ನೋಡಿ ಸ್ವಾಮಿ ನಾವಿರೋದೇ ಹೀಗೆ!

ಪ್ರಶಾಂತ ಎಲೆಮನೆ.

social-psychology

ಮಾನವನ ಚಿತ್ತದಂತೆ ವಿಶಾಲ ಮತ್ತು ಆಳ ಯಾವುದು ಇರಲಿಕ್ಕಿಲ್ಲ. ಅರಸುತ್ತಾ ಹೋದಂತೆಲ್ಲ ಅದು ಇನ್ನೂ  ಜಟಿಲವೇನೋ ಅನಿಸುತ್ತೆ. ಇದುವರೆಗೆ ಅದರ ತಳ ಮುಟ್ಟಿದವರಿಲ್ಲ. ಒಳಗಿನರಿಮೆಯ ಗಮನಸೆಳೆವ ಕೆಲವು ಸಂಗತಿಗಳಿಲ್ಲಿವೆ ನೋಡಿ.

ನಡಿತಿದ್ದಿಯೋ ಇಲ್ಲಾ ಮಾತಾಡ್ತಿದ್ದೀಯೋ?: ನಾವು ಹಲಕೆಲಸ(Multi-tasking) ಮಾಡಬಹುದಾ? ನೀವು ಹಲಕೆಲಸಗಾರ ಅಂತ ಯಾರಾದರು ಹೇಳಿದರೆ ಒಂದೋ ಅವರು ಏಣಿ ಹತ್ತಿಸ್ತಾ ಇದಾರೆ ಇಲ್ಲಾ ಅವರಿಗೆ ಇದರ ಬಗ್ಗೆ ಗೊತ್ತಿಲ್ಲ. ನೀವೀಗ ನಡೀತಾ ಇದ್ದೀರ ಹಾಗೆ ಮಾತನಾಡ್ತಾ ಇದ್ದೀರ ಅಂದುಕೊಂಡರೆ ಅದು ಹಲಕೆಲಸವಾಗಲ್ಲ. ಯಾಕೆ ಗೊತ್ತಾ, ನಮ್ಮ ಮಿದುಳು ಒಂದು ಸಲ ಎರಡರ ಕುರಿತು ಯೋಚಿಸಲ್ಲ. ಅದು ಎರಡು ಕೆಲಸಗಳ ನಡುವೆ ಅತ್ತಿತ್ತವಾಗುತ್ತೆ. ಹಲಕೆಲಸದಿಂದ ಸಮಯ ಉಳಿಯುವ ಬದಲಿಗೆ ಎರಡು ಕೆಲಸಗಳ ನಡುವೆ ಅತ್ತಿತ್ತವಾಗುವಾಗ ಸಮಯ ಹಾಳಾಗುತ್ತಂತೆ.

ಕಣ್ಣಿನ ಕಾವಲು: ಅಮೇರಿಕಾದಲ್ಲಿ ಪ್ರಾಮಾಣಿಕತೆ ಪೆಟ್ಟಿಗೆ(Honesty Box) ಅಂತ ನೋಡಬಹುದು.ಬೆಲೆಬಾಳದ ಆದರೆ ಅಗತ್ಯದ ವಸ್ತುಗಳನ್ನ ಇದರಲ್ಲಿ ಇಟ್ಟಿರುತ್ತಾರೆ. ನಿಮಗೆ ಬೇಕಾದ ವಸ್ತುಗಳನ್ನ ತೊಗೊಂಡು ದುಡ್ಡು ನೀವೇ ಅಲ್ಲಿಟ್ಟು ಹೋಗ್ಬೇಕು, ಯಾರು ನಿಮ್ಮ ಹತ್ರ ದುಡ್ಡು ಕೊಡಿ ಅಂತ ಕೇಳಲ್ಲ. ಯಾಕಂದ್ರೆ ಅಲ್ಲಿ ಯಾರು ಇರಲ್ಲ. ಅರಕೆಗಾರರ(Researchers) ಪ್ರಕಾರ ಪ್ರಾಮಾಣಿಕತೆ ಪೆಟ್ಟಿಗೆ ಮೇಲೆ ಬರಿ ನಿಮ್ಮನ್ನೇ ನೋಡ್ತಾಯಿರುವಂತೆ ಕಣ್ಣುಗಳನ್ನ ಅಂಟಿಸೋದ್ರಿಂದ ಪೆಟ್ಟಿಗೆಗೆ ದುಡ್ಡು ಹಾಕೋರು ಹೆಚ್ಚಾಯಿತಂತೆ.ಇವರ ಪ್ರಕಾರ ಕಣ್ಣುಗಳು ನಮ್ಮ ಗ್ರಹಿಕೆ (Perception)ಯನ್ನು ಬದಲಿಸಬಲ್ಲವು. ಒಂದು ಚಿಕ್ಕ ಕಣ್ಣಿನ ಚಿತ್ರ ನಮ್ಮ ಪ್ರಾಮಾಣಿಕತೆಯನ್ನ ಹೆಚ್ಚಿಸುತ್ತೆ ಅಂದ್ರೆ ಅದು ಸಾಮಾನ್ಯವೇನಲ್ಲ. ನ್ಯೂಕ್ಯಾಸಲ್ ಕಲಿಕೆವೀಡಿನ (Newcastle University)ತಂಡ ಇದೆ ಪ್ರಯೋಗವನ್ನ ಬೇರೆ ಬೇರೆ ಕಡೆ ಮಾಡೋ ತಯಾರಿ ನಡೆಸಿದೆಯಂತೆ.

ಸತ್ಯ ಹೇಳಿಸುವುದು ಹೇಗೆ: ಯಾರಾದರೂ ಸುಳ್ಳು ಹೇಳುತಾ ಇದಾರೆ ಅಂತ ನಿಮಗನ್ನಿಸಿದರೆ, ಅವರು ಮಾತು ಮುಗಿಸಿದ ಮೇಲೆ ನೀವು ಮಾತನಾಡಬೇಡಿ, ಸುಮ್ಮನಿರಿ. ಅವರ ಮುಕನೇ ನೋಡ್ತಾ ಇರಿ. ನೀವು ಹಾಗೆ ಮಾಡಿದರೆ ಅವರಿಗೆ ತಾನು ಸುಳ್ಳು ಹೇಳ್ತಾ ಇರೋದು ಗೊತ್ತಾಗಿದೆ ಅಂತ ಅನ್ನಿಸಿ ಸತ್ಯ ಇಲ್ಲ ಅದಕ್ಕೆ ಹತ್ತಿರವಂತೂ ಬರ‍್ತಾರೆ.

ಸಿಟ್ಟು: ಯಾರಿಗಾದರೂ ನಿಮ್ಮ ಮೇಲೆ ಬಹಳ ಸಿಟ್ಟು ಬಂದಿದೆ ಅಂದ್ರೆ, ಒಂದು ಕೆಲಸ ಮಾಡಿ. ನೀವು ಅಪ್ಪಿ ತಪ್ಪಿಯೂ ಅವರ ಎದುರುಗಡೆ ಕೂರಬೇಡಿ ಬದಲಿಗೆ ಅವರ ಪಕ್ಕದಲ್ಲಿ ಕೂರಿ. ನೀವು ಹಾಗೆ ಮಾಡಿದ್ದೇ ಆದರೆ ಒಂದಶ್ಟು ಬೈಗುಳ ಅಂತೂ ತಪ್ಪಿಸ್ಕೊತೀರ.ಅದೇ ತರ ಯಾರಾದರೂ ನಿಮ್ಮನ್ನ ನಿಲ್ಲಿಸಿಕೊಂಡು ಬೈತಾ ಇದಾರೆ ಅಂದ್ರೆ, ಮೊದಲು ನೀವು ಅವರನ್ನ ಕೂರಿಸಿ ನೀವೂ ಅವರ ಪಕ್ಕದಲ್ಲೇ ಕುಳಿತುಕೊಳ್ಳಿ. ಮುಂದೇನಾಗುತ್ತೆ? ಒಂದ್ಸಲ ಮಾಡಿ ನೋಡಿ.

ಹೆಸರಲ್ಲೇನಿದೆ?: ಹೆಸರಲ್ಲೇನಿದೆ ಅಂತ ಬಹಳ ಜನ ಹೇಳೋದು ಕೇಳಿದೀರ. ನಿಜವಾಗಿಯೂ ಹೆಸರಲ್ಲೇನು ಇಲ್ವಾ? ಯಾಕಿಲ್ಲ, ಎಲ್ಲಾ ಇದೆ. ಏನೇ ಹೇಳಿ ನಮ್ಮ ಹೆಸರಲ್ಲಿ ನಮಗೆ ಒಲವು ಇದ್ದೇ ಇರುತ್ತೆ. ಹೆಸರು ನಮ್ಮತನ ಹೇಳುತ್ತೆ, ಅದು ನಮ್ಮ ಗನತೆ ಕೂಡ. ಡೇಲ್ ಕಾರ‍್ನೆಗೀ (ಹೆಸರುವಾಸಿ ಬರಹಗಾರ) ಹೇಳುವಂತೆ, “ಹೆಸರನ್ನ ನೆನಪಿನಲ್ಲಿ ಇಟ್ಟುಕೊಳ್ಳೋದು ಅಂದ್ರೆ ನೀವೂ ಅವರಿಗೆ ಬೆಲೆ ಕೊಟ್ಟಂತೆಯೇ ಸರಿ. ಅದು ಕೂಡ ನೀವೂ ಯಾರನ್ನ ಅಪರೂಪಕ್ಕೆ ಬೇಟಿಯಾಗುತ್ತಿರೋ ಅವರನ್ನ ಹೆಸರು ಹಿಡಿದು ಕರೆದರೆ ನೀವು ಅವರರನ್ನ ಕುಶಿ ಪಡಿಸಿದಂತೆಯೇ.” ಸಾದ್ಯವಾದಶ್ಟು ಹೆಸರು ನೆನಪಿನಲ್ಲಿಡಿ ಮತ್ತು ಹೆಸರು ಹಿಡಿದು ಕರೀರಿ.

ಆಕಳಿಸಿ ನೋಡು: ಯಾರಾದರೂ ನಿಮ್ಮನ್ನ ಗಮನಿಸ್ತಿದಾರೆ ಅಂತ ನಿಮಗನಿಸಿದೆಯಾ, ಇಲ್ಲಾ ಯಾರಾದರೂ ನಿಮ್ಮನ್ನೇ ನೋಡ್ತಾ ಇದ್ದಾರೋ ಇಲ್ಲವೋ ಅಂತ ಕಾತರಿ ಮಾಡಿಕೊಳ್ಳಬೇಕು ಅಂತ ನಿಮಗನ್ನಿಸಿದರೆ ಅದಕ್ಕೆ ಒಂದು ಸರಳ ಉಪಾಯ ಇದೆ. ಜೋರಾಗಿ ಆಕಳಿಸೋಕೆ ಶುರು ಮಾಡಿ. ಆಕಳಿಕೆ ಒಬ್ಬರಿಂದ ಒಬ್ಬರಿಗೆ ಹರಡುತ್ತೆ. ಎಶ್ಟೋ ಸಲ ಆಕಳಿಸೋ ಚಿತ್ರ ನೋಡಿದರೂ ನಮಗೆ ಆಕಳಿಕೆ ಬರುತ್ತೆ, ಅಂತದ್ದರಲ್ಲಿ ನಮ್ಮನ್ನ ನೋಡೋರು ಆಕಳಿಸದೆ ಇದ್ದಾರಾ?

ಸಹಾಯ ಮಾಡ್ತೀರಾ: ನಾವು ಯಾರಿಗಾದರೂ ಸಹಾಯ ಮಾಡಿದರೆ, ಅನ್ಕೋತೀವಿ ಅವರು ನಮ್ಮನ್ನ ಮೆಚ್ಚುತ್ತಾರೆ ಅಂತ. ಆದರೆ ನಿಜವಾಗಿ ಅವರಿಗೆ ನಾವಲ್ಲ ನಮಗೆ ಅವರು ಮೆಚ್ಚುಗೆ  ಆಗಿರ‍್ತಾರೆ. ಅಮೇರಿಕಾದ ಹೆಸರುವಾಸಿ ಬರಹಗಾರ, ವಿಜ್ನಾನಿ ಬೆಂಜಮಿನ್ ಪ್ರ್ಯಾಂಕ್ಲಿನ್ ಹೇಳ್ತಾರೆ  ‘ಒಂದು ಸಲ ತನ್ನನ ಅಶ್ಟೇನು ಮೆಚ್ಚದವನಿಗೆ ಒಂದು ಪತ್ರ ಬರೆದು ತಮಗೆ ಬೇಕಾದ ಒಂದು ಪುಸ್ತಕವನ್ನ ಎರವಲು ಪಡೆದರಂತೆ. ಆಮೇಲೆ ಅದನ್ನ ಅವನಿಗೆ ಹಿಂತಿರುಗಿಸಿದರು ಕೂಡ. ಮುಂದೆ ಅವರು ಇನ್ನೊಂದು ಸಲ ಬೇಟಿ ಮಾಡಿದಾಗ ಅವನೇ ಬೆಂಜಮಿನ್ ಪ್ರ್ಯಾಂಕ್ಲಿನ್ ಅವರನ್ನು ಮೊದಲು ಮಾತನಾಡಿಸಿದನಂತೆ. ಅವನೇ ಬೇರೆ ಯಾವುದಾದರೂ ಪುಸ್ತಕ ಬೇಕಾದರೆ ಕೇಳಿ ಅಂದನಂತೆ. ಮತ್ತವರು ಕೊನೆವರೆಗೂ ಗೆಳೆಯರಾಗಿದ್ದರಂತೆ’. ಇದನ್ನು ಹೀಗೂ ಹೇಳಬಹುದು, ನಾವು ಯಾರಿಗೆ ಕೇಡು ಮಾಡಿದ್ದೇವೋ ಅವರನ್ನೇ ನಾವು ದ್ವೇಶಿಸೋಕೆ ಶುರುಮಾಡ್ತೀವಿ.

ಮಾತಿನ ಮತ್ತು: ನಿಮ್ಮ ಹತ್ತಿರ ಇರೋ ಏನನ್ನೋ ನಿಮಗೆ ಹೊರೋಕೆ ಮನಸಿಲ್ಲ ಅಂದ್ರೆ ಒಂದ್ ಉಪಾಯ ಇದೆ. ಹೀಗೆ ಮಾಡಿ ನಿಮ್ಮ ಪಕ್ಕದಲ್ಲಿರೋರ ಹತ್ತಿರ ಮಾತಾಡೋಕೆ ಶುರು ಮಾಡಿ. ಮಾತಾಡ್ತಾ ಮಾತಾಡ್ತಾ ದಾಡಿಸಿ ಬಿಡಿ, ಅವರಿಗೋ ಗೊತ್ತಾಗೋದ್ರೊಳಗೆ ಸ್ವಲ್ಪ ದೂರ ಹೋಗಿರಬಹುದು.

ಸಹಾಯ ಕೇಳೋದ್ ಹೇಗೆ?: ಯಾರಾದರೂ ನಿಮಗೆ ಸಹಾಯ ಮಾಡ್ತಾರೋ ಇಲ್ಲವೋ ಅಂತ ನಿಮಗೆ ಸಂಶಯ ಇದ್ರೆ ಮೊದಲು ತುಂಬಾ ಚಿಕ್ಕ ಸಹಾಯ ಕೇಳಿ ಅವರು ಇಲ್ಲ ಅನ್ನಬಾರದು ಹಾಗಿದ್ದು. ಆಮೇಲೆ ನಿಮಗೆ ಬೇಕಾದ ಸಹಾಯ ಕೇಳಿ. ಇದನ್ನು ಕೆಲವರು ಮಾರಾಟದ ಕಲೆಯಾಗಿ ಬಳಸ್ತಾರೆ. ಹೇಗೆ ಕೇಳಿ, ಮೊದಲು ನೀರು, ನೀರಿನ ಉಳಿತಾಯದ ಬಗ್ಗೆ ಹೇಳೋದು, ಆಮೇಲೆ ಅದರ ಉಳಿತಾಯಕ್ಕೆ ನಮ್ಮ ನೊರತೆ(soap)ತಗ್ಗೊಳ್ಳಿ, ಅದರಿಂದ ನೀರು ಉಳಿಸಬಹುದು ಅಂತ ಮಾರುವುದು.

ಈಗ ಯಾರಾದರೂ ನಿಮಗೆ ಸಹಾಯ ಮಾಡೋದು ಅನುಮಾನ ಅಂತಿದ್ರೆ, ಆವಾಗ ಹೀಗೆ ಮಾಡಬಹುದು. ಮೊದಲು ಅವರು ಸಹಾಯ ಮಾಡೋಕೆ ಆಗದ ಸಹಾಯ ಕೇಳೋದು, ಹಾಗೆ ಮಾಡೋದರಿಂದ ಮೊದಲು ಸಹಾಯ ಮಾಡೋಕೆ ಅಗಲಿಲ್ವಲ್ಲ ಅಂತ ನೀವು ಎರಡನೇ ಸಲ ನಿಮಗೆ ಬೇಕಾದ ಸಹಾಯ ಕೇಳಿದಾಗ ಅವರು ಮಾಡೋ ಪ್ರತಿಶತ ಹೆಚ್ಚು.

ಇಲ್ಲವೇ ಹೀಗೂ ಮಾಡಬಹುದು. ನೀವು ಯಾರಾದರೂ ಕೆಲಸ ಮಾಡಿ ತುಂಬಾ ಬಳಲಿದವರ ಹತ್ರ ಸಹಾಯ ಕೇಳಿ, ಸಹಜವಾಗಿ ಅವರಂತಾರೆ ನನಗೆ ಈಗ ಮಾಡಕಾಗಲ್ಲ ನಾಳೆ ನೋಡೋಣ ಅಂತ. ಹಲವು ಸಲ ನೀವು ಅದೇ ಸಹಾಯ ಮರುದಿನ ಹೇಳಿದರೆ ಅವರು ಒಪ್ಪಿಕೋತಾರೆ, ನಿನ್ನೆ ಮಾತಲ್ಲಿ ನೋಡೋಣ ಅಂದುಬಿಟ್ಟಿದೀನಲ್ಲ ಅಂತ.

ಈ ಕೆಳಗೆ ಪಟ್ಟಿ ಮಾಡಿದ ಕೆಲವು ಸಂಗತಿಗಳು ಅಚ್ಚರಿ ಮೂಡಿಸಿದರೂ, ಗಮನದಲ್ಲಿಟ್ಟುಕೊಂಡರೆ ನಿಮಗೆ ನೆರವಾಗಬಲ್ಲವಂತವು. ಸುಮ್ಮನೆ ಒಂದ್ಸಾರಿ ಕಣ್ಣಾಡಿಸಿ.

– ಮಾತನಾಡುವಾಗ ಎದುರುಗಿರೋರ ಕೂದಲನ್ನ ನೋಡಿದರೆ ಅವರಿಗೆ ಇರುಸುಮುರುಸಾಗುತ್ತೆ.

– ಗುಂಪಲ್ಲಿ ಇರೋವಾಗ ಯಾರಾದರೂ ಹಾಸ್ಯ ಮಾಡಿದರೆ, ನೀವು ನಗುತ್ತಾ ನೋಡೋ ಮೊದಲ ವ್ಯಕ್ತಿ ನಿಮ್ಮ ಹತ್ತಿರದವರು ಅಂತ.

– ನಾವು ತಲೆದೂಗುತಾ ಮಾತನಾಡಿದರೆ ನಮ್ಮ ಮಾತನ್ನ ಕೇಳೋವವರು, ಹೆಚ್ಚಿನವರು ನಮ್ಮ ಮಾತನ್ನ ಒಪ್ಪಿಕೊಳ್ತಾರೆ.

– ಯಾರಾದರೂ ಏನನ್ನೋ ಏಣಿಸ್ತಿದಾರೆ ಅಂತ ಅಂದುಕೊಂಡರೆ, ನಿಮಗೆ ಅದನ್ನ ಕೆಡಿಸಬೇಕು ಅಂತಿದ್ರೆ ಸುಲಬ. ದೊಡ್ಡದಾಗಿ ಕೂಗಬೇಕು, ಹಾಡಬೇಕು ಅಂತೇನು ಇಲ್ಲ. ನೀವೂ ಕೂಡ ಅವರ ಜೊತೆಗೆ  ಬೇರೆ ಯಾವುದಾದ್ರು ಸರತಿಯಲ್ಲಿ ಅಂಕಿ ಹೇಳಿ ಸಾಕು ಅವರ ಲೆಕ್ಕ ತಿರುಗ ಮುರುಗ.

– ಎಲ್ಲರಿಗೂ ಅವರವರ ಮೊಗ ಚೆಂದವಾಗಿ ಕಂಡರೆ ಚೆಂದ. ಹಾಗಾಗಿ ಕೋಪದಲ್ಲಿರೋರಿಗೆ ಕೊಡೆಯಲ್ಲ, ಕನ್ನಡಿ ಹಿಡಿಬೇಕಂತೆ.

– ನೀವೂ ನಗಬೇಕು ಅಂತ ದೊಡ್ಡದಾಗಿ ನಕ್ಕರೂ, ನಿಮ್ಮ ಮನಸಿಗೆ ಕುಶಿಯಾಗುತ್ತೆ.

 

(ಮಾಹಿತಿ ಮತ್ತು ತಿಟ್ಟ ಸೆಲೆ: list25.comtheimaginativeconservative.org, lifebuzz.com,highexistence.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: