ನನ್ನೊಳಗಿನ ರಾಕ್ಶಸ ಹೊರಬರುವವರೆಗೂ..

ಕ್ರಿಶ್ಣ ಡಿ.ಎಸ್.ಶಂಕರನಾರಾಯಣ.

ನನ್ನೊಳಗಿನ ರಾಕ್ಶಸ ಹೊರಬರುವವರೆಗೂ
ನಾನೊಬ್ಬ ಸಜ್ಜನ-ಸಂಬಾವಿತ!
ಅಬ್ಬಾ, ಹೇಗೆ ದರಿಸಲಿ ಒಳ್ಳೆತನದ
ಮುಕವಾಡ!

ಎಶ್ಟು ದಿನ!ಅದೆಶ್ಟು ಬಾರ?
ಇಳಿಸಿ ಬಿಡಲೇ ಒಮ್ಮಿಂದೊಮ್ಮೆಲೆ?
ಸಾದ್ಯವೇ, ಸಾದುವೇ ಅದೀಗ ನನ್ನಿಂದ?

ಕೊಡುಗೈ ದಾನಿ..ಹೊಗಳುವರು ಜನ,
ಉಬ್ಬುವುದು ನನ್ನ ಮನ..
ಅಯ್ಯೋ.. ಒಳಗಿಂದೊಳಗೇ
ಅದೇನೋ ಚುಚ್ಚುವುದಲ್ಲ!

ದೇವಿಗರ‍್ಪಿಸಿದ ಚಿನ್ನದ ಮುಕವಾಡ
ಕರಿ ಕಪ್ಪು ಕಬ್ಬಿಣವಾಯ್ತಲ್ಲಾ..ಆಶ್ಚರ‍್ಯ!
ಹೆಂಡತಿಯ ಮೇಲೆ ನನ್ನ ಪ್ರೀತಿ ಇದ್ದಕ್ಕಿದ್ದಂತೆ
ಅದೇಕೋ ಹೆಚ್ಚಾಯಿತಲ್ಲ, ಅವಳಿಗೋ ಅದೆಶ್ಟು ಕುಶಿ!
ಅಂತರಾತ್ಮ ನಗುತ್ತಿದೆ!

ನನ್ನುದರದ ವ್ರಣ ಒಳಗೇ ಕೊರೆ ಕೊರೆದು
ಕೀತು ಹೋಗಿದೆ!
ಅಬ್ಬಾ.. ಜನರ ಜೈಕಾರ,
ಕೂಗಿ ಹೇಳಲೇ ಒಡಲ ದನಿ?

“ನನ್ನದೇನಿಲ್ಲಾ…ಎಲ್ಲವೂ ನಿಮ್ಮದೆ”
ವ್ಯಂಗ್ಯಾರ‍್ತ ಮೂಡರು ಅರಿಯಲಿಲ್ಲ,
ಹೆಚ್ಚಾಯಿತು ಜೈಕಾರ!

ಎಶ್ಟು ದಿನ ಈ ತೊಳಲಾಟ?
ದಿನ ದಿನವೂ ಆಗುತ್ತಿದೆ ನನ್ನಾತ್ಮದ ಹತ್ಯೆ,
ಚುಚ್ಚಿ ಚುಚ್ಚಿ ಸಾಯಿಸುತ್ತಿದೆ
ಆತ್ಮಸಾಕ್ಶಿಯ ಚೂರಿ!

( ಚಿತ್ರ ಸೆಲೆ: trendsandlife.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: