ಮೊಡವೆಗಳಿಗೆ ಮದ್ದು

ಯಶವನ್ತ ಬಾಣಸವಾಡಿ.

pimples

ಮೊಡವೆಯ ಕಡುಹಿಗೆ (intensity) ತಕ್ಕಂತೆ ಕೂರನಿಸಿಕೆ (emotional distress) ಹಾಗು ಕಲೆಜಡ್ಡುಗಳು (scars) ಉಂಟಾಗಬಹುದು. ಮೊಡವೆಗಳು ಕಾಣಿಸಿಕೊಂಡ ಕೂಡಲೇ ತಕ್ಕ ಆರಯ್ಕೆಗಳನ್ನು ಮಾಡಿದರೆ, ಮನಸ್ಸಿಗೆ ಹಾಗು ತೊಗಲಿಗೆ ಆಗುವ ತೊಂದರೆಗಳನ್ನು ತಗ್ಗಿಸಬಹುದಾಗಿದೆ.

ಮೊಡವೆಗಳ ಮಾಂಜುಗೆಯಲ್ಲಿ ಬಳಕೆಯಾಗುವ ಮದ್ದುಗಳು ಮಯ್-ಜಿಡ್ಡನ್ನು (sebum) ಕಡಿಮೆ ಮಾಡುವ, ಒಚ್ಚಿರುಗಳ (bacteria) ಸೋಂಕನ್ನು ತಡೆಯುವ ಇಲ್ಲವೇ ಉರಿಯೂತವನ್ನು (inflammation) ಕಡಿಮೆ ಮಾಡುವ ಅಳವನ್ನು (capacity) ಹೊಂದಿರುತ್ತವೆ. ಮೊಡವೆಗಳನ್ನು ಅಂಕೆಯಲ್ಲಿಡಲು ಈ ಮದ್ದುಗಳನ್ನು ಹಲವು ತಿಂಗಳುಗಳವರೆಗೆ ಬಳಸಬೇಕಾಗಬಹುದು. ಮೊಡವೆಗಳ ಕಡುಹು ನಯವಾಗಿದ್ದಲ್ಲಿ (mild), ಎಡೆ ಮಾಂಜುಗೆಯನ್ನು (topical/local medication) ಬಳಸಬಹುದಾಗಿದೆ; ಕಡುಹು ಬಿರುಸಾಗಿದ್ದರೆ (mild) ಏರ‍್ಪಡಿತ ಮಾಂಜುಗೆಗೆ (systemic treatment) ಮೊರೆ ಹೋಗಬೇಕಾಗುತ್ತದೆ.

ಎಡೆ ಮಾಂಜುಗೆ (topical/local medication):

ಇವುಗಳನ್ನು ನಿಡಿ (cream), ಗೊಂದು (gel) ಇಲ್ಲವೆ ವಾರೆ/ತಣ/ಗಂಜಿಗಳಾಗಿ (lotion) ಬಳಸಬಹುದಾಗಿದೆ.

1. ರೆಟಿನಾಯ್ಡ್: ಇದು ಬಾಳುಳುಪು A (vitamin A) ಯನ್ನು ಹೊಂದಿರುತ್ತದೆ. ಇದನ್ನು ದಿನವೂ ಸಂಜೆ ಹೊತ್ತಿನಲ್ಲಿ ತೊಗಲಿಗೆ ಸವರಿಕೊಳ್ಳಬೇಕು. ರೆಟಿನಾಯ್ಡ್ ಗಳು, ಕೊದಲಿನ ಚೀಲಗಳಲ್ಲಿ  (hair follicle) ಜಿಡ್ಡಿನ ಬೆಣೆಗಳು (oily plug) ಉಂಟಾಗುವುದನ್ನು ತಡೆಯುತ್ತವೆ.

2. ಕೆಡುಸೀರಳಿಕಗಳು (antiboitics): ಇವು ತೊಗಲಿನ ಮೇಲೆ ಇರುವ ಅಳತೆ ಮೀರಿದ ಒಚ್ಚೀರುಗಳ ಎಣೆಕೆಯನ್ನು ಕಡಿಮೆ ಮಾಡುತ್ತವೆ. ಮೊದಲ ಕೆಲವು ತಿಂಗಳುಗಳು, ಕೆಡುಸೀರಳಿಕಗಳನ್ನು ರೆಟಿನಾಯ್ಡ್ ಗಳೊಡನೆ ಬಳಸಬಹುದಾಗಿದೆ. ಒತ್ತಾರೆ (morning), ಕೆಡುಸೀರುಳಿಕಗಳನ್ನು ಬಳಸಿದರೆ, ಇಳಿಹೊತ್ತಿನಲ್ಲಿ ರೆಟಿನಾಯ್ಡ್ ಗಳನ್ನು ಬಳಸಬಹುದು. ಕೆಡುಸೀರಳಿಕಗಳನ್ನು ಬೆನ್ಜಾಲ್ ಪರಾಕ್ಸಯ್ಡ್ ಗಳಂತ ಕೊಳೆಯಳಿಕಗಳ (aniseptic) ಜೊತೆಗೆ ಬೆರೆಸಿ ಬಳಸಬಹುದಾಗಿದೆ.

ಬಾಯ್ಮದ್ದಿಕೆಯ ಮಾಂಜುಗೆ (oral medication):

ಏರ‍್ಪಡಿತ ಮಾಂಜುಗೆಗಳ ಬಗೆಗಳಲ್ಲಿ ಒಂದಾದ ಬಾಯ್ಮದ್ದಿಕೆಯನ್ನು ಬಳಸಲಾಗುತ್ತದೆ.

1. ಕೆಡುಸೀರಳಿಕಗಳು: ಟೆಟ್ರಾಸಯ್ಕ್ಲಿನ್ ಗುಳಿಗೆಗಳು ಹೆಚ್ಚಾಗಿ ಬಳಕೆಯಾಗುತ್ತದೆ.

2. ಬಾಯ್ಮದ್ದಿಕೆಯ ಬಸಿರುತಡೆಕಗಳು (oral contraceptives): ಹೆಂಗಸರು ಮತ್ತು ಹರೆಯದ ಹೆಣ್ಣುಮಕ್ಕಳಲ್ಲಿ ಮೊಡವೆಗಳನ್ನು ಇಲ್ಲವಾಗಿಸಲು ಈಶ್ಟ್ರೊಜನ್ ಮತ್ತು ಪ್ರೊಜೆಸ್ಟಿನ್ ಗಳನ್ನು ಹೊಂದಿರುವ ಗುಳಿಗೆಗಳನ್ನು ಬಳಸಬಹುದಾಗಿದೆ.

3. ಆಂಡ್ರೋಜ ತಡೆಕಗಳು (anti-androgen): ಮೊಡವೆಗಳ ಆರಯ್ಕೆಯಲ್ಲಿ ಕೆಡುಸೀರಳಿಕಗಳ ಗುಳಿಗೆಗಳು ಹೆಂಗಸರಲ್ಲಿ ಮತ್ತು ಹರೆಯದ ಹೆಣ್ಣುಮಕ್ಕಳಲ್ಲಿ ಕೆಲಸ ಮಾಡದಿದ್ದಲ್ಲಿ ಆಂಡ್ರೋಜ ತಡೆಕಗನ್ನು ಹೊಂದಿರುವ ಗುಳಿಗೆಗಳನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಅಂಡ್ರೋಜನ್ ಸುರಿಗೆಯು ಮಯ್-ಜಿಡ್ಡಿನ ಸುರಿಕಗಳನ್ನು ದಪ್ಪವಾಗಿಸಿ, ಹೆಚ್ಚೆಚ್ಚು ಮಯ್-ಜಿಡ್ಡನ್ನು ಮಾಡುತ್ತದೆ. ಅಂಡ್ರೋಜನ್ ಸುರಿಗೆಯು ಮಯ್-ಜಿಡ್ಡಿನ ಸುರುಕಗಳ ಮೇಲೆ ಕೆಲಸ ಮಾಡದಂತೆ ತಡೆಯುವ ಅಳವನ್ನು ಆಂಡ್ರೋಜ ತಡೆಕಗಳು ಹೊಂದಿರುತ್ತವೆ.

ಹೆಚ್ಚಾಗಿ ಬಳಕೆಯಾಗುವ ಆಂಡ್ರೊಜನ್ ತಡೆಕವೆಂದರೆ ಸ್ಪಯ್ರೋನೊಲ್ಯಾಕ್ಟೋನ್ (spironolactone). ಸ್ಪಯ್ರೋನೊಲ್ಯಾಕ್ಟೋನ್ನಿಂದ ಉಂಟಾಗಬಹುದಾದ ಅಡ್ಡೀಡುಗಳೆಂದರೆ (side effect) ಮೊಲೆಗಳಲ್ಲಿ ನೋವು ಮತ್ತು ಮುಟ್ಟಿನ ನೋವು ಹೆಚ್ಚಾಗುವಿಕೆ. ಬಿಕ್ಕುಗಳು (kidney) ಪೊಟಾಸಿಯಂ ಮಿಂತುಣುಕುಗಳನ್ನು ಹೊರವಡಿಸುವುದನ್ನು (excretion) ತಡೆಯುವ ಅಳವನ್ನು ಸ್ಪಯ್ರೋನೊಲ್ಯಾಕ್ಟೋನ್ ಹೊಂದಿರುತ್ತದೆ; ಹಾಗಾಗಿ, ಈ ಮದ್ದನ್ನು ಬಳಸಿದಾಗ ಅಳತೆ ಮೀರಿದ ಮೊತ್ತದಲ್ಲಿ ಪೊಟಾಸಿಯಂ ಮಿಂತುಣುಕುಗಳು ಮಯ್ಯಲೇ ಉಳಿದು ಹಲವು ಬಗೆಯ ತೊಡುಕುಗಳನ್ನು ಒಡ್ಡಬಹುದು.

4. ಅಯ್ಸೊ- ಟ್ರೆಟಯ್ನೊನ್ (isotretinoin): ಮೊಡವೆಯ ಕಡುಹು ತುಂಬಾ ಹೆಚ್ಚಿದ್ದಲ್ಲಿ ಮತ್ತು ಬೇರೆ ಯಾವುದೇ ಬಗೆಯ ಮದ್ದುಗಳಿಗೆ ಮೊಡವೆಗಳು ಜಗ್ಗದಿದ್ದಲ್ಲಿ, ಕಟ್ಟ-ಕಡೆಯದಾಗಿ ಈ ಮದ್ದನ್ನು ಬಳಸಲಾಗುತ್ತದೆ. ಆದರೆ, ಈ ಮದ್ದಿನಿಂದ ದೊಡ್ಡ ಮಟ್ಟದ ಅಡ್ಡೀಡುಗಳು ಉಂಟಾಗುತ್ತವೆ. ಎತ್ತುಗೆಗೆ: ದೊಡ್ಡಕರುಳಿನಲ್ಲಿ ಹುಣ್ಣಿನ ಉರಿಯೂತ (ulcerative colitis), ಕೊರಗುವಿಕೆಯಿಂದಾಗಿ ತನ್ಕೊಲೆತನದ (suicide) ಸೆಳೆತಕ್ಕೆ ಒಳಗಾಗುವುದು ಮತ್ತು ಹುಟ್ಟುವ ಮಕ್ಕಳಲ್ಲಿ ಕುಂದುಂಟಾಗುವಿಕೆ (birth defects).

5. ಕೊರುವೆಂಡದ ಚುಚ್ಚುಮದ್ದು (steroid injection): ಗಂಟು ಮತ್ತು ಬೊಕ್ಕೆಗಳು ಇದ್ದಲ್ಲಿ, ಕೊರುವೆಂಡವನ್ನು ನೇರವಾಗಿ ಅವುಗಳ ಒಳಗೆ ಚುಚ್ಚಬಹುದಾಗಿಗೆ. ಈ ಚಳಕದ ಕೆಡುಕುಗಳೆಂದರೆ, ಕೊರುವೆಂಡವನ್ನು ಚುಚ್ಚಿದ ಸುತ್ತಮುತ್ತ ತೊಗಲು ತೆಳುವಾಗುವುದು, ತಿಳಿಗೊಳ್ಳುವುದು ಮತ್ತು ಸಣ್ಣ ನೆತ್ತರುಗೊಳವೆಗಳು ಕಾಣಿಸಿಕೊಳ್ಳುವುದು.

ಆರಯ್ಕೆಗಳು:

ಮೊಡವೆಗಳನ್ನು ಸರಿಪಡಿಸುವ ಸಲುವಾಗಿ ಮಾಂಜುಗೆಯ ಜೊತೆಗೆ ಹಲವು ಬಗೆಯ ಆರಯ್ಕೆಗಳನ್ನೂ ಮಾಡಬಹುದಾಗಿದೆ.

1. ಬೆಳಕಿನ ಆರಯ್ಕೆ (light therapy): ಬೆಳಕನ್ನು ಬಳಸಿ ಮೊಡವೆಯ ಉರಿಯೂತವನ್ನು ಉಂಟುಮಾಡುವ ಒಚ್ಚೀರುಗಳನ್ನು ಕೊಲ್ಲುವ ಆರಯ್ಕೆ ಇದಾಗಿದೆ. ಕೆಲವು ಮಾಂಜುಮನೆಗಳಲ್ಲಿ ಬಗೆ-ಬಗೆಯ ಬೆಳಕುಗಳನ್ನು ಬಳಸಿ ಆರಯ್ಕೆಯನ್ನು ಮಾಡುವ ಅನುಕೂಲಗಳಿರುತ್ತವೆ. ಮನೆಯಲ್ಲಿ ನೀಲಿ-ಬೆಳಕಿನ ಆರಯ್ಕೆಯನ್ನು ಮಾಡಬಹುದಾಗಿದೆ. ಬೆಳಕಿನ ಆರಯ್ಕೆಯಿಂದ ಉಂಟಾಗಬಹುದಾದ ಕೆಡುಕುಗಳೆಂದರೆ ತೊಗಲು ಕೆಂಪಾಗುವುದು, ನೋವು ಮತ್ತು ನೇಸರನ ಬೆಳಕನ್ನು ಎದುರಿಸುವ ಅಳವಿನ ಕುಗ್ಗುವಿಕೆ.

2. ಇರ‍್ಪಿನ ಎಡೆಯುವಿಕೆ (chemical peel): ಈ ಬಗೆಯ ಆರಯ್ಕೆಯಲ್ಲಿ, ಸ್ಯಾಲಿಸಿಲಿಕ್ ಆಸಿಡ್ ನಂತಹ ಇರ‍್ಪುಗಳನ್ನು ಮೊಡವೆಗಳ ಮೇಲೆ ಹಲವು ಸಲ ಸವರಿ, ಮೊಡವೆಗಳನ್ನು ತೊಗಲಿನಿಂದ ಬೇರ‍್ಪಡಿಸಲಾಗುವುದು. ರೆಟಿನಾಯ್ಡ್ ಗಳನ್ನು ಹೊರತುಪಡಿಸಿ ಉಳಿದ ಮೊಡವೆಯ ಮದ್ದುಗಳೊಂದಿಗೆ ಇರ‍್ಪಿನ ಎಡೆಯುವಿಕೆಯನ್ನು ಬಳಸಬಹುದು. ರೆಟಿನಾಯ್ಡ್ ಗಳೊಂದಿಗೆ, ಈ ಮಾಂಜುಗೆಯನ್ನು ಬೆರೆಸಿದರೆ, ತೊಗಲಿಗೆ ಹಾನಿಯುಂಟಾಗುತ್ತದೆ.ಈ ಬಗೆಯ ಆರಯ್ಕೆಯ ಅಡ್ಡೀಡುಗಳು: ತುಸುಹೊತ್ತು ತೊಗಲನ್ನು ಕೆಂಪಾಗಿಸಿ, ತೊಗಲಿನಲ್ಲಿ ಪೊರೆ ಮತ್ತು ಒಪ್ಪಳೆಗಳನ್ನು ಉಂಟುಮಾಡಬಹುದು. ಜೊತೆಗೆ ತೊಂಬಾ ದಿನಗಳವೆರೆಗೆ, ತೊಗಲಿನ ಬಣ್ಣ ತಿರುಚಿಕೊಳ್ಳಬಹುದು.

3. ಕರಿತಲೆ ಮತ್ತು ಬೆಳಿತಲೆಗಳನ್ನು ತೆಗೆಯುವಿಕೆ: ಎಡೆ ಮಾಂಜುಗೆಯನ್ನು ಬಳಸಿಯೂ ತೆಗೆಯಲಾಗದ ಕರಿತಲೆ ಮತ್ತು ಬಿಳಿತಲೆಗಳನ್ನು, ಗೊತ್ತುಮಾಡಿದ ಕರಿತಲೆ ಕಡ್ಡಿ ಮತ್ತು ಬಿಳಿತಲೆ ಕಡ್ಡಿಗಳನ್ನು ಬಳಸಿ  ತೆಗೆಯುಬಹುದಾಗಿಗೆ. ಆದರೆ, ಈ ಚಳಕವು ಒಮ್ಮೊಮ್ಮೆ ಕಲೆಜಡ್ಡುಗಳನ್ನು (scar) ಉಂಟುಮಾಡಬಹುದು.

ಕಲೆಜಡ್ಡುಗಳನ್ನು ಸರಿಪಡಿಸುವ ಬಗೆ:

1.  ಮೆಲು-ಗೂಡುಕಟ್ಟು ತುಂಬುಕ (soft tissue fillers): ಅಂಟುವುಟ್ಟುಕ (collagen) ಮತ್ತು ಕೊಬ್ಬಿನಂತಹ ಮೆಲು-ಗೂಡುಕಟ್ಟುಗಳನ್ನು ಗುಳಿಬಿದ್ದ ಕಲೆಜಡ್ಡುಗಳ (scar) ಮೇಲೆ ಇಲ್ಲವೆ ತೊಗಲಿನ ಅಡಿಯಲ್ಲಿ ತುಂಬಿದರೆ, ಕಲೆಜಡ್ಡು ಎದ್ದು ಕಾಣುವುದಿಲ್ಲ. ಇವುಗಳನ್ನು ಬಳಸುವುದರಿಂದ ಚುಚ್ಚಿದ ತೊಗಲಿನ ಎಡೆಯಲ್ಲಿ ಕೆಲ ಹೊತ್ತು ಊತ ಮತ್ತು ಮೂಗೇಟು (bruise) ಉಂಟಾಗಬಹುದು.

2. ಇರ‍್ಪಿನ ಎಡೆಯುವಿಕೆ (Chemical peels): ಹೆಚ್ಚಿನ ಅಳವುಳ್ಳ ಹುಳಿಗಳನ್ನು (acid) ಕಲೆಜಡ್ದುಗಳ ಮೇಲೆ ಸವರಿದರೆ, ಕಲೆಜಡ್ಡಿನ ಮೇಲ್ ಪದರಗಳು ಉದುರುವುದರಿಂದ, ಕಲೆಜಡ್ಡು ತಿಳಿಗೊಳ್ಳುತ್ತದೆ.

3. ನಡುತೊಗಲ್ಪರೆ ತರಚುವಿಕೆ (Dermabrasion): ತುಂಬಾ ಕಡುಹಿನ ಕಲೆಜಡ್ಡುಗಳನ್ನು ತೆಗೆಯಲು ಈ ಚಳಕವನ್ನು ಬಳಸಲಾಗುತ್ತದೆ. ತಿರುಗುವ ಉಜ್ಜುಕವನ್ನು (rotating brush) ಬಳಸಿ ಮೊಡವೆಯ ಕಲೆಜಡ್ಡುಗಳನ್ನು ಉಜ್ಜಿ, ಸುತ್ತಲಿನ ಹದುಳದ ತೊಗಲಿನ ಹೊರಮಯ್ ಮಟ್ಟಕ್ಕೆ ತರುವ ಚಳಕವಿದು.

4. ಒತ್ತೋರಣದ ಬೆಳಕಿನ ಆರಯ್ಕೆ (laser therapy):ಒತ್ತೋರಣದ ಬೆಳಕಿನ ಕದಿರುಗಳನ್ನು ಬಳಸಿ ಮೊಡವೆಗಳ ಕಲೆಜಡ್ಡುಗಳನ್ನು ತಿಳಿಗೊಳಿಸಬಹುದಾಗಿದೆ.

5. ಬೆಳಕಿನ ಆರಯ್ಕೆ: ತೊಗಲಿನ ಹೊರಪದರವನ್ನು ಹಾನಿಮಾಡದ ಮಿಡಿತದ ಬೆಳಕು (pulsed light) ಮತ್ತು ಬಾನುಲಿ-ಸಲದೆಣಿಕೆಯ (radio-frequency) ಚೂಟಿಗಳನ್ನು (devices) ಬಳಸಿ ಕಲೆಜಡ್ಡುಗಳನ್ನು ಸರಿಪಡಿಸಬಹುದಾಗಿದೆ.  ಈ ಬಗೆಯ ಆರಯ್ಕೆ, ತೊಗಲಿನ ಹೊರಪದರಲ್ಲಿ ಬಿಸುಪನ್ನು (heat) ಹೆಚ್ಚಿಸಿ, ಹೊಸ ತೊಗಲು ಮೂಡಲು ನೆರವಾಗುತ್ತದೆ.

6. ತೊಗಲಿನ ಕೊಯಾರಯ್ಕೆ (skin surgery): ಕಲೆಜಡ್ಡು ಇರುವ ತೊಗಲಿನ ಎಡೆಯನ್ನು ಹೊರತೆಗೆಯುವುದು; ಮತ್ತು ಹೊರತೆಗೆದ ಬಾಗವನ್ನು ಹೊಲಿಯುವುದು (stitch) ಇಲ್ಲವೆ ಮಯ್ಯಿಯ ಬೇರೊಂದು ಕಡೆಯಿಂದ ಹದುಳದ ತೊಗಲನ್ನು ಕತ್ತರಿಗೆ, ಕಲೆಜಡ್ಡನ್ನು ಕತ್ತರಿಸಿದ ಎಡೆಗೆ ಕೂರಿಸುವುದು (skin grafting) ತೊಗಲಿನ ಕೊಯ್ಯಾರಯ್ಕೆ ಅರಿದಾದ ಚಳಕ.

ಮನೆ ಮದ್ದು:

1. ನಯವಾದ ತೊಳೆಯುಕಗಳನ್ನು (cleanser) ಬಳಸುವುದು: ಮೊಡವೆಗಳು ಇರುವ ತೊಗಲಿನ ತಾಣವನ್ನು ನಯವಾದ ತೊಳೆಯುಕ ಮತ್ತು ಬೆಚ್ಚನೆಯ ನೀರಿನಿಂದ ದಿನಕ್ಕೆ ಎರಡು ಸಲವಾದರೂ ತೊಳೆದುಕೊಳ್ಳಬೇಕು. ಉದ್ದನೆಯ ಕೊದಲು ಇರುವಲ್ಲಿ ಮೊಡವೆಗಳು ಕಾಣಿಸಿಕೊಂಡರೆ, ದಿನವೂ ನವಿರುಕವನ್ನು (shampoo) ಬಳಸಿ ಕೂದಲನ್ನು ತೊಳೆಯಬೇಕು.

2. ಮಯ್ ಉಜ್ಜುವಾಗ ತರಚುಕಗಳ (scrubs) ಬಳಕೆಯನ್ನು ಆದಶ್ಟು ಕಡಿಮೆ ಮಾಡಬೇಕು.

3. ಗಡ್ಡವನ್ನು ಹೆರೆದುಕೊಳ್ಳುವಾಗ ತೊಗಲಿನ ಮೇಲೆ ಹೆಚ್ಚು ಒತ್ತಡ ಬೀಳದಂತೆ ನಯವಾಗಿ ಕೆರೆದುಕೊಳ್ಳಬೇಕು.

4. ಮೊಡವೆಗಳನ್ನು ಚಿವುಟುವುದು ಇಲ್ಲವೆ ಕೆರೆದುಕೊಳ್ಳುವುದನ್ನು ಮಾಡಕೂಡದು. ಹೀಗೆ ಮಾಡುವುದರಿಂದ ಮೊಡವೆಗೆ ಸೋಂಕು ತಗಲುವ ಮತ್ತು ಕಲೆ ಉಳಿದುಕೊಳ್ಳುವ ಸಾದ್ಯತೆ ಹೆಚ್ಚು.

5. ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆಹಣ್ಣಿನ ರಸವನ್ನು ಬೆರೆಸಿ, ದಿನಕ್ಕೆ ಎರಡು ಸಲ ಮೊಡವೆ ತಗುಲಿದ ತೊಗಲಿನ ಎಡೆಗಳಿಗೆ ಸವರಿ ಹತ್ತು-ಹದಿನಯ್ದು ನಿಮಿಶಗಳ ಬಳಿಕ ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ,ಮೊಡವೆಗಳು ಮೂಡುವ ಮತ್ತು ಮೂಡಿದ ಮೊಡವೆಗಳಿಂದ ಉಂಟಾಗಬಹುದಾದ ಕಲೆಗಳು ಕಡಿಮೆಯಾಗುವುದರ ಜೊತೆಗೆ ತೊಗಲು ನುಣುಪಾಗುತ್ತದೆ.

ಈ ಬರಹದಲ್ಲಿ ತಿಳಿಸಿರುವ ಮದ್ದುಗಳಲ್ಲದೇ, ಮನೆಮದ್ದುಗಳನ್ನು ಒಳಗೊಂಡಂತೆ, ಮೊಡವೆಗಳ ಆರಯ್ಕೆ ಮತ್ತು ಮಾಂಜುಗೆಯಲ್ಲಿ ಹತ್ತು ಹಲವು ಬಗೆಗಳಿವೆ. ಎಲ್ಲವನ್ನೂ ಪಟ್ಟಿ ಮಾಡಿದರೆ, ಬರಹ ತುಂಬಾ ದೊಡ್ಡದಾಗುವುದರಿಂದ, ಆಯ್ದ ಬಗೆಗಳನ್ನಶ್ಟೇ ಈ ಬರಹದಲ್ಲಿ ತಿಳಿಸಿರುವೆ.

(ಮಾಹಿತಿ ಮತ್ತು ತಿಟ್ಟ ಸೆಲೆಗಳು: http://www.mayoclinic.org/diseases, www.francescasfaceliftoflasvegas.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: