ಮಿದುಳಿಗೆ ಕಸರತ್ತು ನೀಡುವ ಒಗಟುಗಳು

– ಸಿ.ಪಿ.ನಾಗರಾಜ.

very-hard-riddles

ಇಬ್ಬರು ಇಲ್ಲವೇ ಅನೇಕರು ಎದುರುಬದರಾಗಿ ಕುಳಿತು ಇಲ್ಲವೇ ನಿಂತುಕೊಂಡು ನುಡಿ ಸಾಮಗ್ರಿಗಳಾದ ಅಕ್ಕರ-ಪದ-ವಾಕ್ಯ-ತಿರುಳುಗಳನ್ನು ದಾಳಗಳನ್ನಾಗಿ ಮಾಡಿಕೊಂಡು , ಆಡುವ ಮಾತಿನ ಆಟವನ್ನು ಒಗಟು ಎಂದು ಕರೆಯುತ್ತಾರೆ . ಇದನ್ನು ಒಂಟು/ಒಡಪು ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಮಾತುಗಳ ಮೂಲಕ ನಡೆಯುವ ಈ ಆಟದಲ್ಲಿ ಒಗಟನ್ನು ಒಬ್ಬರು ಒಡ್ಡಿದರೆ, ಮತ್ತೊಬ್ಬರು ಒಗಟನ್ನು ಒಡೆಯುತ್ತಾರೆ.

‘ಒಗಟನ್ನು ಒಡ್ಡುವುದು’ ಎಂದರೆ ನುಡಿರಚನೆಯಿಂದ ಕೂಡಿರುವ ಒಂದು ಒಗಟನ್ನು ಹೇಳುವುದು. ‘ಒಗಟನ್ನು ಒಡೆಯುವುದು’ ಎಂದರೆ ಒಗಟಿನ ನುಡಿರಚನೆಯಲ್ಲಿ ಅಡಗಿರುವ/ನುಡಿರಚನೆಯು ಸಂಕೇತಿಸುವ ವಸ್ತು, ಜೀವಿ, ಸಂಗತಿಯು ಯಾವುದೆಂದು ಹೇಳುವುದು. ಇದು ಒಂದು ರೀತಿಯಲ್ಲಿ ಸವಾಲನ್ನು ಹಾಕುವ ಮತ್ತು ಸವಾಲಿಗೆ ಜವಾಬನ್ನು ಹೇಳುವ ದಾಟಿಯಲ್ಲಿರುತ್ತದೆ. ಒಗಟನ್ನು ಒಡ್ಡುವ/ಒಡೆಯುವ ಮಾತಿನ ಆಟದಲ್ಲಿ ತೊಡಗಿದವರ ಲೋಕಜ್ನಾನ, ಜಾಣತನ, ಚಿಂತನೆಯ ಕಸುವು ಮತ್ತು ಬುದ್ದಿಯ ಕಸರತ್ತುಗಳೆಲ್ಲವೂ ಸವಾಲು-ಜವಾಬಿನ ಸನ್ನಿವೇಶಗಳಲ್ಲಿ ಹೊರಹೊಮ್ಮುತ್ತಿರುತ್ತವೆ.

1) ಒಗಟನ್ನು ಒಡ್ಡುವವರು – “ಅಣ್ಣ ಎಂದರೆ ಕೂಡುವುದಿಲ್ಲ, ತಮ್ಮ ಎಂದರೆ ಕೂಡುತ್ತವೆ, ಇವು ಏನು?”

ಒಗಟನ್ನು ಒಡೆಯುವವರು – ತುಟಿಗಳು.

2) ಒಗಟನ್ನು ಒಡ್ಡುವವರು – “ನಾಲ್ಕು ಕಾಲುಗಳುಂಟು ಪ್ರಾಣಿಯಲ್ಲ, ಬೆನ್ನು ತೋಳುಂಟು ಮನುಶ್ಯನಲ್ಲ, ಹಾಗಾದರೆ ನಾನ್ಯಾರು?”

ಒಗಟನ್ನು ಒಡೆಯುವವರು – ಕುರ‍್ಚಿ

3) ಒಗಟನ್ನು ಒಡ್ಡುವವರು – “ಒಂಟಿ ಕಾಲು ಕೊಕ್ಕರೆ, ಬಗ್ಗಿ ಬಗ್ಗಿ ನೀರು ಕುಡಿತದೆ, ಇದೇನು?”

ಒಗಟನ್ನು ಒಡೆಯುವವರು – ಏತ.

‘ಒಗಟು’ ಎಂಬುದು ಕೆಲಸಪದವಾಗಿ ಬಳಕೆಯಾದಾಗ “ಮಾತಿನ ಆಟ” ಎಂಬ ತಿರುಳನ್ನು ನೀಡಿದರೆ, ಹೆಸರುಪದವಾಗಿ ಬಳಕೆಯಾದಾಗ ” ಒಗಟಿನ ನುಡಿರಚನೆಯ ಸ್ವರೂಪ , ಸಂಗತಿ ಮತ್ತು ಗುಣಗಳನ್ನು” ತಿಳಿಸುತ್ತದೆ. ಒಗಟನ್ನು ಒಡ್ಡುವಾಗ ಬಳಸುವ ನುಡಿಸಾಮಗ್ರಿಗಳಾದ ಅಕ್ಕರ-ಪದ-ವಾಕ್ಯ-ತಿರುಳನ್ನು ಪರಿಶೀಲಿಸುವುದರ ಮೂಲಕ ಒಗಟಿನ ರೂಪ ಮತ್ತು ಸಂಗತಿಗಳನ್ನು ತಿಳಿಯಬಹುದು.

1) ಬಿಳಿ ಸಿಪಾಯಿಗೆ ಕರಿಟೋಪಿ-(ಬೆಂಕಿಕಡ್ಡಿ)
2) ಬಿಳಿ ಸಮುದ್ರದ ಮೇಲೆ ಬೆಳ್ಳಿ ಬೆಟ್ಟ ತೇಲುತ್ತೆ-(ಬೆಣ್ಣೆ)
3) ಅಂಕುಡೊಂಕಿನ ಮನೆ-ಬಡಗಿ ಕಟ್ಟದ ಮನೆ-ಬಾಚಿ ಮುಟ್ಟದ ಮನೆ-(ಹುತ್ತ)
4) ನೆತ್ತಿಯಲಿ ಉಂಬುವುದು-ಸುತ್ತಲೂ ಚೆಲ್ಲುವುದು, ಎತ್ತಿದರೆ ಎರಡು ಹೋಳಾಗುವುದು-(ರಾಗಿಕಲ್ಲು)
5) ಜನರಿಲ್ಲದ ನಾಡು-ಮರವಿಲ್ಲದ ಕಾಡು, ನೀರಿಲ್ಲದ ತೋಡು-ಮೀನಿರದ ಕಡಲು-(ಬೂಪಟ)
6) ಮೂರು ಬಗೆ ಹಕ್ಕಿ ಒಂದೇ ಗೂಡಿಗೆ ಹೋಗ್ತವೆ, ಬರೋ ಹೊತ್ತಿಗೆ ಒಂದೇ ಬಗೆಯಾಗ್ತವೆ.-(ಎಲೆ ಅಡಕೆ ಸುಣ್ಣ)
7) ಕಲ್ಲರಳಿ ಹೂವಾಯ್ತು-ಎಲ್ಲರಿಗೂ ಬೆಳಕಾಯ್ತು, ಮಲ್ಲಯ್ಯನ ಶಿಕರಕ್ಕೆ ಬೆಳಕಾಯ್ತು-(ಸುಣ್ಣ)
8) ಅಂಬರದಲ್ಲಿ ಆಡುವುದು ಪಕ್ಶಿಯು ತಾನಲ್ಲ, ಕೊಂಬು ಬಾಲಗಳುಂಟು ಮ್ರುಗ ಜಾತಿಯಲ್ಲ, ಬಿಲ್ಲುಬಾಣಗಳುಂಟು ಹೊಡೆಯುವವರು ಇಲ್ಲ
ಇದ ಹೇಳಬಲ್ಲ ಜಾಣನಿಗೆ ಅರಿಯದೇ ಇದ್ದಿದ್ದಲ್ಲ-(ಗಾಳಿಪಟ)
9) ಚಿಪ್ಪುಂಟು ಆಮೆಯಲ್ಲ-ಜುಟ್ಟುಂಟು ರಿಸಿಯಲ್ಲ, ಮೂರು ಕಣ್ಣುಗಳುಂಟು ಮುಕ್ಕಣ್ಣನಲ್ಲ-(ತೆಂಗಿನಕಾಯಿ)
10) ಬಡಗಿ ಮಾಡಿದ ಬಂಡಿಯಲ್ಲ-ಮನುಶ್ಯ ಮಾಡಿದ ಯಂತ್ರವಲ್ಲ, ಒಂದು ನಿಮಿಶವೂ ಪುರುಸೊತ್ತಿಲ್ಲ-(ಬೂಮಿ)
11) ರಾಜರಾಣಿಯರುಂಟು ರಾಜ್ಯವಲ್ಲ-ಹೂಬಳ್ಳಿಯುಂಟು ತೋಟವಲ್ಲ, ಅಂಕಿ ಅಕ್ಶರಗಳುಂಟು ಪುಸ್ತಕವಲ್ಲ-(ಬೆಳ್ಳಿ ರೂಪಾಯಿ)
12) ಕಪ್ಪುಂಟು ಕಸ್ತುರಿಯಲ್ಲ-ಬಿಳುಪುಂಟು ಸುಣ್ಣವಲ್ಲ, ನೀರುಂಟು ಬಾವಿಯಲ್ಲ-ರೆಕ್ಕೆಯುಂಟು ಪಕ್ಶಿಯಲ್ಲ-(ಕಣ್ಣು)
13) ಅಕ್ಕ ಅಕ್ಕ ಬಾವಿ ನೋಡ-ಬಾವಿಯೊಳಗಿನ ನೀರು ನೋಡ, ನೀರಿನೊಳಗಿನ ಬಳ್ಳಿ ನೋಡ, ಬಳ್ಳಿಯೊಳಗಿನ ಹೂವ ನೋಡ-(ಎಣ್ಣೆ-ಬತ್ತಿ-ಜ್ಯೋತಿಯಿಂದ ಕೂಡಿದ ದೀಪ)
14) ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ-(ಮಲ್ಲಿಗೆ ಹೂ)
15) ಹಸಿರು ಗಿಡ್ದಾಗ ಮಸರ ಚೆಲ್ಯೇದ-(ಹತ್ತಿ)

ಒಗಟಿನ ಸೊಲ್ಲುಗಳು ಹೇಳಿಕೆಯ ರೂಪದಲ್ಲಿದ್ದು , ಹೇಳಿಕೆಯ ನಂತರ “ಇದೇನು-ಏನೆಂದು ಹೇಳಿರಿ-ನಾನ್ಯಾರು-ಎಂತಹುದು-ಇದರ ಹೆಸರೇನು” ಎಂಬ ಪದಕಂತೆಗಳ ಮೂಲಕ ಒಡ್ಡಿರುವ ಕೇಳ್ವಿಗಳಿರುತ್ತವೆ. ಒಗಟಿನ ಸೊಲ್ಲಿನಲ್ಲಿ ನಿರೂಪಣೆಗೊಂಡಿರುವ ಸಂಗತಿಯು ರೂಪಕದ ನುಡಿಗಟ್ಟುಗಳಿಂದ ಕೂಡಿರುತ್ತದೆ.

ಒಗಟು :

ಮುಳ್ಳಿನ ಗಿಡದಲ್ಲಿ ಚಿನ್ನದ ಮೊಟ್ಟೆ => ಇದೇನೆಂದು ಹೇಳು ? – (ನಿಂಬೆಹಣ್ಣು)

ಈ ಒಗಟಿನಲ್ಲಿರುವ “ಚಿನ್ನದ ಮೊಟ್ಟೆ” ಎಂಬ ರೂಪಕದ ಪದಕಂತೆಯು ನಿಂಬೆಹಣ್ಣಿನ ಆಕಾರವನ್ನು ಸೂಚಿಸುವ ಸಾಂಕೇತಿಕವಾದ ತಿರುಳನ್ನು ಒಳಗೊಂಡಿದೆ . ಈ ಒಗಟನ್ನು ಒಡೆಯುವವನು ನಿಂಬೆಗಿಡದ ಸಣ್ಣ ಕೊಂಬೆಗಳು , ಕೊಂಬೆಗಳಲ್ಲಿರುವ ಎಲೆಗಳ ನಡುವಣ ಮುಳ್ಳುಗಳು , ಮುಳ್ಳುಗಳ ನಡುವೆ ಬಿಟ್ಟಿರುವ ಹೂ ಕಾಯಿ ಹಣ್ಣುಗಳ ಬಗೆಗಿನ ನಿಸರ‍್ಗದ ಅರಿವನ್ನು ಹೊಂದಿದ್ದರೆ ಮಾತ್ರ ಈ ಒಗಟಿನ ಕೇಳ್ವಿಗೆ ಬದಲನ್ನು ಹೇಳಲು ಶಕ್ತನಾಗುತ್ತಾನೆ .

ಮೇಲೆ ಹೇಳಿರುವ ಪ್ರತಿಯೊಂದು ಒಗಟಿನ ಸೊಲ್ಲಿನಲ್ಲಿಯೂ ಒಂದಲ್ಲ ಒಂದು ಬಗೆಯ ರೂಪಕದ ನುಡಿಗಟ್ಟು ಬಳಕೆಯಾಗಿರುವುದನ್ನು ಕಾಣಬಹುದು. ಸೊಲ್ಲಿನ ನುಡಿಸಾಮಗ್ರಿಗಳು ಕಟ್ಟಿಕೊಡುತ್ತಿರುವ ರೂಪಕ/ಶಬ್ದಚಿತ್ರದ ಮೂಲಕ, ಮತ್ತೊಂದು ವಸ್ತು/ಜೀವಿ/ಸಂಗತಿಯು ಏನೆಂಬುದನ್ನು ಕಂಡುಹಿಡಿಯಬೇಕಾದ ಸವಾಲನ್ನು ಒಗಟನ್ನು ಒಡೆಯುವವರು ಸ್ವೀಕರಿಸಬೇಕಾಗುತ್ತದೆ. ರೂಪಕದಲ್ಲಿನ ಸಂಗತಿಗಳನ್ನು ಒಟ್ಟಾರೆಯಾಗಿ ಅರಿತುಕೊಂಡು, ಅದಕ್ಕೆ ಸರಿಹೊಂದುವಂತಹ ಸಂಗತಿಗಳನ್ನು ಜತೆಗೂಡಿಸಿದಾಗ ಒಡ್ಡಿರುವ ಒಗಟನ್ನು ಒಡೆಯುವ ಹಾದಿ ತಿಳಿಯುತ್ತದೆ.

ಒಗಟು:

“ಅಕ್ಕ ತವರಿಗೆ ಹೋಗುವಾಗ ಸರ‍್ರನೆ ಹೋಗ್ತಾಳೆ
ಗಂಡನ ಮನೆಗೆ ಬರುವಾಗ ಹೆಜ್ಜೆ ಹೆಜ್ಜೆಗೂ
ಕಣ್ಣೀರು ಸುರಿಸುತ್ತಾ ನಿದಾನವಾಗಿ ಬರ‍್ತಾಳೆ ”

ಹಾಗಾದರೆ ಇವಳು ಯಾರು ?

ತವರೂರಿನಿಂದ ಗಂಡನ ಮನೆಗೆ ಹೋಗುವ , ಮತ್ತೆ ಗಂಡನ ಮನೆಗೆ ಮರಳಿಬರುವ ಹೆಣ್ಣೊಂದರ ಮನಸ್ಸಿನ ಕಾತರ, ನಲಿವು ಮತ್ತು ದುಗುಡವನ್ನು ಒಳಗೊಂಡ ಸಂಗತಿಯೊಂದರ ಮೂಲಕ ಮತ್ತೊಂದು ಸಂಗತಿಯನ್ನು ಈ ಒಗಟಿನಲ್ಲಿ ಒಂದು ರೂಪಕವಾಗಿ ಚಿತ್ರಿಸಲಾಗಿದೆ. ಇದನ್ನು ಕಂಡು ಹಿಡಿದು/ತಿಳಿದು ಹೇಳಬೇಕಾದರೆ ಈ ರೂಪಕಕ್ಕೂ ಹಾಗೂ ಲೋಕದಲ್ಲಿನ ಒಂದು ಕ್ರಿಯೆಗೂ ತಳುಕುಹಾಕಿ ಅಂದರೆ “ಅದರಂತೆ ಇದು” ಎಂದು ಊಹಿಸಿಕೊಂಡಾಗ ಮಾತ್ರ ಬದಲನ್ನು/ಉತ್ತರವನ್ನು ಹೇಳಲು ಆಗುತ್ತದೆ.

ಬದಲು : ನೀರನ್ನು ಸೇದುವಾಗ ಬಾವಿಯೊಳಕ್ಕೆ ಹೋಗುವ ಬರಿದಾದ ಕೊಡ/ಮೇಲಕ್ಕೆ ಬರುವ ತುಂಬಿದ ಕೊಡ.

ಕಣ್ಣಮುಂದಿನ ನಿಸರ‍್ಗದಲ್ಲಿ ಮತ್ತು ಸಮಾಜದಲ್ಲಿ ಕಾಣುವಂತಹ ಎಲ್ಲಾ ಬಗೆಯ ವಸ್ತು/ಜೀವಿ/ಸಂಗತಿಗಳ ಆಕಾರ, ಬಣ್ಣ ಮತ್ತು ಕ್ರಿಯೆಗಳನ್ನು ಎಳೆಎಳೆಯಾಗಿ ಗಮನಿಸಿರುವ ಮನಸ್ಸು, ಅದೇ ಬಗೆಯ ಗುಣಲಕ್ಶಣಗಳನ್ನುಳ್ಳ ಮತ್ತೊಂದನ್ನು ಗುರುತಿಸಲು ನೆರವಾಗುವಂತೆ ನುಡಿಸಾಮಗ್ರಿಗಳ ಮೂಲಕ ಒಗಟನ್ನು ಹೆಣೆದಿರುತ್ತದೆ. ನುಡಿಸಾಮಗ್ರಿಗಳು ಸಂಕೇತಿಸುವ ಸಂಗತಿಗಳನ್ನು ಆಕರವಾಗಿಟ್ಟುಕೊಂಡು, ಅವಕ್ಕೆ ಹೊಂದುವಂತಹ ಲೋಕಸಂಗತಿಗಳನ್ನು ಸರಿದೂಗಿಸಿ ನೋಡಿದಾಗ, ಒಗಟನ್ನು ಒಡೆಯುವುದಕ್ಕೆ/ಬಿಡಿಸುವುದಕ್ಕೆ ಆಗುತ್ತದೆ.

ಒಗಟುಗಳು ರೂಪತಳೆಯುವುದಕ್ಕೆ “ಒಂದರಂತೆ ಮತ್ತೊಂದು ಇರುವ/ಕಾಣುವ/ನಡೆದುಕೊಳ್ಳುವ ಹಾಗೂ ಸರಿಸುಮಾರಾಗಿ ಸಮಾನವಾಗಿರುವ ಎರಡು ವಸ್ತು/ಜೀವಿ/ಸಂಗತಿಗಳ ಬಗೆಗಿನ ಸಂವೇದನೆಯೇ ಮೂಲ ಆಕರವೆಂದು” ನುಡಿಯರಿಗರು ವಿವರಿಸಿದ್ದಾರೆ. ಒಗಟಿನ ರಚನೆಯಲ್ಲಿ ಕಂಡುಬರುವ ಸಂಗತಿಗಳೆಲ್ಲವೂ ಮಾನವನ ಕಣ್ಣು-ಕಿವಿ-ಮೂಗು-ನಾಲಗೆ-ತೊಗಲುಗಳಿಂದ ಪಡೆಯುವ ಮತ್ತು ಅರಿಯುವ ಲೋಕದಲ್ಲಿನ ನಿಜವಾದ ಸಂಗತಿಗಳನ್ನೇ ಒಳಗೊಂಡಿರುತ್ತವೆ. ಆದುದರಿಂದ ಒಗಟನ್ನು ಒಡೆಯುವವರು ಉತ್ತರಗಳನ್ನು ಲೋಕದಲ್ಲಿನ ಸಂಗತಿಗಳಲ್ಲೇ ಅರಸಬೇಕು.

ಅ) ವಸ್ತುಗಳು:

1) ಅರಳುತ್ತದೆ ಹೂವಲ್ಲ-ಬಿಸಿಲಿಗೆ ಬಾಡೋದಿಲ್ಲ – (ಚತ್ರಿ / ಕೊಡೆ )
2) ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಲ್ಲೂ ಇಲ್ಲ, ಒಡೆದರೆ ಬೀಜವಿಲ್ಲ ಸುಲಿದರೆ ಸಿಪ್ಪೆಯಿಲ್ಲ, ತಿಂದರೆ ಹೊಟ್ಟೆ ತುಂಬಲ್ಲ, ಆದರೂ ಮಳೆ ಬಂದಾಗ ಬೆಳೆ ಇಡುತ್ತೆ – ( ಆಲಿಕಲ್ಲು )
ಇದೇ ಬಗೆಯಲ್ಲಿ ” ಕೊಳಲು-ಸೂಜಿ-ಚೆಂಬು-ಹಂಡೆ-ಗಾಳಿಪಟ-ತೇರು-ಎಕ್ಕಡ-ತಣಗೆ-ದೀಪ-ಚಂದ್ರ-ಸೂರ‍್ಯ -ಹಾಸಿಗೆ ” ಮುಂತಾದ ನೂರಾರು ವಸ್ತುಗಳ ಆಕಾರ,ಬಣ್ಣ , ಬಳಕೆಯ ಬಗೆಯನ್ನು ಕುರಿತು ಒಗಟುಗಳು ರಚನೆಗೊಂಡಿವೆ.

ಆ) ಜೀವಿಗಳು:

1) ತಲೆಯಲ್ಲಿ ಕಿರೀಟವುಂಟು ದೇವರಲ್ಲ, ಕೊರಳಲ್ಲಿ ಕಪ್ಪುಂಟು ನಂಜುಂಡನಲ್ಲ, ಮಯ್ಯಲ್ಲಿ ಕಣ್ಣುಂಟು ದೇವೇಂದ್ರನಲ್ಲ,
ಹಾಗಾದರೆ ನಾನ್ಯಾರು?-( ನವಿಲು )
2) ಕರಿ ಕಂಬ್ಳಿ ನೆಂಟ, ಸರೊತ್ತಿನಲ್ಲಿ ಹೊಂಟ-(ಹೆಗ್ಗಣ)
ಇದೇ ರೀತಿಯಲ್ಲಿ “ಮೇಕೆ-ಏಡಿ-ಮೊಲ-ಮೀನು-ಜೇನು-ನಾಗರಹಾವು-ಹದ್ದು-ಎರೆಹುಳು-ನರಮನ್ಸ” ಮುಂತಾದ ಜೀವಿಗಳ ಆಕಾರ, ಮಯ್ ಬಣ್ಣ, ಗುಣ ಮತ್ತು ಕೆಲಸಗಳನ್ನು ಕುರಿತು ಒಗಟುಗಳು ರಚನೆಗೊಂಡಿವೆ.

ಇ) ಕೆಲಸಗಳು:

1) ಯಾಪಾರ ಸಾಪಾರ ಯಾವಾಗ, ಎದುರುಬದರಿಗೆ ಕೂತಾಗ, ಅಳೋದು ಕರೆಯೋದು ಯಾವಾಗ, ಅರ‍್ದ ಒಳಕ್ಕೆ ಹೋದಾಗ
ನಗೋದು ನಲಿಯೋದು ಯಾವಾಗ

ಪೂರ‍್ತಿ ಒಳಕ್ಕೆ ಹೋದಾಗ-( ಬಳೆಗಳನ್ನು ತೊಡಿಸಿಕೊಳ್ಳುವುದು )

2) ಪುಟ್ಟ ಪುಟ್ಟ ದೇವಸ್ತಾನ, ಬಗ್ಗಿ ಬಗ್ಗಿ ನಮಸ್ಕಾರ-(ಸವುದೆಯ ಒಲೆಯನ್ನು ಊದುವುದು )

ಇದೇ ರೀತಿಯಲ್ಲಿ “ಕೆರೆಕುಂಟೆಗಳಿಂದ ನೀರನ್ನು ಏತದ ಮೂಲಕ ಮೇಲೆತ್ತುವುದು; ರಾಗಿಕಲ್ಲಿನಿಂದ ರಾಗಿಯನ್ನು ಬೀಸುವುದು-ಗಾಳವನ್ನು ಹಾಕಿ ಮೀನುಗಳನ್ನು ಹಿಡಿಯುವುದು” ಮುಂತಾದ ಕೆಲಸಗಳ ಬಗೆಯನ್ನು ಕುರಿತು ಒಗಟುಗಳು ರಚನೆಗೊಂಡಿವೆ.

ಒಗಟುಗಳನ್ನು ಎದುರಾಳಿಗಳ ಲೋಕಜ್ನಾನ, ಬುದ್ದಿವಂತಿಕೆ ಮತ್ತು ಕಲ್ಪನಾಶಕ್ತಿಯನ್ನು ಒರೆಹಚ್ಚಿನೋಡಲು ಒಡ್ಡುತ್ತಾರೆ. ಒಗಟಿನ ನುಡಿಸಾಮಗ್ರಿಗಳಲ್ಲಿ ಅಡಗಿರುವ ಸಂಕೇತಗಳನ್ನು ತಿಳಿದುಕೊಳ್ಳುವ ಮತ್ತು ಅವುಗಳನ್ನು ಒಗ್ಗೂಡಿಸಿ ಉತ್ತರವನ್ನು ಹೇಳುವ ಸಮಯದಲ್ಲಿ ಎದುರಾಳಿಯು ತನ್ನೆಲ್ಲಾ ಲೋಕಗ್ರಹಿಕೆಯನ್ನು ಬಹುಕುಶಲತೆಯಿಂದ ಬಳಸಿಕೊಳ್ಳಬೇಕಾಗುತ್ತದೆ. ಒಗಟುಗಳ ಮೂಲಕ ಆಡುವ ಮಾತಿನ ಆಟದ ಮೊದಲ ಹಾಗೂ ಕೊನೆಯ ಉದ್ದೇಶವೇನೆಂದರೆ ವ್ಯಕ್ತಿಗಳ ಮಾನಸಿಕ ಚಟುವಟಿಕೆಯನ್ನು ಚುರುಕುಗೊಳಿಸಿ, ಅವರ ಆಲೋಚನಾಶಕ್ತಿಯ ಮಟ್ಟವನ್ನು ಅಳೆಯುವುದಾಗಿರುತ್ತದೆ. ಜನರು ಜತೆಗೂಡಿದಾಗ ನುಡಿಸಾಮಗ್ರಿಗಳ ಜೋಡಣೆಯಲ್ಲಿನ ಕಲೆಗಾರಿಕೆಯ ಮೂಲಕ ಅಚ್ಚರಿ ಆನಂದವನ್ನು ಉಂಟುಮಾಡಿ, ನಗೆಬುಗ್ಗೆಯ ವಾತಾವರಣವನ್ನು ಮೂಡಿಸಲೆಂದು ಒಗಟುಗಳನ್ನು ಮೊದಮೊದಲು ಬಳಸುತ್ತಿದ್ದರೆಂದು ಊಹಿಸಲಾಗಿದೆ. ಅನಂತರದ ಕಾಲಮಾನದಲ್ಲಿ ವ್ಯಕ್ತಿಗಳ ಬುದ್ದಿಶಕ್ತಿಯ ಮಟ್ಟವನ್ನು ತೀರ‍್ಮಾನಿಸುವ ಅಳತೆಗೋಲುಗಳಾಗಿ ಒಗಟುಗಳು ಬಳಕೆಯಾಗತೊಡಗಿದವು. ಒಗಟುಗಳನ್ನು ಎದುರಾಳಿಯು ಒಡೆಯುವುದರಲ್ಲಿ ಸೋತಾಗ, ಒಡ್ಡಿದವರು ಹೆಮ್ಮೆಯಿಂದ ಬೀಗುತ್ತಾ, ಉತ್ತರವನ್ನು ತಾವೇ ಹೇಳುತ್ತಾರೆ. ಈಗ ಸೋತವರು ತಮಗೆ ಗೊತ್ತಿರುವ ಒಗಟೊಂದನ್ನು ಒಡ್ಡುವ ಮೂಲಕ, ತಮ್ಮನ್ನು ಸೋಲಿಸಿದ ವ್ಯಕ್ತಿಯ ಮೇಲೆ ಗೆಲುವನ್ನು ಪಡೆಯಲು ಪ್ರಯತ್ನಿಸುತ್ತಾರೆ. ಇದೊಂದು ಬಗೆಯ ಬುದ್ದಿಚಾತುರ‍್ಯದ ಸೋಲುಗೆಲುವಿನ ಆಟವಾಗಿದೆ. ಒಗಟಿನ ಆಟವು ನಡೆಯುವ ಮಾತಿನ ಪರಿಸರವು ಪಯ್ಪೋಟಿಯಿಂದ ಕೂಡಿರುವುದರ ಜತೆಗೆ, ಪರಸ್ಪರ ಒಬ್ಬರು ಮತ್ತೊಬ್ಬರನ್ನು ಚೇಡಿಸುವ ಕೆರಳಿಸುವ ಅಣಕದ ಹಾಗೂ ನಗೆಚಾಟಿಕೆಯ ಮಾತುಗಳಿಂದ ಕೂಡಿ ಒಲವು ನಲಿವನ್ನು ಉಕ್ಕಿಸುವಂತಿರುತ್ತದೆ.

ಜಗತ್ತಿನ ಎಲ್ಲಾ ನುಡಿಸಮುದಾಯಗಳಲ್ಲಿಯೂ ಒಗಟುಗಳ ಬಳಕೆಯು ಕಂಡುಬಂದರೂ, ಅವುಗಳನ್ನು ಬಳಸುವ ಸನ್ನಿವೇಶ, ಉದ್ದೇಶ ಮತ್ತು ಪರಿಣಾಮಗಳು ಒಂದೊಂದು ನುಡಿಸಮುದಾಯದಲ್ಲೂ ಒಂದೊಂದು ಬಗೆಯಲ್ಲಿರುತ್ತದೆ. ಕನ್ನಡ ನುಡಿಸಮುದಾಯದಲ್ಲಿ ಒಗಟುಗಳು ಈ ಕೆಳಕಂಡ ಸನ್ನಿವೇಶಗಳಲ್ಲಿ ಬಳಕೆಗೊಳ್ಳುವುದು ಕಂಡುಬರುತ್ತದೆ. ಮಳೆಗಾಲದ ಬಿಡುವಿನಲ್ಲಿ ಜನಪದರು ಸಂಜೆ ಮತ್ತು ರಾತ್ರಿಯ ಸಮಯದಲ್ಲಿ ಮನೆಗಳ ಜಗಲಿ/ಮಾರಿಗುಡಿಯ ಪಡಸಾಲೆಗಳಲ್ಲಿ ಜತೆಗೂಡಿ ಒಗಟುಗಳನ್ನು ಒಡ್ಡುವ/ಒಡೆಯುವ ಆಟದಲ್ಲಿ ತೊಡಗುತ್ತಾರೆ. ಸುಗ್ಗಿಯ ಸಮಯದಲ್ಲಿ ನಡೆಯುವ ಗ್ರಾಮದೇವತೆಗಳ ಹಬ್ಬಗಳಲ್ಲಿ ಮತ್ತು ಮದುವೆಮನೆಗಳಲ್ಲಿ ಹರೆಯದವರು ಗುಂಪುಗುಂಪಾಗಿ ಕುಳಿತು ಒಗಟಿನ ಪಯ್ಪೋಟಿಯಲ್ಲಿ ಮಗ್ನರಾಗುತ್ತಾರೆ. ಜನಪದ ಗಾದೆಗಳಂತೆಯೇ ಜನಪದ ಒಗಟುಗಳು ನುಡಿಸಮುದಾಯದ ಲೋಕಗ್ರಹಿಕೆ ಮತ್ತು ಲೋಕಾನುಬವದ ನುಡಿರಚನೆಗಳಾಗಿವೆ. ಮೂಲದಲ್ಲಿ ವ್ಯಕ್ತಿಯೊಬ್ಬನ ರಚನೆಯಾಗಿದ್ದರೂ ಬಳಕೆಗೆ ಬಂದ ನಂತರ ಒಟ್ಟು ಸಮುದಾಯಕ್ಕೆ ಸೇರಿದ ನುಡಿಗಳಾಗಿವೆ. ಆದುದರಿಂದಲೇ ಒಗಟಿನ ಆಟದಲ್ಲಿ ತೊಡಗಿದವರಲ್ಲಿ ಬಹುತೇಕ ಮಂದಿ ಒಗಟುಗಳನ್ನು ಒಡ್ಡುವ ಮತ್ತು ಒಡೆಯುವ ಕಲೆಯಲ್ಲಿ ಪರಿಣತರಾಗಿರುತ್ತಾರೆ.

ಕನ್ನಡ ಜನಪದದ ಆಡುಮಾತಿನಲ್ಲಿ ಒಗಟುಗಳು ರಚನೆಗೊಂಡು ಬಳಕೆಯಾಗುತ್ತಿರುವಂತೆಯೇ , ಕನ್ನಡದ ಬರಹಗಾರರ ಹೊತ್ತಿಗೆಗಳಲ್ಲಿಯೂ ರಚನೆಗೊಂಡಿವೆ. ಜನಪದರ ಬದುಕಿನ ನೋವುನಲಿವುಗಳ ಜತೆಜತೆಯಲ್ಲಿಯೇ ಒಂದಾಗಿ ಬಾಳುತ್ತ,  ಸಮಾಜದ ಅಂಕುಡೊಂಕುಗಳನ್ನು ತಿದ್ದಿತೀಡುತ್ತಾ ಜನರೊಡನೆ ಸಂವಾದ ನಡೆಸಿದ ಸರ‍್ವಜ್ನ ಕವಿಯ ತ್ರಿಪದಿಗಳಲ್ಲಿ, ಶಿವಶರಣಶರಣೆಯ ವಚನಗಳಲ್ಲಿ, ಪುರಂದರದಾಸರು ಮತ್ತು ಕನಕದಾಸರ ಪದಗಳಲ್ಲಿ ಒಗಟಿನ ರೂಪದಲ್ಲಿ ಕೆಲವು ರಚನೆಗಳು ಹೊರಹೊಮ್ಮಿವೆ. ಅಲ್ಲಮಪ್ರಬುವಿನ ಹಲವು ವಚನಗಳನ್ನು ‘ಬೆಡಗಿನ ವಚನಗಳು’ ಎಂಬ ಹೆಸರಿನಲ್ಲಿ ಗುರುತಿಸಲಾಗಿದೆ. ದಿನನಿತ್ಯದ ಮಾತಿನ ಸನ್ನಿವೇಶಗಳಲ್ಲಿ ‘ಒಗಟು’ ಎಂಬ ಪದಕ್ಕೆ “ನೇರವಾಗಿ ತಿಳಿಯುವಂತೆ ಮಾತನಾಡದೆ, ಗುಟ್ಟನ್ನು ಅಡಗಿಸಿ ನುಡಿಯುವುದು” ಎಂಬ ತಿರುಳಿದೆ . ಆದುದರಿಂದಲೇ ಕೆಲವೊಮ್ಮೆ ನಮ್ಮೊಡನೆ ಮಾತನಾಡುತ್ತಿರುವವರಿಗೆ “ಒಗಟೊಗಟಾಗಿ ಮಾತನಾಡಬೇಡಿ. ಅದೇನು ಹೇಳ್ಬೇಕು ಅಂತ ಇದ್ದೀರೋ ಅದನ್ನು ನೇರವಾಗಿ ಹೇಳಿ” ಎಂದು ನಮ್ಮ ಬೇಸರವನ್ನು ವ್ಯಕ್ತಪಡಿಸುತ್ತೇವೆ.

ಒಗಟುಗಳನ್ನು ಜಾಗತಿಕ ನೆಲೆಯಲ್ಲಿ ತಡಕಾಡಿ ಕಲೆಹಾಕಿ ಓದಿ ಬರೆದ ಬರಹಗಳಿಂದ ಅನೇಕ ಸಂಗತಿಗಳು ತಿಳಿದುಬಂದಿವೆ . ಜಗತ್ತಿನ ಬಹುಬಗೆಯ ಬುಡಕಟ್ಟುಗಳಿಗೆ ಸೇರಿದ ಜನಸಮುದಾಯಗಳಲ್ಲಿ ಮತ್ತು ನಾಗರಿಕ ಸಮಾಜದ ಮತೀಯ ಆಚರಣೆಗಳಲ್ಲಿ ಮತ್ತು ರಾಜಕೀಯರಂಗದ ವ್ಯವಹಾರಗಳಲ್ಲಿ ಒಗಟುಗಳು ಬಳಕೆಯಾಗಿರುವುದು ಕಂಡುಬಂದಿದೆ . ಗ್ರೀಕ್ ಸಂಸ್ಕ್ರುತಿಯ ಪುರಾಣಕತೆಯಲ್ಲಿ ಸ್ಪಿಂಕ್ಸ್ ಪಕ್ಶಿಯು ದಾರಿಹೋಕನಾಗಿ ಬಂದ ಈಡಿಪಸ್ಸನಿಗೆ ಒಡ್ಡಿದ –

” ಬೆಳಗ್ಗೆ ನಾಲ್ಕು ಕಾಲು, ಮದ್ಯಾಹ್ನ ಎರಡು ಕಾಲು, ಸಂಜೆ ಮೂರು ಕಾಲು, ಈ ಪ್ರಾಣಿ ಯಾವುದು ?”

ಎಂಬ ಒಗಟಿಗೆ “ಮಾನವ” ಎಂದು ಉತ್ತರವನ್ನು ನೀಡಿದ ಈಡಿಪಸ್ಸನಿಗೆ ರಾಜ್ಯದ ದೊರೆತನದ ಪಟ್ಟ ದೊರೆಯುತ್ತದೆ . ಗೌತಮ ಬುದ್ದನ ಬದುಕಿನ ಎಳೆಗಳನ್ನು ನಿರೂಪಿಸಿರುವ ಜಾತಕಕತೆಗಳಲ್ಲಿ ಒಗಟಿನ ಆಟದಲ್ಲಿ ಗೆಲ್ಲುವುದರ ಮೂಲಕ ಮದುವೆಯಾಗಲಿರುವ ಗಂಡು-ಹೆಣ್ಣುಗಳನ್ನು ಆಯ್ಕೆ ಮಾಡುತ್ತಿದ್ದ ಸಂಗತಿಗಳು ನಿರೂಪಣೆಗೊಂಡಿವೆ. ಹಿಂದೂ ಸಂಸ್ಕ್ರುತಿಯ ಜನಸಮುದಾಯದಲ್ಲಿ ಯಜ್ನಯಾಗಾದಿಗಳು ನಡೆಯುವಾಗ ಬಳಕೆಯಾಗುತ್ತಿದ್ದ ಕೆಲವು ಸಂಸ್ಕ್ರುತ ಶ್ಲೋಕಗಳಲ್ಲಿ ಒಗಟಿನ ನುಡಿರಚನೆಯ ಜಾಡನ್ನು ಗುರುತಿಸಿ, ಅವನ್ನು ಮತೀಯ ಒಗಟುಗಳೆಂದು ಕರೆದಿದ್ದಾರೆ . ವ್ಯಾಸರ ಮಹಾಬಾರತದಲ್ಲಿ ಯಕ್ಶ ಮತ್ತು ದರ‍್ಮರಾಯನ ನಡುವೆ ನಡೆದ ಕೇಳ್ವಿ-ಬದಲಿನ ಪ್ರಸಂಗವು ಕೆಲವೊಮ್ಮೆ ಒಗಟುಗಳು, ವ್ಯಕ್ತಿಯ ಜೀವದ ಅಳಿವು-ಉಳಿವನ್ನು ತೀರ‍್ಮಾನಿಸುವಂತಹ ಹತಾರಗಳಾಗಿದ್ದವು ಎಂಬ ಸಾಮಾಜಿಕ ಚರಿತ್ರೆಯ ಸಂಗತಿಯನ್ನು ಸೂಚಿಸುತ್ತವೆ. ಏಕೆಂದರೆ ಯಕ್ಶನ ಕೇಳ್ವಿಗೆ ಬದಲನ್ನು ಹೇಳದಿದ್ದ ಬೀಮ/ಅರ‍್ಜುನ/ನಕುಲ/ಸಹದೇವ ಸಾವನ್ನಪ್ಪಿದ್ದರು. ಯಕ್ಶನ ಕೇಳ್ವಿಗೆ ಸರಿಯಾದ ಬದಲನ್ನು ಕೊಟ್ಟು ಗೆಲ್ಲುವುದರ ಮೂಲಕ, ತಾನೂ ಸಾವಿನಿಂದ ಪಾರಾಗಿ, ತಮ್ಮಂದಿರನ್ನು ದರ‍್ಮರಾಯನು ಉಳಿಸಿಕೊಂಡನೆಂಬ ಈ ಪ್ರಸಂಗವು ಒಗಟಿನ ಸಾಮಾಜಿಕ ಮಹತ್ವವನ್ನು ಸೂಚಿಸುವ ಒಂದು ರೂಪಕವಾಗಿದೆ. ಜಗತ್ತಿನ ಎಲ್ಲಾ ನುಡಿಸಮುದಾಯಗಳಲ್ಲಿಯೂ ಒಗಟುಗಳ ಬಳಕೆಯಿರುವುದನ್ನು ಸಮಾಜ, ಸಂಸ್ಕ್ರುತಿ ಮತ್ತು ನುಡಿಯನ್ನು ಓದುವ ಅರಿಗರು ಗುರುತಿಸಿದ್ದಾರೆ.

ಜಗತ್ತಿನಲ್ಲಿರುವ ವಸ್ತು/ಜೀವಿ/ಸಂಗತಿಗಳ ನೋಡುವಿಕೆಯಿಂದ ಪಡೆದ ಅರಿವು, ಮನದೊಳಗೆ ಮೂಡಿಬರುವ ಊಹೆಗಳು, ಬೇರೆಬೇರೆ ಬಗೆಯ ಎರಡು ಅಂಶಗಳನ್ನು ಪರಸ್ಪರ ಹೆಣೆದು “ಅದರಂತೆ ಇದು; ಇದರಂತೆ ಅದು” ಎಂದು ತಿಳಿಯುವಂತೆ ನುಡಿಸಾಮಗ್ರಿಗಳ ಮೂಲಕ ಚತುರತೆಯಿಂದ ಬಣ್ಣಿಸುವ ಒಗಟುಗಳು ಮಾನವನ ಬುದ್ದಿಶಕ್ತಿ ಮತ್ತು ಮಾತಿನ ಬಳಕೆಯ ಕುಶಲತೆಗೆ ಸಂಕೇತವಾಗಿವೆ.

( ಚಿತ್ರಸೆಲೆ: 3.bp.blogspot.com ) 

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *