ಕುರೂಪಿಯ ಒಲವೋಲೆ

– ಹರ‍್ಶಿತ್ ಮಂಜುನಾತ್.

love-letter1

ಮುಂಜಾನೆ ಮುಸುಕು ಪುಳಕವಿತ್ತೊಡೆ
ಮರುಳ ನಾನು ನಿನ್ನ ನೆನಪಿನಲಿ ?
ಮುಸ್ಸಂಜೆ ನಸುಕು ಸೆಳೆತವಿತ್ತೊಡೆ
ವಿರಹಿ ನಾನು ನಿನ್ನ ಸನಿಹವೆಲ್ಲಿ ?

ಪರಿತಪಿಸುತ ಸದಾ ಪರನಾರಿಯೆಡೆ
ಪರವಶವಾದೀತು ಮನ ನೀನೆಲ್ಲಿ ?
ಈ ಲೋಕದಿ ಜಾರಿ ಕಂಡೆ ಆ ಲೋಕದೆಡೆ
ಮಾಯಾಜಿಂಕೆ ನಿನ್ನನೆಲ್ಲಿ ಹಿಡಿಯಲಿ ?

ತೊದಲುತಿರುವೆ ಮಾತಿರಿಸಿ ಎದೆಯಲೆ
ದನಿ ಏರಿ ಮಾರ‍್ದನಿಯಾಗಿ ಮೊಳೆಯೆ
ಪಲಾಯನವೆನಿತು ನನ್ನರಿಕೆಯ ತಲುಪಿಸದೆ
ಮಾಯದೂರ ಎನ್ನ ಮಾಯಗಾತಿಯೆಡೆಗೆ
ನಿಲುವಿರಿಸಿದೆ ಮನ ನಾ ಹೇಳೇ ತೀರುವೆ !

ಕನಸಿಗೆ ಮಂಡಿಯೂರಿ ಮನವಿ ಕಳುಹಿಸಲೆ
ತರದಿರು ಅವಳನು ನಿನ್ನೆಡೆ ನನ್ನೆಡೆಗೆ
ನೆನಪು ಕಟ್ಟುವುದೆನಿತು ಕಣ್ಣೀರ ದಗೆ
ಬೆಂದರು ಸರಿಯೇ ನಲಿವಿದೆ ಅದರೊಳಗೆ
ಉಳಿದೊಲವೆ ಬದುಕೆಡೆಗೆ ಹುಸಿ ನಂಬಿಕೆ !

ಸೋಕಿದೊಡೆ ನರುಗಂಪನವಿಲ್ಲ ತಂಪೆರೆಯಲು
ಬರಿಯೆನ್ನ ನೆನಪ ಬಲವೀ ಮನದ ಸಂಚಿಕೆಗೆ
ಅದರೊಡನೆಯೇ ಹೊಡೆದಾಡಿ ಬಡಿದಾಡಿ
ಕುರೂಪಿ ಕಡೆದ ಎದೆಬಸಿದು ಒಲವೋಲೆಯ
ಇದನಾದರೂ ತಲುಪಿಸಿ ತುಸು ಗೆಲ್ಲುವೆನೆಂದು !

( ಚಿತ್ರ ಸೆಲೆ:  themindfulword.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: