ತಟ್ಟೆ ಇಡ್ಲಿ ಜೊತೆಗೆ ಈರುಳ್ಳಿ ಸಾಂಬಾರನ್ನು ಮಾಡುವ ಬಗೆ

ಕಲ್ಪನಾ ಹೆಗಡೆ.

20160122_093855

ಬೇಕಾಗುವ ಪದಾರ‍್ತಗಳು:

1. 1 ಲೋಟ ಉದ್ದಿನ ಬೇಳೆ
2. 3 ಲೋಟ ಇಡ್ಲಿ ರವೆ
3. 1 ಚಮಚ ಸಕ್ಕರೆ
4. ರುಚಿಗೆ ತಕ್ಕಶ್ಟು ಉಪ್ಪು

ಮಾಡುವ ಬಗೆ:
ಮೊದಲು ಉದ್ದಿನಬೇಳೆಯನ್ನು 4 ತಾಸುಗಳ ಕಾಲ ನೀರಿನಲ್ಲಿ ನೆನೆಸಿಕೊಳ್ಳಿ ಆನಂತರ ಅದನ್ನು ಗ್ರೈಂಡರ್ ನಲ್ಲಿ ಚೆನ್ನಾಗಿ ನುಣ್ಣಗೆ ರುಬ್ಬಿದ ನಂತರ ಇಡ್ಲಿ ರವೆಗೆ ನೀರು ಹಾಕಿ ತೊಳೆದು ಗ್ರೈಂಡರ್ ಗೆ ಹಾಕಿ 1 ನಿಮಿಶಗಳ ಕಾಲ ರುಬ್ಬಿಕೊಳ್ಳಿ. ಆನಂತರ ಒಂದು ಪಾತ್ರೆಗೆ ಹಾಕಿ ರಾತ್ರಿ ಪ್ರಿಜ್ಜಿನಲ್ಲಿ ಇಡದೆ ಹೊರಗಡೆ ಇಡಿ. ಬೆಳಗ್ಗೆ ಹಿಟ್ಟಿಗೆ ಉಪ್ಪು, ಸಕ್ಕರೆ ಹಾಕಿ ಹದ ಮಾಡಿ ತಟ್ಟೆಗೆ ಎಣ್ಣೆಯನ್ನು ಸವರಿ ಹಿಟ್ಟನ್ನು ಹಾಕಿ ಕುಕ್ಕರಿನಲ್ಲಿ ಬೇಯಲು ಇಡಿ. ವೇಟ್ ಬದಲು ಲೋಟವನ್ನು ಮುಚ್ಚಿಡಿ. 20 ನಿಮಿಶಗಳ ಕಾಲ ಬೇಯಲು ಬಿಡಿ. ಆಮೇಲೆ ಸ್ವಲ್ಪ ಆರಿದ ನಂತರ ನೀದಾನವಾಗಿ ಮಗಚಿ ಕಾಯಿಂದ ತೆಗೆದು ತಟ್ಟೆಗೆ ಹಾಕಿ ಈರುಳ್ಳಿ ಸಾಂಬಾರ ಹಾಗೂ ಕಾಯಿ ಚಟ್ನಿಯೊಂದಿಗೆ ತಿನ್ನಲು ನೀಡಿ.

ಈರುಳ್ಳಿ ಸಾಂಬಾರ ಮಾಡುವ ಬಗೆ:

ಬೇಕಾಗುವ ಪದಾರ‍್ತಗಳು:

1. ಅರ‍್ದ ಕೆ.ಜಿ. ಚಿಕ್ಕ ಸಾಂಬಾರ ಈರುಳ್ಳಿ
2. 3 ಆಲೂಗಡ್ಡೆ
3. ಕಾಲು ಕೆ.ಜಿ ತೊಗರಿ ಬೇಳೆ
2. 8 ರಿಂದ 10 ಒಣಮೆಣಸಿನಕಾಯಿ
3. 6 ಚಮಚ ದನಿಯಾ (ಕೊತ್ತುಂಬರಿ )
4. 1 ಚಮಚ ಜೀರಿಗೆ
5. 4 ಕಾಳು ಮೆಂತ್ಯ
6. ಕಾಲು ಚಮಚ ಹಳದಿಪುಡಿ
7. ಇಂಗು
8. ಎಣ್ಣೆ
9. ಹುಣಸೆಹಣ್ಣಿನ ರಸ 2 ಚಮಚ
10. 1 ಚಮಚ ಬೆಲ್ಲ
11. ರುಚಿಗೆ ತಕ್ಕಶ್ಟು ಉಪ್ಪು
12. ತೆಂಗಿನ ಕಾಯಿ ತುರಿ
13. ಕರಿಬೇವು, ಕೊತ್ತುಂಬರಿ ಸೊಪ್ಪು

ಮೊದಲು ಕುಕ್ಕರಿನಲ್ಲಿ ತೊಗರಿಬೇಳೆಯನ್ನು ಬೇಯಿಸಿಕೊಳ್ಳಿ. ಆನಂತರ ಸಾಂಬಾರ ಈರುಳ್ಳಿಯ ಸಿಪ್ಪೆಯನ್ನು ತೆಗೆದು ಅದಕ್ಕೆ ನೀರು ಹಾಗೂ ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ. ಜೊತೆಗೆ ಆಲೂಗಡ್ಡೆಯನ್ನು ಹೋಳುಗಳನ್ನಾಗಿ ಮಾಡಿ ಹಾಕಿ. ಆಮೇಲೆ ಒಂದು ಬಾಣಲೆಗೆ ಒಣಮೆಣಸಿನಕಾಯಿ, ದನಿಯಾ, ಜೀರಿಗೆ, ಮೆಂತ್ಯ, ಇಂಗು, ಹಳದಿ ಪುಡಿ, ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ. ಆನಂತರ ತೆಂಗಿನ ಕಾಯಿ ತುರಿಯನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಆಮೇಲೆ ರುಬ್ಬಿದ ಮಸಾಲೆಯನ್ನು ಹಾಗೂ ಈ ಮೊದಲು ಬೇಯಿಸಿದ ತೊಗರಿ ಬೇಳೆಯನ್ನು ಮೊದಲು ಬೇಯಿಸಿಕೊಂಡ ಈರುಳ್ಳಿ, ಆಲೂಗಡ್ಡೆ ಜೊತೆಗೆ ಹಾಕಿಕೊಳ್ಳಿ. ಆಮೇಲೆ ಹುಣಸೆಹಣ್ಣಿನ ರಸ, ಬೆಲ್ಲ, ಉಪ್ಪು, ಕರಿಬೇವು ಹಾಗೂ ಕೊತ್ತುಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ. ಕೊನೆಯಲ್ಲಿ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಇಂಗು, 2 ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ತಯಾರಿಸಿದ ಈರುಳ್ಳಿ ಸಾಂಬಾರ ಇಡ್ಲಿಯೊಂದಿಗೆ ಹಾಗೂ ಅನ್ನದ ಜೊತೆಗೂ ಸವಿಯಲು ಬಲು ಸೊಗಸಾಗಿರತ್ತೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: