ರುಮಟೊಯ್ಡ ಕೀಲೂತ (Rheumatoid Arthritis)

ಡಾ.ಸಂದೀಪ ಪಾಟೀಲ.

ಮುಪ್ಪಿನೆಡೆಗೆ ಹೋಗುತ್ತಿರುವವರಲ್ಲಿ ಕೀಲು ನೋವು ಕಾಣಿಸಿಕೊಳ್ಳುವುದನ್ನು ನಾವು ನೋಡಿಯೇ ಇರುತ್ತೇವೆ. ಆದರೆ ಕೆಲವೊಮ್ಮೆ ಹೆರೆಯದವರಲ್ಲಿ ಕೂಡ ಕೀಲು ನೋವು ಬಾವು ಕಾಣಿಸಿಕೊಳ್ಳುತ್ತದೆ. ಆಗ ಇದು ಕೀಲು ಸವೆತದ ಬೇನೆಯಲ್ಲ ಎಂದು ತಿಳಿಯಬೇಕು. ಹರೆಯವನ್ನು ಲೆಕ್ಕಿಸದೇ ಯಾರಲ್ಲಾದರೂ ಕಾಣಿಸಿಕೊಳ್ಳಬಹುದಾದಂತ ಕೀಲು ಬೇನೆಗಳಲ್ಲಿ ರುಮಟೊಯ್ಡ ಕೀಲೂತ (Rheumatoid Arthritis) ಒಂದು.

ರುಮಟೊಯ್ಡ ಕೀಲೂತ ಒಂದು ಕೀಲೊಳೆ ಜಂಟಿ (synovial joint) ಮತ್ತು ಕೀಲಿನ ಸುತ್ತ ಕೆಡುಕು ತರುವಂತ ತನ್ಮರೆಗಾಪಿನ (autoimmune), ಇಡೀಮಯ್ನಂಟಿನ (systemic) ಕುತ್ತು. ಎರಡೂ ಬದಿಯ ಹೊರ ಅಂಚಿನ ಕೀಲುಗಳಲ್ಲಿ, ಅಂದರೆ ಕಯ್ ಕಾಲ್ಬೆರೆಳುಗಳ ಕೀಲುಗಳಲ್ಲಿ ಮುಕ್ಯವಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಮುಂಜಾವಿನ ಕೀಲುಬಿಗಿತ, (morning stiffness) ಕೀಲೂತ ಮತ್ತು ನೋವು ಇದರ ಅರಿದಾದ ಕುರುಹುಗಳು. 75% ಬೇನಿಗರ ನೆತ್ತರಿನ ಹೆಪ್ನೀರಿನಲ್ಲಿ (serum) Rheumatoid factor ಎಂಬ ತನ್ಸೀರುಕೆಡುಕ/ತನ್ನೆದುರುಕಂಟುಗಳು (antigens) ಇರುತ್ತವೆ.

ಹರವು (Prevalence):

ಇಂಡಿಯಾದ ಮಂದಿಯೆಣಿಕೆಯ 0.65–0.75% ರಶ್ಟು ಮಂದಿಯಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಹೆಂಗಸರಲ್ಲಿ ಗಂಡಸರಿಗಿಂತ ಮೂರು ಪಟ್ಟು ಹೆಚ್ಚಾಗಿ ಕಂಡುಬರುತ್ತದೆ. ಆದರೆ ಹರೆಯ ಹೆಚ್ಚಾದಂತೆ ಇಬ್ಬರಲ್ಲೂ ಸಾಟಿಯಾಗಿ ಕಾಣಿಸುತ್ತದೆ. ಪೀಳಿಗೆಗಳಿಂದ ಹರಿದು ಬರುವ ಸಾದ್ಯತೆಯೂ ಹೆಚ್ಚು.

ಬೇನೆಯ ಹುಟ್ಟುಬಗೆ: (Pathogenesis)

ಸರಿಯಾದ ಹುಟ್ಟುಬಗೆ ಗೊತ್ತಿರದಿದ್ದರೂ ಕೆಲವು ಗಿರುಗೆಗಳು (hypothesis) ಹೇಳಲಾಗಿವೆ. ಈ ಬೇನೆಯು ಒಂದು ಬಗೆಯ ಪಟ್ಟುಬಿಡದ ಸೀರುಗಳ ಚುರುಕುಗೊಳ್ಳುವಿಕೆ(persistent cellular activation)ಯಿಂದ ಮೊದಲ್ಗೊಂಡು ಆಮೇಲೆ ಕೀಲುಗಳಲ್ಲಿ ಹುಸಿಕಾಪುವಿಕೆ (autoimmunity) ಮತ್ತು ಕೂಡ್ಗಾಪುವಿಕೆ(immune complexes)ಗಳಿಗೆ ಎಡೆಮಾಡಿಕೊಡುತ್ತದೆ. ಇದರಿಂದ ಮೊದಲ ಆಗುಹವೆಂದರೆ ಕೀಲೊಳೆ ಪದರ(synovial membrane)ದ ಉರಿಯೂತ (inflammation) ಹಾಗೂ ಮೆಲ್ಲೆಲುಬು ಮತ್ತು ಎಲುಬುಗಳ ಹಾಳಾಗುವಿಕೆ. CD4 ‘T’ ಗೂಡುಗಳು, ತಿನಿಗೂಡುಗಳು (phagocytes), ನಾರುಟ್ಟುಕಗೂಡುಗಳು (fibroblasts), ಎಲುಮುಳುವುಕಗಳು (osteoclasts) ಮತ್ತು ಸಪ್ಪೆಬಣ್ಣೊಲವು ಕಣಗಳು (neutrophils) ಈ ಬೇನೆಯ ಹುಟ್ಟುಬಗೆಯಲ್ಲಿ ತುಂಬ ಅರಿದಾಗಿ ಪಾಲ್ಗೊಳ್ಳುತ್ತವೆ. ಜೊತೆಗೆ ’B’ ಗೂಡುಗಳು Rheumatoid factor (RF) ಎಂಬ ತನ್ನೆದುರುಕಂಟುಗಳನ್ನು ಹುಟ್ಟಿಸುತ್ತವೆ.

T&B ಗೂಡುಗಳು, ಒಗ್ಗದಿಕ ಒಪ್ಪಿಸುವ ಗೂಡುಗಳು (antigen presenting cells) ಮತ್ತು ಸುಳಿವ್ಮುನ್ನು(cytokines)ಗಳ ಒಳಗೊಳ್ಳುವಿಕೆಯಿಂದ ಕೀಲೊಳೆ ಪದರ ಹಾಗು ಎಲುಬುಗಳು ಹಾಳಾಗುತ್ತವೆ.

ನೆರವಿನ T1 (Helper T 1) CD4 ಗೂಡುಗಳು, ಡೊಳ್ಳುಮುಕ್ಕಗಳನ್ನು (macrophages) ಮತ್ತು ಕೀಲೊಳೆ ಪದರದ ನಾರುಟ್ಟುಕ ಗೂಡು (synovial fibroblasts)ಗಳನ್ನು ಚುರುಕುಗೊಳಿಸುತ್ತವೆ. ಜೊತೆಗೆ ಇವೆರಡು, ಅಂದರೆ α-ಹುಣ್ಣು ಕೊಳೆಸುಕ (TNF-α) ಮತ್ತು IL-6 (Interleukin – 6 ಎಂಬ ಒಂದು ಬಗೆಯ ಸುಳಿವ್ಮುನ್ನು)ಗಳನ್ನು ಹುಟ್ಟಿಸುತ್ತವೆ.

B – ಗೂಡುಗಳು ಒಗ್ಗದಿಕ ಒಪ್ಪಿಸುವ ಗೂಡುಗಳಾಗಿ ಕೆಲಸ ಮಾಡುತ್ತವೆ ಮತ್ತು ಇವು ಎಣಿಕೆಯಿರದಶ್ಟು ತನ್ನೆದುರುಕಗಳನ್ನು ಹುಟ್ಟಿಸುತ್ತವೆ ಹಾಗು ಸುಳಿವ್ಮುನ್ನುಗಳನ್ನು ಒಸರುತ್ತವೆ.

ಈ ಎಲ್ಲ ಆಗುಹಗಳಿಂದಾಗಿ ಕೀಲೊಳೆ ಪದರವು ನಾರುಹೊದಿಕೆ(pannus)ಯಾಗಿ ಮಾರ‍್ಪಾಡಾಗುವುದು ಮತ್ತು ಮೆಲ್ಲೆಲುಬು ಹಾಗು ಎಲುಬುಗಳ ಮೇಲೆ ಮುತ್ತಿಗೆ ಹಾಕುವುದು. ಒಟ್ಟಿನಲ್ಲಿ ಈ ಹುಸಿಕಾಪುವಿಕೆ ಮೊದಲು ಕೂಡ್ಗಾಪುವಿಕೆಗೆ ದಾರಿ ಮಾಡಿಕೊಟ್ಟು ಉರಿಯೂತವನ್ನು ತುಂಬ ಕಡುಮಟ್ಟಕ್ಕೆ ಒಯ್ಯುತ್ತದೆ. ಉರಿಯೂತ ಕೀಲೊಳೆಪದರ ಮತ್ತು ಮೆಲ್ಲೆಲುಬು ಹಾಳಾಗತೊಡಗುತ್ತವೆ. ಬರಬರುತ್ತಾ ಇದರಿಂದ ಎಲಬುಗಳು ಸವೆದು ಕೀಲುಗಳು ಕೊಂಗಾಗುತ್ತವೆ.

1111a

ಕುರುಹುಗಳು: (Clinical features)

ಕೀಲು ಊತ ಒಂದು ಮೆಲ್ಲಬೆಳೆವಂತ ಬೇನೆ. ಇದರ ಮುನ್ಕುರುಹುಗಳೆನಂದರೆ, ಬಳಲುವಿಕೆ/ದಣಿವು, ಹಸಿವಾಗದಿರುವುದು, ತೂಕ ಇಳಿಕೆ, ಹುರಿಕಟ್ಟುಗಳ ನೋವು ಮತ್ತು ಮಯ್ ನಲುವು (weakness). ಬರೀ 10% ಮಂದಿಯಲ್ಲಿ ಮಾತ್ರ ಅರಿದಾಗಿ (acute) ಕಾಣಿಸಿಕೊಳ್ಳುತ್ತದೆ.

ಕೀಲುಗಳಲ್ಲಿ ನೋವು, ಊತ ಮತ್ತು ಮುಂಜಾವು ಬಿಗಿತ (1 ಗಂಟೆಗೂ ಹೆಚ್ಚು) ಇವು ಮುಕ್ಯವಾದ ಕುರುಹುಗಳು. ಇದರಲ್ಲಿ ಬಿಗಿತವು ಕೀಲುಗಳಲ್ಲದೇ ಇಡೀ ಮಯ್ಯಲ್ಲೂ ಕಾಣಿಸಬಹುದು. ಉರಿಯೂತದಿಂದಾಗಿ ಕೀಲುಗಳ ಹೊರಮಯ್ ಬಿಸುಪು ಹೆಚ್ಚಿರುತ್ತದೆ. ಕೀಲುಗಳ ಅಲುಗಾಟವಿಲ್ಲದಿದ್ದರೂ ನೋವು ಹೆಚ್ಚಿರುತ್ತದೆ, ಅಲುಗಾಟವಾದರಂತೂ ಇನ್ನೂ ಹೆಚ್ಚುತ್ತದೆ. ಕುತ್ತು ಹೆಚ್ಚುತ್ತಾ ಹೋದಂತೆ ಕೀಲು ಅಲುಗಾಟದ ಹರವು (range of movement) ಕಡಿಮೆಯಾಗುತ್ತದೆ. ಕುರುಹುಗಳು ಸರಿಬದಿ(symmetrical)ಯಾಗಿದ್ದರೂ ಕುತ್ತು ಮೊದಲ್ಗೊಂಡಾಗ ಕೆಲೊವೊಮ್ಮೆ ಸರಿಬದಿಯಾಗಿರುವುದಿಲ್ಲ. ಹೋಗುತ್ತ, ಎರಡು ಬದಿಯ ಕೀಲುಗಳ ಒಳಗೊಳ್ಳುವಿಕೆಯಿಂದ ಸರಿಬದಿಯಾಗುತ್ತದೆ. ಕೆಲಹೊತ್ತಿನವರೆಗೆ ಕುತ್ತು ವಾಸಿಯದಂತೆ ಕಂಡರೂ, ಮತ್ತೇ ಬರುವುದು ವಾಸಿಯಾದಂತಾಗುವುದು ನಡೆದೇ ಇರುತ್ತದೆ.

ಬೇನೆ ಕಾಣಿಸಿಕೊಳ್ಳುವಂತ ಕೀಲುಗಳು:

ಮಣಿಕಟ್ಟು, ಬೆರಳ ಕೀಲುಗಳು, ಮೊಣಕಯ್, ಮಂಡಿ, ಪರಡು (ankle) ಮತ್ತು ಕಾಲ್ಬೆರಳ ಕೀಲುಗಳು.

ಕೀಲುಗಳ ಹೊರತಾದ ಕುರುಹುಗಳು:

  • ಹುರಿಕಟ್ಟಿನ ಬೇರೆಬೇರೆ ಎಡೆಗಳಲ್ಲಿ ಉರಿಯೂತ
  • ಕಣ್ಣುಗಳ ಬೇರೆ ಬೇರೆ ಎಡೆಗಳಲ್ಲಿ ಉರಿಯೂತ
  • ಉಸಿರುಚೀಲಗಳಲ್ಲಿ ನೀರ‍್ದುಂಬುವಿಕೆ
  • ನವಿರುಸಿರುಗೊಳವೆಗಳ ಉರಿಯೂತ
  • ಗುಂಡಿಗೆಯ ಬೇರೆಬೇರೆ ಎಡೆಗಳಲ್ಲಿ ಉರಿಯೂತ
  • ಹೀಗೆ ನೆತ್ತರು, ನರ, ಮೂಳೆ, ತೊಗಲು, ಹಾಲ್ರಸಗಡ್ಡೆ ಇನ್ನೂ ಹಲವಾರು ಕಡೆ ಕೇಡುಂಟು ಮಾಡುತ್ತದೆ.

ಕೀಲುಗಳ ಕೊಂಗು (Deformities):

  • ’Z’ ಕೊಂಗು (Z deformity)
  • ಕೊಕ್ಕರೆ ಕತ್ತಿನ ಕೊಂಗು (Swan neck deformity)
  • ಬೊಟೊನಿಯರ್ ಕೊಂಗು (Boutonniere deformity)
  • ಹೆಬ್ಬೆರಳ ಕೊಂಗು
  • ಮೊಣಕಯ್ ಕೊಂಗು
  • ಕಾಲುಗಳ ಕೊಂಗು

 1111

ಕುತ್ತ ತಿಳಿವು:

ನೆತ್ತರ ಒರೆ

  • (ರುಮಟೊಯ್ಡ ಪ್ಯಾಕ್ಟರ್) RF ನ ಇರುವಿಕೆ
  • ಹೆಚ್ಚಿದ ಕೆ.ತ.ಅ (ಕೆನೆಕಗಳು ತಳಮುಟ್ಟುವ ಅಳವಿ) ESR (Erythrocyte sedimentation rate)
  • ಹೆಚ್ಚಿದ C-ರಿಯಾಕ್ಟಿವ್ ಮುನ್ನು (C – Reactive protien)

X-ಕದಿರ ತಿಟ್ಟ

  • ಬೇನೆಯ ಹೊಸತರಲ್ಲಿ ಯಾವುದೇ ಮಾರ‍್ಪಾಡುಗಳನ್ನು ತೋರಿಸದಿದ್ದರೂ ಮುಂದಿನ ದಿನಗಳಲ್ಲಿ ಮೂಳೆಸವೆತ ಹಾಗು ಕೊಂಗುಗಳನ್ನು ತೋರಿಸುತ್ತದೆ.

ಮಾಂಜುಗೆ:

  • ನೋವಳಿಕಗಳು (Analgesics)
  • ಒಡಲ್ಕಟ್ಟುಕವಲ್ಲದ ಉರಿಯೂತ ಅಳಿಕಗಳು Non-steroidal anti inflammatory drugs (NSAIDs)
  • ಕುತ್ತು ಮಾರ‍್ಪಡಿಸಬಲ್ಲ ಕೀಲ್ಬೇನೆ ಎದುರುಕಗಳು Disease modifying anti-rheumatic drugs (DMARDs)

ಗುರಿಗಳು:

  • ನೋವಳಿಸುವುದು
  • ಉರಿಯೂತ ಅಳಿಸುವುದು
  • ಇಟ್ಟಳಗಳನ್ನು ಕಾಪಾಡಿ ಕೊಂಗುಗಳಾಗದಂತೆ ನೋಡಿಕೊಳ್ಳುವುದು
  • ಇಡೀ ಮಯ್ನಂಟನ್ನು ಹೊಂದದಂತೆ ಹತೋಟಿಯಲ್ಲಿಡುವುದು

 

(ಮಾಹಿತಿ ಮತ್ತು ತಿಟ್ಟ ಸೆಲೆ : dreamstime.com, netterimages.comAPI Textbook of Medicine, wikipedia.org, emedicine.medscape.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: