ನಿನಗಾವ ಕಾಲ ಇಶ್ಟ ಓ ಮನುಜ?
ನಿನಗಾವ ಕಾಲ ಇಶ್ಟ ಓ ಮನುಜ?
ಬೇಸಿಗೆಯು ಬಂತೆಂದರೆ, ಅಯ್ಯೋ
ಯಾಕಿಂತ ಸುಡುಬಿಸಿಲು ದೇವರೇ
ಮಳೆ, ಚಳಿಗಾಲವೇ ವಾಸಿ ಎನುವೆ!
ಗಿಡ, ಮರಗಳ ರೆಂಬೆಯಲಿ ಹಸಿರಾಗಿ
ಅರಳಿಹ ಚಿಗುರೆಲೆಗಳ ನೋಡುತಾ
ನಲಿವೆ, ಹಿಗ್ಗಲಿ ಮೈ ಮರೆವೆ!
ಮಾವು, ಹಲಸು ಎಲ್ಲವ
ಸಂತಸದಲಿ ಸವಿಯುವೆ|
ಮಳೆಗಾಲ ಬಂತೆಂದರೆ, ಅಯ್ಯೋ
ಮಾಳಿಗೆಯು ಸೋರುತ್ತಲ್ಲ ದೇವರೇ,
ಉರುವಲು ತೋಯಿತೆನುವೆ!
ಇಂತಿಪ್ಪ ಹತ್ತಾರು ಕಶ್ಟಗಳ ಹೇಳುವೆ|
ಜಿಟಿಜಿಟಿ ಹನಿಯುವ ಆ ಮಳೆಯಲೇ
ತುಂಬಿದ ಕೆರೆಕಟ್ಟೆ, ಜಲಪಾತಗಳ
ರೌದ್ರ ರಮಣೀಯತೆಯ ನೋಡಿಬರುವೆ
ಸಂತಸದಿ ಎಲ್ಲವ ಕಣ್ಮನದಲಿ ಸೆರೆಹಿಡಿವೆ
ಚಳಿಗಾಲ ಬಂತೆಂದರೆ ಶಿವ, ಶಿವ...
ಏನಿದು ಇಶ್ಟೊಂದು ಚಳಿ ಎನುವೆ
ಮುಗಿಬಾರದೆ ಚಳಿಗಾಲ ಎಂದು ಕೊರಗುವೆ!
ಆ ನಡುನಡುಗಿಸುವ ಚಳಿಗಾಲದಲೇ,
ಸಡಗರದಿ ಪ್ರವಾಸವ ನೀ ಮಾಡುವೆ
ಅರಮನೆ, ಗುಡಿ, ದೇಗುಲ, ಕೋಟೆ, ಕಾನನ
ಸಾಗರ, ಸರೋವರ ಎಲ್ಲವ ನೋಡಿ ನಲಿವೆ|
ನಿನಗಾವ ಕಾಲ ಇಶ್ಟ ಓ ಮನುಜ?
ಸುಮ್ಮನೆ ಕಾಲವ ಶಪಿಸುವುದ ಬಿಡು|
ಪ್ರತಿಕಾಲವು ಜೀವರಾಶಿಗಳಿಗೆ ಪ್ರಕ್ರುತಿಯು
ಕೊಟ್ಟಿರುವ ಕಾಣಿಕೆಯೆಂದು ತಿಳಿ!
(ಚಿತ್ರ ಸೆಲೆ: clipart-library.com )
ಇತ್ತೀಚಿನ ಅನಿಸಿಕೆಗಳು