ಇದು ಬರಿ ಗಾಜಲ್ಲ, ಬಣ್ಣದ ಟಿವಿ!
– ರತೀಶ ರತ್ನಾಕರ.
ನೋಡಲು ತಿಳಿಯಾದ ಗಾಜಿನ ಪರದೆ. ಅಲ್ಲಿ ಗಾಜಿನ ಪರದೆ ಇದೆಯೋ ಇಲ್ಲವೋ ಎಂದು ನಮ್ಮ ಕಣ್ಣು ಕೂಡ ಕೆಲವೊಮ್ಮೆ ಮೋಸಹೋಗಬಹುದು, ಅದು ಅಶ್ಟೊಂದು ತಿಳಿಯಾದ ಪರದೆ. ಒಂದು ಗುಂಡಿಯನ್ನು ಒತ್ತಿದರೆ ಸಾಕು ಆ ಪರದೆ ನಮ್ಮ ನೆಚ್ಚಿನ ಟಿವಿ! ಟಿವಿ ಅಂದರೆ ಅಂತಿಂತ ಟಿವಿ ಅಲ್ಲ, 4K ಎಚ್ ಡಿ ತೆರೆ, ಮುಟ್ಟುತೆರೆ(touch screen) ಹಾಗೂ ನಮ್ಮ ಮಾತನ್ನು ಕೇಳಿ ಅದರಂತೆ ಕೆಲಸಮಾಡುವ ಟಿವಿ. ಈಗಿನ ಕಾಲದ ಚೂಟಿಯಾದ ಎಲ್ಲಾ ಟಿವಿಗಳಿಗೆ ಸಡ್ಡು ಹೊಡೆಯಲು ಬರುತ್ತಿದೆ ಈ ತಿಳಿಗಾಜಿನ ಟಿವಿ.
ಹೊಚ್ಚಹೊಸ ಚಳಕಗಳನ್ನು ಮೈಗೂಡಿಸಿಕೊಂಡು ಬರುತ್ತಿರುವ ಈ ಟಿವಿಗೆ ಇನ್ನೂ ಸರಿಯಾಗಿ ಹೆಸರಿಟ್ಟಿಲ್ಲ. ಸದ್ಯಕ್ಕೆ ಆಚೆಕಾಣುವ(transparent) ಟಿವಿ, ಗಾಜಿನ ಟಿವಿ ಇಲ್ಲವೇ ಕಣ್ಣಿಗೆ ಕಾಣದ(invisible) ಟಿವಿ ಎಂದು ಕರೆಯುತ್ತಿದ್ದಾರೆ. ಕಪ್ಪುಬಿಳುಪಿನ ಪುಟ್ಟ ಪೆಟ್ಟಿಗೆಯಿಂದ ಒಂದು ಗೋಡೆ ಅಗಲದ ಬಣ್ಣದ ಟಿವಿಯ ತನಕ ಟಿವಿಗಳು ಬೆಳೆದುಬಂದಿವೆ. ನಾಳೆ ಇನ್ಯಾವ ಬಗೆಯ ಟಿವಿಗಳು ಬರಬಹುದು ಎಂದು ಕೇಳಿದರೆ ಅದಕ್ಕೆ ಸಿಗುವ ಉತ್ತರ “ಗಾಜಿನ ಟಿವಿಗಳು”.
ಗಾಜಿನ ಟಿವಿಗಳು ಹೇಗೆ ಕೆಲಸಮಾಡುತ್ತವೆ?
ಚಿಕ್ಕ ಚಿಕ್ಕ ಒಎಲ್‍ಇಡಿ (Organic Light Emitting Diode) ಹರಳುಗಳನ್ನು ಜೋಡಿಸಿ ಮಾಡಿರುವ ಬಲೆಯೊಂದನ್ನು ತೆಳುವಾದ ಎರಡು ಗಾಜಿನ ಪದರಗಳ ನಡುವೆ ಅಂಟಿಸಲಾಗುತ್ತದೆ. ಒಂದು ಗಾಜಿನ ಪದರ ಕ್ಯಾತೋಡ್ ಆದರೆ ಮತ್ತೊಂದು ಆನೋಡ್ ಆಗಿ ಕೆಲಸ ಮಾಡುತ್ತದೆ. ಒಎಲ್ ಇಡಿ ಹಾಗೂ ಗಾಜಿನ ಪದರಗಳನ್ನು ಅಂಟಿಸಲು ಬಳಸುವ ಅಂಟನ್ನು ಬಣ್ಣವಿರದ ಪ್ಲಾಸ್ಟಿಕ್ ನಿಂದ ಮಾಡಲಾಗುವುದು. ಹಾಗಾಗಿ ಇವು ಕೂಡ ಗಾಜಿನಂತೆ ಆಚೆಕಾಣುವಂತಿರುತ್ತವೆ.
ಗಾಜಿನ ಪದರಗಳಿಗೆ ಮಿಂಚನ್ನು(Electricity) ಹರಿಸಿದಾಗ, ಕ್ಯಾತೋಡ್ ಹಾಗೂ ಆನೋಡ್ ಪದರಗಳ ನಡುವಿರುವ ಒಎಲ್‍ಇಡಿ ಬಲೆಯ ಮೂಲಕ ಮಿಂಚು ಹರಿಯುತ್ತದೆ. ಇದನ್ನು ಬಳಸಿಕೊಂಡು ಒಎಲ್‍ಇಡಿಯು ಬೆಳಕನ್ನು ಹೊರಸೂಸುತ್ತದೆ. ಈ ಬೆಳಕಿನ ನೆರವಿನಿಂದ ಗಾಜಿನ ಪರದೆಯು ಚಿತ್ರಗಳನ್ನು ತೋರಿಸಿ ಟಿವಿಯ ತೆರೆಯಾಗಿ ಕೆಲಸಮಾಡುತ್ತದೆ. ಮಿಂಚಿನ ಹರಿವನ್ನು ನಿಲ್ಲಿಸಿದಾಗ ಮಾಮೂಲಿ ಗಾಜಿನಂತೆ ಕಾಣುತ್ತದೆ. ಟಿವಿಗೆ ಬೇಕಾದ ಉಳಿದ ಎಲೆಕ್ಟ್ರಾನಿಕ್ ಗಟ್ಟಿಸರಕುಗಳು ಗಾಜಿನ ಪರದೆಯ ಕೆಳಗೋ ಇಲ್ಲವೇ ದೂರದಲ್ಲಿ ಇರುತ್ತವೆ. ಗಾಜಿನ ಪರದೆ ಮತ್ತು ಗಟ್ಟಿಸರಕಿನ ಪೆಟ್ಟಿಗೆಗೆ ಒಂದು ತಂತಿಯನ್ನು ಸೇರಿಸಿದ್ದರೆ ಸಾಕು.
ಈ ಟಿವಿಯ ಒಳಗೆ ನೀವೂ ಹೋಗಬಹುದು!
ಗಾಜಿನ ಪರದೆಯ ಒಂದು ಮೂಲೆಯಲ್ಲಿ ಟಿವಿಯ ಕಾರ‍್ಯಕ್ರಮಗಳನ್ನು ನೋಡುತ್ತ ಮತ್ತೊಂದು ಮೂಲೆಯನ್ನು ಹಾಗೆ ಬಿಡಬಹುದು. ಇಲ್ಲವೇ ಕೆಲಬಗೆಯ ಚಿತ್ರಗಳಲ್ಲಿ ಹಾಗೂ ವೀಡಿಯೋಗಳಲ್ಲಿ ಹಿನ್ನಲೆಯು ಆಚೆಕಾಣುವಂತಿರುತ್ತದೆ (ಅದಕ್ಕೆಂದೆ ಹೊಸಬಗೆಯ ಚಳಕಗಳನ್ನು ಬಳಸಿಕೊಳ್ಳಲಾಗುತ್ತಿದೆ) ಇಂತಹ ಚಿತ್ರಗಳನ್ನು ಇಲ್ಲವೇ ವೀಡಿಯೋಗಳನ್ನು ನೋಡುವಾಗ, ಹಿಂಬದಿಯಿಂದ ಕೈ ತೋರಿಸಿದರೆ ಇಲ್ಲವೇ ನೀವೆ ಹೋಗಿ ನಿಂತರೆ ಪರದೆಯ ಹಿಂದೆ ನೀವು ಕಾಣುವಿರಿ. ಒಂದು ಬಗೆಯಲ್ಲಿ ಟಿವಿಯ ಒಳಗೆ ನೀವೇ ಹೋದಂತ ಅನಿಸಿಕೆ!
ಗಾಜಿನ ಟಿವಿಯನ್ನು ಕೊಂಡುಕೊಳ್ಳಲು 3 ವರುಶ ಕಾಯಬೇಕು
ಜಪಾನಿನ ಪ್ಯಾನಸಾನಿಕ್(Panasonic) ಹಾಗೂ ಕೊರಿಯಾದ ಸ್ಯಾಮ್ ಸಂಗ್ ಕಂಪನಿಗಳು ನಾ ಮುಂದು ತಾ ಮುಂದು ಎಂದು ಗಾಜಿನ ಟಿವಿಯನ್ನು ಮಾಡುವುದರಲ್ಲಿ ತೊಡಗಿಕೊಂಡಿವೆ.
ಜನವರಿ, 2016 ರಂದು ಅಮೇರಿಕಾದ ಲಾಸ್ ವೇಗಸ್ ನಲ್ಲಿ ನಡೆದ ಕನ್ಸೂಮರ್ ಎಲೆಕ್ಟ್ರಾನಿಕ್ ಶೋ(CES) ನಲ್ಲಿ ಪ್ಯಾನಸಾನಿಕ್ ಕಂಪನಿಯವರು ಗಾಜಿನ ಟಿವಿಯ ಮಾದರಿಯನ್ನು ತೋರಿಸಿದ್ದಾರೆ. ಈಗಿರುವ ಚಳಕಗಳನ್ನು ಬಳಸಿ ಮಾಡಿರುವ ಮಾದರಿ ಟಿವಿಯ ಗಾಜಿನ ಪರದೆಯು ಕೊಂಚ ಮಬ್ಬಾಗಿದೆ. ಟಿವಿಯನ್ನು ನಿಲ್ಲಿಸಿದ್ದಾಗ ಅದು ತಿಳಿಯಾದ ಗಾಜಿನ ಪರದೆಯ ಹಾಗೇ ಕಾಣಬೇಕು, ಮಬ್ಬಾಗಿರಬಾರದು ಎಂಬುದು ಪ್ಯಾನಸಾನಿಕ್ ಅವರ ಗುರಿಯಾಗಿದೆ. ಅದಕ್ಕಾಗಿ ಇನ್ನು ಕೆಲವು ವರುಶಗಳ ಅರಕೆ ನಡೆಸಬೇಕಿದೆ, ಇನ್ನು 3 ವರುಶಗಳಲ್ಲಿ ತಿಳಿಯಾದ ಗಾಜಿನ ಟಿವಿಯನ್ನು ಮಾರುಕಟ್ಟೆಗೆ ತಲುಪಿಸುತ್ತೇವೆ ಎಂದು ಕಂಪನಿಯವರು ಹೇಳಿದ್ದಾರೆ. ಸ್ಯಾಮ್ ಸಂಗ್ ನವರು ಕೂಡ ಮಾದರಿ ಟಿವಿಯನ್ನು ಹೊರತಂದಿದ್ದು ಕೊಳ್ಳುಗರಿಗೆ ಯಾವಾಗ ಸಿಗುತ್ತದೆ ಎಂದು ತಿಳಿಸಿಲ್ಲ.
ಗಾಜಿನ ಟಿವಿಯ ಮಾದರಿಯ ವೀಡಿಯೋ ಇಲ್ಲಿದೆ.
(ಮಾಹಿತಿ ಸೆಲೆ: dailymail.co.uk)
(ಚಿತ್ರ ಸೆಲೆ: dailymail.co.uk, dornob.com, techreversed.com)
ಇತ್ತೀಚಿನ ಅನಿಸಿಕೆಗಳು