ನಾನು ಮತ್ತು ಏಕಾಂತ

– ಅಜಿತ್ ಕುಲಕರ‍್ಣಿ.

Loneliness_art

(ಏಕಾಂತವನ್ನು ಒಂದು ಪಾತ್ರದಂತೆ ಮಾಡಿ ಈ ಕವಿತೆಯನ್ನು ಬರೆಯಲಾಗಿದೆ )

ಇಂದು ಮನೆಯಲ್ಲಿ ನಾವಿಬ್ಬರೇ
ನಾನು ಮತ್ತು ಏಕಾಂತ
ಒಟ್ಟಿಗೇ ದ್ಯಾನ ಮತ್ತು ಮೌನ
ಹೊರಗಿನವರಾರಿಗೂ ಇದು ಗೊತ್ತಿಲ್ಲ!

ನಾನು ಹಾಡುವ ಹಾಡಿಗೆ
ಅವಳದು ಮೆಚ್ಚುವ ಕಿವಿ
ನಾನು ಬರೆಯುವ ಚಿತ್ರಕೆ
ಅವಳದು ಮೆಚ್ಚುವ ಕಣ್ಣು
ನನ್ನೆಲ್ಲ ಹುಚ್ಚುತನಗಳ ಕಂಡು
ಮುಗುಳ್ನಕ್ಕು ಸುಮ್ಮನಾಗುವ ಹೆಣ್ಣು

ಇಂದು ಮನೆಯಲ್ಲಿ ನಾವಿಬ್ಬರೇ
ನಾನು ಮತ್ತು ಏಕಾಂತ

ಬಿಡುಕಣ್ಣಿನಿಂದ ಕಾಣುವ ಕನಸುಗಳಿಗೆ
ಅವಳು ಜತೆಗಾತಿ
ಎದೆಯಲ್ಲಿ ಹೂವಂತೆ ಮೂಡುವ
ಬಾವಗಳಿಗೆ ಹದಗಾತಿ

ಇಂದು ಮನೆಯಲ್ಲಿ ನಾವಿಬ್ಬರೇ
ನಾನು ಮತ್ತು ಏಕಾಂತ

ಅವಳು ನನ್ನೆದೆ ಮಯ್ ಬಗೆಗಳ
ಆವರಿಸುವ ರೀತಿಗೆ ನಾನು ರುಣಿ
ಅವಳೊಂದಿಗಿದ್ದರೆ ನಾನು
ಹಲವಾರು ಪ್ರತಿಬೆಗಳ ಗಣಿ

ಇಂದು ಮನೆಯಲ್ಲಿ ನಾವಿಬ್ಬರೇ
ನಾನು ಮತ್ತು ಏಕಾಂತ

ಅವಳದು ಸದ್ದಿಲ್ಲದ ಹಾಡು
ಪುಳಕಗೊಳಿಸದ ತಣ್ಣನೆಯ ಮುತ್ತು
ತಾಕದೇ ಕೊಡುವ ಅಪ್ಪುಗೆ
ಕೇಳಲಾಗದ ಮೌನ ಪಿಸುಮಾತು

ಇಂದು ಮನೆಯಲ್ಲಿ ನಾವಿಬ್ಬರೇ
ನಾನು ಮತ್ತು ಏಕಾಂತ

ಅವಳು ತುಂಬಾ ಚೂಟಿ ಮತ್ತು ಸೂಕ್ಶ್ಮ
ಮರೆಯ ಕರೆಗಂಟೆ ಹೊಡೆದ ಆ ಚಣ
ಎನ್ನ ಕರೆಯುಲಿಯು ಕರೆದ ಆ ಚಣ
ಕೋಣೆಯ ಬಾಗಿಲನು ಯಾರೋ ಬಡಿದ ಆ ಚಣ
ಕಳಚಿಕೊಳ್ಳುವಳು ಎನ್ನಿಂದ
ಎಂದೂ ಇಲ್ಲದಂತೆ ಎನ್ನ ಜತೆ
ತನ್ನದೊಂದೂ ಗುರುತು ಉಳಿಸದೆ!

ಇಂದು ಮನೆಯಲ್ಲಿ ನಾವಿಬ್ಬರೇ
ನಾನು ಮತ್ತು ಏಕಾಂತ

ಬರುವಳವಳು ಮತ್ತೆ
ಜಗವೆಲ್ಲ ನನ್ನಿಂದ ಹೊರಟು ಹೋದಾಗ
ಬಂದು ಬಿಡುವಳು ಎನ್ನ ಅಕ್ಕ ಪಕ್ಕ
ಎನ್ನನಾವರಿಸುವಳು ಮತ್ತೆ
ಮೊದಲಿನಂತೆ…

ಇಂದು ಮನೆಯಲ್ಲಿ ನಾವಿಬ್ಬರೇ
ನಾನು ಮತ್ತು ಏಕಾಂತ
ಒಟ್ಟಿಗೇ ದ್ಯಾನ ಮತ್ತು ಮೌನ
ಹೊರಗಿನವರಾರಿಗೂ ಇದು ಗೊತ್ತಿಲ್ಲ!

( ಚಿತ್ರ ಸೆಲೆ: iserbia.rs  )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: