ಪೋಕೆಮೊನ್ ಗೋ ಆಡುವವರೇ ತುಸು ಜೋಕೆ

ಜಯತೀರ‍್ತ ನಾಡಗವ್ಡ.

pokemon-go-5

ಪೋಕೆಮೊನ್ ಗೋ – ಈ ಹೆಸರು ಇತ್ತಿಚೀಗೆ  ಬಹಳ ಸುದ್ದಿಯಲ್ಲಿದೆ. ಸುದ್ದಿ ಹಾಳೆ, ಟಿವಿ, ಮಿಂಬಲೆ ಹೀಗೆ ಎಲ್ಲೆಡೆ ಪೋಕೆಮೊನ್ ಗೋ (Pokemon Go) ಮಾತುಕತೆಯ ಮುಕ್ಯ ವಿಶಯವಾಗಿದೆ. ಚೂಟಿಯುಲಿ(Smartphone) ಬಳಕೆ ಮಾಡುವ ಹೆಚ್ಚಿನ ಮಂದಿಗೆ ಈಗಾಗಲೇ ಈ ಹೆಸರು ಗೊತ್ತಿರಬಹುದು. ಪೋಕೆಮೊನ್ ಗೋ ಎಂಬುದೊಂದು ಚೂಟಿಯುಲಿಯಲ್ಲಿ ಆಡಬಹುದಾದ ಆಟ. ಆದರೆ ಇದು ಈ ಮೊದಲು ಬಂದ ಆಟಗಳಿಗಿಂತ ಬೇರೆಯೇ ಆಗಿದೆ. ಹೆಚ್ಚು ದಿಟವಾದ ಆಟ (Augmented Reality) ಎಂಬುದು ಈ ಆಟವನ್ನು ಇತರೆ ಆಟಗಳ ಪಟ್ಟಿಯಿಂದ ದೂರ ನಿಲ್ಲಿಸುತ್ತದೆ. ಅದು ಅಲ್ಲದೇ ನೀವಿರುವ ಜಾಗದ ಪಕ್ಕಾ ಮಾಹಿತಿ ಪಡೆದು ಆಡುತ್ತ ಸಾಗುವ ಆಟವೇ ಪೋಕೆಮೊನ್ ಗೋ.

ನಿಯಾಂಟಿಕ್ ಲ್ಯಾಬ್ಸ್(Niantic Labs) ಎಂಬ ಅಮೇರಿಕಾದ ಕೂಟವೊಂದು ಈ ಆಟವನ್ನು ಹೊರತಂದಿದೆ. 90ರ ಏಡಿನಲ್ಲಿ ಪೋಕೆಮೊನ್ ಸರಣಿಯ ವಿಡಿಯೋ ಗೇಮ್‌ವೊಂದು ಹೆಚ್ಚು ಹೆಸರುವಾಸಿಯಾಗಿತ್ತು. ಅದನ್ನೇ ಆದಾರವಾಗಿಟ್ಟುಕೊಂಡು ಪೋಕೆಮೊನ್ ಗೋ ಎಂಬ ಆಟ ಬೆಳೆಸಲಾಗಿದೆ. ನಿಮ್ಮ ಸುತ್ತ ಮುತ್ತ ಇರುವ ಪೋಕೆಮೊನ್ ಎಂಬ ಜೀವಿಯೊಂದನ್ನು ನೀವು ಹುಡುಕುತ್ತ ಅವನನ್ನು ಹಿಡಿಯುವುದೇ ಈ ಆಟದ ಗುರಿ. ಬಳಕದಂತೆ (Application) ನೀವು ಈ ಆಟವನ್ನು ನಿಮ್ಮ ಚೂಟಿಯುಲಿಗೆ ಇಳಿಸಿಕೊಂಡು ಆಡಬಹುದು. ನಿಮ್ಮ ಚೂಟಿಯುಲಿಯ ಜಿಪಿಎಸ್  ಮೂಲಕ ನೀವಿರುವ ಜಾಗದ ಅರಿವನ್ನು ಕಂಡುಕೊಳ್ಳುವ ಈ ಆಟ, ನಿಮ್ಮ ಸುತ್ತ-ಮುತ್ತ ಇರುವ ಪೋಕೆಮೊನ್ ಗೋ ಹಿಡಿಯಲು ನೆರವಾಗುವಂತೆ ಈ ಇದನ್ನು  ಬೆಳೆಸಲಾಗಿದೆ. ಪೋಕೆಮೊನ್ ಹಿಡಿಯಲು ಆಟಗಾರರಿಗೆ ಅನುವಾಗಲು ದಾರಿತಿಟ್ಟಗಳನ್ನು(Map), ಪೋಕೆಸ್ಟಾಪ್(Pokestop) ಎಂಬ ಜಾಗಗಳನ್ನು ಗುರುತಿಸಲಾಗಿದೆ. ಪೋಕೆಸ್ಟಾಪ್ ಗಳನ್ನು ನೀಲಿ ಬಣ್ಣದಿಂದ ಆಟದಲ್ಲಿ ಗುರುತು ಮಾಡಲಾಗಿರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಸುತ್ತಲಿನ ಕಟ್ಟಡಗಳು, ತೋಟ, ಬಯಲು, ಮುಂತಾದವುಗಳ ದೂರ ಎಲ್ಲದರ ಮಾಹಿತಿ ಸಿಗುತ್ತದೆ. ಅಲ್ಲದೇ ಪೋಕೆಮೊನ್ ಹಿಡಿಯಲು ಪೋಕೆ ಚೆಂಡು, ಪೋಕೆ ಮೊಟ್ಟೆಗಳು ಕೂಡ ನಿಮಗೆ ಸಿಗುತ್ತವೆ. ನೀವು ಆಡುತ್ತ ಸಾಗಿದಂತೆ ಹೆಚ್ಚಿನ ಹಂತಗಳನ್ನು ನೀವು ಏರುತ್ತ ಸಾಗುವಿರಿ. ಅಶ್ಟೇ ಅಲ್ಲದೇ ಪೋಕೆಮೊನ್ ಗೋ ನಿಮಗೆ ಈ ಆಟದ ವಿವಿದ ಹಂತಗಳಲ್ಲಿ ಹಲವು ಬಗೆ, ವಿದಗಳಲ್ಲಿ ಕಾಣಿಸಿಕೊಳ್ಳುವನು.

ಜುಲಾಯ್ ಮೊದಲ ವಾರ ಅಂದರೆ 6ನೇ ತಾರೀಕು ಪೋಕೆಮೊನ್ ಗೋವನ್ನು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಅಮೇರಿಕಾಗಳಲ್ಲಿ ಮೊಟ್ಟ ಮೊದಲಿಗೆ ಬಿಡುಗಡೆಗೊಳಿಸಿಲಾಗಿತ್ತು. ಮುಂದಿನ ದಿನಗಳಲ್ಲಿ ಜರ‍್ಮನಿ, ಇಟಲಿ, ಪ್ರಾನ್ಸ್ ನಂತಹ ಯೂರೋಪ್ ನಾಡುಗಳು, ಏಶಿಯಾದ ಜಪಾನ್, ಇಂಡೋನೇಶಿಯಾ, ಹಾಂಗ್‌ಕಾಂಗ್ ಮುಂತಾದ ದೇಶಗಳಲ್ಲಿ ಬಿಡುಗಡೆ ಮಾಡುತ್ತ ಸಾಗಿತ್ತು.  ಚೀನಾದಲ್ಲಿ ಈ ಆಟವಿನ್ನು ಬಿಡುಗಡೆಯಾಗಿಲ್ಲ. ಕಾರಣ ಜಿಪಿಎಸ್‌ಗಾಗಿ ನಿಯಾಂಟಿಕ್ ಕೂಟ ಗೂಗಲ್ ಮ್ಯಾಪ್‌ನೊಂದಿಗೆ ಕಯ್ ಜೋಡಿಸಿದ್ದು. ಹಲವರಿಗೆ ತಿಳಿದಂತೆ ಚೀನಾದಲ್ಲಿ ಗೂಗಲ್‌ನ ಯಾವುದೇ ಸೇವೆ, ಬಳಕಗಳು ಬಳಸುವಂತಿಲ್ಲ. ಆದರೂ ಚೀನಿಯರು ಈ ಆಟದ ಪಡಿಯಚ್ಚಿನಂತಿರುವ ಆಟವೊಂದನ್ನು ಆಸ್ಟ್ರೇಲಿಯಾದ ಮೂಲದ ಆಪ್ ಸ್ಟೋರ್ ಮೂಲಕ ಚೂಟಿಯುಲಿಗೆ ಇಳಿಸಿಕೊಂಡು ಆಡುತ್ತಿದ್ದಾರೆ ಎನ್ನುವ ಸುದ್ದಿಯಿದೆ. ಇನ್ನೂ ನಮ್ಮ ದೇಶ ಬಾರತಕ್ಕೆ ಈ ಆಟವಿನ್ನು ಕಾಲಿಟ್ಟಿಲ್ಲ. ಇದರ ಕಾರಣವಾಗಲಿ ಇಲ್ಲವೇ ಬಿಡುಗಡೆಯ ದಿನದ ಬಗ್ಗೆ ಹೆಚ್ಚಿನ ಸುದ್ದಿ ತಿಳಿದು ಬಂದಿಲ್ಲ. ಆದರೆ ಬಾರತದಲ್ಲಿ ಕೆಲವರು ವಿಪಿಎನ್ (VPN-ವರ‍್ಚುವೆಲ್ ಪ್ರಾಯ್ವೇಟ್ ನೆಟ್‌ವರ‍್ಕ್) ಬಳಸಿ ಈ ಆಟವನ್ನು ಆಡುತ್ತಿರುವ ಬಗ್ಗೆ ಸುದ್ದಿಯಿದೆ.

ಆಯ್‌ಒಎಸ್ ಮತ್ತು ಅಂಡ್ರಾಯ್ಡ್ ನಡೆಸೇರ‍್ಪಾಟು(Operating System) ಹೊಂದಿರುವ ಚೂಟಿಯುಲಿ ಬಳಕೆದಾರರು ಪೋಕೆಮೊನ್ ಗೋ ಆಟವನ್ನು ಪುಕ್ಕಟೆಯಾಗಿ ತಮ್ಮ ಮೊಬಾಯಿಲ್‌ಗೆ ಕೆಳಗಿಳಿಸಿಕೊಳ್ಳಬಹುದು. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಪೋಕೆಮೊನ್ ಗೋ ಬಾರಿ ಸುದ್ದಿಯಲ್ಲಿದೆ. ಇದರ ಅಬ್ಬರ ಹೇಗಿದೆಯೆಂದರೆ ಈಗಾಗಲೇ ಜಗತ್ತಿನೆಲ್ಲೆಡೆ 5 ಕೋಟಿಗೂ ಹೆಚ್ಚು ಮಂದಿ ಈ ಆಟವನ್ನು ತಮ್ಮ ಚೂಟಿಯುಲಿಗೆ ಇಳಿಸಿಕೊಂಡಿದ್ದಾರೆ. ಈ ಸಂಕ್ಯೆ ಹೀಗೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆಯಂತೆ. ಆಪ್ ಸ್ಟೋರ್ ಮೂಲಕ ಪುಕ್ಕಟೆಯಾಗಿ ದೊರೆತರೂ ಇಲ್ಲಿಯವರೆಗೆ ಪೋಕೆಮೊನ್ ಗೋ ವಿವಿದ ನೆರಬಿಡಿಗಳಿಂದ(Accessories) ಸುಮಾರು 75 ಮಿಲಿಯನ್ ಡಾಲರ್ ಅಂದರೆ 500 ಕೋಟಿ ರೂಪಾಯಿಗಳ ಜಂಬಾರ(ವಹಿವಾಟು) ನಡೆಸಿ ದಾಕಲೆ ಮಾಡುತ್ತ ಸಾಗಿದೆ. ಇನ್ನೂ ಟ್ವಿಟರ್(Twitter), ಪೇಸ್ಬುಕ್(Facebook), ಇನ್ಸ್ಟಾಗ್ರಾಮ್(Instagram) ಮುಂತಾದ ಸಾಮಾಜಿಕ ಕೂಡುತಾಣಗಳಿಗೂ ಪೋಕೆಮೊನ್ ಗೋದ ಬಿಸಿ ಮುಟ್ಟಿದೆ. ದಿನಾಲೂ  ಹೆಚ್ಚು ಬಳಕೆಯಾಗುವ ಈ ಎಲ್ಲ ಸಾಮಾಜಿಕ ತಾಣಗಳ ಬಳಕಗಳನ್ನು(Social Media App) ಮೀರಿಸಿದೆ ಪೋಕೆಮೊನ್ ಗೋ. ಇಲ್ಲಿಯವರೆಗೆ ಚೂಟಿಯುಲಿ ಬಳಕೆದಾರದ ನೆಚ್ಚಿನ ಆಟವಾಗಿದ್ದ ಕ್ಯಾಂಡಿಕ್ರಶ್ ಸಾಗಾವನ್ನು (Candy Crush Saga) ಪೋಕೆಮೊನ್ ಹಿಂದಿಕ್ಕಿ ತನ್ನ ನಾಗಾಲೋಟ ಮುಂದುವರೆಸಿದ್ದಾನೆ. ನಿಯಾಂಟಿಕ್ ಲ್ಯಾಬ್ಸ್‌ನ ಪಾಲುದಾರನಾಗಿರುವ ನಿಂಟೆಂಡೊ(Nintendo) ಎಂಬ ಕೂಟದ ಶೇರುಗಳು ದಿನ ಬೆಳಗಾಗುವುದರಲ್ಲಿ ಏರುಮುಕ ಕಂಡಿವೆ.

ಪೋಕೆಮೊನ್ ಗೋ ಆಟ ಜಗತ್ತಿನ ನಡೆ-ನುಡಿಯ ಮೇಲೆ ದೊಡ್ಡ ಪ್ರಬಾವ ಬೀರಿದೆ. ಸುಮಾರು 1.7 ಕೋಟಿ ಮಂದಿಯಿರುವ ನೆದರಲ್ಯಾಂಡ್ ನಾಡಿನಲ್ಲಿ ಸುಮಾರು 13 ಲಕ್ಶ ಮಂದಿ ಈ ಆಟವನ್ನು ಆಡುತ್ತಿದ್ದಾರಂತೆ. ಪೋಕೆಮೊನ್ ಗೋ ಮೂಲಕ ಮಂದಿಯಿರುವ ತಾಣವನ್ನು ಪತ್ತೆಹಚ್ಚುವುದು ಸುಳುವಾಗಿದೆ. ಇದರಿಂದ ಕಳ್ಳರು, ಸೆರಗರ(Criminals) ಹಿಡಿಯಲು ಇದು ಪೋಲಿಸ್‌ರಿಗೆ ನೆರವಾಗಿದೆ. ಹೆಚ್ಚಿನ ಸಂಕ್ಯೆಯಲ್ಲಿ ಪೋಕೆಮೊನ್ ಗೋ ಆಡುತ್ತಲಿರುವ ಮಂದಿ ಆಯಾ ಬಾಗದ ಹೂದೋಟ, ಒಡವೆಮನೆಗಳ(Museum) ಬಳಿ ಸೇರುತ್ತಿರುವುದು ಸುತ್ತ ಮುತ್ತಲಿನ ವ್ಯಾಪಾರ ವಹಿವಾಟನ್ನು ಹೆಚ್ಚಿಸಿದೆ. ಇದಕ್ಕೆ ಆಟಕ್ಕೆ ಸಂಬಂದಿಸಿದ ಹಾಡುಗಳು, ಬಟ್ಟೆ ಮುಂತಾದವುಗಳ ಮಾರುಕಟ್ಟೆಯೂ ಹೆಚ್ಚಿದೆ.

ಹೀಗೆ ಸಿಕ್ಕಾಪಟ್ಟೆ ಹೆಸರುವಾಸಿಯಾಗಿರುವ ಪೋಕೆಮೊನ್ ಗೋ ಆಟಕ್ಕೆ ಹಲವೆಡೆ  ನೋ ನೋ ಎನ್ನುವ ಮಾತು ಕೇಳಿ ಬಂದಿವೆ. ಆಟದ ಗೀಳು, ಹುಚ್ಚಿನಿಂದ ಆದ ಎಡವಟ್ಟು, ಅವಗಡಗಳಿಂದಲೇ ಪೋಕೆಮೊನ್ ಗೋ ಹೆಚ್ಚಿನ ಮಂದಿಯ ಗಮನ ಸೆಳೆಯುತ್ತ ಸುದ್ದಿಯಲ್ಲಿದೆ ಎಂದರೂ ತಪ್ಪಲ್ಲ. ಬೀದಿ ಬೀದಿಗಳಲ್ಲಿ ಪೋಕೆಮೊನ್ ಅರಸುತ್ತ ಸಾಗುವ ಆಟಗಾರರು ಅಪಗಾತ, ಗಡಿ ದಾಟಿದ ಸುದ್ದಿಗಳು ವಿವಿದೆಡೆಯಿಂದ ಕೇಳಿ ಬಂದಿದ್ದು ಅಚ್ಚರಿ ಮೂಡಿಸಿದೆ. ಅಮೇರಿಕಾದ 15 ವರುಶದ ಹುಡುಗನೊಬ್ಬ ಪೋಕೆಮೊನ್ ಜಾಡು ಹಿಡಿದು ಹೋಗಿ ಕೆನಡಾದ ಗಡಿ ದಾಟಿದ್ದು ಅಲ್ಲಿನ ಪೋಲಿಸ್‌ರಿಂದ ಸೆರೆಹಿಡಿಯಲ್ಪಟ್ಟಿದ್ದಾನೆ. ರಶಿಯಾದಲ್ಲಿ ಈ ಆಟವನ್ನೂ ಬಿಡುಗಡೆಯಾಗಿಲ್ಲವಾದರೂ ಇದನ್ನು ಬಿಡುಗಡೆ ಮಾಡದಂತೆ ತಡೆಹಿಡಿಯಬೇಕೆಂದು ಕೊಸಾಕ್(Cossack) ಸಮುದಾಯದ ಮುಂದಾಳುಗಳ ಕೂಗು. ಇನ್ನೂ ಇಂಡೋನೇಶಿಯಾದ ಜಾವಾ ಪ್ರದೇಶದಲ್ಲಿ ಈ ಆಟವನ್ನು ಆಡುತ್ತ ಹೊರಟ ಪ್ರೆಂಚ್ ನಾಡಿಗನೊಬ್ಬ ಮಿಲಿಟರಿ ಪಡೆಯ ದಂಡೊಂದರಲ್ಲಿ ನುಸುಳಿದ್ದು ಅಲ್ಲಿನ ಅದಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಅಲ್ಲದೇ ದೇಶದ ಕಾಪಿನ(Security) ವಿಶಯಕ್ಕೆ ಇದು ಸಮಸ್ಯೆ ತಂದೊಡ್ಡಿದೆ. ಬೋಸ್ನಿಯಾದಲ್ಲಿ ಸಂಗಟನೆಯೊಂದು ನಾಡಿನ ಗಣಿಗಳಿರುವ ಸುತ್ತಲಿನ ಜಾಗದಲ್ಲಿ ಪೋಕೆಮೊನ್ ಗೋ ಆಟಗಾರರು ಸುಳಿಯದಂತೆ ಎಚ್ಚರಿಕೆಯ ಹಲಗೆಗಳನ್ನು ಅಳವಡಿಸಲು ಮುಂದಾಗಿದೆ.

ಗ್ವಾಟೆಮಾಲಾ(Guatemala) ದೇಶದಲ್ಲಿ ವರದಿಯಾದ ಅವಗಡವೊಂದು ಬೆಚ್ಚಿ ಬೀಳಿಸುವಂತದ್ದು. ಸಂಜೆ ಬೀದಿಯಲ್ಲಿ ಪೋಕೆಮೊನ್ ಆಡುತ್ತಿದ್ದ 18ರ ಪೋರನೊಬ್ಬನ ಕೊಲೆಯಾಗಿದೆ. ಈ ಕೊಲೆ ಮಾಡಲು ಪೋಕೆಮೊನ್ ಗೋ ಮೂಲಕ ಜಿಪಿಎಸ್ ಬಳಸಿ ಕೊಲೆಯಾದ ಪೋರನಿರುವ ಜಾಗ ಪತ್ತೆ ಮಾಡಿರಬಹುದೆಂದು ಪೊಲೀಸರ ಗುಮಾನಿ. ಕೆನಡಾದ ಟೊರಂಟೊ ಊರಿನ ಹೆಂಗಸೊಬ್ಬಳು ತನ್ನ ಮನೆಯ ಮುಂದೆ ಸೇರಿದ್ದ ಪೋಕೆಮೊನ್ ಗೋ ಆಟಗಾರರ ಗುಂಪೊಂದನ್ನು ಕಿಡಿಗೇಡಿಗಳೆಂದು ತಿಳಿದು ಅವರತ್ತ ಕಿರುಗುಂಡುಗಳನ್ನು(Pellets) ಹಾರಿಸಿದ್ದಾಳೆ. ಜಪಾನಿನಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅಪಗಾತಕ್ಕೆ ಒಬ್ಬ ಬಲಿಯಾಗಿದ್ದರೆ, ಜಗತ್ತಿನ ಕೆಲವೆಡೆ ಪೋಕೆಮೊನ್ ಗೋ ಆಡುತ್ತ ಬೀದಿಯಲ್ಲಿ ಕಾರು ಮುಂತಾದವುಗಳಿಗೆ ಗುದ್ದಾಟ ಮಾಡಿಕೊಂಡು ಆಸ್ಪತ್ರೆ ಸೇರಿದ್ದು ಹಲವರು. ಈ ಆಟದ ಗೀಳು ಅಂಟಿಸಿಕೊಂಡ ಕೆಲವರು ಬಂಡಿ ಓಡಿಸುವಾಗಲೂ ಪೋಕೆಮೊನ್ ಹಿಡಿಯುವ ಸಾಹಸಕ್ಕೆ ಇಳಿದು ಜೀವ ತೆತ್ತಿದ್ದಾರೆ. ಕೆಲ ನಾಡುಗಳ ಚರ‍್ಚ್, ಮಸೀದಿಗಳ ಸುತ್ತಲಿನಲ್ಲಿ ಪೋಕೆಮೊನ್ ಗೋ ಆಟಗಾರರು ಸುಳಿಯದಂತೆ ಸುತ್ತೋಲೆ ಹೊರಡಿಸಿದ ಹಲಗೆಗಳು ಎದ್ದು ನಿಂತಿವೆ. ಮದ್ಯ ಏಶಿಯಾದ ಅರಬ್ ನಾಡುಗಳಲ್ಲಿ ಇದಕ್ಕೆ ಸಿಕ್ಕಾಪಟ್ಟೆ ತೆಗಳಿಕೆ, ವಿರೋದಗಳು ಕಂಡು ಬಂದಿವೆ. ಇದನ್ನು ಕಂಡ ಅರಬ್ ಒಕ್ಕೂಟದ ಕುವಯ್ತ್, ಸವ್ದಿ ಅರೇಬಿಯಾಗಳಲ್ಲಿ ಪೋಕೆಮೊನ್ ಗೋ ಆಟಕ್ಕೆ ತಡೆ ಹೇರಿ ಪತ್ವಾ ಹೊರಡಿಸಲಾಗಿದೆ. ಈಜಿಪ್ಟ್‌ನಲ್ಲೂ ಇದೇ ಪರಿಸ್ತಿತಿ. ತಮ್ಮ ನಾಡಿನೊಳಗಿನ ಕಾಪಿಗೆ (security) ಮತ್ತು ಗುಟ್ಟು ಮಾಹಿತಿಗಳಿಗೆ ಇದರಿಂದ ತೊಂದರೆಯಾಗಲಿದೆಯೆಂದು ಇಸ್ರೇಲ್ ಮಿಲಿಟರಿ ಪಡೆ ಕೂಡ ಈ ಆಟವನ್ನು ಆಡದಂತೆ ತಮ್ಮ ಸಯ್ನಿಕರಿಗೆ ತಡೆಹೇರಿದೆ.

ಬಾರತದಲ್ಲಿ ಈ ಆಟ ಬಂದರೆ ಹೇಗಿರಲಿದೆ? ನಮ್ಮ ಮಂದಿಯ ನಡೆ ನುಡಿಯ ಮೇಲೆ ಪೋಕೆಮೊನ್ ಗೋ ಯಾವ ಪ್ರಬಾವ ಬೀರಲಿದೆ ಎಂಬೆಲ್ಲ ಕೇಳ್ವಿಗಳಿಗೆ ಇನ್ನೂ ಕೆಲಹೊತ್ತು ಕಾದು ನೋಡದೇ ವಿದಿಯಿಲ್ಲ.

(ಮಾಹಿತಿ ಮತ್ತು ತಿಟ್ಟ ಸೆಲೆ: trustedreviews.com, wikipedia.org, foxnews.com, washingtonpost.com )Categories: ನಡೆ-ನುಡಿ

ಟ್ಯಾಗ್ ಗಳು:, , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s