ನಿನ್ನಲ್ಲಿ ನನ್ನ ಬಿನ್ನಹ….
– ಕೌಸಲ್ಯ.
‘ವಟ’ವೆಂಬುವರು ನಿನ್ನ
ಆಶ್ರಯಿಸುವರು ನಿನ್ನ
ಕರುಣಿಸು ಸಲಹೆಂಬುವರು
ಜಗದ ರಕ್ಶಕಿ ನೀನೆಂಬುವರು
ಮರವೊಂದು ಉಳಿದೊಡೆ
ವನವೊಂದು ಉಳಿದಂತೆ
ಹೊಗಳುವರು ನಿನ್ನ
ಕರಗದಿರು ತಾಯೇ
ದರೆಹೊತ್ತಿ ಉರಿವಾಗ
‘ವನ’ಬೇಕು ಎನ್ನುವರಾಗ
ಜೀವಾಮ್ರುತ ಬತ್ತಿದಾಗ
ಹಾಹಾಕಾರ ಗೈಯ್ವರಾಗ
ಮರವೊಂದು ಉಳಿದೊಡೆ
ಜೀವಜಲ ಬತ್ತದಾಗ
ನೆನೆಯುವರು ನಿನ್ನ
ಮರುಗದಿರು ತಾಯೇ
ಜಗದ ವಿಸ್ತಾರಕೆ
ತುಡಿಯುವರು ಬಯಕೆಯಲಿ
ನಗರೀಕರಣವೇ ಉದ್ದಾರವೆಂಬುವರು ಹರುಶದಲಿ
ಹಾದಿಯ ನಡುವಿನಲಿ ನಿಂತಿರುವೆ ಎಂಬುವರು
ನಡು ಗೋಡೆಯಾಗಿಹೆ ಶಪಿಸುವರು ನಿನ್ನ
ನಿನ್ನೊಡಲ ಸೀಳಿ ಬಗೆಯುವರು
ನಿನ್ನ ರಕ್ಶೆಯಲಿದ್ದ ಕಗ ಮಿಗಗಳ ಚಿದ್ರಗೈವರು
ಮರವೊಂದು ಹಾದಿಯಲುಳಿದರೆ
ಜೀವಕ್ಕೆ ಕುತ್ತು
ತೆಗಳುವರು ನಿನ್ನ
ಮುನಿಯದಿರು ತಾಯೇ
ಆಸೆಯ ಬೆನ್ನೇರಿ
ಪ್ರಕ್ರುತಿಯ ನಿಯಮವನೂ ಮೀರಿ
ನಿನ್ನೊಡಲಿಗೆ ಹಾಕುವರು ಕನ್ನ
ದುರುಳ- ನೀಚ- ಬೇಡವೇನ್
ಅಂತರಾತ್ಮ ಪೇಳ್ವ ಕರೆಗೂ ಮುನ್ನ
ಕೂಗನು ನಾ ಕೇಳೆ, ಕರೆಗೆ ನಾ ಕಿವಿಗೊಡೆನೆ
ಅಡಿಯಿಟ್ಟ ಹೆಜ್ಜೆ ನಾ ಹಿಂಪಡೆನು
‘ಮರ’ವೊಂದು ನೀಗಿದರೆ
ಆಸೆಯಿಂ ಪೂರೈಸಿತೆನ್ನ
ದುರಾತ್ಮ ಹೇಳುವುದು ನಿನ್ನ
ಶಪಿಸದಿರು ತಾಯೇ
ಜಗವೇ ಬರಡಾಗುವ ಮುನ್ನ
ಜೀವ ಸಂಕುಲ ನಶಿಸುವ ಮುನ್ನ
ನಿನ್ನ ‘ಕೂಗು’ ಕ್ಶೀಣಿಸುವ ಮುನ್ನ
ಗರ‍್ಬದಲಿ ಅಡಗಿರುವ ಸಹಸ್ರ ವಟುಬೀಜವ
ದರಣಿಯ ಒಡಲಿಗೆ
ಶಿಶುವೆನ್ನದು ರಕ್ಶಿಸೆಂದು ಗೋಗರೆದೊಡೆ
ತನ್ನೆರಡು ಬಾಹುಗಳಲಿ ಮುಚ್ಚಿಟ್ಟು ಕಾಯ್ವಳು
ಮುತ್ತಿಕ್ಕಿ ಹಾಲುಣಿಸಿ ಸಲಹುವಳು
‘ಮರ’ವೊಂದು ಹೆಮ್ಮರವಾದೊಡೆ
ರಕ್ಶಣೆಯು ನಿಮಗೆ ಅಬಯವ ನೀಡುವಳು ದರೆ
ನಿಶ್ಚಿಂತೆಯಿಂದಿರು ತಾಯೇ
( ಚಿತ್ರ ಸೆಲೆ: reddit.com )
ಇತ್ತೀಚಿನ ಅನಿಸಿಕೆಗಳು