ಪ್ರಾಜೆಕ್ಟ್ ‘ಹಕ್ಕಿ ಪುಕ್ಕ’

– ಪ್ರಿಯದರ‍್ಶಿನಿ ಶೆಟ್ಟರ್.

feathers

ನಾವು ಶಾಲೆಯಲ್ಲಿದ್ದಾಗ ನಮ್ಮ ಶಿಕ್ಶಕರು ನಮಗೆ ಆಗೊಮ್ಮೆ ಈಗೊಮ್ಮೆ ಪ್ರಾಜೆಕ್ಟ್ ಕೊಟ್ಟು, ಒಬ್ಬೊಬ್ಬರಾಗಿಯೋ ಅತವಾ ಒಂದು ಗುಂಪಾಗಿಯೋ ಕೊಟ್ಟ ಕಾರ‍್ಯವನ್ನು ಮಾಡಿ ಮುಗಿಸುವಂತೆ ಪ್ರೋತ್ಸಾಹಿಸುತ್ತಿದ್ದರು. ನಾವೂ ಸಹ ‘ಆಟದೊಂದಿಗೆ ಪಾಟ’ ಎಂಬಂತೆ ಬಣ್ಣದ ಹಾಳೆ, ಪೇಂಟ್, ಅಂಟು, ಕತ್ತರಿ ಮುಂತಾದ ಸಾಮಗ್ರಿ ಬಳಸಿ ಚಾರ‍್ಟ್ ಅತವಾ ಪುಟ್ಟ ಮಾಡೆಲ್ ಮಾಡಿ, ವಿವರಣೆ ನೀಡಿ ಸಂಬ್ರಮಿಸುತ್ತಿದ್ದೆವು. ನನ್ನೊಳಗೆ ವಿಜ್ನಾನದಲ್ಲಿ ಆಸಕ್ತಿ ಮೂಡಲು ಇಂತಹ ಪ್ರಯೋಗಗಳು, ಪ್ರಾಜೆಕ್ಟ್ ಮತ್ತು ವಿಜ್ನಾನ ವಸ್ತುಪ್ರದರ‍್ಶನಗಳು ಕಾರಣವಾದವು.

ಆಗ ನಮ್ಮ ಶಿಕ್ಶಕರು ಕೊಟ್ಟ ಯೋಜನಾಕಾರ‍್ಯ ಎಂದೂ ನಮಗೆ ಹೊರೆಯಾಗುತ್ತಿರಲಿಲ್ಲ. ಬದಲಾಗಿ ನಾವು ಬಹಳ ಹುರುಪಿನಿಂದಲೇ ಅದನ್ನು ಪೂರ‍್ಣಗೊಳಿಸುತ್ತಿದ್ದೆವು. ಕವಿ-ಕಾದಂಬರಿಕಾರರ ಪರಿಚಯ, ಅವರ ಬಾವಚಿತ್ರ, ವಿಜ್ನಾನಿಗಳು, ಗಣಿತಜ್ನರ ಬಾವಚಿತ್ರಗಳನ್ನು ವಾರಪತ್ರಿಕೆ, ದಿನಪತ್ರಿಕೆಯಲ್ಲಿ ಹಾಗೂ ಚಾರ‍್ಟ್‍ಗಳಲ್ಲಿ ಹುಡುಕಿ ಕತ್ತರಿಸಿ ಬಳಸಿಕೊಳ್ಳುತ್ತಿದ್ದೆವು. ಆಗ ಅಂತರ‍್ಜಾಲದ ಸೌಲಬ್ಯ ಈಗಿನಶ್ಟು ವ್ಯಾಪಕವಾಗಿರಲಿಲ್ಲ, ಹಾಗೆಯೇ ನಾವು ಪ್ರಾಜೆಕ್ಟ್ ಗಾಗಿ ಹೆಚ್ಚು ಹಣ ವ್ಯಯಿಸುತ್ತಿರಲಿಲ್ಲ, ಸಾದ್ಯವಿದ್ದಶ್ಟು ಇದ್ದುದರಲ್ಲಿಯೇ ಕಾರ‍್ಯ ಮುಗಿಸುತ್ತಿದ್ದೆವು. ಆದರೆ ಈಗ ವಿದ್ಯಾರ‍್ತಿಗಳು ತಮ್ಮ ಬಹುಪಾಲು ಸಮಯವನ್ನು ಯೋಜನಾಕಾರ‍್ಯಕ್ಕೆಂದೇ ಕಳೆಯುತ್ತಾರೆ. ಪಾಪ ಬಡವಿದ್ಯಾರ‍್ತಿಗಳಂತೂ ಡೌನ್‍ಲೋಡ್, ಪ್ರಿಂಟ್‍ಔಟ್, ಜೆರಾಕ್ಸ್ ಗಳಿಗಾಗಿ ನೂರಾರು ರೂಪಾಯಿ ತೆತ್ತು ಮನೆಯಲ್ಲಿ ಬೈಸಿಕೊಳ್ಳುವರು. ನಮಗೆ ಶಿಕ್ಶಕರು ಪ್ರಾಜೆಕ್ಟ್ ಕೊಡುವುದೇ ಸ್ರುಜನಶೀಲತೆ ಬೆಳೆಸಿ, ಕಲಾತ್ಮಕವಾಗಿ ಕಾರ‍್ಯ ಪೂರ‍್ಣಗೊಳಿಸಿ, ಅದರಿಂದ ನಾವೂ ಕಲಿತು, ಇತರರಿಗೂ ಹೇಳಿ ಅರ‍್ತೈಸಿಕೊಳ್ಳಬೇಕೆಂದು. ಆದರೆ ಇತ್ತೀಚಿಗೆ ಪ್ರಾಜೆಕ್ಟ್ ವರ‍್ಕ್ ಮಾಡುವುದು ಅಂಕ ಗಳಿಸಲು ಎಂದಾಗಿದೆ.

ಇತ್ತೀಚಿಗೆ ಹತ್ತನೇ ತರಗತಿಯಲ್ಲಿ ಓದುತ್ತಿರುವ ನನ್ನ ತಂಗಿ ತಯಾರಿಸುವ ಪ್ರಾಜೆಕ್ಟ್ ಗಳು ನನ್ನನ್ನು ಅಚ್ಚರಿಗೊಳಿಸುತ್ತವೆ. ಒಂದು ಸೆಮಿಸ್ಟರ್‍ಗೆ ಎರಡು ಪಾರ‍್ಮೆಟಿವ್ ಎಸ್ಸೆಸ್ಮೆಂಟ್‍ಗಳು (ಎಪ್.ಎ.) ಒಂದು ಎಪ್.ಎ.ಗೆ ಒಂದು ವಿಶಯದ ಎರಡು ಪ್ರಾಜೆಕ್ಟ್ ವರ‍್ಕ್‍ಗಳು ಅಂದರೆ, ಆರು ವಿಶಯಕ್ಕೆ ಹನ್ನೆರಡು ಪ್ರಾಜೆಕ್ಟ್ ಗಳು! ಅರ‍್ತಾತ್ ಒಂದು ವರ‍್ಶದ ನಾಲ್ಕು ಎಪ್.ಎ.ಗಳಿಗೆ ನಲವತ್ತೆಂಟು ಪ್ರಾಜೆಕ್ಟ್ ಗಳು!

ಒಮ್ಮೆ ಆಕೆಗೆ ಕೊಡಲಾದ ಒಂದು ಪ್ರಾಯೋಗಿಕ ಕೆಲಸ ನನಗೆ ಬಹಳ ಹಿಡಿಸಿತು. ಅದೇನೆಂದರೆ ಸಾದ್ಯವಾದಶ್ಟು ಹಕ್ಕಿಯ ಪುಕ್ಕಗಳನ್ನು ಸಂಗ್ರಹಿಸಿ, ಅಂಟಿಸಿ, ಹಕ್ಕಿಗಳ ಹೆಸರಿನ ಸಹಿತ ಪ್ರಾಜೆಕ್ಟ್ ಪೂರ‍್ಣಗೊಳಿಸಬೇಕೆಂದು ಟೀಚರ್ ಹೇಳಿದ್ದಾರೆಂದು ನನ್ನ ತಂಗಿ ಹೇಳಿದಳು. ಮನೆಯ ಹತ್ತಿರ ಸಿಕ್ಕ ಪಾರಿವಾಳದ ಪುಕ್ಕ, ಕೋಳಿಪುಕ್ಕ ಹಾಗೂ ಹಳೆಯ ನವಿಲುಗರಿಯಿಂದ ಪ್ರಾಜೆಕ್ಟ್ ಆರಂಬವಾಯಿತು. ನಾನು ಮತ್ತು ಅವಳು ಕರ‍್ನಾಟಕ ವಿಶ್ವ ವಿದ್ಯಾಲಯದ ಬೊಟಾನಿಕಲ್ ಗಾರ‍್ಡನ್‍ನಲ್ಲಿ ಪುಕ್ಕಗಳು ಸಿಗಬಹುದು ಎಂದೆಣಿಸಿ, ಒಂದು ದಿನ ಮುಂಜಾನೆ ಬೇಗನೆ ಎದ್ದು ಅಲ್ಲಿಗೆ ಹೋದೆವು. ಅರ‍್ದ ತಾಸು ಸುತ್ತಾಡಿದರೂ ಒಂದೇ ಒಂದು ಪುಕ್ಕ ಪತ್ತೆಯಾಗಲಿಲ್ಲ. ಮೊದಲೇ ಅರೆಮನಸ್ಸಿನಿಂದ ನನ್ನೊಂದಿಗೆ ಬಂದಿದ್ದ ನನ್ನ ತಂಗಿಗೆ ನಿರಾಶೆಯಾಗತೊಡಗಿತು. ನಾವು ಅಲ್ಲಿಯೇ ಇದ್ದ ಚಿಕ್ಕ ಕಟ್ಟಿಗೆಯಿಂದ ಪೊದೆ, ಕಸದ ಗುಂಪನ್ನು ಕದಡುವುದನ್ನು ನೋಡಿದ ಒಬ್ಬ ಕೆಲಸದ ಮಹಿಳೆಗೆ, ನಾವೇನೋ ಕಳೆದುಕೊಂಡಿದ್ದೇವೆಂದು ಅನಿಸಿರಬೇಕು! ಆಕೆ ‘ಏನನ್ನು ಹುಡುಕುತ್ತಿರುವಿರಿ?’ ಎಂದು ಕೇಳಿದಳು. ನಾವು ಬಂದ ಕಾರಣ ಹೇಳಿ ಪುಕ್ಕ ಕೇಳಿದೆವು. ಆಕೆ, ‘ಇಲ್ಲೇ ಬಿದ್ದಿರುತ್ತವೆ’ ಎನ್ನುತ್ತಿಂದ್ದಂತೆಯೇ ನಾವೂ ಮುಂದೆ ಸಾಗಿದೆವು. ಅಲ್ಲೆರಡು ಪುಕ್ಕಗಳು ಸಿಕ್ಕವು. ಅವು ಸಿಕ್ಕ ಹುರುಪಿನಲ್ಲಿ ಮತ್ತಶ್ಟು ಹುಡುಕಾಡತೊಡಗಿದೆವು. ಅಲ್ಲಿಗೆ ಬರುವ ವಾಯುವಿಹಾರಿಗಳು ನಮ್ಮನ್ನು ಏಲಿಯನ್‍ಗಳಂತೆ ನೋಡಿದರು! ಆಗ ಅವರಿಗೆ ಕೇಳಿಸುವಂತೆ ನಾನು ಕೊಟ್ಟ ಪ್ರಾಜೆಕ್ಟ್ ನ್ನು ಬೈಯ್ಯುತ್ತಾ “ಪುಕ್ಕ ಸಿಕ್ಕಿತೇ?” ಎಂದು ಕೇಳಿದಾಗ, ತಂಗಿ ‘ಸಿಕ್ಕಿತು, ಇಲ್ಲ ಅತವಾ ಇನ್ನೊಂದು ಪುಕ್ಕ ಬೇಕು’ ಎಂದು ಉತ್ತರಿಸುತ್ತಿದ್ದಳು. ನಾವಿಬ್ಬರೂ ಆಗಾಗ ಕ್ಯಾಮರಾದಿಂದ ಸೆಲ್ಪಿ ತೆಗೆದದ್ದೂ ಆಯಿತು.

ಕೊನೆಗೆ ಒಂದೂವರೆ ಗಂಟೆಯ ನಂತರ ಬೊಟಾನಿಕಲ್ ಗಾರ‍್ಡನ್ ಹಾಗೂ ಎಕೊ ಲೈಬ್ರರಿಯಲ್ಲಿ ಸುತ್ತಾಡಿ ಒಟ್ಟು 10- 12 ಪುಕ್ಕಗಳನ್ನು ತಂದೆವು. ಮನೆಗೆ ಬಂದು ಇಂಟರ್‍ನೆಟ್‍ನಲ್ಲಿ ಒಂದೊಂದೇ ಪುಕ್ಕದ ಗಾತ್ರ, ಬಣ್ಣವನ್ನು ಹೋಲುವ ಹಕ್ಕಿಗಳ ಹೆಸರನ್ನು ಗುರುತುಮಾಡಿ ದಾರವಾಡಕ್ಕೆ ಬರಬಹುದಾದ ವಲಸೆ ಹಕ್ಕಿಗಳನ್ನು ಹೆಸರಿಸಿ ಪ್ರಾಜೆಕ್ಟ್ ಮುಗಿಸಿದ್ದೂ ಆಯಿತು! ನನ್ನ ಪ್ರಕಾರ ಇದೊಂದು ನೆನಪಿನಲ್ಲಿರಬಹುದಾದ ಯೋಜನಾಕಾರ‍್ಯ. ಏಕೆಂದರೆ, ಹಕ್ಕಿಪುಕ್ಕಗಳು ಬುಕ್‍ಸ್ಟಾಲ್ ಅತವಾ ಅಂತರ‍್ಜಾಲದಲ್ಲಿ ಸಿಗಬಹುದಾದ ವಸ್ತುಗಳಲ್ಲ. ನನ್ನ ತಂಗಿ ಹಾಗೂ ಆಕೆಯ ಸಹಪಾಟಿಗಳು ತಮಗೆ ಸಿಕ್ಕ ಒಂದೇ ತೆರನಾದ ಪುಕ್ಕಗಳನ್ನು ಬೇರೆಯವರಿಗೆ ಕೊಟ್ಟು, ಅವರಿಂದ ಒಂದು ಪುಕ್ಕ ಪಡೆದು, ಒಂದೊಮ್ಮೆ ತಮಗೆ ಬೇಕಾದ ಬಣ್ಣಬಳಿದು, ಬೇಕಾದ ಆಕಾರಕ್ಕಾಗಿ ಕತ್ತರಿಪ್ರಯೋಗ ಮಾಡಿ, ಕೊಂಚ ಪ್ರಯಾಸಪಟ್ಟು ಮಾಡಿದ ಪ್ರಾಜೆಕ್ಟ್ ಇದಾಗಿತ್ತು.

(ಚಿತ್ರ ಸೆಲೆ: paleoplanet69529.yuku.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಉಮೇಶ್ ಚಕ್ಕಡಿ says:

    ಅದ್ಭುತ ನೆನಪಿನ ಪುಟಕ್ಕೊಂದು ಸಲಾಂ ಸಾರಾ?

ಅನಿಸಿಕೆ ಬರೆಯಿರಿ:

%d bloggers like this: