ಅಲ್ಲಮನ ವಚನಗಳ ಓದು

– ಸಿ.ಪಿ.ನಾಗರಾಜ.

allamprabhu

ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ಕಲಿಯುಗದಲ್ಲಿ ಶ್ರೀಗುರು ಶಿಷ್ಯಂಗೆ ವಂದಿಸಿ ಬುದ್ಧಿಯ ಕಲಿಸಿದರೆ
ಆಗಲಿ ಮಹಾಪ್ರಸಾದವೆಂದೆನಯ್ಯ
ಗುಹೇಶ್ವರ ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆರಗಾದೆನು.

“ಕ್ರುತಯುಗ-ತ್ರೇತಾಯುಗ-ದ್ವಾಪರಯುಗ-ಕಲಿಯುಗ” ಎನ್ನುವ ಪದಗಳು 4 ಬಗೆಯ ಕಾಲಮಾನಗಳನ್ನು ಹೆಸರಿಸುತ್ತವೆ. ಹಿಂದಿನ ಕಾಲದಿಂದ ಇಂದಿನವರೆಗೆ ಮಾನವಕುಲ ಹುಟ್ಟಿ ಬೆಳೆದು ಬಾಳಿಬಂದ ಸಮಯವನ್ನು ಬಾರತೀಯ ಸಂಸ್ಕ್ರುತಿಯ ಜನಸಮುದಾಯವು ಈ ರೀತಿ 4 ಹಂತಗಳಲ್ಲಿ ಗುರುತಿಸಿಕೊಂಡಿದೆ. ಕ್ರುತಯುಗದಲ್ಲಿ ಮಾನವ ಸಮುದಾಯದಲ್ಲಿ ತುಂಬಾ ಒಳ್ಳೆಯತನದ ನಡೆನುಡಿಗಳು ಇದ್ದುವೆಂದು , ಮುಂದಿನ ಯುಗಗಳಲ್ಲಿ ಒಳ್ಳೆಯತನ ಕಡಿಮೆಯಾಗುತ್ತಾ ಬಂದು , ಇದೀಗ ಕಲಿಯುಗದಲ್ಲಿ ಮಾನವರ ನಡೆನುಡಿಗಳಲ್ಲಿ ಕೆಟ್ಟತನವೇ ಹೆಚ್ಚಾಗಿ ಕಂಡುಬರುತ್ತಿದೆಯೆಂಬ ಒಳಮಿಡಿತವು ಜನಮನದಲ್ಲಿ ನೆಲೆಯೂರಿದೆ.

ಆದರೆ ಈ ವಚನದಲ್ಲಿ ಅಲ್ಲಮನು ಒಂದು ಯುಗ ಕಳೆದು ಮತ್ತೊಂದು ಯುಗ ಬಂದಂತೆಲ್ಲಾ ಮಾನವರ ಅರಿವು ಹೆಚ್ಚಾಗುತ್ತಾ , ಅವರ ನಡೆನುಡಿಗಳಲ್ಲಿ ಇನ್ನೂ ಹೆಚ್ಚಿನ ಮಾನವೀಯ ಮಿಡಿತಗಳು ಅಂದರೆ ಸಹಜೀವಿಗಳ ಬಗ್ಗೆ ಒಲವು ಮತ್ತು ಕರುಣೆಯ ಒಳಮಿಡಿತಗಳು ಹಾಗೂ ಜವಾಬ್ದಾರಿಯುತವಾದ ವರ‍್ತನೆಗಳು ಕಂಡು ಬರುತ್ತಿವೆಯೆಂದು ಹೇಳುತ್ತಾ , ಅದನ್ನು 4 ಹಂತಗಳಲ್ಲಿ ಗುರು-ಗುಡ್ಡರ(ಶಿಶ್ಯ) ನಡುವಣ ನಂಟಿನಲ್ಲಿ ಉಂಟಾದ ಒಳಿತಿನ ಬೆಳವಣಿಗೆಯ ಮೂಲಕ ಚಿತ್ರಿಸಿದ್ದಾನೆ.

ತನ್ನ ಬಳಿ ಅರಿವನ್ನು ಪಡೆಯಲು/ವಿದ್ಯೆಯನ್ನು ಕಲಿಯಲು ಬಂದ ಹುಡುಗನ ಮಯ್ ಮೇಲೆ ಗುರು ಮೊದಮೊದಲು ಮನಬಂದಂತೆ ಹಲ್ಲೆ ಮಾಡುತ್ತಿದ್ದ . ಈ ಹಂತದಲ್ಲಿ ಒಂದು ಜಡವಸ್ತುವನ್ನು ಹೊಡೆದು ಬಡಿದು ಕೊರೆದು ಕತ್ತರಿಸಿ ಅದಕ್ಕೆ ಒಂದು ರೂಪವನ್ನು ಕೊಡುವಂತೆ ಗುರು ಗುಡ್ಡನ ಮೇಲೆ ತನ್ನ ಬಲವನ್ನು ತೋರಿಸುತ್ತಿದ್ದ.

ಎರಡನೆಯ ಹಂತದಲ್ಲಿ ಗುರು ಗುಡ್ಡನನ್ನು ” ತನ್ನಂತೆ ಒಂದು ಜೀವಿ ” ಎಂದು ತಿಳಿದು , ಅವನ ಮಯ್ ಮನಗಳ ಮೇಲೆ ಹಿಡಿತವನ್ನು ಪಡೆಯಲೆಂದು ಬಯ್ಯುತ್ತಿದ್ದ. ತಮ್ಮ ಬಳಿ ಇರುವ ವ್ಯಕ್ತಿಗಳನ್ನು ” ತಮ್ಮ ಇಚ್ಚೆಗೆ ತಕ್ಕಂತೆ ತಗ್ಗಿ ಬಗ್ಗಿ ನಡೆಯುವಂತೆ ಮಾಡಲು ” ಬಡಿಯುವಿಕೆ ಮತ್ತು ಬಯ್ಯುವಿಕೆಯನ್ನು ಉಪಕರಣಗಳನ್ನಾಗಿ ಮಾನವರು ಬಳಸುತ್ತಾರೆ. ಅಂತೆಯೇ ಇಲ್ಲಿ ಗುರು ಗುಡ್ಡನನ್ನು ತನ್ನ ಹತೋಟಿಯಲ್ಲೇ ಇರಬೇಕಾದ ಮತ್ತು ಬೆಳೆಯಬೇಕಾದ ವ್ಯಕ್ತಿಯೆಂದು ತಿಳಿದಿದ್ದ.

ಮೂರನೆಯ ಹಂತದಲ್ಲಿ ಗುಡ್ಡನ ಮನದ ಒಳಮಿಡಿತಗಳನ್ನು ಅರಿತುಕೊಂಡು , ಅದಕ್ಕೆ ತಕ್ಕಂತೆ ವಿದ್ಯೆಯನ್ನು ಕಲಿಸುವ ರೀತಿಯನ್ನು ಅಳವಡಿಸಿಕೊಂಡಿದ್ದಾನೆ. ಆದುದರಿಂದಲೇ ಜಂಕಿಸಿ ಅಂದರೆ ಕಣ್ಸನ್ನೆ ಮತ್ತು ಕಯ್‍ಸನ್ನೆಗಳಿಂದಲೇ ಗುಡ್ಡನ ಮನವನ್ನು ವಿದ್ಯೆಯತ್ತ ಹೊರಳುವಂತೆ ಮಾಡಿ ಬುದ್ದಿಯನ್ನು ಕಲಿಸುತ್ತಿದ್ದ.

ನಾಲ್ಕನೆಯ ಹಂತದಲ್ಲಿ ಗುಡ್ಡನನ್ನು ಗುರು ತನ್ನಂತೆ ಒಂದು ಜೀವಿಯೆಂದು ತಿಳಿಯುವುದರ ಜತೆಜತೆಗೆ , ಮುಂದೆ ಬೆಳೆದು ಬಾಳಿ ಬದುಕಬೇಕಾದ ಅವನನ್ನು ಒಲವುನಲಿವುಗಳಿಂದ ಕಾಣುತ್ತಾ , ಅವನಲ್ಲಿ ಜೀವನದ ಬಗ್ಗೆ ಅಪಾರವಾದ ಆತ್ಮವಿಶ್ವಾಸವನ್ನು ಮೂಡಿಸಿ ಮುನ್ನಡೆಯುವಂತೆ ಮಾಡತೊಡಗಿದ್ದಾನೆ. ಕಾಲ ಉರುಳಿದಂತೆಲ್ಲಾ ಮಾನವ ಸಮಾಜದಲ್ಲಿ ಉಂಟಾಗುವ ಬಹುಬಗೆಯ ಬದಲಾವಣೆಗಳು ಗುರುವಿನ ವ್ಯಕ್ತಿತ್ವದ ಮೇಲೆ ಪರಿಣಾಮವನ್ನು ಬೀರಿ ಗುರುವಿನಲ್ಲಿ ಒಲವು , ಕರುಣೆ ಮತ್ತು ಸಮಾನತೆಯ ನಡೆನುಡಿಗಳು ಹೊರಹೊಮ್ಮುವಂತೆ ಮಾಡಿವೆ.

( ಕೃತಯುಗ+ಅಲ್ಲಿ ; ಶ್ರೀ=ವ್ಯಕ್ತಿಗೆ ಒಲವು/ನಲಿವನ್ನು ಸೂಚಿಸುವ ಪದ  ; ಗುರು=ವಿದ್ಯೆಯನ್ನು ಕಲಿಸುವ/ಅರಿವನ್ನು ಮೂಡಿಸುವ ವ್ಯಕ್ತಿ  ; ಶಿಷ್ಯಂಗೆ=ಶಿಶ್ಯನಿಗೆ/ಗುಡ್ಡನಿಗೆ ; ಶಿಷ್ಯ=ವಿದ್ಯೆಯನ್ನು ಕಲಿಯುವ-ಅರಿವನ್ನು ಪಡೆಯುವ ಹಂಬಲವುಳ್ಳವನು/ಗುಡ್ಡ  ; ಬಡಿದು=ಹೊಡೆದು ; ಬಡಿ=ಹೊಡೆ/ಚಚ್ಚು/ಮಯ್ಯ ಮೇಲೆ ಹಲ್ಲೆಯನ್ನು ನಡೆಸು ; ಬುದ್ಧಿ=ತಿಳುವಳಿಕೆ/ಅರಿವು ; ಕಲಿಸು=ಹೇಳಿಕೊಡು/ತಿಳಿಯುವಂತೆ ಮಾಡು ; ಆಗಲಿ=ಒಪ್ಪಿಗೆಯನ್ನು ಸೂಚಿಸುವುದು ; ಮಹಾಪ್ರಸಾದ+ಎಂದೆನ್+ಅಯ್ಯ ; ಮಹಾ=ದೊಡ್ಡ/ಹೆಚ್ಚಿನ ; ಪ್ರಸಾದ=ಅನುಗ್ರಹ/ದಯೆ/ಒಳಿತು ; ಎಂದೆನ್=ಹೇಳಿದೆನು ; ಅಯ್ಯ=ವ್ಯಕ್ತಿಗೆ ಮೆಚ್ಚುಗೆ/ಒಲವು/ನಲಿವನ್ನು ಸೂಚಿಸುವಾಗ ಹೇಳುವ ಪದ ; ತ್ರೇತಾಯುಗ+ಅಲ್ಲಿ ; ಬಯ್+ದು ; ಬಯ್=ತೆಗಳು/ನಿಂದಿಸು ; ಬೈದು=ಬಯ್ಗುಳದ ನುಡಿಗಳನ್ನು ಬಳಸಿ ನಿಂದಿಸುವುದು/ತೆಗಳುವುದು ; ದ್ವಾಪರ+ಅಲ್ಲಿ ; ಝಂಕಿಸಿ= ಕಣ್ಣಿನ ಗುಡ್ಡೆಗಳನ್ನು ಅತ್ತಿತ್ತ ಹೊರಳಿಸುವುದರ ಮೂಲಕ ಬೀರುವ ನೋಟ ,  ಕಯ್ಗಳನ್ನು ಅತ್ತಿತ್ತ ಆಡಿಸುವಿಕೆ ಮತ್ತು ಮೊಗದಲ್ಲಿ ತೋರಿಸುವ ಬಹುಬಗೆಯ ಒಳಮಿಡಿತಗಳ ಮೂಲಕವೇ ಗದರಿಸಿ/ಬೆದರಿಸಿ/ತುಸು ಎಚ್ಚರಿಕೆಯನ್ನು ನೀಡಿ ; ಝಂಕಿಸು=ಬೆದರಿಸು/ಗದರಿಸು ; ಕಲಿಯುಗ+ಅಲ್ಲಿ ; ವಂದಿಸಿ=ಒಲವನ್ನು ತೋರಿ/ನಲಿವಿನಿಂದ ನಡೆಸಿಕೊಂಡು ; ವಂದಿಸು=ಪ್ರೀತಿಸು/ಆದರಿಸು ;  ಗುಹಾ+ಈಶ್ವರ=ಗುಹೇಶ್ವರ ; ಗುಹೇಶ್ವರ=ಶಿವನ ಮತ್ತೊಂದು ಹೆಸರು/ಅಲ್ಲಮನ ಮೆಚ್ಚಿನ ದೇವರು/ಅಲ್ಲಮನ ವಚನಗಳಲ್ಲಿ ಕಂಡುಬರುವ ಅಂಕಿತನಾಮ ; ಗುಹಾ=ಗುಹೆ/ಬೆಟ್ಟಗುಡ್ಡಗಳಲ್ಲಿರುವ ಕಲ್ಲಿನ ದೊಡ್ಡ ಪೊಟರೆ ; ಈಶ್ವರ=ಶಿವ ; ಕಟ್ಟಳೆ=ನಿಯಮ/ಕಟ್ಟುಪಾಡು ; ಕಲಿತನ=ಪರಾಕ್ರಮ/ಅಳವು/ಶಕ್ತಿ ; ಕಾಲದ ಕಟ್ಟಳೆಯ ಕಲಿತನ=ಕಾಲ ಉರುಳಿದಂತೆಲ್ಲಾ ಸಮಾಜದ ಕಟ್ಟುಪಾಡುಗಳಲ್ಲಿ/ಆಗುಹೋಗುಗಳಲ್ಲಿ/ವ್ಯಕ್ತಿಯ ನಡೆನುಡಿಗಳಲ್ಲಿ ಉಂಟಾಗುವ ಬದಲಾವಣೆಗಳು  ; ಬೆರಗು+ಆದೆನು ; ಬೆರಗು=ಅಚ್ಚರಿ/ವಿಸ್ಮಯ/ಸೋಜಿಗ )

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks