ಕೊರಳು-ಕೊಳಲು
ನನ್ನ ಕೊರಳು ನಿನ್ನ ಕೊಳಲು
ಇವಕಿಂತ ಏನು ಸೊಗಸಿದೆ?
ಕೊರಳ ಬಳಸಿ ಕೊಳಲ ನುಡಿಸು
ಇದಕಿಂತ ನಲಿವು ಎಲ್ಲಿದೆ?
ನನ್ನೊಲು ಒಲವ ಕೊಡುವರಾರೋ
ನೆರೆಯೋ ನನ್ನಯ ಹತ್ತಿರ
ಸುತ್ತಿ ಬಳಸಿ ಬಳಸು ಬಾರೋ
ಕೊಡುವೆ ಪ್ರಶ್ನೆ ಇರದುತ್ತರ!
ಮಾತು ಮುಗಿಯದು ಮೌನ ಕೊನೆಯದು
ನಮ್ಮಿಬ್ಬರ ಒಡನಾಟದಲಿ
ಹಸೆಯು ಆರದು ಹಾಡು ತೀರದು
ನಮ್ಮ ಕಾದಲಿನ ಕೂಟದಲಿ
ಹೊತ್ತು ಮೂಡಲಿ ಹೊತ್ತು ಮುಳುಗಲಿ
ಅದರ ಗೊಡವೆ ನಮಗಿಲ್ಲ
ಕರಿದಿಂಗಳೋ ಬೆಳದಿಂಗಳೋ
ಅದನೆಲ್ಲ ಮರೆತೆ’ನಲ್ಲ’
ನಿನ್ನ ಜತೆ ಕುಣಿಯುತಿರಲು
ದಣಿವ ದಣಿವೇ ತಣಿಯಿತು
ಸುತ್ತ ಹಸಿರೆಲೆ ಹೂ ದುಂಬಿ
ಸುಗ್ಗಿ ಸಂಬ್ರಮ ಕುಣಿಯಿತು
ಒಲವಿಸೊಲವಿಸಿ ನಿನ್ನ ಒಲಿಸಿ
ನೀನೇ ಒಲವಿಸುವ ಹಾಗಾಗಿದೆ
ನಲ್ಲೆ ರಾದೆ ನಲ್ಲೆ ರಾದೆ ಎನುತ
ನನ್ನನೇ ಜಪಿಸುವ ಹಾಗಾಗಿದೆ
ಹೆಣ್ಣು ನಾನು ಹಟವು ಹೆಚ್ಚು
ಬರಿಯ ಮಾತಿಗೆ ಒಲಿಯೆನು
ಕಣ್ಣುಗಳಿಗೆ ಪಟ್ಟಿ ಕಟ್ಟಿ
ಸಿಗದೆ ತಪ್ಪಿಸಿ ಓಡುವೆನು
ಕಳ್ಳ ಕ್ರಿಶ್ಣನು ಮೋಸಗಾರನು
ಪಟ್ಟಿ ಸಡಿಲಿಸಿ ಕಂಡನು
ಓಡಿ ಬಂದು ಹಿಡಿದೇ ಬಿಟ್ಟನು
ದೊಡ್ಡ ಟವಳಿಗಾರನು!
ಇಲ್ಲಿ ಅಲ್ಲಿಗೂ ನೀನೆ ಗೆಳೆಯ
ನಿನ್ನ ಎದೆಗೆ ನಾ ಒರಗುವೆ
ಬಂಕ ನಿಲುವಲಿ ಕೊಳಲ ನುಡಿಸು
ಕೇಳುತ ನಿನ್ನೊಳು ಕರಗುವೆ!
( ಚಿತ್ರ ಸೆಲೆ: 1.bp.blogspot.com )
ಇತ್ತೀಚಿನ ಅನಿಸಿಕೆಗಳು