ಕಲಿಸುಗನ ಸೋಲು….

– ಬಸವರಾಜ್ ಕಂಟಿ.

Disappointed

ಕಂತು-1 ಕಂತು 2 

ತಡರಾತ್ರಿ ದಾರವಾಡ ಮುಟ್ಟಿದನು. ತನ್ನ ಮನೆಗೆ ಹೋಗಿ, ಚೀಲವಿಟ್ಟು ನೇರ ಆಸ್ಪತ್ರೆಗೆ ಹೊರಟ. ಪಾಟೀಲರು ತುಸು ಸುದಾರಿಸಿಕೊಂಡಿದ್ದರು. ಎಂಬತ್ತರ ವಯ್ಯಸ್ಸು, ಬಾಡಿದ ಮುಕ. ಇಮ್ರಾನನನ್ನು ಕಂಡು ನಗುಮೊಗ ಮಾಡಿ ಹಾಸಿಗೆಯಿಂದ ಎದ್ದು ಕೂತರು. ಅವರನ್ನು ನೋಡಿ ಇಮ್ರಾನನಿಗೆ ತುಸು ಸಮಾದಾನವಾಯಿತು.

“ಹೆಂಗದೀರಿ ಸರ‍್?” ಕೇಳಿದ.

ಅವರು ನಡುಗುವ ದನಿಯಲ್ಲಿ, “ಆರಾಮದೀನಿ, ಏನಾಗಿಲ್ಲ ನಂಗ… ಆರಾಮದೀನಿ” ಎಂದರು, ಏನೂ ಆಗಿಲ್ಲವೆಂಬಂತೆ. ಅವರ ಸ್ತಿತಿ ನೋಡಿ ಇಮ್ರಾನನಿಗೆ ತುಂಬಾ ಮರುಕವಾಯಿತು. “ಹೆಂಗ್ ನಡದೇತಿ ನಿನ್ ಕೆಲಸಾ?” ಎಂದು ಕೇಳಿದರು.

“ಎಲ್ಲಾ ಚಲೋ ನಡದೇತ್ರಿ ಸರ್” ಎಂದನು.

“ಮತ್ತ? ಎಶ್ಟ್ ಹುಡುಗ್ರು ಮಾಸ್ತರ್ ಆಗಾಕ ಒಪ್ಕೊಂಡ್ರು?”

“ಗೊತ್ತಿಲ್ರಿ ಸರ್. ನನ್ ಪ್ರಯತ್ನ ನಾ ಮಾಡೀನಿ. ಏನ್ ಆಗ್ತದೋ ಗೊತ್ತಿಲ್ಲ. ನಾ ಅಂತೂ ಕಯ್ ಬಿಟ್ಟಿನ್ರಿ”

“ಹಂಗ್ ಅನಬ್ಯಾಡಪಾ” ಉಸಿರೆಳೆಯುತ್ತ, ತಡವರಿಸುತ್ತ ಮಾತಾಡಿದರು ಪಾಟೀಲರು. “ಮರಳಿ ಯತ್ನವ ಮಾಡು ಅಂತ ಕೇಳೀ ಇಲ್ಲೋ?”

“ಎಶ್ಟ್ ಅಂತ ಮಾಡ್ಬೇಕ್ರಿ ಸರ‍್” ತಲೆ ತಗ್ಗಿಸಿ ಹೇಳಿದ, ಬೇಸರದ ದನಿಯಲ್ಲಿ.

“ಹಂಗ ಮಾಡ್ಬೇಕು” ಎಂದು ನೋವಿನಲ್ಲೇ ನಕ್ಕರು ಸರ್, ಇಮ್ರಾನನಲ್ಲಿ ಹುರುಪು ಮೂಡಿಸಲು. ಅವನ ಮಾಡುತ್ತಿದ್ದ ಪ್ರಯತ್ನ ಅವರಿಗೆ ತುಂಬಾ ಮೆಚ್ಚುಗೆಯಾಗಿತ್ತು. ನಂತರ ಮಾತು ಬೇರೆ ಕಡೆ ಹೊರಳಿ, ತುಸು ಹೊತ್ತಾದ ಮೇಲೆ ಪಾಟೀಲರು ಮಲಗಿದರು.

ಇಮ್ರಾನ್ ಮರಳಿ ಮನೆಗೆ ಬಂದ. ಆ ರಾತ್ರಿ ಚೆನ್ನಾಗಿ ನಿದ್ದೆ ಮಾಡಿದ. ಮಾರನೇಯ ದಿನ ಸಂಜೆ ಮತ್ತೆ ಆಸ್ಪತ್ರೆಯೆಡೆಗೆ ಹೊರಟ, ಪಾಟೀಲರನ್ನು ಇನ್ನೊಮ್ಮೆ ಕಂಡು ಮರಳಿ ಮುಂಬಯಿಗೆ ಹೋಗುವ ಅವಸರದಲ್ಲಿ. ಹೊರಗಡೆ ಮೋಡ ಕಟ್ಟಿ, ಕತ್ತಲಾದಂತಾಗಿತ್ತು. ಆಸ್ಪತ್ರೆಯ ಒಳಗೆ ಹೋಗುವ ಬಾಗಿಲಲ್ಲೇ ಪಾಟೀಲರನ್ನು ಗಾಲಿಯ ಮಂಚದ ಮೇಲೆ ಮಲಗಿಸಿ ಹೊರಗೆ ತರುವುದನ್ನು ನೋಡಿದ. ಪಕ್ಕದಲ್ಲಿದ್ದ ಅವರ ಮಗನನ್ನು ತಡೆದು ಏನಾಯಿತೆಂದು ಕೇಳಿದ. ರಾತ್ರಿ ಮತ್ತೆ ಆದ ಹ್ರುದಯಾಗಾತದಿಂದ ಅವರು ತೀರಿಕೊಂಡಿದ್ದರು. ಇಮ್ರಾನನಿಗೆ ಕಾಲ ಕೆಳಗಿನ ನೆಲವೇ ಕುಸಿದಂತಾಯಿತು. ತನ್ನ ಬದುಕಿನ ಗುರಿಯೇ ಕಣ್ಮರೆಯಾದಂತಾಗಿ, ಶೂನ್ಯ ಅವನ ಮನಸ್ಸನ್ನು ಆವರಿಸಿತು. ತಂದೆಯಂತಿದ್ದ ಅವರನ್ನು ಕಳೆದುಕೊಂಡು ಅನಾತ ಬಾವ ಕಾಡಿತು. ಮೋಡದ ಕತ್ತಲೆ ಅವನ ಬದುಕಿನಲ್ಲೂ ಮಬ್ಬು ತುಂಬಿ, ಮಳೆಗರೆಯಲು ಮೊದಲುಮಾಡಿತು. ಅಲ್ಲಿ ನಿಲ್ಲಲಾಗದೆ ಕಾಲೆಳೆದುಕೊಂಡು ನಡೆದನು, ದಿಕ್ಕು ತೋಚದೆ. ಮನಸ್ಸಿನ ಬಿಕ್ಕು ಗಂಟಲ ತನಕ ಬಂದಿತ್ತು.

ಪಾಟೀಲರ ಸಾವು ಅವನನ್ನು ತುಂಬಾ ಕಾಡಿತು. ಸಾವಿನ ನಿಶ್ಚಿತತೆಯ ಎದುರಿಗೆ ಬದುಕು ಅಲ್ಪವಾಗಿ ಕಂಡಿತು. ಅದೇ ದುಕದಲ್ಲಿ ಮರುದಿನ ಅವರ ಮಣ್ಣಿಗೆ ಹೋದನು. ಅಲ್ಲಿ ತುಂಬಾ ಜನ ನೆರೆದಿದ್ದರು. ಮಣ್ಣು ಮುಗಿಸಿ ಸ್ಮಶಾನದಿಂದ ಮರಳಿ ಬರುವಾಗ, ಪಿ.ಯು.ಸಿ ಯಲ್ಲಿ ಅವನಿಗೆ ಇರುವರಿಮೆ (Physics) ಕಲಿಸಿದ್ದ ಸಜನಾರ್ ಸರ್ ಸಿಕ್ಕು ಮಾತಿಗಿಳಿದರು. ಒಲ್ಲದ ಮನಸ್ಸಿನಿಂದಲೇ ತನ್ನ ಕೆಲಸದ ಬಗ್ಗೆ ಹೇಳಿಕೊಂಡ ಇಮ್ರಾನ್. ಆಗ ಅವರು ತಮ್ಮ ಮಗನೂ ಅಮೇರಿಕದಲ್ಲೇ ಓದಿ ಅಲ್ಲೇ ಕೆಲಸ ಮಾಡುತ್ತಿದ್ದುದಾಗಿ ಹೇಳಿದರು. ಮಾತು ಮುಂದುವರೆಸಿ,

“ನೋಡಪಾ… ಮನಶ್ಯಾ ಯಾವತ್ತೂ ಮ್ಯಾಲೆ ಮ್ಯಾಲೆ ಏರಬೇಕು. ಹಕ್ಕಿ ಹಂಗ ಹಾರಬೇಕು. ಇಲ್ಲೇ ಇದ್ದು ನೀ ಮಾಸ್ತರ್ ಆದಿ ಅಂದ್ರ ನಿನ್ ಜೀವನ ನಿಂತ ನೀರಾಗ್ತದ. ಇಲ್ಲಿ ಏನ ಅದ? ಈಗ ನೋಡು… ನಮ್ ಲ್ಯಾಬ್ ನಾಗ ಸ್ಪೆಕ್ಟ್ರೋಮೀಟರ್ ಹಾಳಾಗೆ ಆರ ತಿಂಗಳಾತು. ಎಶ್ಟು ಬೇಡಿಕೊಂಡ್ರೂ ಹೊಸಾದ ತರಸ ವಲ್ರು. ಇಂತಾ ವಾತಾವರಣದಾಗ ನೀ ಏನ್ ಸಾದನೆ ಮಾಡ್ಲಿಕ್ ಆಗ್ತದಪಾ? ನಮ್ಮ ಎಜುಕೇಶನ್ ಸಿಸ್ಟಮ್ ನಾಗ ಪಾಲಿಟಿಕ್ಸು ಬಾಳ ಅದ. ಒಂದ್ ಸಣ್ಣ ಸಾಲಿಯಿಂದ ಹಿಡದು ಐಐಟಿ ತನಕಾನೂ ಪಾಲಿಟಿಕ್ಸ್ ಅದ ನೋಡಪಾ. ಕೆಲಸಾ, ಪ್ರಮೋಶನ್ನು, ಪಿ.ಎಚ್.ಡಿ, ಅಶ್ಟ ಯಾಕ, ಯುನಿವರ‍್ಸಿಟಿ ಚಾನ್ಸಲರ್ ಆರಿಸೂ ತನಕಾನೂ ಪಾಲಿಟಿಕ್ಸ್ ನಡೀತದ ನೋಡು. ಎಮ್ ಎಲ್. ಏ, ಮಿನಿಸ್ಟರ‍್ರು ತೆಲಿಗೊಂದೊಂದು ಕಾಲೇಜ ತೆರದು ತಮ್ ಮನಿಯವರಿಗೆ, ತಮ್ ಜಾತಿಯವರಿಗೆ ಕೆಲಸ ಕೊಡಕೊಂತ ಕುಂತ್ರ, ಶಾಣೆ ಇದ್ದವ್ರು ಯಾಕ್ ಮಾಸ್ತರ್ ನೌಕ್ರಿಗೆ ಬರ‍್ತಾರ ಹೇಳು? ಇನ್ ಈ ಪಗಾರ. ಬವಿಶ್ಯದ ಪ್ರಜೆಗಳನ್ನ ತಯಾರು ಮಾಡು ನಮಗ ಒಂದ್ ಸ್ವಂತ ಮನಿ ಮಾಡುದ್ರಾಗ ಹಯ್ರಾಣಾಗಿ ಹೋಗ್ತದ ನೋಡಪಾ” ಎಂದು ವ್ಯಂಗ್ಯವಾಗಿ ನಕ್ಕರು.

ಹೌದು ಎನ್ನುವಂತೆ ಇಮ್ರಾನನೂ ತುಟಿ ತುಸು ಹಿಗ್ಗಿಸಿದ. ಉಸಿರೆಳೆದು ಬೇಸರದಲ್ಲಿ ಮಾತು ಮುಂದುವರೆಸಿದರು ಸರ್, “ಅದಕ್ಕ ನನ್ ಮಗನಿಗೆ ಅಲ್ಲೇ ಸೆಟ್ಲ್ ಆಗು ಅಂತ ಹೇಳೀನಿ. ಜಾತಿ ದರ‍್ಮ ಅಂತ ನಾವ್ ನಾವ ಯಾವಾಗ್ಲೂ ಹೊಡದಾಡಕೋತೀವಿ. ಇಲ್ಲಿ ಮಂದಿ ನಮಗ ಎಶ್ಟು ಪರಕೀಯರೋ, ಅಮೇರಿಕಾದವ್ರು ಅಶ್ಟ ಪರಕೀಯರು ಅಂತ ಅನಿಸ್ತದ ನನಗ ಅತವಾ ಇಲ್ಲಿಯವ್ರು ನಮ್ಮವರು ಅಂದಕೊಂಡ್ರ ಅಮೇರಿಕಾದವರನ್ನೂ ನಮ್ಮವರೇ ಅನ್ಕೊಳ್ಳೋದು ತಪ್ಪು ಅನ್ಸಲ್ಲಾ. ವಸುದಯ್ವ ಕುಟುಂಬಕಂ ಹೌದಿಲ್ಲೋ?” ಎಂದು ನಕ್ಕರು.

ಅವರ ಮಾತುಗಳನ್ನು ಅಶ್ಟಾಗಿ ಹಚ್ಚಿಕೊಳ್ಳದಿದ್ದರೂ, ಅದರಲ್ಲಿ ಸತ್ಯವಿದೆ ಎನಿಸಿತು ಇಮ್ರಾನನಿಗೆ. ಮಾನಸಿಕವಾಗಿ ತುಂಬ ಕುಗ್ಗಿಹೋದ ಅವನಿಗೆ ನೆಮ್ಮದಿ ಬೇಕಿತ್ತು. ಒಂದೆರಡು ದಿನ ದಾರವಾಡದಲ್ಲೇ ಕಳೆದ. ಪಾಟೀಲರ ಸಾವಿನಿಂದಾದ ನೋವಿನ ಗುಂಗಿನಿಂದಾಗಿ ತನ್ನ ಕಾಲೇಜಿನಲ್ಲಿ ನಡೆಯುತ್ತಿದ್ದ ಉದ್ಯೋಗ ಮೇಳದ ಕಡೆಗೆ ಅವನ ಗಮನವೇ ಹೋಗಿರಲಿಲ್ಲ. ಅತವಾ ಹೇಗಿದ್ದರೂ ತಾನು ಸೋಲುವುದು ಕಂಡಿತ ಎನಿಸಿ ಆ ಬಗ್ಗೆ ಅವನು ಯೋಚಿಸಿರಲಿಲ್ಲ. ಎರಡು ಏಡುಗಳಲ್ಲಿ ಆಗದ್ದು ಈಗ ಆಗಿಬಿಡುತ್ತದೆಯೇ ಎಂದು ಕಡೆಗಣಿಸಿದ್ದನು. ಆಗಲೇ ಅವನ ಮೊಬಾಯಿಲು ರಿಂಗಣಿಸಿದ್ದು. ಕರೆ ಮಾಡಿದ್ದು ಅವನ ಒಬ್ಬ ವಿದ್ಯಾರ‍್ತಿ. ಸುದ್ದಿ ಕೇಳಿ ಇಮ್ರಾನನಿಗೆ ಬೆರಗಾಯಿತು. ತನ್ನ ಮಾತಿನಿಂದ ಪ್ರಬಾವಿತರಾಗಿ ಹತ್ತು ಜನ ಉದ್ಯೋಗ ಸಂದರ‍್ಶನಕ್ಕೆ ಹೋಗಿರಲಿಲ್ಲ. ಸಂದರ‍್ಶನಕ್ಕೆ ಹೋದ ವಿದ್ಯಾರ‍್ತಿಗಳಲ್ಲೂ ಕೆಲವು ಜನ ನಂತರ ಹಿಂದೆ ಸರಿದಿದ್ದರು. ಒಟ್ಟು ಇಪ್ಪತ್ತೈದು ವಿದ್ಯಾರ‍್ತಿಗಳು ಉದ್ಯೋಗದಿಂದ ಹಿಂದೆ ಸರಿದಿದ್ದರು. ಅವರಲ್ಲಿ ಹೆಚ್ಚಿನವರು ಮೇಲು ಮಟ್ಟದ ಅಂಕ ಪಡೆದವರಾಗಿದ್ದರು. ಕರೆ ಮುಗಿದ ಮೇಲೂ ಎಶ್ಟೋ ಹೊತ್ತು ಇಮ್ರಾನ್ ಗರ ಬಡಿದವರಂತೆ ಬಾಯಿ ಮೇಲೆ ಕಯ್ಯಿಟ್ಟು ಕೂತಿದ್ದ. ಅವನು ಗೆದಿದ್ದ. ಅವನ ಪರಿಶ್ರಮಕ್ಕೆ ತಕ್ಕ ಪ್ರತಿಪಲ ಸಿಕ್ಕಿತ್ತು. ತನಗಾದ ಅವಮಾನ, ಹುಟ್ಟಿಕೊಂಡ ಚಲ, ನಂತರದ ಸೋಲು, ಈಗಿನ ಗೆಲುವೂ ಎಲ್ಲವೂ ಅವನ ಕಣ್ಣ ಮುಂದೆ ಹಾಯ್ದು ಹೋದವು. ಕಣ್ಣಂಚಿನಲ್ಲಿ ನೀರು ಹೆಚ್ಚಾಗಿ, ಕೆಳಗೆ ಇಳಿದವು. ಪಾಟೀಲರನ್ನು ನೆನೆದ. ಎಲ್ಲೋ ಇರುವ ಅವರು ಅವನನ್ನು ನೋಡಿ ಹಾರಯ್ಸಿದಂತಾಯಿತು. ಮನಸ್ಸು ತುಂಬಿ ಬಂದು, ಸಮಾದಾನ ಆಗುವವರೆಗೂ ನಕ್ಕ. ಮುಂಬಯಿಗೆ ಹೋಗಲು ತೀರ‍್ಮಾನಿಸಿದ.

ಗೆಲುವಿನ ಮನಸ್ಸಿನಲ್ಲೇ ಮುಂಬಯಿಯ ತನ್ನ ಮನೆಗೆ ಬಂದಾಗ ಬೆಳಗ್ಗೆ ಒಂಬತ್ತಾಗಿತ್ತು. ಅವನ ಬಾಡಿಗೆ ಮನೆಯ ಒಡೆಯ ಅವನ ಹೆಸರಿಗೆ ಬಂದಿದ್ದ ಕಾಗದವೊಂದನ್ನು ಅವನ ಕಯ್ಗಿತ್ತನು. ಇಮ್ರಾನ್ ಅದನ್ನು ನೋಡಿದ. “ಗೆ, ಇಮ್ರಾನ್ ಸಾದಿಕ್… ಇಂದ, ಮುಕ್ಯಸ್ತರು, ಇಲೆಕ್ಟ್ರಿಕಲ್ ಇಂಜೀನಿಯರಿಂಗ್ ವಿಬಾಗ…” ಅಂತ ಇತ್ತು. ಓಹ್! ತನ್ನ ಕಾಲೇಜಿನಿಂದಲೇ ಬಂದ ಕಾಗದ ಎಂದು, ಅದನ್ನು ಓದುತ್ತ ಹಾಗೇ ಮನೆ ಒಳಗೆ ಹೋದನು. ಅದನ್ನು ಓದಿ ಮುಗಿಸುವಶ್ಟರಲ್ಲಿ ಅವನ ಎದೆ ಬಡಿತ ಹೆಚ್ಚಾಗಿ ತಲೆ ತಿರುಗಿದಂತಾಯಿತು. ಇಲ್ಲಸಲ್ಲದ್ದನ್ನು ವಿದ್ಯಾರ‍್ತಿಗಳಿಗೆ ಕಲಿಸಿ, ಅವರು ಸಂದರ‍್ಶನಗಳಿಗೆ ಹಾಜರಾಗುವುದನ್ನು ತಪ್ಪಿಸಿದ್ದಕ್ಕೆ ಅವನನ್ನು ಅಮಾನತ್ತು ಮಾಡಲಾಗಿದೆ ಎಂದು ಬರೆದಿತ್ತು. ಸಂಸ್ತೆಯ ನೀತಿಗಳಿಗೆ ವಿರುದ್ದವಾಗಿ ಕೆಲಸಮಾಡಿದ್ದಕ್ಕೆ ನಿಮ್ಮ ಮೇಲೆ ವಿಚಾರಣೆ ಏಕೆ ನಡೆಸಬಾರದೆಂದು ಕಾರಣ ಕೇಳಿ ನೋಟಿಸ್ ಕೊಟ್ಟಿದ್ದರು. ಅದಶ್ಟೇ ಅಲ್ಲದೇ, ಅಮಾನತ್ತು ಕೊನೆಗೊಳ್ಳುವ ತನಕ ಕಾಲೇಜಿನ ಯಾವ ವಿದ್ಯಾರ‍್ತಿ ಜೊತೆಗೂ ಮಾತಾಡಬಾರದೆಂದು ಬರೆಯಲಾಗಿತ್ತು. ಆಪೀಸಿನ ಕಂಪ್ಯುಟರ್ ಮತ್ತು ಹೊತ್ತಗೆಕೋಣೆ ಮಾತ್ರ ಉಪಯೋಗಿಸಬಹುದು ಎಂದಿತ್ತು. ಅವನಿಗೆ ಗೊಂದಲ, ಗಾಬರಿ, ಸಿಟ್ಟು, ಒಟ್ಟಿಗೆಯಾಗಿ ಕುಸಿದು ಕುಂತ. ಇಲ್ಲಸಲ್ಲದ್ದೇನು ತಾನು ಕಲಿಸಿದ್ದು? ಸಮಾಜದ, ಕಾಲೇಜಿನ ಒಳಿತಿಗಾಗಿಯೇ ಅಲ್ಲವೇ? ತಕ್ಶಣ ತನ್ನ ವಿಬಾಗದ ಮುಕ್ಯ ಪ್ರೊಪೆಸರ್ ರನ್ನು ಕಂಡು ಬರಲು ತೀರ‍್ಮಾನಿಸಿ ಹೊರಬಿದ್ದ.

ಪ್ರೊಪೆಸರ್ ಮತ್ತು ಇಮ್ರಾನ್ ಅವರ ನಡುವೆ ದೊಡ್ಡ ವಾಗ್ವಾದ ನಡೆಯಿತು. “ಅಲ್ರೀ… ಪ್ರತೀ ವರ‍್ಶ ಈ ಕಾಲೇಜಿನ ವಿದ್ಯಾರ‍್ತಿಗಳಿಗೆ ಬಾರತದಲ್ಲೇ ಅತೀ ಹೆಚ್ಚಿನ ಸಂಬಳದ ಕೆಲಸ ಸಿಗುತ್ತಿತ್ತು. ಅದೇ ನಮ್ ಕಾಲೇಜಿನ ಪ್ರತಿಶ್ಟೆ ಹೆಚ್ಚಿಸಿದ್ದು. ಈ ಸಾರಿ ಕಾಲೇಜಿನ ಟಾಪ್ ಹುಡುಗರೆಲ್ಲ ಇಂಟರ‍್ವ್ಯುವ್ ಅಟೆಂಡ್ ಮಾಡೋಕೇ ಮುಂದೆ ಬಂದಿಲ್ಲ ಅಂದ್ರೆ ಹೇಗ್ರಿ? ನಮ್ ಸಂಸ್ತೆ ಡಾಯ್ರೆಕ್ಟರ‍್ರು ನನ್ನನ್ನಾ ಕರದು ಕೇಳಿದ್ರು, ಇದೆಲ್ಲಾ ಹೇಗ್ ಆಯ್ತು? ಯಾಕೆ ಇಂತದಕ್ಕೆಲ್ಲ ಅವಕಾಶ ಕೊಟ್ರಿ ಅಂತಾ. ನಾನೇನ್ ಹೇಳಲಿ? ನಿಮ್ ವಿಚಾರ ಒಳ್ಳೆಯದೇ ಆಗಿರಬಹುದು, ಆದ್ರೆ ಅದೆಲ್ಲ ಇಲ್ಲಿ ನಡೆಯೋದಿಲ್ಲ”

“ಆದ್ರೆ ನೀವೇ ಇದಕ್ಕೆಲ್ಲ ಒಪ್ಕೊಂಡು ನನ್ನನ್ನಾ ಹುರಿದುಂಬಿಸಿದ್ರಿ?”

“ಮೆತ್ತಗೆ ಮಾತಾಡ್ರಿ. ನಾನ್ ಯಾವಗ ನಿಮಗೆ ಸೆಮಿನಾರ್ ಮಾಡೋಕೆ ಪರ‍್ಮೀಶನ್ ಕೊಟ್ಟಿದ್ದು? ನಿಮ್ ಹತ್ರ ಲೆಟರ್ ಏನಾದ್ರು ಇದ್ಯಾ?”

ಇಮ್ರಾನನಿಗೆ ನೆತ್ತಿಗೇರಿತು. ಪ್ರೊಪೆಸರ್ ಅವರನ್ನು ಹೊಡೆದು ಬಿಡುವಶ್ಟು ಕೋಪ ಬಂದರೂ, ಏನೂ ಮಾಡಲಾಗದೆ, ಇನ್ನು ಮಾತಾಡಿ ಪ್ರಯೋಜನವಿಲ್ಲ ಎನಿಸಿ, ಕಯ್-ಕಯ್ ಹಿಸುಕುತ್ತ ಹೊರಡಲು ಎದ್ದು ನಿಂತ. ಆಗ ಅವರು ಅವನನ್ನು ಕಯ್ ಸನ್ನೆ ಮಾಡಿ ತಡೆದರು. ಅವನ ಹತ್ತಿರ ಬಂದು ಮೆಲುದನಿಯಲ್ಲಿ ಹೇಳಿದರು,

“ನಿಮ್ ಪ್ರೆಂಡಾಗಿ ಹೇಳ್ತಿದೀನಿ. ಹೀಗೆಲ್ಲ ಆಗಿರುವುದಕ್ಕೆ ಸಂಸ್ತೆಯ ಆಡಳಿತದವರಿಗೆ ನಿಮ್ಮ ಮೇಲೆ ತುಂಬಾ ಸಿಟ್ಟು ಬಂದಿದೆ. ಎನಕ್ವಾಯರಿ ಅಂತೆಲ್ಲ ಶುರುಮಾಡಿ ನಿಮ್ಮನ್ನಾ ಕೆಲಸದಿಂದ ತೆಗದು ಹಾಕೋದ್ರಲ್ಲಿ ಅನುಮಾನವೇ ಇಲ್ಲ. ಅದಲ್ಲದೇ ಸಂಸ್ತೆಯ ಮೇಲೆ ಇಲ್ಲಿನ ಲೋಕಲ್ ಜನರ ಹಿಡಿತ ತುಂಬಾ ಇದೆ. ನಿಮ್ಮ ಹೆಸರನ್ನಾ ಮುಂದಿಟ್ಟುಕೊಂಡು, ಹುಡುಗರ ದಾರಿ ತಪ್ಪಿಸುತ್ತಿದ್ದೀರಿ ಎಂದು ನಿಮ್ಮ ಚರಿತ್ರೆಗೇ ಮಸಿ ಬಳೆಯುತ್ತಾರೆ. ಆದಶ್ಟು ಬೇಗ ಒಂದು ಅಪಾಲಜಿ ಲೆಟರ್ ಜೊತೆ ನಿಮ್ಮ ರಾಜೀನಾಮೆ ಕೊಟ್ಟು ಇಲ್ಲಿಂದ ಹೊರಟು ಹೋಗಿ” ಎಂದರು. ಒಂದು ಕ್ಶಣ ಯೋಚಿಸಿ, ವ್ಯಂಗ್ಯವಾಗಿ ತುಟಿ ಹಿಗ್ಗಿಸಿ ಅಲ್ಲಿಂದ ಹೊರಬಿದ್ದ ಇಮ್ರಾನ್.

ಅವನು ತುಂಬಾ ಕುಗ್ಗಿದ್ದನು. ಹೀಗೆಲ್ಲ ಆಗತ್ತದೆ ಎಂದು ಕನಸಿನಲ್ಲಿಯೂ ಎನಿಸಿರಲಿಲ್ಲ. ಅಪಾಲಜಿ ಬರೆಯಬೇಕೆ? ಯಾತಕ್ಕಾಗಿ? ಒಳ್ಳೆಯದನ್ನು ಮಾಡಲು ಪ್ರಯತ್ನ ಪಟ್ಟಿದ್ದಕ್ಕೆ? ಇದೆಂತಹ ಸಂಸ್ತೆ ಎನಿಸಿತು. ತನ್ನ ಪಾಡನ್ನು ನೆನೆದು ಹತಾಶನಾದನು. ಸಮಾಜದ ಬಗ್ಗೆ ಜಿಗುಪ್ಸೆ ಮೂಡಿತು. ಸಜನಾರ್ ಸರ್ ಅವರ ಮಾತುಗಳು ಸರಿ ಎನಿಸಿದವು. ಪೂರ‍್ವಾಗ್ರಹ, ಜಡತೆ ತುಂಬಿದ, ಬದಲಾವಣೆ ವಿರೋದಿಸುವ ಇಂತ ವಾತಾವರಣದಲ್ಲಿ ಯೋಗ್ಯರು ಯಾಕೆ ತಾನೆ ಇದ್ದಾರು? ಅಮೇರಿಕದ ಮುಕ್ತ ಪರಿಸರಕ್ಕೆ ಹೋಲಿಸಿದಾಗ, ಇಲ್ಲಿಯದು ಗಾಳಿಯೂ ಆಡದ ಜಯ್ಲು ಎನಿಸಿತು. ಅದರಿಂದ ಹೊರಬರಲು ಯಾರಾದರೂ ಯತ್ನಿಸಿದರೆ, ಕಯ್ದಿಗಳಿಗಾಗುವ ಗತಿಯೇ ಆಗುತ್ತದೆ! ಎಶ್ಟು ಯೋಚಿಸಿದರೂ ಇದರಿಂದ ಹೊರಬರುವ ದಾರಿ ಹೊಳೆಯಲಿಲ್ಲ. ಮೆದು ಸ್ವಬಾವದ ಅವನಿಗೆ ಹುಡುಗರನ್ನು ಕಟ್ಟಿಕೊಂಡು ಹೋರಾಟ ಮಾಡುವಶ್ಟು ದೈರ‍್ಯವಿರಲಿಲ್ಲ. ಅದರಿಂದ ಯಾವ ಉಪಯೋಗವೂ ಇರಲಿಲ್ಲ. ಇಡೀ ಜಗತ್ತೇ ಅವನ ಎದುರಿಗೆ ನಿಂತಿತ್ತು. ಅವನ ಬೆನ್ನ ಹಿಂದೆ ಸದಾ ಇರುತ್ತಿದ್ದ ಗುರುವೂ ಈಗ ಇರಲಿಲ್ಲ. ಪ್ರೊಪೆಸರ್ ಅವರ ಮಾತುಗಳನ್ನು ನೆನೆದು ತುಸು ಹೆದರಿಕೆಯಾಗಿ, ಅಲ್ಲಿಂದ ಹೊರಡುವುದೇ ಸೂಕ್ತವೆನಿಸಿತು.

ತನ್ನ ಲ್ಯಾಪ್ಟಾಪನ್ನು ತೆರೆದು ಅಮೇರಿಕದ ಕಂಪನಿಗೆ ಉತ್ತರ ಬರೆಯಲು ಮುಂದಾದ.

(ಮುಗಿಯಿತು)

( ಚಿತ್ರ ಸೆಲೆ: liningadrawer )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: