‘ಸಾಹಿತ್ಯ ಸೇವೆ, ಏನು ಹಾಗೆಂದರೆ?’ – ಬೀಚಿ

– ಸುಂದರ್ ರಾಜ್.

beechi

ಬೀಚಿಯವರ ಮೂಲ ಹೆಸರು ರಾಯಸಂ ಬೀಮಸೇನರಾವ್. ಅನಕ್ರು ಅವರ ‘ಸಂದ್ಯಾರಾಗ’ ಕಾದಂಬರಿಯನ್ನೋದಿ, ತಾವೂ ಬರೆಯಬೇಕೆಂದು ನಿರ‍್ದರಿಸಿದರು. ಆಗ ಅವರು ಬರೆದ ಮೊದಲ ಕ್ರುತಿ ‘ದಾಸಕೂಟ’ – ಅವರಿಗೆ ತುಂಬ ಹೆಸರು ತಂದ ಕ್ರುತಿ. ನಂತರ ಬೀಚಿ ಹೆಸರಿನಿಂದ ತಮ್ಮ ಹಾಸ್ಯ ಕ್ರುತಿಗಳನ್ನು ರಚಿಸಿ ನಮ್ಮೆಲ್ಲರಿಗೆ ಚಿರ ಪರಿಚಿತರಾದರು. ಅವರ ಲೇಕನದ ಪ್ರದಾನ ಪಾತ್ರದಾರಿ ತಿಮ್ಮ. ಹೀಗಾಗಿ ‘ತಿಮ್ಮನ ತಲೆ’, ‘ಬೆಳ್ಳಿ ತಿಮ್ಮ ನೂರೆಂಟು ಹೇಳಿದ’, ‘ತಿಮ್ಮಾಯಣ’, ‘ತಿಮ್ಮ ಸತ್ತ’, ‘ಅಂದನಾ ತಿಮ್ಮ’ – ಹೀಗೆ ಅನೇಕ ಕ್ರುತಿಗಳನ್ನು ಬರೆದರು. ಅಲ್ಲದೆ ಕೆಲವು ನಾಟಕಗಳನ್ನೂ ಬರೆದು ಪ್ರಸಿದ್ದರಾದರು. ಅವರ ಜೀವನಚರಿತ್ರೆಯನ್ನಾದರಿಸಿ ಬರೆದ ‘ನನ್ನ ಬಯಾಗ್ರಪಿ’ ವೈಶಿಶ್ಟ್ಯಪೂರ‍್ಣವಾದದ್ದು. “ಸತ್ಯವನು ಅರಿತವನು ಸತ್ತಂತೆ ಇರಬೇಕು” ಎಂಬುದು ಅವರ ಪ್ರಸಿದ್ದ ಹೇಳಿಕೆಯಾಗಿತ್ತು. 1980ರಲ್ಲಿ ಅವರು ಇಲ್ಲವಾದಾಗ ಅವರಿಗೆ 67 ವರ‍್ಶಗಳಾಗಿತ್ತು.

ಒಮ್ಮೆ ಅವರ ಕಿರಿಯ ಮಿತ್ರರೊಬ್ಬರು ಬೇಟಿಯಾದರು. ಲೋಕಾಬಿರಾಮವಾಗಿ ಮಾತನಾಡುತ್ತಾ ಬೀಚಿಯವರಿಗೆ ಕೇಳಿದರು, ‘ನೀವು ಎಶ್ಟು ವರ‍್ಶಗಳಿಂದ ಸಾಹಿತ್ಯ ಸೇವೆ ಮಾಡುತ್ತಿದ್ದೀರಿ ಸರ‍್?’ ಎಂದು. ಆ ಪ್ರಶ್ನೆಯನ್ನು ಕೇಳಿ ಬೀಚಿಯವರು ನಕ್ಕು ಕೇಳಿದರು, ‘ಸಾಹಿತ್ಯ ಸೇವೆ, ಏನು ಹಾಗೆಂದರೆ?’. ಅದನ್ನು ಕೇಳಿ ಅವರ ಮಿತ್ರ ನಿರುತ್ತರನಾದ. ಆಗ ಬೀಚಿ ಹೇಳಿದರು, ‘ನನ್ನದು ಸಾಹಿತ್ಯ ಸೇವೆಯಲ್ಲ. ಕೇವಲ ಬರೆಯುವ ಚಟ. ಇನ್ನುಳಿದ ಚಟಗಳೊಂದಿಗೆ ಇದೂ ಒಂದು ಅಶ್ಟೆ’ ಎಂದರು.

ಅವರ ಪ್ರಕಾರ ರಾಮಾಯಣ ರಚಿಸಿದ ವಾಲ್ಮೀಕಿ, ಮಹಾಬಾರತ ರಚಿಸಿದ ವ್ಯಾಸರೂ ತಮ್ಮದು ಸಾಹಿತ್ಯ ಸೇವೆ ಎಂದು ಅಂದುಕೊಂಡಿರಲಿಲ್ಲ. ಅಂತಹದ್ದರಲ್ಲಿ ತನ್ನ ಬರವಣಿಗೆಯನ್ನು ಸಾಹಿತ್ಯ ಸೇವೆ ಎಂದು ಪರಿಗಣಿಸಲಾದೀತೆ ಎಂಬುದು ಅವರ ಪ್ರಾಮಾಣಿಕ ಅನಿಸಿಕೆಯಾಗಿತ್ತು.

(ಚಿತ್ರ ಸೆಲೆ: balapamagazine.blogspot.in )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *