ಅಲ್ಲಮನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.

allamprabhu

ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ

ಈ ವಚನದಲ್ಲಿ ಅಲ್ಲಮನು ಹೆಣ್ಣು ಸಮುದಾಯದ ಪರವಾಗಿ ದನಿಯೆತ್ತಿದ್ದಾನೆ. ಸಮಾಜದಲ್ಲಿ ನಡೆಯುವ ಎಲ್ಲಾ ಬಗೆಯ ದುರಂತಗಳಿಗೆ ‘ಹೆಣ್ಣು-ಹೊನ್ನು-ಮಣ್ಣು’ ಕಾರಣವೆಂಬ ನಾಣ್ಣುಡಿ ಕನ್ನಡ ನುಡಿಸಮುದಾಯದಲ್ಲಿ ಬಳಕೆಯಲ್ಲಿದೆ. ಹೊನ್ನು ಮತ್ತು ಮಣ್ಣು ಎಂಬುವು ಜಡವಸ್ತುಗಳು; ಆದರೆ ಹೆಣ್ಣು ಎಂಬುವಳು ಮಯ್-ಮನವನ್ನು ಹೊಂದಿರುವ ಮಾನವಜೀವಿ. ಈ ನುಡಿಗಟ್ಟಿನಲ್ಲಿ ಹೆಣ್ಣನ್ನು ಜಡವಸ್ತುಗಳ ಸಾಲಿನಲ್ಲಿ ಇಟ್ಟು ಗುರುತಿಸಲಾಗಿದೆ.

ಇದಕ್ಕೆ ಕಾರಣವೇನೆಂದರೆ ಸಮಾಜದಲ್ಲಿ ಗಂಡಸರ ಮತ್ತು ಹೆಂಗಸರ ಜನಸಂಕೆಯ ಪ್ರಮಾಣ ತುಸು ಹೆಚ್ಚುಕಡಿಮೆ ಸಮನಾಗಿದ್ದರೂ, ಜನಸಮುದಾಯಗಳ ಬದುಕು ಮತ್ತು ಕುಟುಂಬಗಳ ಆಗುಹೋಗುಗಳು “ಇದೇ ಬಗೆಯಲ್ಲಿ ಇರಬೇಕು” ಎಂಬ ಕಟ್ಟುಪಾಡುಗಳನ್ನು ಹಾಕಿರುವ ಮತ್ತು ಜನರನ್ನು ಹತೋಟಿಯಲ್ಲಿಟ್ಟಿರುವ ದರ‍್ಮ-ರಾಜಕಾರಣ-ತತ್ವಜ್ನಾನ-ಕಾನೂನು-ವಿದ್ಯೆ-ವಾಣಿಜ್ಯ ಮತ್ತು ಇನ್ನಿತರ ಸಾಮಾಜಿಕ ಒಕ್ಕೂಟಗಳೆಲ್ಲವೂ ಬಹುಪಾಲು ಗಂಡಸರಿಂದಲೇ ರಚನೆಗೊಂಡಿವೆ ಮತ್ತು ಗಂಡಸರಿಂದಲೇ ತುಂಬಿವೆ. ಈ ಹಿನ್ನೆಲೆಯಲ್ಲಿ ಮಾನವಜೀವಿಗಳ ಗುಂಪಿನಿಂದ ಹೆಣ್ಣನ್ನು ಹೊರಗಿಟ್ಟಿರುವ ಈ ನುಡಿಗಟ್ಟು ಗಂಡಸರಿಂದಲೇ ರಚನೆಗೊಂಡಿದೆಯೆಂಬ ನಿಲುವನ್ನು, ಹೆಂಗಸರ ಜೀವನದಲ್ಲಿ ಉಂಟಾಗುತ್ತಿರುವ ಏಳುಬೀಳುಗಳಿಗೆ ಕಾರಣಗಳನ್ನು ಹುಡುಕುತ್ತಿರುವ ಸಾಮಾಜಿಕ ಚಿಂತಕರು ತಳೆದಿದ್ದಾರೆ.

ನಮ್ಮ ಸಂಸ್ಕ್ರುತಿಯ ನೆಲೆಯಲ್ಲಿ ಹೊನ್ನನ್ನು ಲಕ್ಶ್ಮಿ ಎಂಬ ದೇವತೆಯನ್ನಾಗಿ ಮತ್ತು ಮಣ್ಣನ್ನು ಬೂದೇವಿಯನ್ನಾಗಿ ಕಲ್ಪಿಸಿಕೊಳ್ಳಲಾಗಿದೆ. “ರಾಮಾಯಣ ನಡೆದದ್ದೇ ಸೀತೆಯೆಂಬ ಹೆಣ್ಣಿನಿಂದಾಗಿ; ಮಹಾಬಾರತ ನಡೆದದ್ದೇ ರಾಜ್ಯಲಕ್ಶ್ಮಿಯೆಂಬ ಹೊನ್ನು-ಮಣ್ಣಿನಿಂದಾಗಿ” ಎಂಬ ನುಡಿಗಳು ನಮ್ಮ ಸಾಮಾಜಿಕ ವ್ಯವಹಾರದ ಮಾತುಕತೆಗಳಲ್ಲಿ ಆಗಾಗ ಕೇಳಿಬರುತ್ತಿರುತ್ತವೆ. ಅಲ್ಲೆಲ್ಲೂ ಗಂಡಸರ ಪ್ರಸ್ತಾಪವೇ ಇಲ್ಲ.

ಅಲ್ಲಿ ನಡೆದ ಪ್ರಸಂಗಗಳಲ್ಲಿ ಗಂಡಸರು ತಪ್ಪುಗಳನ್ನು ಎಸಗಲು ಹೆಣ್ಣಿನ ರೂಪದಲ್ಲಿರುವ “ಹೆಣ್ಣು-ಹೊನ್ನು-ಮಣ್ಣುಗಳೇ ಕಾರಣ” ಎಂಬ ಆರೋಪವಿದೆ. ಜನಸಮುದಾಯದ ಮನದಾಳದಲ್ಲಿ ನಾಟಿಕೊಂಡಿರುವ ಈ ಬಗೆಯ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುತ್ತಾ, ಜೀವನದಲ್ಲಿ ನಡೆಯುವ ಆಗುಹೋಗುಗಳಿಗೆ ವ್ಯಕ್ತಿಯು ಗಂಡಸಾಗಿರಲಿ ಇಲ್ಲವೇ ಹೆಂಗಸಾಗಿರಲಿ ಅವರ ಮಯ್-ಮನದಲ್ಲಿ ತುಡಿಯುವ ಆಸೆಗಳೇ ಕಾರಣವೆಂಬ ವಾಸ್ತವವನ್ನು ಅಲ್ಲಮನು ಹೇಳುವುದರ ಜತೆಗೆ, ಗಂಡು ತಾನು ಮಾಡುವ ಕೆಟ್ಟ ಕೆಲಸಗಳಿಗೆ ಹೆಣ್ಣು/ಮಣ್ಣು/ಹೊನ್ನುಗಳ ಮೇಲೆ ಹೊರಿಸುತ್ತಿದ್ದ ಆರೋಪವನ್ನು ಅಲ್ಲಗಳೆದಿದ್ದಾನೆ.

(ಹೊನ್ನು=ಚಿನ್ನ/ಸಂಪತ್ತು/ಸಿರಿಸಂಪದ ; ಮಾಯೆ+ಎಂಬರು ; ಮಾಯೆ=ಒಲವು ನಲಿವನ್ನು ಉಂಟುಮಾಡುವ /ಮಯ್-ಮನಗಳಲ್ಲಿ ಬಯಕೆಗಳನ್ನು ಕೆರಳಿಸಿ ಅದರತ್ತ ಸೆಳೆಯುವ ವಸ್ತು/ಜೀವಿ/ವ್ಯಕ್ತಿಗಳು ; ಎಂಬರು=ಎನ್ನುವರು; ಮಾಯೆ+ಅಲ್ಲ ; ಮನದ=ಮನಸ್ಸಿನ ; ಮನ=ಮನಸ್ಸು ; ಮುಂದಣ=ಮುಂದೆ ಇರುವ ; ಆಸೆ=ಬಯಕೆ/ಪಡೆಯಬೇಕೆಂಬ ತುಡಿತ ; ಮನದ ಮುಂದಣ ಆಸೆ=ಯಾವುದೇ ವಸ್ತು/ಜೀವಿ/ವ್ಯಕ್ತಿಗಳನ್ನು ಕಂಡಾಗ ಅವನ್ನು ಪಡೆದು ಮಯ್-ಮನಗಳ ಒಳಮಿಡಿತಗಳ ಬಯಕೆಯನ್ನು ಈಡೇರಿಸಿಕೊಳ್ಳಬೇಕೆಂಬ ತವಕ/ತಲ್ಲಣ/ಸೆಳೆತ/ತುಡಿತ ; ಕಾಣಾ=ತಿಳಿದಿರುವೆಯಾ/ಕಂಡಿರುವೆಯಾ/ತಿಳಿದುನೋಡಿದಾಗ ಕಂಡುಬರುವ ವಾಸ್ತವ ; ಗುಹಾ+ಈಶ್ವರ=ಗುಹೇಶ್ವರ ; ಗುಹಾ=ಗುಹೆ/ಬೆಟ್ಟಗುಡ್ಡಗಳಲ್ಲಿರುವ ಕಲ್ಲಿನ ಪೊಟರೆ ; ಈಶ್ವರ=ಶಿವ ; ಗುಹೇಶ್ವರ=ಶಿವನ ಮತ್ತೊಂದು ಹೆಸರು/ಅಲ್ಲಮನ ಮೆಚ್ಚಿನ ದೇವರು/ಅಲ್ಲಮನ ವಚನಗಳಲ್ಲಿ ಕಂಡುಬರುವ ಅಂಕಿತನಾಮ)

( ಚಿತ್ರ ಸೆಲೆ: lingayatreligion.com )Categories: ನಲ್ಬರಹ

ಟ್ಯಾಗ್ ಗಳು:, , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s