ಸುಲ್ತಾನ್(ಟರ‍್ಕಿ) ಮತ್ತು ಟ್ಸಾರ್ ಗಳ(ರಶ್ಯಾ) ನಡುವಿನ ತಿಕ್ಕಾಟ
‘ಕೇಡುಗಳಲ್ಲಿನ ಪಾಲುದಾರರು’ – ಇದು ಟರ‍್ಕಿಗೆ ರಶ್ಯಾದವರು ಇತ್ತೀಚೆಗೆ ನೀಡಿರುವ ಅಡ್ಡಹೆಸರು. ತನ್ನ ಕಾಳಗದ ಬಾನೋಡವನ್ನು ಸಿರಿಯಾದ ಗಡಿಯಲ್ಲಿ ಟರ‍್ಕಿಯು ಹೊಡೆದುರುಳಿಸಿದ್ದು ‘ಬೆನ್ನಿಗೆ ಚೂರಿ ಹಾಕಿದ ನಡೆ’ ಎಂದು ರಶ್ಯಾವು ಟರ‍್ಕಿಯನ್ನು ದೂರುತ್ತಿದೆ. ಈ ಆಗುಹವು ರಶ್ಯಾ ಮತ್ತು ಟರ‍್ಕಿಯ ನಡುವಿನ ನಂಟಿಗೆ ತೊಡಕನ್ನು ಉಂಟುಮಾಡಿದೆ. “ಐ ಎಸ್ ಐ ಎಸ್ ದಿಗಿಲುಕೋರರ ತೈಲ ವಹಿವಾಟುಗಳನ್ನು ಕಾಯುತ್ತಿರುವುದಲ್ಲದೇ, ಆ ವಹಿವಾಟುಗಳಲ್ಲಿ ಪಾಲು ಹೊಂದಿದ್ದಾರೆ” ಎಂದು ರಶ್ಯಾದ ಅದ್ಯಕ್ಶ ವ್ಲಾಡಿಮಿರ್ ಪುಟಿನ್, ಟರ‍್ಕಿಯ ಅದ್ಯಕ್ಶ ರೆಜೆಪ್ ತಾಯಿಪ್ ಎರ‍್ಡೋಗಾನ್ ಅವರನ್ನು ದೂರುತ್ತಿದ್ದಾರೆ. ಪುಟಿನ್ ತಮ್ಮ ಮೇಲೆ ಹೊರಿಸುತ್ತಿರುವ ಆರೋಪವನ್ನು ಪುರಾವೆ ಸಮೇತ ಸಾಬೀತು ಮಾಡಿದರೆ ತಾನು ಅದ್ಯಕ್ಶ ಪಟ್ಟಕ್ಕೆ ರಾಜೀನಾಮೆ ಕೊಡುವೆನು ಎಂದು ಎರ‍್ಡೋಗಾನ್ ಹೇಳಿದ್ದರು. ರಶ್ಯಾದ ರಕ್ಶಣಾ ಇಲಾಕೆಯವರು ಡಿಸೆಂಬರ್ 2 ರಂದು ಈ ಬಗ್ಗೆ ಬಿಡುಗಡೆ ಮಾಡಿದ ಮಾಹಿತಿಯನ್ನು ಎರ‍್ಡೋಗಾನ್ ‘ಸುಳ್ಳು ಮಾಹಿತಿ’ ಎಂದು ತಳ್ಳಿಹಾಕಿದ್ದಾರೆ.
ರಶ್ಯಾದ ವಿಮಾನ ಉರುಳಿಸಿದ ಟರ‍್ಕಿಯ ನಡೆ, ಎರಡೂ ನಾಡುಗಳ ನಡುವಿದ್ದ ಹಲವಾರು ವರ‍್ಶಗಳ ರಾಜತಾಂತ್ರಿಕತೆಯ ನಂಟಿಗೆ ದಕ್ಕೆಯನ್ನು ಉಂಟುಮಾಡಿದೆ. ಈ ಆಗುಹ ನಡೆಯುವವರೆಗೂ ರಶ್ಯಾವು ಟರ‍್ಕಿಯನ್ನು ‘ಗೆಳೆಯ ನಾಡು’ ಎಂದೇ ನೆಚ್ಚಿತ್ತು. ರಶ್ಯಾದ ಮಂದಿ ಸುತ್ತಾಡಿಕೆಗೆ (tour) ಎಂದು ಟರ‍್ಕಿಯ ಕಡಲ ತೀರಗಳಿಗೆ ಬೇಟಿ ನೀಡುತ್ತಿದ್ದರು. ಎರಡೂ ನಾಡುಗಳ ನಡುವೆ ಕೊಡು-ಕೊಳ್ಳುವ ವಹಿವಾಟುಗಳು ಚೆನ್ನಾಗಿ ಕುದುರಿಕೊಂಡಿದ್ದವು. ರಶ್ಯಾದಲ್ಲಿನ ಚಳಿಗಾಲದ ಒಲಂಪಿಕ್ಸ್ ಆಟೋಟಗಳಿಗೆ ‘ಒಲಂಪಿಕ್ಸ್ ಪಾರ‍್ಕ್’ ಗಳನ್ನು ಕಟ್ಟುವ ಕೆಲಸವನ್ನು ಟರ‍್ಕಿಯ ಕಂಪನಿಗಳು ಮಾಡಿದ್ದವು. ಯುಕ್ರೇನಿನ ಆಳ್ವಿಕೆಯಿಂದ ಕ್ರೈಮಿಯಾವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡ ರಶ್ಯಾ ಮೇಲೆ ಹಲವಾರು ನಾಡುಗಳು ಹಣಕಾಸಿನ ಕಡಿವಾಣಗಳನ್ನು (economic sanctions) ಹಾಕಿದ್ದವು. ಹೀಗಿದ್ದರೂ ಆ ಸಮಯದಲ್ಲಿ ಟರ‍್ಕಿಯು ರಶ್ಯಾದ ಜೊತೆ ಒಳ್ಳೆಯ ನಂಟನ್ನು ಹೊಂದುವುದಕ್ಕೆ ಮತ್ತು ಆ ನಂಟನ್ನು ಗಟ್ಟಿಗೊಳಿಸುವುದಕ್ಕೆ ಒತ್ತು ನೀಡಿತ್ತು. ಹೀಗೆ ಈ ಮೂಲಕ ರಶ್ಯಾದ ಗೆಳೆತನವನ್ನೂ ಕೂಡ ಟರ‍್ಕಿಯು ಗಳಿಸಿಕೊಂಡಿತ್ತು.
ಆದರೆ ಈಗ ಟರ‍್ಕಿಯು ರಶ್ಯಾವು ಹಗೆ ಸಾದಿಸುವ ಎದುರಾಳಿ ನಾಡಾಗಿದೆ. “ಟರ‍್ಕಿಯು ಐ ಎಸ್ ಐ ಎಸ್ ದಿಗಿಲುಕೋರರ ಜೊತೆ ಕೈ ಜೋಡಿಸಿದೆ, ಅದು ತುಂಬಾ ಅಪಾಯಕಾರಿ ನಾಡು” ಎಂದು ರಶ್ಯಾ ತನ್ನ ಟಿ ವಿ / ಬಾನುಲಿ ಕಾರ‍್ಯಕ್ರಮಗಳಲ್ಲಿ ಪ್ರಚಾರ ಮಾಡುತ್ತಿದೆ. ಹವಾಮಾನ ಬದಲಾವಣೆ ಕುರಿತು ಪ್ಯಾರಿಸ್ ನಲ್ಲಿ ನಡೆದ ಸಬೆಯಲ್ಲಿ ಪುಟಿನ್ ಅವರು, ಬರಾಕ್ ಒಬಾಮರನ್ನು ಬೇಟಿ ಮಾಡಿದರೂ ಎರ‍್ಡೋಗಾನ್ ಅವರನ್ನು ಬೇಕಂತಲೇ ದೂರವಿಟ್ಟರು. ಟರ‍್ಕಿಯ ಮೇಲೆ ಉಳುಮೆ ಮತ್ತು ಸುತ್ತಾಡುಗೆಗೆ (tourism) ಸಂಬಂದಪಟ್ಟಂತ ಕಡಿವಾಣಗಳನ್ನು ರಶ್ಯಾ ಹಾಕಿದೆ. ರಶ್ಯಾದ ಸೇಡಿನ ನಡೆಗಳು ಕೇವಲ ರಾಜಕೀಯಕ್ಕೆ ಮಾತ್ರ ಸೀಮಿತವಾಗಿಲ್ಲ. ರಶ್ಯಾದ ಆಟದ ಮಂತ್ರಿ, ರಶ್ಯಾದ ಪುಟ್ಬಾಲ್ ಕ್ಲಬ್ ಗಳಿಗೆ ಟರ‍್ಕಿಯ ಆಟಗಾರರನ್ನು ಸೇರಿಸಿಕೊಳ್ಳದಂತೆ ತಾಕೀತು ಮಾಡಿದ್ದಾರೆ. ರಶ್ಯಾದ ಮೇಲ್ಕಲಿಕೆಮನೆಗಳು (universities) ಟರ‍್ಕಿಯ ಮೇಲ್ಕಲಿಕೆಮನೆಗಳ ನಂಟನ್ನು ಕಡಿದುಕೊಂಡಿವೆ. ಹಿಂದೊಮ್ಮೆ ಆಗಿದ್ದ ಒಪ್ಪಂದದ ಪ್ರಕಾರ, ಓದಲಿಕ್ಕೆ ಟರ‍್ಕಿಗೆ ಕಳಿಸಿದ್ದ ರಶ್ಯಾದ ವಿದ್ಯಾರ‍್ತಿಗಳನ್ನು ರಶ್ಯಾ ಹಿಂದಕ್ಕೆ ಕರೆಸಿಕೊಂಡಿದೆ. ಟರ‍್ಕಿಯ ಟ್ರಕ್ಕುಗಳನ್ನು ರಶ್ಯಾದ ಗಡಿಯಲ್ಲಿ ತಡೆ ಹಿಡಿಯಲಾಗುತ್ತಿದೆ. ರಶ್ಯಾದಲ್ಲಿರುವ ಟರ‍್ಕಿಶ್ ಮಂದಿಗೆ ವಲಸೆ ವಿಚಾರವಾಗಿ ಕಿರುಕುಳ ನೀಡುತ್ತಾ ದೂರುಗಳನ್ನು ದಾಕಲಿಸುವ ಕೆಲಸವೂ ಆಗುತ್ತಿದೆ!
ಟರ‍್ಕಿಯ ತಿನಿಸುಗಳ ಮೇಲೆ ಮತ್ತು ಟರ‍್ಕಿಯ ಚಿಕ್ಕ ವಿಮಾನಗಳ ಮೇಲೆ ಹೇರಿರುವ ತಡೆಯಿಂದ ಟರ‍್ಕಿಯ ಕೆಲವು ಕೂಟಗಳಿಗೆ (firms) ತೊಂದರೆಯಾಗಬಹುದು, ಆದರೆ ರಶ್ಯಾ ಜೊತೆಗಿನ ಟರ‍್ಕಿಯ ವಹಿವಾಟುಗಳು ಟರ‍್ಕಿಯ ಒಟ್ಟು ಮಾಡುಗೆ ಬೆಲೆಯ(GDP) ಶೇ 1 ರಶ್ಟು ಮಾತ್ರವಿದೆ ಎಂದು ಟರ‍್ಕಿಯ ಹಣಕಾಸರಿಗರು ಹೇಳುತ್ತಾರೆ. ಟರ‍್ಕಿ ಮೇಲೆ ಹೇರಿರುವ ಕಡಿವಾಣಗಳಿಂದ ರಶ್ಯಾಗೆ ಹೆಚ್ಚಿನ ಕಳೆತವಿದ್ದು (loss) ರಶ್ಯಾದ ಇಂತಾ ನಡಾವಳಿಗಳಿಂದ ರಶ್ಯಾದ ಹಣದುಬ್ಬರ ಶೇ 1 – 1.5 ರಶ್ಟು ಹೆಚ್ಚಳವಾಗುವ ಸಾದ್ಯತೆ ಇದೆ ಎಂದು ರಶ್ಯಾದ ಹಣಕಾಸರಿಗರಾದ ನಟಾಲಿಯ ಒರ‍್ಲೋವಾ ಹೇಳುತ್ತಾರೆ. ಟರ‍್ಕಿಯ ಮೇಲೆ ಬಿಗಿಯಾದ ಕಡಿವಾಣಗಳನ್ನು ತಾನು ಹೇರಿದ್ದೇನೆ ಎಂದು ರಶ್ಯಾ ತನ್ನ ಮಂದಿಗೆ ಹೇಳುತ್ತಿದೆಯಾದರೂ ಅದು ಕೇವಲ ಟಿ ವಿ / ಬಾನುಲಿ ಕಾರ‍್ಯಕ್ರಮಗಳಿಗೆ ಮಾತ್ರ ಸೀಮಿತವಾದಂತಿದೆ. ರಶ್ಯಾದ ಅಂಗಡಿಗಳಲ್ಲಿ ದೊರೆಯುತ್ತಿರುವ ನಿಂಬೆಹಣ್ಣುಗಳಲ್ಲಿ ಶೇ 90 ನಿಂಬೆಹಣ್ಣುಗಳು ಟರ‍್ಕಿಯವು. ಟರ‍್ಕಿಯ ನಿಂಬೆಹಣ್ಣುಗಳ ತರಿಸುವಿಕೆ ಮತ್ತು ಮಾರಾಟದ ಮೇಲೆ ರಶ್ಯಾ ಯಾವ ತಡೆಯನ್ನೂ ಹೇರಿಲ್ಲ. ಎರಡೂ ನಾಡುಗಳ ವಹಿವಾಟುಗಳನ್ನು ಗಟ್ಟಿಗೊಳಿಸಿದ್ದ ರಶ್ಯಾದಿಂದ ಟರ‍್ಕಿಗೆ ಹೋಗುವ ‘ಆವಿ ಪೂರೈಕೆ’ಗೆ (Gas supply) ಯಾವುದೇ ತಡೆ ಹಾಕಲಾಗಿಲ್ಲ. ರಶ್ಯಾಗೆ ಈ ಆವಿ ಪೂರೈಕೆ ಹಮ್ಮುಗೆಯಿಂದ ಗಳಿಕೆ(income) ಇದೆ. ಆದರೆ ಎರಡೂ ನಾಡುಗಳು ಸೇರಿ ಮುಂದೆ ಕೈಗೆತ್ತಿಕೊಳ್ಳಬೇಕಂತಿದ್ದ ಹಮ್ಮುಗೆಗಳು ನೆನೆಗುದಿಗೆ ಬಿದ್ದಿವೆ.
ಅಂಕಾರ(ಟರ‍್ಕಿಯ ರಾಜದಾನಿ) ಮತ್ತು ಮಾಸ್ಕೊ(ರಶ್ಯಾದ ರಾಜದಾನಿ) ನಡುವಿನ ನಂಟು ಮೊದಲಿನಂತಾಗುವುದು ಅಶ್ಟು ಸರಳವಿಲ್ಲ. ಟರ‍್ಕಿಯು ರಶ್ಯಾದ ಬಾನೋಡವನ್ನು ಬೀಳಿಸುವುದರೊಂದಿಗೆ ಸಿರಿಯಾ ವಿಚಾರವಾಗಿ ಒಳಗಿದ್ದ ಒಡಕನಿಸಿಕೆಗಳು ಹೊರಗೆ ಬಂದಿವೆ. ಟರ‍್ಕಿಯು ಸಿರಿಯಾದ ಆಳ್ವಿಕೆ ವಿರುದ್ದ ಹೋರಾಡುವವರ ಪರವಿದ್ದರೆ ರಶ್ಯಾವು ಸಿರಿಯಾದ ಅದ್ಯಕ್ಶರ ಪರವಾಗಿದೆ. ಸಿರಿಯಾದಲ್ಲಿ ಆಳ್ವಿಕೆ ಎದಿರು ಹೋರಾಡುತ್ತಿರುವ ಟರ‍್ಕಿಶ್ ಬೆಂಬಲಿತ ಗುಂಪು, ರಶ್ಯಾದ ಬಗ್ಗೆ ಹಗೆಯ ನಿಲುವನ್ನು ತಾಳಿದಶ್ಟೂ, ಸಿರಿಯಾದ ಶಾಂತಿ ಮಾತುಕತೆಗಳಿಗೆ ಹಿನ್ನಡೆಯಾಗುತ್ತದೆ. ಕಳೆದ ಕೆಲ ವರುಶಗಳಿಂದ ಪಡುವಣ ನಾಡುಗಳ ಬಗ್ಗೆ ವಿರುದ್ದ ನಿಲುವನ್ನು ಹೊಂದಿದ್ದ ಟರ‍್ಕಿಯು, ರಶ್ಯಾದ ಜೊತೆ ತಿಕ್ಕಾಟದಿಂದ ಪಡುವಣ ನಾಡುಗಳತ್ತ ಒಲವು ತೋರುತ್ತಿದೆ. ನ್ಯಾಟೋ ದ (NATO) ಸದಸ್ಯ ನಾಡು ಕೂಡ ಆಗಿರುವ ಟರ‍್ಕಿಯು, ತನ್ನ ಹಿತಾಸಕ್ತಿ ಕಾಯ್ದುಕೊಳ್ಳಲು ಮತ್ತೆ ಪಡುವಣ ನಾಡುಗಳತ್ತ ವಾಲುತ್ತಿರುವುದು ಹೊಸ ಬೆಳವಣಿಗೆಯಾಗಿದೆ.
( ಮಾಹಿತಿ ಸೆಲೆ: economist.com )
(ಚಿತ್ರ ಸೆಲೆ: nytimes.com, youtube.com )
ಇತ್ತೀಚಿನ ಅನಿಸಿಕೆಗಳು