ಕಬಡ್ದಿ – ಒಂದು ದೇಸಿ ಆಟ
ಕಬಡ್ಡಿ ದೇಸಿ ಆಟ. ನಮ್ಮ ದೇಶದ ಆಟ. ದೈಹಿಕ ಸಾಮರ‍್ತ್ಯವನ್ನು ಹೆಚ್ಚಿಸುತ್ತಲೆ ಮಾನಸಿಕ ಸತ್ವವನ್ನು ಉದ್ದೀಪಿಸುವ ಆಟ. ಇಂದು ಮನೋರಂಜನೆಯ ಕಲಾತ್ಮಕ ಆಟವಾಗಿ ನಮ್ಮೆಲ್ಲರ ಮನ ಗೆದ್ದಿದೆ. ವ್ಯಕ್ತಿಯ ಪೌರುಶ ಮತ್ತು ಕೆಚ್ಚನ್ನು ಒರೆಗೆ ಹಚ್ಚುವ ಆಟ. ಜಾಗತೀಕರಣದ ಸಂದರ‍್ಬದಲ್ಲಿ ಅಳಿದು ಹೋಗಬಹುದಾಗಿದ್ದ ಈ ಆಟ ತನ್ನ ಒಳಗಿನ ಸಾಂಸ್ಕ್ರುತಿಕ ಶಕ್ತಿಯಿಂದಲೆ ಮೇಲೆದ್ದು ಬಂದಿದೆ. ಕಲಾತ್ಮಕ ಪ್ರದರ‍್ಶನ ಕಲೆಯಾಗಿ ಇಂದು ವಿಶ್ವದ ಗಮನ ಸೆಳೆದಿದೆ.
ಆಟದ ಅಂಕಣ, ಮದ್ಯಗೆರೆ, ಜೀವಗೆರೆ, ಬೋನಸ್ ಗೆರೆ… ಇವೆಲ್ಲ ನಮಗೆ ಗೊತ್ತಿದ್ದ ಅಂಶಗಳು. ಜೊತೆಗೆ ಉಸಿರು ಹಿಡಿದು ಕಬಡ್ಡಿ ಕಬಡ್ಡಿ ಎನ್ನುವುದು, ಎದುರು ಹುದ್ದರಿಯನ್ನು ಬಡಿದುಕೊಂಡು ಮದ್ಯಗೆರೆ ದಾಟಿ ತನ್ನ ಅಂಕಣಕ್ಕೆ ಬರುವುದು, ಮದ್ಯಗೆರೆ ಒಳಗೆಯೆ ಎದುರು ಹುದ್ದರಿಯನ್ನು ಕಟ್ಟಿ ಹಾಕುವುದು… ಇವು ಸಹ ಗ್ಗೊತ್ತಿರುವ ಸಂಗತಿಗಳೆ. ಇನ್ನು ಅಂಕಣದ ಉದ್ದ ಅಗಲ ವಿಸ್ತಾರ ಎಶ್ಟು, ಮದ್ಯಗೆರೆ, ಜೀವಗೆರೆ, ಬೋನಸ್ ಗೆರೆಗಳ ನಡುವಿನ ಅಂತರ ಎಶ್ಟು ಎಂಬ ತಾಂತ್ರಿಕ ವಿಶಯಗಳ ಬಗ್ಗೆ ಹೆಚ್ಚಿಗೆ ಹೇಳಬೇಕಾದ ಅಗತ್ಯವಿಲ್ಲ. ಎರಡು ತಂಡಗಳು ಪರಸ್ಪರ ಎದುರಾಳಿಗಳು. ಒಂದು ತಂಡದಲ್ಲಿ 7 ಜನ ಆಟಗಾರರು. ಒಬ್ಬರು ಇನ್ನೊಬ್ಬರ ಮೇಲೆ ಏರಿ ಹೋಗುವುದು, ಜೀವಗೆರೆ ಮುಟ್ಟಿ ಹುದ್ದರಿಯನ್ನು ಹೊಡೆದು ಬರುವುದು, ಏರಿ ಬಂದ ಆಟಗಾರರನ್ನು ಜೀವಗೆರೆ ಮುಟ್ಟದಂತೆ ಅಡೆತಡೆ ಒಡ್ಡುವುದು, ಬೋನಸ್ ಗಳಿಸದಂತೆ ಎಚ್ಚರವಹಿಸುವುದು, ನನ್ನ ಬಲದ ಮುಂದೆ ನಿನ್ನ ಬಲ ಏನು ಎಂದು ತಮ್ಮ ಅಂಕಣದಲ್ಲಿಯೇ ಕಟ್ಟಿ ಹಾಕುವುದು ಇವು ಸಹ ಆಟದ ಬಾಗಗಳೆ.
ಈಗ ಈ ಆಟದಲ್ಲಿನ ಒಂದೊಂದು ಸಂಗತಿಯನ್ನು ನಮ್ಮ ಪ್ರಾಚೀನ ರಾಜ್ಯ ಸಾಮ್ರಾಜ್ಯಗಳ ರೂಪ ಸ್ವರೂಪಕ್ಕೆ ಸಮನ್ವಯಗೊಳಿಸಿ ನೋಡಿದರೆ ಒಂದು ಬೆಡಗು ನಮ್ಮೆದುರು ಗೋಚರವಾಗುತ್ತದೆ. ಇದು ಕೇವಲ ಆಟವಲ್ಲ ಎರಡು ಸಾಮ್ರಾಜ್ಯಗಳ ಮದ್ಯೆ ನಡೆಯುವ ಯುದ್ದ, ದರ‍್ಮ ಯುದ್ದ ಎಂಬ ಸತ್ಯ ಗೊತ್ತಾಗುತ್ತದೆ. ಮದ್ಯ ಗೆರೆ ಎರಡು ಸಾಮ್ರಾಜ್ಯಗಳ ಮದ್ಯದ ಗಡಿ. ಜೀವಗೆರೆ ರಾಜ್ಯದ ರಾಜದಾನಿ. ಬೋನಸ್ ಗೆರೆ ರಾಜ್ಯದ ಅಂತಪ್ಪುರ, ರಾಣಿವಾಸ. ಏಳು ಜನ ಆಟಗಾರರು ರಾಜ್ಯದ ಏಳು ಅಂಗಗಳ ಪ್ರತೀಕ. (ರಾಜ್ಯದ ಏಳು ಅಂಗಗಳು: ರಾಜ, ಮಂತ್ರಿ, ಜನಪದ, ಕೋಟೆ, ಬಂಡಾರ, ಸೈನ್ಯ ಮತ್ತು ಮಿತ್ರ.) ಸಾಮ್ರಾಜ್ಯದ ಯಾವುದೇ ಒಂದು ಅಂಗ ಊನವಾದರು ಕೇಡು ಕಟ್ಟಿಟ್ಟ ಬುತ್ತಿ.
ಈ ಕಬಡ್ಡಿ ಆಟದಲ್ಲಿರುವುದು ನೇರ ನೇರ ಯುದ್ದ. ಬಲ, ಚಾಕಚಕ್ಯತೆ, ಕೌಶಲ್ಯ ಅವಲಂಬಿಸಿದ್ದು. ಮೋಸ ವಂಚನೆ ಕಪಟತನಕ್ಕೆ ಇಲ್ಲಿ ಅವಕಾಶವಿಲ್ಲ. ಆಟಗಾರ ಎದುರು ರಾಜ್ಯವನ್ನು ಪ್ರವೇಶಿಸಿ, ರಾಜದಾನಿಯನ್ನು ಮುಟ್ಟಿ, ಅಲ್ಲಿರುವ ಯಾವುದೇ ಒಂದು ಅಂಗವನ್ನು ತನ್ನ ಕೈವಶ ಮಾಡಿಕೊಳ್ಳಬೇಕು. ಅಂತಪ್ಪುರಕ್ಕೆ ನುಗ್ಗಲು ಯತ್ನಿಸಿ ವೈರಿಪಡೆಯನ್ನು ಕೆಣಕಬೇಕು. ಏಳು ಅಂಗಗಳಲ್ಲಿ ಯಾವ ಅಂಗ ದುರ‍್ಬಲವಾಗಿದೆ ಎಂಬುದನ್ನು ಗುರುತಿಸಿ ಅದರ ಮೇಲೆ ದಾಳಿ ಮಾಡಬೇಕು. ಗೆಲುವು ಸಾದಿಸಬೇಕು. ದಾಳಿಗೊಳಗಾದ ರಾಜ್ಯ ತನ್ನ ಸಂಗಟಿತ ಪ್ರಯತ್ನದಿಂದ ಎದುರು ತಂಡದ ಹುದ್ದರಿಯನ್ನು ಕಟ್ಟಿಹಾಕಬೇಕು, ಕೈವಶ ಮಾಡಿಕೊಳ್ಳಬೇಕು.
ಕಬಡ್ಡಿ ಕಬಡ್ಡಿ ಎನ್ನುತ್ತ ಉಸಿರು ಹಿಡಿಯುವುದು ಜೀವಿಸುವ ಮತ್ತು ಸಾಯುವ ಸಂಗತಿಯನ್ನು ಬಿಂಬಿಸುತ್ತದೆ. ಒಂದು ಹುದ್ದರಿ ಔಟಾದರೆ ಒಂದು ಅಂಗ ಸತ್ತೇ ಹೋಗುತ್ತದೆ. ಮತ್ತೆ ಈ ಸತ್ತ ಅಂಗಕ್ಕೆ ಜೀವ ಬರಬೇಕಾದರೆ ಎದುರು ರಾಜ್ಯದ ಒಂದು ಅಂಗ ಸಾಯಲೇಬೇಕು. ರಾಜ್ಯದಾಡಳಿತ ಎರಡು ಮುಕ ಹೊಂದಿದೆ. ತನ್ನ ರಾಜ್ಯದ ವಿಸ್ತಾರಕ್ಕಾಗಿ ತಾನೆ ವೈರಿ ರಾಜ್ಯದ ಮೇಲೆ ಏರಿ ಹೊಗಿ ಯುದ್ದ ಸಾರುವುದು ಒಂದು. ತನ್ನ ಮೇಲೆ ದಾಳಿ ಮಾಡಿದ ವೈರಿ ರಾಜನನ್ನು ಹಿಡಿದು ಹಾಕಿ ಸೋಲಿಸುವುದು ಎರಡು. ಈ ಎರಡು ಸಂದರ‍್ಬಗಳು ಜೀವನ್ಮರಣದ ಕಟಿಣ ಪ್ರಸಂಗಗಳೆ. ಉಸಿರಿರುವವರೆಗೆ ಹೋರಾಡಬೇಕು. ವೀರತನವೇ ಮೌಲ್ಯ. ಸಾವು ಬಂದರೂ ಅದು ವೀರ ಮರಣ. ರಾಜ ತನ್ನ ರಾಜ್ಯಕ್ಕೆ ರಾಜ್ಯದ ಯಾವುದೇ ಅಂಗಕ್ಕೆ ದಕ್ಕೆ ಬರದಂತೆ ಎಚ್ಚರವಾಗಿರಬೇಕು. ಆಕ್ರಮಣಶೀಲತೆ, ಮುನ್ನುಗ್ಗುವ ಉತ್ಸಾಹ, ಕಾಲ್ಚಳಕ, ಕೈಚಳಕ, ಎದುರಾಳಿಯನ್ನು ಕೆಣಕಿ ಹಿಮ್ಮೆಟ್ಟಿಸುವ ಅಸಮ ಬಲ ಇವೆಲ್ಲ ರಾಜನಿಗೆ ಇರಲೇಬೇಕು. ಇಲ್ಲದೆ ಹೋದರೆ ಸೋಲು ಸಾವು ಕಚಿತ.
ಬಾರತ ಬಿಡಿಬಿಡಿ ರಾಜ್ಯ ಸಾಮ್ರಾಜ್ಯಗಳ ನಾಡು. ಜಂಬೂ ದ್ವೀಪದಶ್ಟು ವಿಸ್ತಾರವಾಗಿದ್ದರೂ ಸಹ ಬಿಡಿ ಬಿಡಿ ಸಂಸ್ತಾನಗಳೆ. ರಾಜ್ಯ ಸಾಮ್ರಾಜ್ಯಗಳ ನಡುವೆ ಪೈಪೋಟಿ ಅನಿವಾರ‍್ಯವಾಗಿತ್ತು. ಯುದ್ದ ಸಹಜ ದರ‍್ಮವಾಗಿತ್ತು. ಅಂತಹ ಸಹಜ ದರ‍್ಮಯುದ್ದದ ಪರಿಕಲ್ಪನೆಯನ್ನು ಅದರ ಗುಣ ದೌರ‍್ಬಲ್ಯಗಳ ಜೊತೆ ಒಂದು ಕಲಾತ್ಮಕ ಆಟವನ್ನಾಗಿಸಿದ ಜನಪದರ ದೇಸಿ ಪ್ರತಿಬೆಗೆ ಕೈಮುಗಿದು ನಮಸ್ಕರಿಸಬೇಕು. ಇಂದಿನ ಹೊಸತನ, ಪ್ರದರ‍್ಶನ ಗುಣ ಏನೆ ಇದ್ದರೂ ನಾವು ಸಾಂಸ್ಕ್ರುತಿಕ ಪಳೆಯುಳಿಕೆಗಳನ್ನು ಅಡಗಿಸಿಟ್ಟ ಜನಪದರ ಜಾಣ್ಮೆಯನ್ನು ಮೆಚ್ಚಲೇಬೇಕು.
(ಚಿತ್ರ ಸೆಲೆ: news18.com)
ಇತ್ತೀಚಿನ ಅನಿಸಿಕೆಗಳು