ಹಸಿರು ಮನೆ ಮತ್ತು ಪರಿಣಾಮಗಳು-2ನೇ ಕಂತು

– ಡಾ. ರಾಮಕ್ರಿಶ್ಣ ಟಿ.ಎಮ್.

global warming

ಈ ಹಿಂದಿನ ಬರಹದಲ್ಲಿ ತಿಳಿದುಕೊಂಡಂತೆ ಹಸಿರುಮನೆ ಪರಿಣಾಮಕ್ಕೆ ಕಾರಣವಾಗುವ ಅನಿಲಗಳು ಇನ್ನೂ ಇವೆ.ಅವುಗಳನ್ನು ತಿಳಿಯೋಣ ಬನ್ನಿ.

ನೈಟ್ರಸ್ ಆಕ್ಸೈಡ್‍ಗಳು:  ವಾತಾವರಣದಲ್ಲಿ  ಶೇಕಡ 6% ಅಂದರೆ  ವಾತಾವರಣದಲ್ಲಿ 301 ಪಿಪಿಬಿಗಳು (ಪಾರ‍್ಟ್ಸ್ ಪರ್ ಬಿಲಿಯನ್). ಬೂಮಿಯ ಮೇಲ್ಮಯ್ ಮತ್ತು ಸಮುದ್ರಗಳಿಂದ ನೈಸರ‍್ಗಿಕವಾಗಿ ನೈಟ್ರಸ್ ಆಕ್ಸೈಡ್ ಉತ್ಪಾದನೆಯ ಮೂಲಗಳು. ಬೇಸಾಯದಲ್ಲಿ ಬಳಸುವ ರಸಾಯನಿಕ ಗೊಬ್ಬರ, ನೈಲಾನ್ ತಯಾರಿ ಕಾರ‍್ಕಾನೆ, ಅವಯವ ವಸ್ತುಗಳು, ಪಳಿಯುಳಿಕೆ ಇಂದನಗಳ ಉರಿಯುವಿಕೆ, ಅಮೋನಿಯಮ್‍ನ್ನು ಕಾಯಿಸಿದಾಗ ನೈಟ್ರಸ್ ಆಕ್ಸೈಡ್‍ಗಳು ತಯಾರಾಗುತ್ತವೆ.

ಹ್ಯಾಲೋ ಕಾರ‍್ಬನ್‍ಗಳು: ಇವು ಮಾನವ ತಯಾರಿಸಿದ ರಸಾಯನಿಕ ಸಂಯುಕ್ತ ವಸ್ತುಗಳು ಉದಾಹರಣೆಗೆ ಬ್ರೋಮಿನ್, ಕ್ಲೋರಿನ್, ಪ್ಲೋರಿನ್ ಮತ್ತು ಕಾರ‍್ಬನ್ ಹ್ಯಾಲೋಕಾರ‍್ಬನ್‍ಗಳು, ಕಾರ‍್ಕಾನೆಗಳಲ್ಲಿ ಮತ್ತು ಮನೆಗಳಲ್ಲಿ ಉತ್ಪತ್ತಿಯಾಗುವ ಕ್ಲೋರೋ ಪ್ಲೊರೋ ಕಾರ‍್ಬನ್‍ಗಳು(CFC) ಸಾಮಾನ್ಯವಾದ ಹ್ಯಾಲೋಕಾರ‍್ಬನ್‍ಗಳು. ಈ ಸಿ.ಎಪ್.ಸಿ.ಗಳು(CFC) ಹೆಚ್ಚು ಶಾಕವನ್ನು ಹಿಡಿದಿಡುವ ಪರಿಣಾಮಕಾರಿ ಹಸಿರು ಮನೆ ಅನಿಲಗಳೆಂದೆ ಪ್ರಸಿದ್ದಿಯಾಗಿವೆ. ಕೆಲವು ಸಿ.ಎಪ್.ಸಿ.ಗಳು ಕಾರ‍್ಬನ್ ಡೈಯಾಕ್ಸೈಡ್‌ಗಿಂತ 7000 ಪಟ್ಟು ಹೆಚ್ಚು ಪರಿಣಾಮಕಾರಿ ಹಸಿರು ಮನೆ ಅನಿಲಗಳೆಂದು ತಿಳಿದಿದೆ. ಸಾಮಾನ್ಯ ಸಿ.ಎಪ್.ಸಿ.ಗಳು ಕಾರ‍್ಬನ್ ಡೈಯಾಕ್ಸೈಡ್‌ಗಿಂತ 40 ಪಟ್ಟು ಶಾಕವನ್ನು ಹೀರಿಕೊಳ್ಳುತ್ತವೆ. ಈ ಸಿ.ಎಪ್.ಸಿ.ಗಳನ್ನು ಪ್ರಿಡ್ಜ್‌ಗಳಲ್ಲಿ ಶೀತಕ(ಕೂಲಂಟ್), ಹವಾನಿಯಂತ್ರಿಕಗಳಲ್ಲಿ, ಎರೋಸಾಲ್‍ಗಳು, ಪೋಮ್‍ನಂತ ಪ್ಯಾಕೇಜಿಂಗ್ ವಸ್ತುಗಳಲ್ಲಿ ಬಳಸುವುದನ್ನು ನೋಡಿರಬಹುದು.ಇದರ ಬಗೆಗಳಾದ ಸಿ.ಎಪ್.ಸಿ-11 ಮತ್ತು ಸಿ.ಎಪ್.ಸಿ-12 ವಾತಾವರಣದಲ್ಲಿ 384 ಪಿಪಿಎಮ್‌ಗಳಶ್ಟು ಇವೆ.

1997ರ ಕ್ಯೊಟೋ ಅದಿಕ್ರುತ ಸೂತ್ರದ ಪ್ರಕಾರ ಮೂರು ಅನಿಲಗಳು ಎಂದರೆ ಹೈಡ್ರೋಪ್ಲೊರೋಕಾರ‍್ಬನ್‍ಗಳು (ಎಚ್.ಎಪ್.ಸಿ.), ಪರ್‌ಪ್ಲೊರೋಕಾರ‍್ಬನ್‍ಗಳು (ಪಿ.ಎಪ್.ಸಿ.) ಮತ್ತು ಸಲ್ಪರ್ ಹೆಕ್ಸಾಕ್ಲೋರೈಡ್‍ಗಳು (ಎಸ್.ಎಪ್ 6) ಬಹು ಮುಕ್ಯವಾದ ಹಸಿರು ಮನೆ ಅನಿಲಗಳೆಂದು ಪರಿಗಣಿಸಲಾಗಿದೆ.

ಓಜೋನ್: ಟ್ರೊಪೋಸ್ಪಿಯರ್‍ನ ಓಜೋನ್ ಮತ್ತೊಂದು ಮುಕ್ಯವಾದ ಹಸಿರು ಮನೆ ಅನಿಲ. ಕಾರ‍್ಕಾನೆಗಳಲ್ಲಿ ಬಳಸುವ ವಿವಿದ ರಸಾಯನಿಕಗಳಿಂದ ತಯಾರಾಗುತ್ತದೆ. ನೈಸರ‍್ಗಿಕವಾಗಿ ಅಲ್ಲದೆ ನೈಟ್ರಜನ್ ಆಕ್ಸೈಡ್‌ಗಳು ಮತ್ತು ಹೈಡ್ರೊಕಾರ‍್ಬನ್‍ಗಳು ಮೊಟಾರು ವಾಹನಗಳು ಹೊರಹಾಕುತ್ತವೆ. ಅವುಗಳಲ್ಲಿ ಕಾರ‍್ಬನ್ ಮೊನಾಕ್ಸೈಡ್ ಅನಿಲ, ಆಮ್ಲಜನಕ ಸಂಯೊಜನೆಯಿಂದ (ಉತ್ಕರ‍್ಶಣದಿಂದ) ತಯಾರಿಸುತ್ತವೆ. ಹಸಿರು ಮನೆ ವಾತಾವರಣದಲ್ಲಿ ಓಜೋನ್‍ನ ಕೊಡುಗೆಯ ಪ್ರಮಾಣ ಎಶ್ಟು ಎಂಬುದನ್ನು ತಿಳಿಯಲಿಕ್ಕೆ ಅಸಾದ್ಯ. ಇದಕ್ಕೆ ಕಾರಣ ಓಜೋನ್ ವಾತಾವರಣದಲ್ಲಿರುವುದು ಕೇವಲ ಕೆಲವು ಕ್ಶಣಗಳು  ಮಾತ್ರ.

ನೀರಿನ ಆವಿ: ನೀರಿನ ಆವಿ ಇದನ್ನು ಸಾಮಾನ್ಯವಾಗಿ ಎಲ್ಲಾ ಜೀವಿಗಳು ಉಸಿರಾಟ ಪ್ರಕ್ರಿಯೆಯಿಂದ, ಸಸ್ಯಗಳು ಬಾಶ್ಪೀಕರಣದಿಂದ ಹೊರಹಾಕುತ್ತವೆ. ಜತೆಗೆ, ಹೆಚ್ಚಿದ ಬೂಮಿಯ ತಾಪಮಾನದಿಂದಾದ ನೀರಿನ ಆವಿಯಾಗಿ ವಾತಾವರಣವನ್ನು ಸೇರುತ್ತವೆ.

ಹಸಿರುಮನೆ ಅನಿಲಗಳು ಹೇಗೆ ಬೂಮಿಯ ಶಾಕ ಹೆಚ್ಚಿಸುತ್ತಿವೆ ನೋಡಿ!

ಕೈಗಾರಿಕಾ ಕ್ರಾಂತಿಯಿಂದ ಹಿಡಿದು ಇಲ್ಲಿಯವರೆಗೆ ಕಾರ‍್ಬನ್ ಡೈಯಾಕ್ಸೈಡ್ ತೀವ್ರತೆ ಶೇಕಡ 30%, ಮೀತೆನ್ ತೀವ್ರತೆ ಶೇಕಡ ಎರಡರಶ್ಟು ಮತ್ತು ನೈಟ್ರಸ್ ಆಕ್ಸೈಡ್‍ಗಳ ಕೇಂದ್ರೀಕರಣ ಶೇಕಡ 15% ಹೆಚ್ಚಾಗಿದೆ. ಮೋಟಾರು ವಾಹನಗಳಲ್ಲಿ ಶಕ್ತಿಯ ಇಂದನ ಬಳಕೆ, ಹಾಗೇಯೇ, ಮನೆಯ ತಾಪಮಾನ ಹೆಚ್ಚಿಸಲು ಬಳಸಿದ ಇಂದನ ಶೇಕಡ 80% ಕಾರ‍್ಬನ್ ಡೈಯಾಕ್ಸೈಡ್ ಹೊರಹಾಕುತ್ತವೆ. ಉತ್ತರ ಅಮೇರಿಕಾದಿಂದ ಮಾತ್ರ ಶೇಕಡ 25% ಮೀತೆನ್ ಹೊರಬರುತ್ತಿದೆ. ಒಟ್ಟಾರೆ ಪ್ರಪಂಚದಲ್ಲೆಡೆಯ ನಾಡು ಶೇಕಡ 20% ನೈಟ್ರಸ್‌ಆಕ್ಸೈಡ್‍ಗಳನ್ನು ಹೊರಹಾಕುತ್ತಿವೆ. ಆಹಾರ ತಯಾರಿಕೆಯನ್ನು ದ್ವಿಗುಣಗೊಳಿಸಲು ಹೆಚ್ಚಿದ ಬೇಸಾಯ, ಅಡೆತಡೆಯಿಲ್ಲದ ಕಾಡಿನ ನಾಶ, ಕೈಗಾರಿಕೆ ಮತ್ತು ಗಣಿಗಾರಿಕೆಗಳಿಂದ ಹಸಿರು ಮನೆ ಅನಿಲಗಳ ಹೊರಹಾಕುವಿಕೆ ಹೆಚ್ಚುತ್ತ ಸಾಗಿದೆ.

ಕಾರ‍್ಬನ್ ಡೈಯಾಕ್ಸೈಡ್ ಅಣುಗಳನ್ನು ಇನ್ನೆರಡು ಮುಕ್ಯವಾದ ಅನಿಲಗಳಾದ ಸಿ.ಎಪ್.ಸಿ.-11, ಸಿ.ಎಪ್.ಸಿ.-12 ಹೋಲಿಸಿದರೆ, ಅವು 4300 ರಿಂದ 7100ರಶ್ಟು ಹೆಚ್ಚು ಶಾಕವನ್ನು ಹೀರಿಕೊಳ್ಳುತ್ತವೆ. ಓಜೋನ್ ಸುಮಾರು 2000 ಪಟ್ಟು, ನೈಟ್ರಸ್‌ ಆಕ್ಸೈಡ್‍ಗಳು ಸುಮಾರು 270ಪಟ್ಟು, ಮೀತೆನ್ 30ಪಟ್ಟು ಶಾಕ ಹೀರಬಲ್ಲವು. ಆದುದರಿಂದ ಕಾರ‍್ಬನ್ ಡೈಯಾಕ್ಸೈಡ್‌ಗಿಂತ ಇತರೆ ಅಣುಗಳು ಹೆಚ್ಚು ಶಾಕ ಹೀರಿಕೊಳ್ಳುವ ಪರಿಣಾಮಕಾರಿ ಅನಿಲಗಳೆಂದು  ತಿಳಿಯುತ್ತದೆ. ಒಂದು ಮೀತೆನ್ ಅಣು 10 ವರ‍್ಶಗಳ ಕಾಲ, ಸಿ. ಎಪ್. ಸಿ.ಗಳು 70-170 ವರ‍್ಶಗಳು ಮತ್ತು ನೈಟ್ರಸ್ ಆಕ್ಸೈಡ್‍ಗಳು 170 ವರ‍್ಶಗಳ ಕಾಲ ವಾತಾವರಣದಲ್ಲಿ ಯಾವ ಬದಲಾವಣೆಯಿಲ್ಲದೆ ಉಳಿದಿರುತ್ತವೆ. ಆದಕಾರಣ ವಾತಾವರಣ ವಿಜ್ಞಾನಿಗಳು ಈ ಮೇಲೆ  ತಿಳಿಸಿದ ಅನಿಲಗಳನ್ನು ಬಳಸಬಾರದೆಂದು ಒತ್ತಡ ಹಾಕಿದ್ದಾರೆ.

1987ರ ಮಾಹಿತಿ ಪ್ರಕಾರ ಯು.ಎಸ್.ಎ. ಶೇಕಡ 18% ರಶ್ಟು ಇಂತ ಅನಿಲಗಳನ್ನು ವಾತಾವರಣಕ್ಕೆ ವಿಸರ‍್ಜಿಸಿ ಮೊದಲನೆ ಸ್ತಾನ ಪಡೆದಿತ್ತು. ನಂತರದ ಸ್ತಾನ ಅನುಕ್ರಮವಾಗಿ ರಶ್ಯ ಮತ್ತು ಸೋವಿಯತ್ ದೇಶಗಳು (ಶೇಕಡ 12%), ಬ್ರೆಜಿಲ್ (ಶೇಕಡ 10.5%) ಪಾಲಾಗಿತ್ತು. ಒಟ್ಟಾರೆಯಾಗಿ ಪ್ರಗತಿಹೊಂದಿದ ದೇಶಗಳು 73% ಮತ್ತು ಪ್ರಗತಿ ಹಾದಿಯಲ್ಲಿರುವ ದೇಶಗಳು 27% ಕಾರ‍್ಬನ್ ಡೈಯಾಕ್ಸೈಡ್ ಹೊರಹಾಕುತ್ತವೆ ಎಂದು ಅಂದಾಜಿಸಲಾಗಿದೆ. 2035ಕ್ಕೆ ಪ್ರಪಂಚದಲ್ಲಿ ಪ್ರಗತಿಯಲ್ಲಿರುವ ದೇಶಗಳು ಶೇಕಡ 50% ರಶ್ಟು ಬೂಮಂಡಲದ ಹಸಿರು ಮನೆ ಅನಿಲಗಳಿಗೆ ಕಾರಣವಾಗುತ್ತವೆಂದು ತಿಳಿದಿದೆ.

ಪ್ರಪಂಚದಲ್ಲಿ ಹೆಚ್ಚುತ್ತಿರುವ ಶಾಕದ ಪರಿಣಾಮಗಳು:

ಕೆಲವೇ ಸೆಲ್ಸಿಯಸ್ ತಾಪಮಾನದ ಏರಿಕೆ ಅನೇಕ ತೊಂದರೆಗಳಿಗೆ ಕಾರಣವಾಗುತ್ತದೆ. ಯುನೈಟೆಡ್ ನೇಶನ್ಸ್ ಎನ್‍ವಿರೋನ್‍ಮೆಂಟ್ ಪ್ರೊಗ್ರಾಮ್ ಸ್ತಾಪಿಸಿದ ಇಂಟರ್ ಗೌರ‍್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೆಟ್ ಚೇಂಜ್(IPCC) ಎನ್ನುವ ಸಂಸ್ತೆ ಶಾಕ ಏರಿಕೆಗೆ ಕಾರಣ ತಿಳಿಯಲು ಅಂತರಾಶ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕವಾಗಿ ಪರಿಸರ ಬದಲಾವಣೆ ಬಗ್ಗೆ ವಿಶಯಗಳನ್ನು ಸಂಗ್ರಹಿಸಲು ನೇಮಿಸಿದ ಒಂದು ಸಂಸ್ತೆ. 1990ರ ಈ ಸಂಸ್ತೆ ಐಪಿಸಿಸಿ(IPCC) ತಪಾಸಣೆಯಿಂದ ತಿಳಿದ ವಿಶಯಗಳು ಹೀಗಿವೆ- 1) ಹಸಿರು ಮನೆ ಅನಿಲಗಳ ಇರುವಿಕೆ ಮತ್ತು 2) ಅನಿಲಗಳ ಶೇಕರಣೆ ಹೆಚ್ಚಾಗುತ್ತಿದ್ದಂತೆ ಹವಾಮಾನ ಕೂಡ ಬದಲಾಗುತ್ತದೆ. 3) ಪರಿಸರದ ಮೇಲೆ ಮಾನವನ ಹಸ್ತಕ್ಶೇಪವಿದೆ ಎಂಬುದು ತಿಳಿಯುತ್ತದೆ. ಈ ವಿಶಯವನ್ನು 1996ರ ವರದಿಯು ದ್ರುಡಪಡಿಸುತ್ತದೆ. ಇತ್ತಿಚೀನ ವೈಜ್ಞಾನಿಕ ತಪಾಸಣೆಯಿಂದ ತಿಳಿದ ವಿಶಯವೆಂದರೆ ಪ್ರಪಂಚದಲ್ಲಿ ಹೆಚ್ಚಿದ ಸರಾಸರಿ ಶಾಕವು ಅನೇಕ ಕೆಟ್ಟ ಪರಿಣಾಮ ಬೀರಿದೆ. ಇದರಲ್ಲಿ ಪ್ರಮುಕವು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಅ) ಬೂಮಂಡಲದ ಶಾಕದ ಏರಿಕೆ: 19ನೇ ಶತಮಾನದಿಂದ ಈಚೆಗೆ 0.6 ರಿಂದ 1.2 ಡಿಗ್ರಿ ಪ್ಯಾರನ್ ಹೀಟ್‍ನಶ್ಟು ಬೂಮಂಡಲದ ಶಾಕ ಏರಿಕೆಯಾಗಿದೆ. ಕಳೆದ 15 ವರುಶಳಲ್ಲಿ ಸುಮಾರು 10 ವರುಶಗಳು ಇಲ್ಲಿಯವರೆಗೆ ಹೆಚ್ಚು ತಾಪಮಾನ ಹೊಂದಿದ ವರುಶಗಳೆಂದು ದಾಕಲೆಯಾಗಿವೆ. ಅದರಲ್ಲಿ 2005 ಸಹ ಹೆಚ್ಚು ತಾಪಮಾನದ ವರ‍್ಶವಾಗಿದೆ. 1850ರ ನಂತರದ ವರ‍್ಶಗಳಲ್ಲಿ ಬೂಮಂಡಲದ ಸರಾಸರಿ ಮೇಲ್ಮಯ್ ತಾಪವು 1.0 ಯಿಂದ 3.5 ಡಿಗ್ರಿ ಪ್ಯಾರನ್ ಹೀಟ್ ಹೆಚ್ಚಾಗಿದೆ (ಇದು 2100ನೇ ವರ‍್ಶಕ್ಕೆ 2-6 ಡಿಗ್ರಿ ಪ್ಯಾರನ್ ಹೀಟ್ ಆಗುತ್ತದೆ). ಇದು ಜೀವಿಗಳ ಬದುಕಿಗೆ ತೊಂದರೆ ಮಾಡುವುದು ಕಚಿತ.

Temperature increase(ಬೂಮಂಡಲದಲ್ಲಿ ಹೆಚ್ಚುಗೊಂಡ ಶಾಕದ ವಿವರ ತೋರಿಸುವ ಮಾರ‍್ಪುತಿಟ್ಟ)

ಆ) ಸಮುದ್ರ ಮಟ್ಟದ ಏರಿಕೆ: ಹೆಚ್ಚಿದ ತಾಪಮಾನದಿಂದ ಉತ್ತರಾರ‍್ದ ಕಂಡದಲ್ಲಿ ಹಿಮದ ರಾಶಿಗಳು ಮತ್ತು ಆರ‍್ಕಿಟಿಕ್ ಸಮುದ್ರದಲ್ಲಿ ತೇಲುವ ಹಿಮಗಡ್ಡೆಗಳು ಕಡಿಮೆಯಾಗುತ್ತ ಸಾಗಿವೆ ಅಂದರೆ ಹಿಮದ ರಾಶಿಗಳು ನೀರಾಗಿ ಕರಗುತ್ತಿವೆ. ಹಿಂದಿನ ಶತಮಾನಕ್ಕಿಂತ ಸಮುದ್ರ ಮಟ್ಟ 4-6 ಇಂಚುಗಳು ಏರಿಕೆ ಕಂಡಿವೆ.  2050ಕ್ಕೆ ಶೀಗ್ರ ಗತಿಯಲ್ಲಿ ಮೂರು ಪಟ್ಟು ತಾಪಮಾನ ಹೆಚ್ಚಾಗುತ್ತದೆ ಎಂದು ಹೇಳಲಾಗಿದ್ದು ಇದರ ಜತೆಗೆ ಸಮುದ್ರ ಮಟ್ಟ ಎಂಟು ಇಂಚು ಏರಲಿದೆ. ಆದಕಾರಣ, ಸಮುದ್ರದ ಕೆಳಮಟ್ಟದಲ್ಲಿರುವ ಪ್ರದೇಶಗಳು ಮತ್ತು ಸಮುದ್ರ ದಡದಲ್ಲಿ ವಾಸಮಾಡುವ ಜನಸಂದಣಿಗೆ ವಾಸಿಸಲು ಸ್ತಳವಿಲ್ಲದಾಗುತ್ತದೆ. ಬಾಂಗ್ಲಾದೇಶ, ಇಂಡೊನೇಶ್ಯ, ಪಾಕಿಸ್ತಾನ, ತೈಲ್ಯಾಂಡ್, ಮಾಲ್ಡೀವ್ಸ, ಮೋಜಾಂಬಿಕ್, ಸೆನೆಗಲ್, ಈಜಿಪ್ಟ್, ಸೂರಿನಾಮ್ ದೇಶಗಳು ಇದರ ಬಾರಿ ಪರಿಣಾಮ ಏದುರಿಸಲಿವೆ. ಬಾರತದ ಚೆನ್ನೈ, ಕೋಲ್ಕತ್ತಾ, ಕೇರಳ,  ಸೀಮಾಂದ್ರ, ಕರ‍್ನಾಟಕ, ಗೋವಾ ಮತ್ತು ಗುಜರಾತ್ ರಾಜ್ಯಗಳ ತೀರಗಳು ಇದರ ಪ್ರಬಾವ ಅನುಬವಿಸಲಿವೆ.

ಇ) ಜಲಚಕ್ರದಲ್ಲಿ ಅಡಚಣೆ: ಬೂಮಂಡಲದ ಎಲ್ಲಾ ದೇಶಗಳಲ್ಲಿ ಶೇಕಡ ಒಂದು ಬಾಗ ಮಳೆ ಮತ್ತು ಮಂಜು ಬೀಳುವುದು ಸಾಮಾನ್ಯವಾಗುತ್ತದೆ, ಶಾಕದ ಏರಿಕೆಯಿಂದ ನೀರಿನ ಆವಿ ವಾತಾವರಣ ಸೇರುವುದು ಹೆಚ್ಚಾಗುತ್ತದೆ.  ಆದ್ದರಿಂದ ಪ್ರಪಂಚದ ವಿವಿದ ಬಾಗಗಳಲ್ಲಿ ಅದಿಕ ಪ್ರಮಾಣದಲ್ಲಿ ಮಳೆ ಬೀಳುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ ಮಳೆಯ ರಬಸದಿಂದ ಅತಿವ್ರುಶ್ಟಿಯಾಗುತ್ತ ನದಿಗಳು ಉಕ್ಕಿ ಹರಿದು,ಪ್ರವಾಹಗಳು ಸಾಮಾನ್ಯವಾಗುತ್ತವೆ. ಪ್ರವಾಹಗಳಿಂದ ನೀರು ಕಲುಶಿತವಾಗಿ ರೋಗಾಣುಗಳು ಎಲ್ಲ ಕಡೆ ಹರಡಿಕೊಳ್ಳುತ್ತವೆ.

ಈ) ಆರೋಗ್ಯದ ಮೇಲೆ ದುಶ್ಟ ಪರಿಣಾಮಗಳು: ವಾತಾವರಣ ಬದಲಾವಣೆಯು ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೆಚ್ಚಿದ ತಾಪ, ಶಾಕದ ಅಲೆಗಳ ಕಂಪನವನ್ನು ಹೆಚ್ಚು ಮಾಡುತ್ತದೆ. ಇಂತಹ ಶಾಕದ ಪ್ರಹಾರಕ್ಕೆ ತುತ್ತಾಗಿ ಲಕ್ಶಾಂತರ ಜನ ಸಾಯಬಹುದು. ಶಾಕ ಹೆಚ್ಚಾದಂತೆ ಮನುಶ್ಯರು ಹ್ರುದ್ರೋಗ ಮತ್ತು  ಹ್ರುದಯಾಗಾತಗಳಿಗೆ ತುತ್ತಾಗುತ್ತಾರೆ. ಹೆಚ್ಚಿದ ಉಶ್ಣತೆಯಿಂದ ಜನತೆ ಒಂದು ಪ್ರದೇಶದಲ್ಲಿ ವಾಸ ಮಾಡಲಿಕ್ಕೆ ಸಾದ್ಯವಾಗದೇ ಬೇರೆ ಸ್ತಳಗಳಿಗೆ ವಲಸೆ  ಹೋಗಬೇಕಾದ ಸಮಸ್ಯೆ ತಲೆದೋರುತ್ತದೆ.

ಶಾಕ ಚಲಿಸದೇ ನಿಂತಾಗ, ಗಾಳಿಯಲ್ಲಿರುವ ಹೊಗೆ ಕಣಗಳು, ವಿಶದ ಅನಿಲಗಳು ಸೇರಿ ರಸಾಯನಿಕ ಕ್ರಿಯೆಗಳು ವೇಗವಾಗಿ ನಡೆದು ಕಲುಶಿತ ರಸಾಯನಿಕ ವಸ್ತುಗಳನ್ನು ತಯಾರಿಸುತ್ತವೆ. ಇಂತಹ ಕಲುಶಿತ ವಸ್ತುಗಳು ಮಾನವರ ಶ್ವಾಶಕೋಶಗಳಿಗೆ ಸೇರಿ ಬ್ರಾಂಕೈಟಿಸ್ ಮತ್ತು ಆಸ್ತಮ ರೋಗಗಳಿಗೆ ಕಾರಣವಾಗುತ್ತದೆ. ಇನ್ನೂ ಹೆಚ್ಚಿದ ಶಾಕದಲ್ಲಿ ಇಂತಹ ರೋಗಾಣುಗಳು ದ್ವಿಗುಣಗೊಳ್ಳುವ ಸಾದ್ಯತೆ ಹೆಚ್ಚು ಅಲ್ಲದೇ ಇವುಗಳು ವ್ಯಾಪಕವಾಗಿ ಎಲ್ಲ ಕಡೆ ಹರಡುತ್ತವೆ. ಬಾರತದಲ್ಲಿ 1998ರ ಬೇಸಿಗೆಯ ಶಾಕದ ಬೇಗೆಗೆ ಸತ್ತ ಜನರು 1300 (6).

ಉ) ರೋಗ ಮತ್ತು ರೋಗಾಣುಗಳ ಹರಡುವಿಕೆ: ವಾತಾವರಣ ಬದಲಾದಂತೆ ಶಕ್ತಿಯುತ ರೋಗಾಣುಗಳ ವರ‍್ಗಾವಣೆ ಹೆಚ್ಚುತ್ತದೆ. ಶಕ್ತಿಯುತ ರೋಗಗಳಾದ ಮಲೇರಿಯ, ಡೆಂಗ್ಯು ಮತ್ತು ಎಲ್ಲೊ ಪಿವರ್‍ಗಳು ಕೀಟಗಳಿಂದ ಅಮೇರಿಕ ಮತ್ತು ಯುರೋಪ್‌ನಂತ. ಶೀತವಲಯದ ದೇಶಗಳಲ್ಲಿ ಸಹ ಹರಡಲು ಮೊದಲಿಡುತ್ತವೆ. 21ನೇ ಶತಮಾನದಲ್ಲಿ 45% ರಿಂದ 65% ಜನರಲ್ಲಿ ಕಾಯಿಲೆ ಕಾಣಿಸುತ್ತದೆ. ಅಂದರೆ ಪ್ರತಿ ವರ‍್ಶ 50-80 ಮಿಲಿಯನ್ ಜನರು ಮಲೇರಿಯಾಗೆ ತುತ್ತಾಗಿ ಸಾಯುತ್ತಾರಂತೆ.

ಊ) ಕಾಡು ಮತ್ತು ಕಾಡುಜೀವಿ ವ್ಯವಸ್ತೆಗಳಲ್ಲಿ ಏರುಪೇರು: ವಾತಾವರಣ ಬದಲಾದಂತೆ ಜೀವತಾಣ ವ್ಯವಸ್ತೆಯು ತೊಂದರೆಗೀಡಾಗುತ್ತವೆ. ಅನೇಕ ಜೀವಿಗಳು ಉಳಿಯಲು ಕಶ್ಟವಾಗಿ ಸತ್ತು ಹೋಗುತ್ತವೆ. ಹಲವಾರು ಸ್ಪೀಶೀಸ್‍ಗಳು (ಪ್ರಬೇದಗಳು species) ಸ್ತಳಾಂತರಗೊಳ್ಳುತ್ತವೆ ಅತವಾ ಹೇಳಿ ಹೆಸರಿಲ್ಲದಂತೆ ನಿರ‍್ನಾಮವಾಗುತ್ತವೆ.

ಎ) ಬೇಸಾಯದ ಮೇಲೆ ಪ್ರಬಾವ: ಬೇಸಾಯ ಮಾಡುವುದು ಕಶ್ಟವಾಗುತ್ತದೆ ಮತ್ತು ಪ್ರಪಂಚದಲ್ಲಿ ಆಹಾರ ಪದಾರ‍್ತಗಳ ಬೇಡಿಕೆ ಹೆಚ್ಚಾಗುತ್ತದೆ. ಮುಂದಿನ 50 ರಿಂದ 100 ವರ‍್ಶಗಳವರೆಗೆ ಆಹಾರ ಬೇಡಿಕೆಯು ಹೆಚ್ಚುತ್ತಾ ಹೋಗುತ್ತದೆ. ಅದನ್ನು ಸರಿದೂಗಿಸಲು ಸಾದ್ಯವಾಗುವುದಿಲ್ಲ. ಕಾರಣ, ಬೇಸಾಯದಲ್ಲಿ ಇಳುವರಿ ಕಡಿಮೆಯಾಗುತ್ತದೆ. ವರ‍್ಶ ಪೂರ‍್ತಿ ಮಳೆ ಬೀಳುವ ಬೂಮದ್ಯ ರೇಕೆಯ ಅಕ್ಕಪಕ್ಕದ ಪ್ರದೇಶದಲ್ಲಿ ಮಳೆಯೇ ಅಪರೂಪವಾಗುತ್ತದೆ. ಮಳೆ ಬರದೇ, ಬರಗಾಲ ತಲೆದೋರುತ್ತದೆ.

 

(ತಿಟ್ಟ ಸೆಲೆ: yr.no, churchmilitant.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks