಟ್ಟಾರೆಯಾಗಿ ಒಂದು ಅಡುಗೆ-ಊಟದ ಚಟುವಟಿಕೆ ತಂಡದ ಒಳಿತನ್ನು ಹೆಚ್ಚಿಸುತ್ತದೆ ಎಂದು ಅವರು ನಂಬಿದ್ದಾರೆ.

ಇಂತಹದ್ದೇ ಹಲವಾರು ಅರಕೆಗಳು ಅಡುಗೆ-ಊಟದ ಹೆಚ್ಚುಗಾರಿಕೆಯನ್ನು ಸಾರುತ್ತವೆ. ಊಟವು ತಂಡದ ಒಳಿತಿಗೆ ಇಶ್ಟೊಂದು ನೆರವನ್ನು ಹೇಗೆ ನೀಡುತ್ತದೆ? ಅದಕ್ಕೆ ನಮ್ಮ ನಡವಳಿಕೆ ಮತ್ತು ಹುಟ್ಟುಕಟ್ಟಳೆ(tradition)ಗಳೇ ಕಾರಣ. ಇಂದಿಗೂ ಕುಟುಂಬಗಳ ಒಗ್ಗಟ್ಟು ಮತ್ತು ಹೊಂದಿಕೆಗಳಿಗೆ ನೆರವಾಗುತ್ತಿರುವುದು ಒಟ್ಟಿಗೆ ಊಟಮಾಡುವ ವಾಡಿಕೆ. “ಊಟವೆಂಬುದು ಹುಟ್ಟಿನಿಂದ ಬಂದ ಒಂದು ಒಳ್ಳೆಯ ನಡವಳಿಕೆ. ಅದಕ್ಕೆ ಇನ್ನಿಲ್ಲದ ಹೆಚ್ಚುಗಾರಿಕೆ ಇದೆ.” ಎಂದು ಅರಕೆಗಾರರು ತಿಳಿಸುತ್ತಾರೆ. ಇದೇ ತಂಡಗಳ ಕಟ್ಟುವಿಕೆಗೆ ನೆರವಾಗಿ, ಮಾಡುಗತನವನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ.

ಹಾಗಾಗಿ, ತಂಡದಲ್ಲಿ ಕೂಡಿ ಕೆಲಸಮಾಡಬೇಕೆಂದರೆ ಒಟ್ಟಿಗೆ ಊಟ ಮಾಡುವ ವಾಡಿಕೆಯಿರಲಿ. ಆಗಾಗ ತಂಡದವರೆಲ್ಲರೂ ಸೇರಿ ಅಡುಗೆ ಮಾಡಿ ಊಟ ಮಾಡುವ ಪರಿಪಾಟವಿರಲಿ. ಹಲವಾರು ಕಂಪನಿಗಳು ಈಗಾಗಲೇ ಇದರ ಹೆಚ್ಚುಗಾರಿಕೆಯನ್ನು ಅರಿತು ಕಚೇರಿಯಲ್ಲಿಯೇ ಊಟಮಾಡುವ ಏರ‍್ಪಾಡನ್ನು ಮಾಡಿದ್ದಾರೆ. ಗೂಗಲ್ ನಂತಹ ಕಂಪನಿಗಳು ಕೆಲಸಗಾರರಿಗೆ ಊಟವನ್ನು ಬಿಟ್ಟಿಯಾಗಿ ಕೊಡುತ್ತಿರುವ ಹಿಂದಿನ ಉದ್ದೇಶವೂ ಇದೇ ಆಗಿದೆ.

ಆದರೆ ಎಚ್ಚರ!
ತಂಡವರೆಲ್ಲರೂ ಸೇರಿ ಊಟಮಾಡಬೇಕು ದಿಟ, ಆದರೆ ಇದು ಹೆಚ್ಚಾದರೆ ಕೆಲವು ತೊಂದರೆಗಳು ಇವೆ.
– ಕೆಲವೊಮ್ಮೆ ತಂಡದ ಒಳಗೇ ಬೇರೆ ಬೇರೆ ಗುಂಪುಗಳಾಗಿ, ಆ ಗುಂಪುಗಳ ನಡುವೆ ಹೊಂದಿಕೆ ತಪ್ಪಬಹುದು.
– ಯಾವಾಗಲೂ ತಮ್ಮ ತಂಡದವರೊಡನೆ ಊಟ ಮಾಡುವುದರಿಂದ ಕಂಪನಿಯ ಇತರ ತಂಡಗಳು ಇಲ್ಲವೇ ಕೆಲಸಗಾರರೊಂದಿಗೆ ನಂಟು ಇಲ್ಲದೇ ಹೋಗುವುದು.
– ಹೊಸದಾಗಿ ತಂಡಕ್ಕೆ ಸೇರಿದ ಕೆಲಸಗಾರರಿಗೆ ಯಾವಾಗಲೂ ತಂಡದೊಡನೆ ಊಟ ಮಾಡುವುದಕ್ಕೆ ಇರಿಸುಮುರಿಸಾಗಿ ಇದೊಂದು ಹೇರಿಕೆಯಂತೆ ಕಾಣುವುದು.

ಈ ತೊಂದರೆಗಳು ಕೂಡ ಅರಕೆ ಮಾಡುವಾಗ ಕಾಣಿಸಿಕೊಂಡತವು. ಹಾಗಾಗಿ, ಎಲ್ಲವೂ ಇತಿಮಿತಿಯಲ್ಲಿರಲಿ ಎಂದು ಅರಕೆಗಾರರು ಹೇಳುತ್ತಾರೆ.

(ಮಾಹಿತಿ ಸೆಲೆ: hbr.org )
(ಚಿತ್ರ ಸೆಲೆ: growthriver.defreundevonfreunden.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: