ಬಾರತಕ್ಕೆ ಅಡಿಯಿಟ್ಟ ಮುಸ್ಟ್ಯಾಂಗ್ ಜಿಟಿ

ಜಯತೀರ‍್ತ ನಾಡಗವ್ಡ.

Mustang2

ಮುಸ್ಟ್ಯಾಂಗ್(Mustang) ಈ ಹೆಸರು ಕೇಳಿತ್ತಿದ್ದಂತೆ ಕೆಲವರ ಕಿವಿ ಚುರುಕಾಗಬಹುದು. ಅದರಲ್ಲೂ ಆಟೋಟದ ಬಂಡಿಗಳ ಒಲವಿಗರಿಗೆ ಈ ಹೆಸರು ಕೇಳಿ ಮಯ್ ಜುಮ್ಮ ಎನ್ನಿಸದಿರದು. ಇದೀಗ ಬಾರತದ ಆಟೋಟದ ಕಾರೊಲವಿಗರಿಗೆ ಒಂದು ಸಿಹಿ ಸುದ್ದಿ. ಜಗತ್ತಿನ ಹಲವೆಡೆ ಅಚ್ಚುಮೆಚ್ಚಾಗಿರುವ ಪೋರ‍್ಡ್ ಕೂಟದ ಮುಸ್ಟ್ಯಾಂಗ್ ಜಿಟಿ (Mustang GT) ಕಾರು ಇದೀಗ ಬಾರತಕ್ಕೆ ಅಡಿಯಿಟ್ಟಿದೆ. ಇದೇ ವರುಶದದ ಮೊದಲಲ್ಲಿ ನಡೆದ ಬಾರತದ ತಾನೋಡಗಳ ತೋರ‍್ಪಿನಲ್ಲಿ (Auto Expo) ಮುಸ್ಟ್ಯಾಂಗ್ ಅನ್ನು ಬಾರತದ ಮಂದಿ ಮುಂದಿಟ್ಟು ಕೆಲವೇ ದಿನಗಳಲ್ಲಿ ಹೊರತರುವುದಾಗಿ ಹೇಳಿಕೊಂಡಿದ್ದ ಪೋರ‍್ಡ್ ಕಳೆದ ತಿಂಗಳು ಜುಲಾಯ್ 13ಕ್ಕೆ ಇದನ್ನು ನಿಜವಾಗಿಸಿದೆ.

ಕೆಲವು ಬಂಡಿಗಳು ದಿನಗಳೆದಂತೆ ಕಣ್ಮರೆಯಾಗುವುದನ್ನು ನೋಡಿದ್ದೇವೆ. 1980-90 ರಲ್ಲಿ ಅಂಬಾಸಿಡರ್, ಕಾಂಟೆಸ್ಸಾ ಕಾರುಗಳು ಬಾರತದಲ್ಲೆಡೆ ತುಂಬಿದ್ದವು. ನಂತರ ಮಾರುತಿ-800 ಬಾರತದ ಮಂದಿಯ ನೆಚ್ಚಿನ ಕಾರಾಗಿತ್ತು. 1983 ರಿಂದ 2013 ರವರೆಗೆ ಮಾರುತಿ-800 ಬಾರತದ ಬೀದಿಗಳಲ್ಲಿ ದೊರೆಯಾಗಿ ಮೆರೆದು ಇದೀಗ ಹಳಮೆಗೆ ಸೇರಿದೆ. ಆದರೆ ಮುಸ್ಟ್ಯಾಂಗ್ ವಿಶಯದಲ್ಲಿ ಇನ್ನೂ ಮಂದಿಯ ಒಲವು ಕಡಿಮೆಯಿಲ್ಲ. 1964 ರಿಂದ ತಯಾರಿಸಲ್ಪಡುತ್ತಿರುವ ಮುಸ್ಟ್ಯಾಂಗ್ ಬಂಡಿ 50 ವರುಶವಾದರೂ ಇಂದಿಗೂ ಆಟೋಟದ ಬಂಡಿಯ ಕಾರುಗಳಲ್ಲಿ ಬೇಡಿಕೆ ಕಳೆದುಕೊಂಡಿಲ್ಲ. ವರುಶಗಳು ಉರುಳಿದಂತೆ ಕೆಲವು ಚಿಕ್ಕ ಪುಟ್ಟ ಬದಲಾವಣೆಗಳನ್ನು ಕಾಣುತ್ತ ಸಾಗಿದ ಮುಸ್ಟ್ಯಾಂಗ್ ಹೊಸ ಮೊಗವೆತ್ತು ಹೊರಬರುತ್ತ ಸಾಗಿತು ಹೊರತು ಮಂದಿಯ ಮನದಿಂದ ದೂರವಾಗುವ ಮಾತೇ ಬರಲಿಲ್ಲ. 2015ರಿಂದೀಚೆಗೆ 6ನೇ ತಲೆಮಾರಿನ ಮುಸ್ಟ್ಯಾಂಗ್ ಜಗತ್ತಿನ ಹಲವೆಡೆ ಮಾರಾಟವಾಗುತ್ತ ಬಂದಿದೆ. ಆಟೋಟ ಬಂಡಿಗಳೆಂದರೆ ಸಾಮಾನ್ಯವಾಗಿ ದುಬಾರಿ ಬಂಡಿಗಳು ಎಂಬ ಹಣೆಪಟ್ಟಿ ಹೊತ್ತಿವೆ. ಪೆರಾರಿ, ಪೋರ‍್ಶ್, ಲ್ಯಾಂಬೊರ‍್ಗಿನಿ ಮುಂತಾದವುಗಳು ಇಂದಿಗೂ ಕೋಟಿಗಟ್ಟಲೆ ಬೆಲೆಬಾಳುತ್ತವೆ. ಅವುಗಳಿಗೆ ಹೋಲಿಸಿದಲ್ಲಿ ಪೋರ‍್ಡ್ ಕೂಟದ ಈ ಬಂಡಿಗೆ ಸುಮಾರು 3-4 ಪಟ್ಟು ಅಗ್ಗದ ಬೆಲೆ. 1964ರಲ್ಲಿ ಮೊದಲು ಬಿಡುಗಡೆಯಾದ ಮುಸ್ಟ್ಯಾಂಗ್ ಬಂಡಿ ಆ ಹೊತ್ತಿನಲ್ಲಿ ಅಗ್ಗದ ಆಟೋಟದ ಬಂಡಿಯೆಂದೇ ಹೆಚ್ಚು ಮಾರಾಟ ಕಂಡಿದ್ದು ಸುಳ್ಳಲ್ಲ. ಅಮೇರಿಕಾದ ಮಂದಿಗೆ ಅಚ್ಚುಮೆಚ್ಚಿನ ಕಾರಾಗಿದ್ದ ಮುಸ್ಟ್ಯಾಂಗ್ ಹಲವಾರು ಹಾಲಿವುಡ್ ಓಡುತಿಟ್ಟಗಳಲ್ಲಿ ಕಾಣಿಸಿಕೊಂಡು ಜಗತ್ತಿನಲ್ಲಿ ಹೆಸರು ಮಾಡುತ್ತ ಸಾಗಿತು. ಟ್ರಾನ್ಸ್‌ಪಾರ‍್ಮರ್ (Transformer), ಚಾರ‍್ಲ್ಸ್ ಎಂಜೇಲ್ಸ್ (Charles Angels), ಗಾನ್ ಇನ್ ಸಿಕ್ಸ್ಟಿ ಸೆಕೆಂಡ್ಸ್ (Gone in sixty seconds) ಎಂಬ ದೊಡ್ಡ ಸಿನೆಮಾಗಳು ಸೇರಿದಂತೆ ಒಟ್ಟು 3000 ಓಡುತಿಟ್ಟಗಳಲ್ಲಿ ಮೂಡಿ ಬಂದು ಪೆಂಪಿನ (Iconic) ಕಾರುಗಳ ಪಟ್ಟಿ ಸೇರಿಕೊಂಡಿದೆ.

Mustang

ವ್ರೂಮ್ ವ್ರೂಮ್ ಎಂದು ಗುರುಗುಟ್ಟುವ ಸದ್ದೇ ಮುಸ್ಟ್ಯಾಂಗ್ ಬಂಡಿಯ ವಿಸಿಟಿಂಗ್ ಕಾರ‍್ಡ್ ಇದ್ದಂತೆ. ಈ ಸದ್ದಿನಿಂದಲೇ ಮುಸ್ಟ್ಯಾಂಗ್ ಹಲವೆಡೆ ಸುದ್ದಿಯಾಗಿ ಹೆಸರುವಾಸಿಯಾಗಿದ್ದು ಹಳಮೆ. ಇದಕ್ಕೆಂದೇ ಮುಸ್ಟ್ಯಾಂಗ್ ಬಂಡಿಯ ಬಿಣಿಗೆ ದೊಡ್ಡ 5ಲೀಟರ್ ಗಾತ್ರದ್ದು. ಇಂಗ್ಲಿಶ್‌ನ “ವಿ” ಆಕಾರದಂತೆ ಅತ್ತ 4 ಇತ್ತ ನಾಲ್ಕು ಒಟ್ಟು 8 ಉರುಳೆಗಳ ಪೆಟ್ರ‍ೋಲ್  ಬಿಣಿಗೆ ಇದು. ಈ ಬಿಣಿಗೆಯ ಕಸುವು ಇತರೆ ಆಟೋಟದ ಬಿಣಿಗೆಗಳ ಕಸುವಿನ ಮುಂದೆ ಕಡಿಮೆಯೇನಿಲ್ಲ.  401 ಪಿಎಸ್ ಕಸುವುಳ್ಳ, 515 ನ್ಯೂಟನ್ ಮೀಟರ್ ತಿರುಗುಬಲದ ಬಂಡಿ ಓಡಿಸುಗರಿಗೆ ಪಸಿಯಿಸುವುದರಲ್ಲಿ (Thrill) ಎರಡು ಮಾತಿಲ್ಲ. ಸೊನ್ನೆಯಿಂದ 100 ಕಿಮೀ ವೇಗಕ್ಕೇರಲು ಬರೀ 4.5 ಸೆಕೆಂಡುಗಳ ತಗಲುವ ಈ ಬಂಡಿ ವೇಗದಲ್ಲಿ ಚಿರತೆಯೇ ಸರಿ. ಆರು ವಿವಿದ ವೇಗಗಳುಳ್ಳ ತನ್ಹಿಡಿತದ ಸಾಗಣಿ (Automatic Transmission) ಈ ಬಿಣಿಗೆಯ ಜೊತೆಗಾರ.

Mustangmain2

ಮುಸ್ಟ್ಯಾಂಗ್ ಬಂಡಿಯ ಒಂದು ವಿಶೇಶವೆಂದರೆ ಇದರ ಮಯ್ಮಾಟ. ಹಳಮೆಯ ಆಟೋಟದ ಕಾರುಗಳಲ್ಲಿ ಕಂಡುಬರುವ ಉದ್ದನೆಯ ಮುಂಬಾಗದ ಬಿಣಿಗವಸು (Hood). ಪೋರ‍್ಡ್ ಮುಸ್ಟ್ಯಾಂಗ್‌ನ ಮಯ್ಮಾಟದ ಅಬ್ಬರ ಹೇಗಿತ್ತೆಂದರೆ ಜಿಎಮ್(GM), ಕ್ರಾಯ್ಸ್‌ಲರ್ (Chrysler) ಕೂಟಗಳು ಇದರಂತೆ ಮಯ್ಮಾಟದ ಹೊಂದಿದ್ದ ಬಂಡಿಗಳನ್ನು ತಯಾರಿಸಿ ಮಾರುಕಟ್ಟೆ ಕಬಳಿಸಲು ಕಯ್ ಹಾಕಿದ್ದವು. ಆ ಹೊತ್ತಿನಲ್ಲಿ ಈ ಮಯ್ಮಾಟ “ಪೊನಿ ಕಾರ್” (Pony car) ಎಂಬ ಹೊಸದೊಂದು ಆಟೋಟದ ಬಂಡಿಯ ಗುಂಪನ್ನೇ ಹುಟ್ಟುಹಾಕಿತ್ತು. ಇಂದಿಗೂ ಈ ಮಯ್ಮಾಟವನ್ನು ಕಿರು ಬದಲಾವಣೆಗಳೊಂದಿಗೆ ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಹಿಂಬದಿ ದೀಪಗಳನ್ನು ಮೂರುಗೆರೆಗಳಂತೆ ಒಪ್ಪವಾಗಿ ಜೋಡಿಸಿದ್ದು ಬಂಡಿಯ ಅಂದ ಹೆಚ್ಚಿಸಿದೆ. ಪೋರ‍್ಡ್‌ನ ಹೆಚ್ಚಿನ ಬಂಡಿಗಳಲ್ಲಿರುವ ಮುಂಬದಿಯ ಅಗಲವಾದ ಮುನ್ಕಂಬಿತೆರೆ(Front Grill) ಇಲ್ಲಿಯೂ ಕಾಣಸಿಗುತ್ತದೆ. ಓಡುವ ಕುದುರೆ ಮುಸ್ಟ್ಯಾಂಗ್ ಬಂಡಿಗೆಂದೇ ಮಾಡಿಸಲ್ಪಟ್ಟ ಹೆಗ್ಗುರುತು, ಬಂಡಿಯ ಮುಂದುಗಡೆ ಮತ್ತು ಹಿಂಬಾಗದಲ್ಲಿ ಇದನ್ನು ನೋಡಬಹುದು.

Mustangmain1

ಬಂಡಿಯೊಳಗಡೆ ಕಣ್ಣು ಹಾಯಿಸಿದರೆ ಇದೇನು ಬಾನೋಡದ ಓಡಿಸುಗವೆಡೆ(Cockpit) ಎನ್ನುವಂತಿದೆ. ಬಂಡಿಯ ತಿಗುರಿ(Steering) ಮೂಲಕವೇ ನೀವು ಅಲೆಯುಲಿಯ ಕರೆ ಮಾಡಬಲ್ಲ ಗುಂಡಿ ನೀಡಲಾಗಿದೆ. ನೀವು ಹಾಡು ಕೇಳುತ್ತಿದ್ದರೆ ದನಿಯನ್ನು ಹೆಚ್ಚು ಕಡಿಮೆ ಮಾಡಲು, ಸುಯ್ ಅಂಕೆ ಏರ‍್ಪಾಟು ಬಳಸಲು ಕೂಡ ತಿಗುರಿಯ ಮೇಲೆ ಗುಂಡಿಗಳನ್ನು ನೀಡಲಾಗಿದೆ. ಬಂಡಿಯ ತೋರುಮಣೆಯಲ್ಲಿ (Dash board) 8 ಇಂಚುಗಳಶ್ಟು ದೊಡ್ಡ ತೆರೆಯ ತಿಳಿನಲಿ ಏರ‍್ಪಾಟು(Infotainment System) ನಳನಳಿಸುತ್ತದೆ. ಓಡಿಸುವವರಿಗೆ ಅನುವಾಗಲು ನಾಲ್ಕು ಬಗೆಯ ನಾರ‍್ಮಲ್ (Normal), ಸ್ಪೋರ‍್ಟ್ ಪ್ಲಸ್ (Sports +), ಟ್ರ್ಯಾಕ್ (Track) ಮತ್ತು ಸ್ನೋ/ವೆಟ್ (Snow/Wet) ಎಂಬ ಆಯ್ಕೆಯ ಗುಂಡಿ ಒದಗಿಸಲಾಗಿದೆ. ಬೀದಿಯ ಸ್ತಿತಿಗತಿಗೆ ತಕ್ಕಂತೆ ನೀವು ಈ ನಾಲ್ಕರಲ್ಲಿ ಒಂದು ಆಯ್ಕೆಯ ಗುಂಡಿ ಒತ್ತಿ ಸುಯ್ಯನೆ ಸಾಗಬಹುದು. ಓಡಿಸುಗನ ಬದಿಯಲ್ಲಿ  ಎರಡು ಕಪ್/ಲೋಟ ಸೇರುವೆಗಳು(Cup holders) ದೊಡ್ಡದಾಗಿವೆ. ಇನ್ನುಳಿದಂತೆ 8 ಗಾಳಿಚೀಲಗಳು (Air bags), ಸಿಲುಕಿನ ತಡೆತದ ಏರ‍್ಪಾಟು (ABS), ನಿಲುಗಡೆಗೆ ನೆರವಾಗುವ ಅರಿವಿಕಗಳು (Parking Sensors), ಗುಡ್ಡ-ಬೆಟ್ಟಗಳನ್ನೇರುವಾಗ ನೆರವು ಒದಗಿಸುವ ಏರ‍್ಪಾಟು (Hill Assistance System), ಕದಲುತಡೆಯೇರ‍್ಪಾಟು (Immobilizer) ಮತ್ತು ಟಾಯರ್‌ಗಳ ಗಾಳಿಯೊತ್ತಡ ತಿಳಿಸುವ ಏರ‍್ಪಾಟುಗಳೆಲ್ಲ (Tyre Monitoring System) ಈ ಬಂಡಿಯಲ್ಲಿದ್ದು ಪಯಣಿಗರ ಕಾಪಿನ ಹೆಚ್ಚು ಕಡಿಮೆ ವಿಶೇಶತೆಗಳನ್ನೆಲ್ಲ ಬಂಡಿಯೊಡಗೂಡಿಸಿಕೊಂಡಿದೆ. ಮೊಟ್ಟ ಮೊದಲಿಗೆ ಅಂದರೆ 1964ರ ಹೊತ್ತಿನಲ್ಲಿ ಮುಸ್ಟ್ಯಾಂಗ್ ಇಬ್ಬರು ಕುಳಿತು ಸಾಗುವಂತದ್ದಾಗಿತ್ತು. ಹೆಚ್ಚಿನ ಆಟೋಟದ ಬಂಡಿಗಳು ಇದೇ ರೀತಿಯವು. ಆದರೆ ಬಾರತದಲ್ಲಿ ನಾಲ್ಕು ಮಂದಿ ಕುಳಿತು ಸಾಗುವ ಏರ‍್ಪಾಟು ನೀಡಲಾಗಿದೆ. ಓಡಿಸುಗವೆಡೆ ದೊಡ್ಡದಾಗಿದ್ದರು, ಹಿಂಬದಿಯ ಕೂರುಮಣೆಗಳು (Seats) ತಕ್ಕಮಟ್ಟಿಗಿವೆ. ಬಂಡಿಯ ಉರುವಲು ಚೀಲ ಸುಮಾರು 61 ಲೀಟರ್‌ನಶ್ಟಿದೆ, 383ಲೀ. ಸರಕುಚಾಚಿನಲ್ಲಿ (Boot Space) ಹೆಚ್ಚಿನ ಟಾಯರ್‍ವೊಂದನ್ನು ಕೂರಿಸಿದ್ದು ಇದರಲ್ಲಿ ಹೆಚ್ಚು ಸರಕನ್ನು ಸಾಗಿಸಲಾಗದು.ಇಂತಹ ಆಟೋಟದ ಬಂಡಿಗಳನ್ನು ಮಂದಿ ಹೆಚ್ಚಾಗಿ ಸಾಮಾನ್ಯ ಬಳಕೆಗಾಗಿ ಬಳಸದೇ ಆಟೋಟ ಮುಂತಾದ ಹವ್ಯಾಸಗಳಿಗೆ ಓಡಾಡಿಸುತ್ತಾರೆ. ಇದಕ್ಕೆಂದೇ ಈ ಬಂಡಿಯ ಹಿಂಬದಿಯ ಕೂರುಮಣೆಯಾಗಲಿ, ಸರಕುಚಾಚಿನ ಕಡಿಮೆ ಗಾತ್ರಕ್ಕಾಗಲಿ ಬಂಡಿ ತಯಾರಕರು ತಲೆ ಕೆಡಿಸಿಕೊಳ್ಳುವುದು ಕಡಿಮೆ. ಪೋರ‍್ಡ್ ಮುಸ್ಟ್ಯಾಂಗ್ ಕೂಡ ಇದಕ್ಕೆ ಹೊರತಾಗಿಲ್ಲ.

ದೆಹಲಿಯ ಮಳಿಗೆಯಲ್ಲಿ 65 ಲಕ್ಶ ಮತ್ತು ಮುಂಬಾಯಿಯ ಮಳಿಗೆಗಳಲ್ಲಿ 66.5 ಲಕ್ಶ ಬೆಲೆಹೊತ್ತು (ಇದರಲ್ಲಿ ಯಾವುದೇ ತೆರಿಗೆ, ಮುಂಗಾಪು (Insurance) ಮುಂತಾದವುಗಳು ಸೇರಿಲ್ಲ) ಮಾರಾಟಕ್ಕೆ ಅಣಿಗೊಂಡಿದೆ. ಮುಂದಿನ ದಿನಗಳಲ್ಲಿ ನಮ್ಮ ಬೆಂಗಳೂರು, ಮಂಗಳೂರುಗಳು ಸೇರಿದಂತೆ ಬಾರತದ ಹೆಚ್ಚಿನ ಮಳಿಗೆಗಳಲ್ಲಿ ಇದು ಮಾರಾಟಕ್ಕೆ ಸಿಗುವ ಸುದ್ದಿಯಿದೆ.

ಕೊನೆಯದಾಗಿ ಹೇಳಬೇಕೆಂದರೆ ಈ ಮೊದಲು ಮುಸ್ಟ್ಯಾಂಗ್ ಬಂಡಿಯನ್ನು ಬೇರೆ ನಾಡುಗಳಿಂದ ಬಾರತದ ಮಂದಿ ದುಬಾರಿ ಬೆಲೆಯಲ್ಲಿ ತರಿಸಿಕೊಂಡು ಓಡಿಸಬಹುದಿತ್ತು, ಅದು ಎಡಗಯ್ ಓಡಿಸುಗರ ಏರ‍್ಪಾಟು (Left Hand Driving) ಹೊಂದಿತ್ತು. ಇದೀಗ ಬಾರತದ ಪೋರ‍್ಡ್ ಕಾರ‍್ಕಾನೆಯಿಂದ ನಮ್ಮ ಬಲಗಯ್ ಓಡಿಸುಗರ ಏರ‍್ಪಾಟಕ್ಕೆ ತಕ್ಕ ಮುಸ್ಟ್ಯಾಂಗ್ ನಮಗೆ ಸಿಗಲಿದೆ ಎನ್ನುವುದು ಸಿಹಿ ಸುದ್ದಿಯೇ ಸರಿ.

(ಮಾಹಿತಿ ಮತ್ತು ತಿಟ್ಟ ಸೆಲೆ: autocarindia.com, in.ford.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: