2016ರ ಬಂಡಿಗಳ ಸಂತೆ ಇಂದಿನಿಂದ

ಜಯತೀರ‍್ತ ನಾಡಗವ್ಡ.

Brezza

ಬಾರತ ಒಕ್ಕೂಟದ ನೆಲೆವೀಡು ದೆಹಲಿಯಲ್ಲಿ ಮತ್ತೆ ಬಂಡಿಗಳ ಸದ್ದು ಹೆಚ್ಚಿದೆ. ಬಾನೋಡತಾಣ, ರಯ್ಲು ನಿಲ್ದಾಣ, ಹೋಟೆಲ್ ಹೀಗೆ ಎಲ್ಲಿ ನೋಡಿದರೂ ಜನ ಜಂಗುಳಿಯಿಂದ ತುಂಬಿದೆ. ಹವ್ದು 13ನೇ ಬಾರತದ ಬಂಡಿಗಳ ಸಂತೆ ಆರಂಬವಾಗಿದೆ. ಎರಡು ವರುಶಕ್ಕೊಮ್ಮೆ ನಡೆಯುವ ಏಶಿಯಾದಲ್ಲೇ ಬಲುದೊಡ್ಡದೆನಿಸಿರುವ ಬಂಡಿಗಳ ಸಂತೆ ಆಟೋ ಎಕ್ಸ್ಪೋ 2016 ಮೊನ್ನೆ 3ನೇ ತಾರೀಕಿನಿಂದ ತೆರೆದುಕೊಂಡಿದೆ. ಮೊದಲೆರಡು ದಿನ ಸುದ್ದಿಗಾರರು, ಮಾದ್ಯಮದ ಮಂದಿಗೆ ಮೀಸಲಾಗಿದ್ದು ಇಂದಿನಿಂದ ಎಲ್ಲರಿಗೂ ಬಾಗಿಲು ತೆರೆದಿದೆ.

ಹಲವಾರು ಕಾರಣಗಳಿಂದ ಈ ಬಾರಿಯ ಸಂತೆ ಹೆಚ್ಚಿನ ಮಹತ್ವ ಪಡೆದಿದೆ. ಮೊದನೇಯದಾಗಿ ಒಕ್ಕೂಟ ಸರ‍್ಕಾರ ಇತ್ತಿಚೀಗೆ ನೀಡಿರುವ ಹೇಳಿಕೆ. ಬಾರತದ ದೊಡ್ಡ ಊರುಗಳಲ್ಲಿ ಹೆಚ್ಚುತ್ತಿರುವ ಬಂಡಿ ಒಯ್ಯಾಟದಿಂದ ಹೆಚ್ಚಿರುವ ಕೆಡುಗಾಳಿ ಮಟ್ಟವನ್ನು ಹತೋಟಿಯಲ್ಲಿಡಲು ಈಗಿರುವ ಕೆಡುಗಾಳಿ ಮಟ್ಟ ಬಿಏಸ್-4 (BS-IV) ರಿಂದ ನೇರವಾಗಿ 2020ರ ಹೊತ್ತಿಗೆ ಬಿಏಸ್-6 (BS-VI) ಕ್ಕೆ ಹಾರುವುದಾಗಿ ಹೇಳಿದೆ. ಹಂತ ಹಂತವಾಗಿ ಬಿಏಸ್-2, ಮುಂದೆ ಬಿಏಸ್-3/4 ಕೆಡುಗಾಳಿ ಮಟ್ಟ ಅಳವಡಿಸಿಕೊಳ್ಳುತ್ತ ಬಂದಿರುವ ಬಾರತಕ್ಕೆ ಬಿಏಸ್-5 ಕಯ್ಬಿಟ್ಟು ಒಮ್ಮೆಲೆ ಒಂದು ಹೆಜ್ಜೆ ಮುಂದೆ ನೆಗೆಯುವುದು ಅದು 3-4 ವರುಶಗಳಲ್ಲಿ ಅಂದರೆ ಸುಲಬದ ಮಾತಲ್ಲ. ಇದಕ್ಕಾಗಿ ಬಂಡಿಯಲ್ಲಿ ಅದರಲ್ಲೂ ಡಿಸೇಲ್ ಬಿಣಿಗೆಗಳಲ್ಲಿ ಸಾಕಶ್ಟು ಬದಲಾವಣೆ ಮಾಡಬೇಕು, ಬಂಡಿಯಿಂದ ಹೊರಬರುವ ನಾಕ್ಸ್, ಹಯ್ಡ್ರೋಕಾರ‍್ಬನ್ ಮುಂತಾದ ನಂಜಿನ ಕೆಡುಗಾಳಿಗಳನ್ನು ಕಡಿಮೆಗೊಳಿಸಬೇಕೆಂದರೆ ಹೊಸ ಚಳಕದ ಏರ‍್ಪಾಟುಗಳನ್ನು ಬಿಣಿಗೆಗೆ ಸೇರಿಸಬೇಕಾಗುತ್ತದೆ. ಅದಕ್ಕೆ ತಕ್ಕ ಜಾಗವನ್ನು ಬಂಡಿಯಲ್ಲಿ ಮಾಡಿಕೊಡಬೇಕು, ಇದರಿಂದ ಬಂಡಿಗಳ ಬೆಲೆ ದಿಡೀರ್‌ನೆ ಮೇಲೆರುವುದು ದಿಟ. ಅಶ್ಟೇ ಅಲ್ಲದೇ ಇಂತ ಹೊಸ ಚಳಕದ ಬಂಡಿಗಳನ್ನು ಓರೆಗೆ ಹಚ್ಚುವಂತ ಎಲ್ಲ ಸವ್ಕರ‍್ಯ, ಏರ‍್ಪಾಟುಗಳನ್ನು ಸರ‍್ಕಾರ ಹೊಂದಿರಬೇಕು. ಇದನ್ನೆಲ್ಲ ಚಿತ್ತದಲ್ಲಿಟ್ಟು ಅಗ್ಗದ ಬೆಲೆಯ ಕೊಳ್ಳುಗರಿಗೆ ಹಿಡಿಸುವಂತ ಕಾರು ಆಣಿಗೊಳಿಸ ಬೇಕಲ್ಲವೇ ಅಂತ ಹೆಚ್ಚಿನ ಬಂಡಿ ತಯಾರಕರು ಚಿಂತೆಗೀಡಾಗಿದ್ದಾರೆ. ಬಂಡಿ ತಯಾರಕರು ತಮ್ಮ ಅರಕೆಮನೆಗಳಲ್ಲಿರುವ ಹೊಸ ಹೊಳಹುಗಳನ್ನು ಮಂದಿಯ ಮುಂದಿಡಲು ಈ ಬಂಡಿಗಳ ತೋರ‍್ಪನ್ನೇ ವೇದಿಕೆಯಾಗಿಸಿ ಕೊಂಡಿದ್ದಾರೆ.

ಎರಡನೇಯದಾಗಿ, ಉಸಿರಾಡಲು ತಕ್ಕುದಲ್ಲದ ಕೆಟ್ಟ ಹೊಗೆಯಿಂದ ತುಂಬಿಕೊಂಡಿರುವ ದೆಹಲಿ ಊರಿನಲ್ಲಿ 2ಲೀ ಅಳತೆಗಿಂತ ದೊಡ್ಡದಿರುವ ಡಿಸೇಲ್ ಬಿಣಿಗೆಯ ಬಂಡಿಗಳು ಓಡಾಡುವಂತಿಲ್ಲವೆಂದು ಇತ್ತಿಚೀಗೆ ಅಲ್ಲಿನ ಸರ‍್ಕಾರ ತಡೆ ಹೇರಿದೆ. ಇದು ಹಲವು ಬಂಡಿ ತಯಾರಕರ ಮೇಲೆ ಒತ್ತಡ ತಂದಿದೆ. ಕೊನೆಯದಾಗಿ ಕಳೆದ ವರುಶ ಬೆಳಕಿಗೆ ಬಂದ ಪೋಕ್ಸ್ ವ್ಯಾಗನ್ ಕೂಟದವರು ನಡೆಸಿರುವ ಹೊಗೆಯ ಮೋಸದಾಟ. ಇದರಿಂದ ಬಂಡಿಯ ಕೆಡುಗಾಳಿ ಓರೆಗೆ ಹಚ್ಚಲು ಬಿಗಿಯಾದ ಕಟ್ಟುಪಾಡುಗಳನ್ನು ತಂದೊಡ್ಡುವ ಸಾದ್ಯತೆ ಇದೆ.

ಇವೆಲ್ಲವೂಗಳನ್ನು ಚೆನ್ನಾಗಿಬಲ್ಲ ಬಿಡಿಬಾಗ ತಯಾರಕರ ಕೂಟಗಳು ತಮ್ಮ ಹೊಚ್ಚ ಹೊಸ ಚಳಕ-ಅರಕೆಗಳ ಮೂಲಕ ಬಂಡಿ ತಯಾರಕರ ಕಣ್ಣ್ಸೆಳೆಯುವ ತಂತ್ರ ಹಾಕಿವೆ. ಹೊಸ ಕಟ್ಟುಪಾಡುಗಳಿಗೆ ತಕ್ಕಂತೆ ಬಾಗಗಳನ್ನು ತಯಾರಿಸಿ ಕಡಿಮೆ ಕೆಡುಹೊಗೆ ಉಗುಳುವ ಬಂಡಿ ನಿಮ್ಮದಾಗಿರಲಿದೆ ಎಂದು ತೋರಿಸಲು ಬಿಡಿಬಾಗ ತಯಾರಕರು ನಾಮುಂದು ತಾಮುಂದು ಎಂದು ಗುದ್ದಾಟಕ್ಕೆ ಸಿದ್ದರಾಗಿದ್ದಾರೆ.

ವಿಶೇಶವಾಗಿ ಬಿಡುಗಡೆಗೊಳ್ಳುತ್ತಿರುವ ಬಂಡಿಗಳು:ಬಾರತದ ಮೊಟ್ಟ ಮೊದಲ ಸ್ತಾನದ ಕಾರು ತಯಾರಕ ಮಾರುತಿ ಸುಜುಕಿ ಮಳಿಗೆಯತ್ತ ನೋಡಿದರೆ ಸಾಲು ಸಾಲು ಹೊಸ ಬಂಡಿಗಳು ನಿಮ್ಮನ್ನು ಕಯ್‌ಬೀಸಿ ಕರೆಯಲಿವೆ. ಅದರಲ್ಲೂ ಮುಕ್ಯವಾಗಿ ವಿಟಾರಾ ಬ್ರೆಜಾ (Vitara Brezza). ವಿಟಾರಾ ಬ್ರೆಜಾ ಮೂಲಕ ಬಂಡಿ ತೋರ‍್ಪಿನ ಹೊತ್ತಿನಲ್ಲೇ ತನ್ನ ಹೊಸ ಕಾರೊಂದನ್ನು ಬಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಮಾರುತಿ. ಏರುತ್ತಿರುವ ಕಿರು ಆಟೋಟದ ಬಂಡಿಗಳ ಪಯ್ಪೋಟಿಗೆ ವಿಟಾರಾ ಬ್ರೆಜಾವನ್ನು ದಾಳವಾಗಿ ಇಳಿಸಿದೆ ಮಾರುತಿ. ಬ್ರೆಜಾದಲ್ಲಿ 1.3ಲೀ ಅಳತೆಯ ಎಸ್‌ಡಿಇ ಡಿಸೇಲ್ ಬಿಣಿಗೆಯಿರಲಿದೆ. ಈ ಬಂಡಿಯು ಆರು ಬಗೆಯ ಆಯ್ಕೆಗಳಲ್ಲಿ ಸಿಗಲಿದ್ದು ಎಲ್ಲದಕ್ಕೂ 5 ವೇಗದ ಓಡಿಸುಗನಿಡಿತದ ಸಾಗಣಿ ಒದಗಿಸಲಾಗಿದೆ. ತನ್ನಿಡಿತದ (Automatic)ಮತ್ತು ಅರೆ-ತನ್ನಿಡಿತದ ಸಾಗಣಿ (Automatic manual transmission) ನೀಡದೇ ಇರುವುದು ಅಚ್ಚರಿಯ ಸಂಗತಿಯಾದರೆ ವಿಟಾರಾ ಬ್ರೆಜಾ ಪೆಟ್ರ‍ೋಲ್ ಬಿಣಿಗೆಯ ಆಯ್ಕೆ ಇಲ್ಲದೇ ಇರುವುದು ಮತ್ತೊಂದು ಅಚ್ಚರಿ.

Brezza2

ಮಾರುತಿ ಸುಜುಕಿಯವರ ಮಳಿಗೆಯಲ್ಲಿ ಕಂಡು ಬರುವ ಮತ್ತೊಂದು ವಿಶೇಶ ಬಂಡಿಯೆಂದರೆ ಇಗ್ನಿಸ್ (Ignis). ಟೊಕಿಯೋ ಮೋಟಾರ್ ಶೋದಲ್ಲಿ ಕಳೆದ ವರುಶ ಕಾಣಿಸಿಕೊಂಡಿದ್ದ ಸುಜುಕಿ ಇಗ್ನಿಸ್ ಬಾರತದಲ್ಲೂ ಕಾಲಿಡುವುದು ಕಚಿತವಾಗಿದೆ. 2016ರ ದೀಪಾವಳಿ ಹೊತ್ತಿಗೆ ಇಗ್ನಿಸ್ ಬಂಡಿಯು ಬಾರತದ ಕೊಳ್ಳುಗರಿಗೆ ಸಿಗುವ ಸಾದ್ಯತೆಯಿದೆ. ಜಪಾನ್ ಸೇರಿದಂತೆ ಹೊರನಾಡುಗಳಲ್ಲಿ ಒಂದು ಕಾಲು ಲೀಟರ್ ಅಳತೆಯ ಪೆಟ್ರ‍ೋಲ್ ಬಿಣಿಗೆ ಇರಲಿದ್ದರೆ ಬಾರತಕ್ಕೆ ಹೆಸರುವಾಸಿ 1.2ಲೀಟರ್‌ನ ಕೆ12 ಬಿಣಿಗೆ ಜೋಡಿಸಿಕೊಂಡು ಮಾರಾಟ ಮಾಡುವ ಸುದ್ದಿಯಿದೆ.

ignis

ಟಾಟಾ ಮಳಿಗೆಯತ್ತ ಕಣ್ಣು ಹಾಯಿಸಿದರೆ ನೋಡಲೆರಡು ಕಣ್ಣು ಸಾಲದು. ಟಾಟಾ ಕಾರು ಬಂಡಿಗಳಲ್ಲದೇ ತನ್ನೊಡೆತನದ ದುಬಾರಿ ಜಾಗ್ವಾರ್ ಲ್ಯಾಂಡ್‌ರೋವರ್ ಕಾರು ಮತ್ತು ಟಾಟಾ ಟ್ರಕ್, ಬಸ್‌ನಂತ ಬಗೆ ಬಗೆಯ ಸಾರಿಗೆಯ ವಿಬಾಗದಲ್ಲೂ ಎಂದಿನಂತೆ ಬೇರೆ ಬೇರೆ ಮಳಿಗೆ ಹೊಂದಿದೆ. ಇನ್ನೇನೂ ಬಿಡುಗಡೆಗೆ ಕಾದಿರುವ ಟಾಟಾ ಜೀಕಾ(Zica) ಕಾರಿನತ್ತ ಎಲ್ಲರೂ ಕಣ್ಣು ನೆಟ್ಟಿದ್ದಾರೆ. ಬಂಡಿ ತೋರ‍್ಪಿಗಿಂತ ಮುಂಚೆಯೇ ಬಿಡುಗಡೆಯಾಗಬೇಕಿದ್ದ ಈ ಬಂಡಿ, ಸಂತೆಯಲ್ಲಿ ಮಂದಿಯ ಮುಂದೆ ಬಂದರೂ ಮಾರ‍್ಚ್ ವರೆಗೂ ಮಾರಾಟಗೊಳ್ಳುವ ಸುದ್ದಿಯಿಲ್ಲ. ಪದೇ ಪದೇ ಮುಂದಕ್ಕೆ ತಳ್ಳಲ್ಪಟ್ಟಿರುವ ಬಿಡುಗಡೆಯ ದಿನಾಂಕದಿಂದ ಕಂಗೆಟ್ಟಿರುವ ಟಾಟಾ ಕೂಟಕ್ಕೆ ಜೀಕಾ(Zika) ಹೆಸರಿನ ಕಂಟಕ ಇದೀಗ ಕಾಡುತ್ತಿದೆ. ಇತ್ತಿಚೀಗೆ ಬ್ರೆಜಿಲ್ ದೇಶದಲ್ಲಿ ಕಾಣಿಸಿಕೊಂಡಿರುವ ಮೆದುಳಿನ ಜ್ವರದ ಸಾವು ತಂದಿಡುವ ವಯ್ರಸ್ ನಂಜುಳದ ಹೆಸರು ಜೀಕಾ(Zika) ಎಂದಿದ್ದು ಟಾಟಾ ಸಂಸ್ತೆಗೆ ಹೆಸರು ಬದಲಾಯಿಸುವಂತೆ ಮಾಡಿದೆ. ಬಂಡಿ ತೋರ‍್ಪಿನ ನಂತರ ಹೊಸ ಹೆಸರು ಪಡೆದು ಜೀಕಾ ಮಾರಾಟಕ್ಕೆ ಸಿದ್ದವಾಗಿರಲಿದೆ. ಪುಟಾಣಿ ಕಾರುಗಳ ಪಯ್ಪೋಟಿಗೆ ಟಾಟಾದವರ ಈ ಹೊಸ ಬಂಡಿ ತೊಡೆ ತಟ್ಟಲಿದೆ. 1.2 ಲೀಟರ್ ಅಳತೆಯ 3 ಉರುಳೆಯ ಪೆಟ್ರೋಲ್ ಬಿಣಿಗೆ(Engine) 84 ಕುದುರೆಬಲದ ಕಸುವು ನೀಡಿ ಜೀಕಾವನ್ನು ಮುನ್ನುಗ್ಗಿಸಲಿದೆ. ಇದರಂತೆ ಡಿಸೇಲ್ ಮಾದರಿಗೆ 1.05ಲೀ. ಅಳತೆಯ 69 ಕುದುರೆಬಲದ ಬಿಣಿಗೆ ಸಾರತಿಯಾಗಿರಲಿದೆ. ಸೊಗಸಾದ ಮಯ್ಮಾಟ, ಒಳನೋಟ ಮತ್ತು ಅಗ್ಗದ ಬೆಲೆಯ ಮೂಲಕ ಗ್ರ್ಯಾಂಡ್ ಆಯ್-10 , ಸೆಲೆರಿಯೋ ಮತ್ತು ಪಿಗೋ ಬಂಡಿಗಳಿಗೆ ಜೀಕಾದ ಕಾಟ ತಪ್ಪಿದ್ದಲ್ಲ ಎನ್ನುತ್ತಾರೆ ಉದ್ಯಮದ ಮಂದಿ.  ಕಿರು ಆಟೋಟದ ಬಂಡಿಗಳಲ್ಲಿ ನೆಕ್ಸಾನ್ (Nexon) ಮತ್ತು ಆಟೋಟದ ಬಂಡಿಯಾಗಿ ಹೆಕ್ಸಾಗಳು (Hexa) ಟಾಟಾ ಮಳಿಗೆಯಲ್ಲಿ ಪಳಪಳಿಸುತ್ತಿವೆ. ಇದೇ ವರುಶದ ಕೊನೆಗೆ ಇವುಗಳು ಮಾರಾಟಕ್ಕೆ ಅಣಿಗೊಳ್ಳುತ್ತಿವೆ.

Zica

ಹೋಂಡಾ ಕೂಟವೂ ಹೊಸದಾದ ಕಿರು ಆಟೋಟದ ಬಂಡಿ ಬಿಆರ್-ವಿ(BR-V) ಯನ್ನು ತೋರ‍್ಪಿನಲ್ಲಿ ಹೊರಹಾಕಿದೆ. ಕಳೆದ ಕೆಲವು ತಿಂಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಬಿಆರ್-ವಿ ಈ ವರುಶದ ಮೊದಲಾರ‍್ದದಲ್ಲೇ ಮಾರಾಟಕ್ಕೆ ಸಿಗಲಿದೆ. ಕ್ರೇಟಾ, ಡಸ್ಟರ್, ಎಸ್-ಕ್ರಾಸ್, ಎಕೋಸ್ಪೋರ‍್ಟ್ ಗಳಿಗೆ ಹೋಂಡಾ ಬಿಆರ್-ವಿ ಎದುರಾಳಿಯಾಗಿ ನಿಲ್ಲಲಿದೆ. ಸಿಟಿ, ಅಮೇಜ್ ಮತ್ತು ಮೊಬಿಲಿಯೊಗಳಿಗೆ ಕಸುವು ನೀಡುವ 1.5 ಲೀಟರ್ ಅಳತೆಯ ಡಿಸೇಲ್ ,ಪೆಟ್ರೋಲ್ ಬಿಣಿಗೆಗಳು ಇದರಲ್ಲೂ ಮುಂದುವರೆಸಿಕೊಂಡು ಹೋಗಲಿದೆ ಹೋಂಡಾ.

ಮಹೀಂದ್ರಾ ಕೂಡ ಯಾರಿಗಿಂತ ಕಡಿಮೆಯಿಲ್ಲ ಎನುವಂತ ಮಾದರಿಗಳನ್ನು ತೋರ‍್ಪಡಿಸುತ್ತಿದೆ. ಎಕ್ಸ್‌ಯುವಿ ಎರೋ ಎಂಬ ಹೊಳಹಿನ ಕಾರು(XUV Aero), ಮಹೀಂದ್ರಾ ಕೆಲವರುಶಗಳ ಹಿಂದೆ ಕೊಂಡುಕೊಂಡ ಕೊರಿಯಾ ಮೂಲದ ಸ್ಸ್ಯಾಂಗ್‌ಯಾಂಗ್ ಕೂಟದ ತಿವೋಲಿ (Ssangyong Tivoli) ಕಾರು ಮತ್ತು ಮಿಂಚಿನ ಬಂಡಿ ಇ2ಒ(e2O) ಗಳು ನೋಡುಗರ ಸೆಳೆಯದೇ ಇರುವುದಿಲ್ಲ. ಕಳೆದ ತಿಂಗಳಶ್ಟೇ ಕೆಯುವಿ ಬಂಡಿಯನ್ನು ಹೊರತಂದಿರುವ ಮಹೀಂದ್ರಾ 1.6ಲೀ ಬಿಣಿಗೆಯ ತಿವೋಲಿ ಕಾರನ್ನು ಇದೇ ವರುಶ ಬಾರತದ ಮಾರುಕಟ್ಟೆಗೆ ತೆರೆದಿಡುವ ಮನಸ್ಸು ಮಾಡಿದೆ.

ಹ್ಯುಂಡಾಯ್‌ನತ್ತ ಸಾಗಿದರೆ ಬಾರತಕ್ಕೆ ಮೊದಲ ಬಾರಿ ಅಡಿಯಿಡಲಿರುವ ಮೂರನೇಯ ತಲೆಮಾರಿನ ಆಟೋಟದ ಬಂಡಿ ಟುಸ್ಕಾನ್ (Tuscon SUV) ಕಾಣಸಿಗುತ್ತಿದೆ. ಇದರೊಂದಿಗೆ ಪ್ರಮುಕವಾದುದೆಂದರೆ ಹೆಚ್‌ಎನ್‌ಡಿ-14(HND-14) ಹೆಸರಿನ ಕಿರು ಆಟೋಟದ ಬಂಡಿ ಮತ್ತು ಸೋನಾಟಾ(Sonata) ಬೆರಕೆ ಬಂಡಿ ಮಾದರಿ.

ಅಮೇರಿಕಾದ ಪೋರ‍್ಡ್ ಸಂಸ್ತೆ ಇದೇ ಮೊದಲಬಾರಿಗೆ ಹೆಸರುವಾಸಿ ಮುಸ್ಟ್ಯಾಂಗ್ ಜಿಟಿ (Ford Mustang GT) ಆಟೋಟದ ಕಾರನ್ನು ಬಾರತ ಕಾರೊಲವಿಗರ ಮುಂದೆ ತಂದಿದ್ದು ಇದು ವರುಶದ ಮೊದಲಾರ‍್ದಲ್ಲಿ ಪೋರ‍್ಡ್‌ನ ಶೋರೂಮ್‌ಗಳಲ್ಲಿ ಸಿದ್ದ. ಜಗತ್ತಿನೆಲ್ಲೆಡೆ 90ಲಕ್ಶಕ್ಕೂ ಹೆಚ್ಚು ಮಾರಾಟಗೊಂಡು ದಾಕಲೆ ಬರೆದಿರುವ ಮುಸ್ಟ್ಯಾಂಗ್ ಕಾರು ಆಟೋಟಕ್ಕೆ ಹೇಳಿ ಮಾಡಿಸಿದಂತಿದೆ. ಈಗಾಗಲೇ ಅಯ್ದು ತಲೆಮಾರು ದಾಟಿ, ಬಾರತಕ್ಕೆ ಆರನೇಯ ತಲೆಮಾರಿನ ಮೂಲಕ ಮುಸ್ಟ್ಯಾಂಗ್ ಅಡಿಯಿಡುತ್ತಿದೆ. 5ಲೀಟರ್ ದೊಡ್ಡ ಬಿಣಿಗೆಯಿಂದ 420 ಕುದುರೆಬಲ ಹೊರಡಿಸಿಲಿರುವ ಮುಸ್ಟ್ಯಾಂಗ್ 6 ವೇಗದ ತನ್ನಿಡಿತದ ಸಾಗಣಿ ಅಳವಡಿಸಿಕೊಂಡು ನಿಮ್ಮ ಓಡಾಟಕ್ಕೆ ರೆಕ್ಕೆಯಾಗುವುದುರಲ್ಲಿ ಎರಡು ಮಾತಿಲ್ಲ. ಪೋರ‍್ಡ್ ಮಳಿಗೆಯಲ್ಲಿ ಹೊಸ ಮೊಗತೊಟ್ಟ ಎಂಡೇವರ್ (Endeavor) ಕೂಡ ಜಗಮಗಿಸುತ್ತಿದ್ದು ಕೆಲವೇ ದಿನಗಳಲ್ಲಿ ಇದು ಬಿಡುಗಡೆಯ ಬಾಗ್ಯ ಕಂಡುಕೊಳ್ಳುವುದಂತೆ.

mustang1

ಇವಿಶ್ಟೇ ಅಲ್ಲದೇ ಪಿಯಟ್ ಕ್ರಾಯ್ಸಲರ್ ಗುಂಪಿನ(Fiat Chrysler Automobiles) ಆಟೋಟ ಬಳಕೆಯ  ಹೆಸರುವಾಸಿ ಜೀಪ್‌ನ ಗ್ರ್ಯಾಂಡ್ ಶೆರೋಕಿ (Grand Cherokee) ಮತ್ತು ವ್ರ್ಯಾಂಗಲರ್ (Wrangler) ಬಾರತದಲ್ಲಿ ಮಿಂಚಲು ತುದಿಗಾಲ ಮೇಲೆ ನಿಂತಿವೆ. ಬಾರತಕ್ಕೆಂದೇ ಪೋಕ್ಸ್ ವ್ಯಾಗನ್ ತಯಾರಿಸಿರುವ ಕಿರು ಸೇಡಾನ್ ಅಮಿಯೋ (Ameo)ಕೂಡ ಇಂದು ಬಂಡಿ ತೋರ‍್ಪಿನಲ್ಲಿ ಬಿಡುಗಡೆಯಾಗಿದ್ದು ಎಲ್ಲೆಡೆ ಚರ‍್ಚೆಗೆ ಒಳಗಾಗಿದೆ. ಟೊಯೋಟಾದ ಮಳಿಗೆಯಲ್ಲಿ ಹೊಸ ಮೊಗ ಹಾಗೂ ಬಿಣಿಗೆ ಪಡೆದ ಇನ್ನೋವಾ ಇದೀಗ ಇನ್ನೋವಾ ಕ್ರಿಸ್ಟಾ (Innova Crysta) ಆಗಿ ಕಾಣಸಿಗಲಿದೆ.ಜಿಎಮ್ ಶೆವರ‍್ಲೆಯ ಹೊಸದಾದ ಬೀಟ್ ಆಕ್ಟೇವ್ (Beat Activ), ಸ್ಪಿನ್ (Spin), ಬೀಟ್ ಎಸ್ಸೆನ್ಸಿಯಾಗಳು (Beat Essentia) ನೋಡುಗರಿಗೆ ಹಬ್ಬವುಂಟು ಮಾಡುತ್ತಿವೆ. ರೆನೋ, ಪಿಯಟ್, ನಿಸ್ಸಾನ್, ಇಸುಜು ಮುಂತಾದ ಕೂಟದ ಹೊಳಹಿನ, ಹೊಗೆಯುಗಳದ ಬೆರಕೆ ಮತ್ತು ಅರೆಬೆರಕೆ ಬಂಡಿಗಳು ಮತ್ತು ಈಗಿರುವ ಬಂಡಿಗಳು ಹೊಸ ಮೊಗತೊಟ್ಟು ಬಂಡಿ ಸಂತೆಯಲ್ಲಿ ಮಿಂಚುತ್ತಿವೆ.

Ameo

ಮರ‍್ಸಿಡಿಸ್, ಅವ್ಡಿ, ಬಿಎಮ್‌ಡಬ್ಲ್ಯೂ, ಪೋರ‍್ಸ್, ಪೆರಾರಿ ಹೀಗೆ ಹತ್ತು ಹಲವು ದುಬಾರಿ ಕಾರು ತಯಾರಕರು ಸಂತೆಯಲ್ಲಿ ಬಾಗವಹಿಸಿ ದುಬಾರಿ ಕಾರುಕೊಳ್ಳುಗರಿಗೆ ತಮ್ಮಲ್ಲಿರುವ ಆಯ್ಕೆಯನ್ನು ತೋರ‍್ಪಡಿಸುತ್ತಿವೆ. ಯಮಹಾ(Yamaha), ಟಿವಿಎಸ್(TVS), ರಾಯಲ್ ಎನ್‌ಪೀಲ್ಡ್(Royal Enfield), ಸುಜುಕಿ(Suzuki), ಬೆನೆಲ್ಲಿ (Benelli), ಇಂಡಿಯಾನಾ(Indiana), ಬಜಾಜ್(Bajaj), ಹೋಂಡಾ(Honda), ಟ್ರಂಪ್(Triumph), ಹಾರ‍್ಲೇ ಡೆವಿಡ್ಸನ್ (Harley Davidson) ಮುಂತಾದವರು ತಮ್ಮ ತಮ್ಮ ಹೊಸ ಇಗ್ಗಾಲಿ ಬಂಡಿಗಳನ್ನು(Two wheeler) ಜನರ ಮುಂದಿಟ್ಟಿದ್ದಾರೆ.

ಇದೇ 9ನೇಯ ತಾರೀಕಿನವರೆಗೂ ಸಂತೆ ಜರುಗಲಿದ್ದು ನೀವು ದೆಹಲಿಗೆ ತೆರಳಿದ್ದರೆ ಬಂಡಿ ತೋರ‍್ಪನ್ನು ತಪ್ಪಿಸಿಕೊಳ್ಳದಿರಿ. ಹೆಚ್ಚಿನ ವಿವರ ಪಡೆಯಲು www.autoexpo.in ಈ ಮಿಂದಾಣಕ್ಕೊಮ್ಮೆ ಬೇಟಿ ನೀಡಿ.

(ಮಾಹಿತಿ ಮತ್ತು ತಿಟ್ಟ ಸೆಲೆ: autocarindia.com, etauto.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: