‘ಚೆರಗ ಚೆಲ್ಲೂದು’ ಅಂದ್ರೇನು ಗೊತ್ತಾ?

ರೂಪಾ ಪಾಟೀಲ್.

charaga1

‘ಎಳ್ಳಮವಾಸಿ’ ಅಂದ್ರ ಎಳ್ಳ ಕಾಳಶ್ಟು ಬಿಸಿಲು ಬಂತು ಅಂತ ನಮ್ ಅಜ್ಜಿ-ಅವ್ವಂದಿರು ಹೇಳ್ತಿದ್ರು. ಈ ಎಳ್ಳಮವಾಸಿ ಬ್ಯಾಸಿಗಿ ದಿವಸ ಕಾಲಿಡೋ ಮುನ್ನೆಚ್ಚರಿಕೆ ಕರೆಗಂಟೆ ಅಂತ ಹೇಳಬಹುದು. ಈ ಹಬ್ಬಾನ ಉತ್ತರ ಕರ‍್ನಾಟಕದ ಹಳ್ಳಿಗಳ ಕಡೆ ಬಾಳ ಕುಶಿ, ಸಡಗರದಿಂದ ಆಚರಣಿ ಮಾಡ್ತಾರ. ರೈತರು ತಮ್ಮ ಹೊಲದಾಗ ಬೆಳೆದ ಬೆಳೆಗಳಿಗೆ ಹೊಡಿಗಿ ಪೂಜಿ ಮಾಡ್ತಾರ ಮತ್ತ ನೈವೇದ್ಯ ಮಾಡಿ ಚೆರಗ ಚೆಲ್ತಾರ.

ಎಳ್ಳಮವಾಸಿ ಹಬ್ಬ ಇನ್ನು ಒಂದ್ ದಿನ ಇರ‍್ಲಿಕ್ ಮೊದ್ಲ ಕಾಯಿಪಲ್ಲೆ ಸೋಸು ದಿನ ಅಂತ ಮಾಡ್ತಾರ. ಕಾಯಿಪಲ್ಲೆ ಸೋಸು ದಿನ ಅಂದ್ರ ಹಬ್ಬದ ತಯಾರಿ ಅಂತ ಹೇಳಬಹುದು. ಈ ದಿನ ಹಬ್ಬಕ್ಕಂತ ಎಲ್ಲ ನಮೂನಿ ಕಾಯಿಪಲ್ಯೆ, ಕಾಳುಗಳನ್ನು ಹಸನು ಮಾಡು ಕೆಲಸ ಶುರು ಆಗ್ತದ. ಪುಂಡಿಪಲ್ಯೆ, ಮೆಂತೆಪಲ್ಯೆ, ಹುಂಚಿ(ಹುಣಸೆ)ಪಲ್ಯೆ, ಗಜ್ಜರಿ, ಸೌತಿಕಾಯಿ, ಬದನಿಕಾಯಿ, ಕುಂಬಳಕಾಯಿ, ಬಾರಿಕಾಯಿ, ಹೀರಿಕಾಯಿ ಒಂದಾ ಎರಡಾ… ಇಶ್ಟಲ್ಲದ ಕಾಳುಗಳ ಹಸನು ಮಾಡುದೂ ಅವತ್ತ. ಅವರಿಕಾಳು, ಅಲಸಂದಿ, ತೊಗರಿ, ಹೆಸರು, ಕಡಲಿ, ಮಡಕಿಕಾಳು ಹಿಂಗ ಎಲ್ಲಾ ತರದ ಕಾಳುಗಳನ್ನ ಹಸನು ಮಾಡ್ತಾರ. ಮನ್ಯಾಗಿನ ಎಲ್ಲಾ ಬಾಂಡೆ ತೊಳದು ಹಬ್ಬಕ್ಕ ಅಂತ ಹೊಸ ನೀರು ತುಂಬಿಸ್ಕೊತಾರ.

ಇದಾದ ಮಾರನೇ ದಿನಾನ ಎಳ್ಳಮವಾಸಿ ಹಬ್ಬ. ಹಬ್ಬದ ದಿನ ಹೊತ್ತು ಹುಟ್ಟುಕಿಂತ ಮೊದಲ ಲಗುನ(ಬೇಗ) ಎದ್ದು ಹಬ್ಬದ ಅಡುಗಿ ಕೆಲಸ ಚಾಲೂ ಮಾಡ್ತಾರ. ಬೂಮಿ ತಾಯಿಯ ಮಕ್ಕಳಂಗ ಇರೋ ಪಸಲಿಗೆ(ಬೆಳೆಗಳಿಗೆ) ಈ ಹಬ್ಬದ ಮೊದಲ ನೈವೇದ್ಯ. ಎಲ್ಲಾ ತರದ ಕಾಯಿಪಲ್ಯೆ ಮತ್ತ ಕಾಳುಗಳನ್ನು ಸೇರಿಸಿ ಮಾಡೋ ಗರಗಟದ ಪಲ್ಯೆ ಎಳ್ಳಮವಾಸಿಯ ವಿಶೇಶ. ಗರಗಟದ ಪಲ್ಯೆದ ಜೊತೆ ಸಜ್ಜಿ ಕಡುಬು, ಶೇಂಗಾ ಚಟ್ನಿ, ಅಗಸಿ ಚಟ್ನಿ ರುಚಿ ಎಂತಾದ್ದು ಅಂತ ತಿಂದವರಿಗ ಗೊತ್ತು! ಇಶ್ಟ ಅಲ್ಲ, ಸಜ್ಜಿ ರೊಟ್ಟಿ, ಗಟ್ಟಿ ಮೊಸರು, ಶೇಂಗಾ ಹೋಳಿಗಿ ಈ ಹಬ್ಬಕ್ಕ ತಪ್ಪಿದ್ದಲ್ಲ. ನೈವೇದ್ಯಕ್ಕ ಕಡಲಿಬ್ಯಾಳಿ ಹೂರಣದ ಹೋಳಿಗಿನು ತಪ್ಪಂಗಿಲ್ಲ ನೋಡ್ರಿ.

ಬೆಳಬೆಳಿಗ್ಗೆ ಎದ್ದು ಮಾಡಿದ ಎಲ್ಲಾ ಅಡುಗಿ ಚೆರಗದ ಬುಟ್ಟಿಯೊಳಗ ಕಟ್ಟಕೊಂಡು ಎತ್ತಿನ ಬಂಡಿ ಹತ್ತಿ ಹೊಲಕ್ಕ ಹೋಗ್ತಾರ. ಹೊಲದಾಗ ಹೊಡಿಗಿ ಪೂಜಿ ಮಾಡ್ತಾರ. ಹೊಡಿಗಿ ಪೂಜಿ ಅಂದ್ರ charagaಹೊಲದಾಗ ಬೆಳೆದಿದ್ದ ಸಜ್ಜಿ, ಜೋಳ ಅತವಾ ಯಾವುದೇ ಬೆಳೆಯ ಅಯ್ದು ದಂಟು ಕೂಡಿಸಿ ನೂಲ ದಾರ ಸುತ್ತಿ, ಅದಕ್ಕ ಅರಿಶಿನ ಕುಂಕುಮ ಹಚ್ಚಿ ಪೂಜಿ ಮಾಡ್ತಾರ. ಅದಕ್ಕ ಮನ್ಯಾಗ ತಯಾರಿ ಮಾಡ್ಕೊಂಡ್ ಬಂದಿದ್ದ ನೈವೇದ್ಯ ಹಿಡಿತಾರ. ಹೋಳಿಗಿ, ಗರಗಟದ ಪಲ್ಯೆ ಕೂಡಿಸಿ ಕಲಸಿ ಹೊಲದ ಎಲ್ಲ ದಿಕ್ಕಿಗೂ ಚೆಲ್ಲುತ್ತಾ ‘ಚೋಂಗೆಬಲೋ’ ಅಂತ ಕೂಗ್ತಾರ. ಇದನ್ನ ಚೆರಗ ಚೆಲ್ಲುದು ಅಂತ ಹೇಳ್ತಾರ. ಅನ್ನದಾತ ತನಗ ಅನ್ನ ನೀಡುವ ಬೂಮಿ ತಾಯಿಗೆ ಚೆರಗ ಚೆಲ್ಲುವ ಮೂಲಕ ಬೂತಾಯಿಗೆ ಚೆರಗದ ನೈವೇದ್ಯ ನೀಡ್ತಾನ.

ಈ ಹಬ್ಬದ ಇನ್ನೊಂದ್ ಅತಿ ವಿಶೇಶ ಅಂದ್ರ ತೆಪ್ಪ. ಅದಕ್ಕ ಕೆಲವು ಕಡೆ ಬಾಗಿನ ಕೊಡೂದು ಅಂತಾನೂ ಕರೀತಾರ. ಸಣ್ಣ ಸಣ್ಣ ಕಟಿಗಿ ತಗೊಂಡು, ಅವನ್ನ ಕಟ್ಟಿ, ಚೌಕಾಕಾರದ ತೆಪ್ಪ ಮಾಡ್ತಾರ. ತೆಪ್ಪಕ್ಕ ಜೋಳದ ಒಣಗಿದ ದಂಟು ಬಳಸೂದು ಸಾಮಾನ್ಯ. ತೆಪ್ಪದ ಮ್ಯಾಲೆ ಒಂದು ಹೋಳಿಗಿ ಇಟ್ಟು, ಅದರ ಮ್ಯಾಲೆ ಒಂದು ಸಣ್ಣ ಹಿಟ್ಟಿನ ದೀಪ ಮತ್ತ ಹಿಟ್ಟಿನ ಮುಟಿಗಿ ಮಾಡಿ ಇಡ್ತಾರ. ದೀಪ ಹಚ್ಚಿ, ಪೂಜಿ ಮಾಡಿ ಅದನ್ನ ಬಾವಿ ಅತವಾ ಕೆರೆಯಾಗ ತೇಲಿ ಬಿಡ್ತಾರ. ಅನ್ನದಾತನ ಬೆಳೆಗಳಿಗೆ ನೀರುಣಿಸುವ ಬಾವಿ, ಕೆರೆಗಳ ಉಪಕಾರಾನ ತೆಪ್ಪದ ಮೂಲಕ ವಿಶೇಶವಾಗಿ ನೆನೆಸುವ ರೀತಿ ಇದು. ಉತ್ತರ ಕರ‍್ನಾಟಕದ ಹಲೆವೆಡೆ ಹೊಲದಾಗ ದೇವರು ಇರೂದು ಸಾಮಾನ್ಯ. ಅಲ್ಲಿ ಗುಡಿ ಗುಂಡಾರ ಇರೂದಿಲ್ಲ, ಮರದ ಕೆಳಗ ದೇವರ ವಾಸ. ಒಂದು ಕಲ್ಲನ್ನ ದೇವರನ್ನಾಗಿಸಿ ಇಟ್ಟು ಪೂಜಿ ಮಾಡೂದ ಬಹಳ ಸಾಮಾನ್ಯ. ಇಂತಾ ದೇವರುಗಳ ತಮ್ಮ ಹೊಲ-ಗದ್ದಿ ಕಾಯ್ತಾರ ಅಂತ ನಂಬ್ಯಾರ ನಮ್ಮ ರೈತಾಪಿ ಮಂದಿ. ಇಂತಾ ದೇವರುಗಳಿಗೆ ಎಳ್ಳಮವಾಸಿ ದಿನ ಅಶ್ಟ ಅಲ್ಲ ಯಾವುದ ಹಬ್ಬ ಹರಿದಿನ ಆದರೂ ನೈವೇದ್ಯ ತಪ್ಪಂಗಿಲ್ಲ.

ಎಲ್ಲಾ ದೇವರುಗಳ ಪೂಜಿ-ನೈವೇದ್ಯ ಮುಗಿದ ಮ್ಯಾಲೆ ಎಳ್ಳಮವಾಸಿ ಬರ‍್ಜರಿ ಊಟದ ಹೊತ್ತು. ಹೊಲದಾಗ ಕುಂತು ಮನಿಯವರೆಲ್ಲ ಸೇರಿ ಊಟ ಮಾಡ್ತಾರ. ಹೊತ್ತು ಮುಳುಗು ಮೊದಲ ಊರ ಕಡೆ ಹೊಂಟ್ ನಿಲ್ತಾರ. ಮನಿಗೆ ಬರುವಾಗ ಬೆಳೆಯ ಕೆಲ ದಂಟು ಕಿತ್ತು ಚೆರಗದ ಬುಟ್ಟಿಯೊಳಗಿಟ್ಟು ಮನಿಗೆ ತೊಗೊಂಡ್ ಹೋಗ್ತಾರ. ಅದನ್ನ ಮನಿಯೊಳಗಿನ ದೇವರ ಮುಂದ, ಮನಿ ಬಾಗಿಲ ಮುಂದ ಇಟ್ಟು ಪೂಜಿ ಮಾಡ್ತಾರ. ಕೆಲವು ಕಡೆ ಅದನ್ನ ಊರ ದೇವರಿಗೆ ಸಲ್ಲಿಸಿ, ಎತ್ತಿನ ಬಂಡಿವೊಳಗ ಇಟ್ಟು ಊರಾಗ ಮೆರವಣಿಗಿ ಮಾಡ್ತಾರ.

ಎಳ್ಳಮವಾಸಿ ವಿಶೇಶ ಅಡುಗೆಗಳು:

ಗರಗಟದ ಪಲ್ಯೆ – ಎಲ್ಲಾ ತರದ ಕಾಳುಗಳನ್ನ ಸಮನಾಗಿ ತೊಗೊಂಡು ಕುದಿ ಹಾಕಬೇಕು. ಆಮ್ಯಾಲೆ ಎಲ್ಲಾ ರೀತಿಯ ಕಾಯಿಪಲ್ಯೆ ಹೆಚ್ಚಿ ಕುದಿತಿರೋ ಕಾಳು ಜೊತೆ ಸೇರಿಸಿ ಅರ‍್ದ ತಾಸು ಕುದಿಸಬೇಕು. ತುಸು ಎಣ್ಣಿ, ಸಾಸವಿ, ಜೀರಗಿ, ಶೇಂಗಾಕಾಳು, ಕರಿಬೇವು, ಬಳ್ಳೊಳ್ಳಿ ಸೇರಿಸಿ ಒಗ್ಗರಣಿ ಮಾಡಬೇಕು . ಕುದಿಸಿದ ಕಾಳು, ಕಾಯಿಪಲ್ಯೆಗೆ ಒಗ್ಗರಣಿ ಸೇರಿಸಿದರ ಗರಗಟದ ಪಲ್ಯೆ ತಯಾರು. ಇದನ್ನ ಬ್ಯಾರೆ ಕಡೆ ಬ್ಯಾರೆ ತರಾ ಮಾಡೂ ರೂಡಿನೂ ಐತಿ. ಗರಗಟದ ಪಲ್ಯಾನ ಸೊಪ್ಪಿನ ಪಲ್ಯೆ ಎಂದೂ ಹೇಳ್ತಾರ.

ಸಜ್ಜಿ ಕಡುಬು – ಸಜ್ಜಿ ಹಿಟ್ಟಿಗೆ ತುಸು ಉಪ್ಪು ಸೇರಿಸಿ ಹದಕ್ಕ ಕಲಸಿಟ್ಟು ಒಂದು ಅರ‍್ದ ತಾಸು ಬಿಡಬೇಕು. ಅದನ್ನ ಲಿಂಬೆ ಹಣ್ಣಿನ ಅಳತೆಯ ಉಂಡೆ ಮಾಡಿ ನೀರಿನ ಹಬೆಯ ಮ್ಯಾಲೆ ಕುದಿಸಬೇಕು. ಹಳ್ಯಾಗ ಒಂದು ಬೋಗುಣಿ(ಪಾತ್ರೆ)ಯ ತುಂಬಾ ಕಬ್ಬು ಅತವಾ ಜೋಳದ ರೌದಿ(ಎಲೆ) ಹಾಕಿ ನೀರು ಹಾಕಿ ಕುದಿಸ್ತಾರ, ಅದರ ಮ್ಯಾಲೆ ಕಡುಬುಗಳನ್ನು ಕುದಿಸೂದು ಸಾಮಾನ್ಯ. ಹಿಂಗ್ ಮಾಡಿದರ ಸಜ್ಜಿ ಕಡುಬು ತಯ್ಯಾರ್ 🙂

( ಚಿತ್ರ ಸೆಲೆ: prajavani.netkannada.eenaduindia.com )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. balachandra says:

    ರೂಪಾ ಅವರೇ, ತುಂಬಾ ಚೆನ್ನಾಗಿ ಚೆರಗ ಚೆಲ್ಲುವದರ ಬಗ್ಗೆ ತಿಳಿಸಿದ್ದಿರ. ಧನ್ಯವಾದಗಳು.

  1. 02/06/2016

    […] – ರೂಪಾ ಪಾಟೀಲ್. […]

ಅನಿಸಿಕೆ ಬರೆಯಿರಿ: