ಕೌಟುಂಬಿಕತೆಯ ತಳಹದಿ ಬ್ರಶ್ಟಾಚಾರಕ್ಕೆ ಮೂಲವೇ?

ಆದರ‍್ಶ್ ಬದ್ರಾವತಿ .

“ದುಡ್ಡೇ ದೊಡ್ಡಪ್ಪ” ಎಂಬ ಮಾತಿನಂತೆ, ದೈನಂದಿನ ಜೀವನ ಸುಗಮವಾಗಿ ಸಾಗಿಸುವಲ್ಲಿ ಹಣದ ಪಾತ್ರ ಬಹುಮುಕ್ಯ. ವರುಶಗಳು ಕಳೆದಂತೆ ಬದುಕಿನ ಶೈಲಿ ಬದಲಾಗುತ್ತಿದೆ. ಉತ್ತಮ ಹಾಗು ಐಶಾರಾಮಿ ಜೀವನ ಶೈಲಿಗಾಗಿ ಅವಶ್ಯಕವಾದ ಎಲ್ಲಾ ವಸ್ತು, ಉಪಕರಣಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಇದನ್ನೆಲ್ಲಾ ತಮ್ಮದಾಗಿಸಿಕೊಂಡು ಜೀವನ ಶೈಲಿಯನ್ನು ಉತ್ತಮಗೊಳಿಸಿಕೊಳ್ಳಬೇಕಾದರೆ ಹಣ ಬೇಕು. ಮನುಶ್ಯ ಕೌಟುಂಬಿಕ ಜೀವಿ. ಕೇವಲ ತನಗಶ್ಟೇ ಅಲ್ಲದೆ ಕುಟುಂಬದ ಎಲ್ಲ ಸದಸ್ಯರಿಗೂ ಹಣ ಎಟುಕುವಂತೆ ಮಾಡುವ ಜವಾಬ್ದಾರಿ ಕುಟುಂಬದ ಮುಕ್ಯಸ್ತನ ಮೇಲಿರುತ್ತದೆ.

ನಾವು ಹಾಸಿಗೆ ಇದ್ದಶ್ಟು ಕಾಲು ಚಾಚಬೇಕಲ್ಲವೇ? ಕುಟುಂಬದ ಸದಸ್ಯರಾಗಿ ಇದನ್ನು ನಾವು ಅರಿಯಬೇಕು. ಕೇವಲ ಐಶಾರಮಿ ಜೀವನದಿಂದಶ್ಟೇ ಸುಕ ಕಾಣಲು ಸಾದ್ಯವಿಲ್ಲ, ನ್ಯಾಯವಾಗಿ ಗಳಿಸಿದ ಹಣದಿಂದ ಎಶ್ಟು ಸಾದ್ಯವೋ ಅಶ್ಟರಲ್ಲೇ ಉತ್ತಮ ಜೀವನ ನಡೆಸಬೇಕು ಎಂಬುದನ್ನು ಅರಿಯದಿದ್ದರೆ ಅದರ ನೇರವಾದ ಪರಿಣಾಮ ಹಾಗು ಒತ್ತಡ ಕುಟುಂಬದ ಮುಕ್ಯಸ್ತನ ಮೇಲೆ ಬೀಳುತ್ತದೆ. ಇಂತಹ ಸಂದರ‍್ಬದಲ್ಲಿ ಹೆಚ್ಚು ಹಣ ಗಳಿಸಲು ನ್ಯಾಯವಾದ ದಾರಿಗಳು ಕಾಣದಿದ್ದಾಗ ಮನುಶ್ಯ ಬ್ರಶ್ಟಾಚಾರಕ್ಕೆ ಕೈಹಾಕದೆ ಇರುವನೇ?

ಹೀಗಿರುವಾಗ ಕೌಟುಂಬಿಕತೆಯ ತಳಹದಿಯೂ ಬ್ರಶ್ಟಾಚಾರಕ್ಕೆ ಮೂಲ ಎನ್ನಲು ಸಾದ್ಯವೇ?

2011ರ ಜನಗಣತಿ ಪ್ರಕಾರ ಬಾರತದಲ್ಲಿ ಸುಮಾರು 70% ಕುಟುಂಬಗಳಲ್ಲಿ ನಾಲ್ಕು ಅತವಾ ಅದಕ್ಕಿಂತ ಹೆಚ್ಚು ಸದಸ್ಯರಿದ್ದಾರೆ. ಅದರಲ್ಲಿ ಸುಮಾರು 80% ಕುಟುಂಬಗಳು ಒಬ್ಬ ಸದಸ್ಯನ ಅದಾಯದಮೇಲೆ ಅವಲಂಬಿತವಾಗಿದೆ. ಅಶ್ಟರಲ್ಲೇ ಕುಟುಂಬದ ಎಲ್ಲ ಅವಶ್ಯಕತೆಗಳನ್ನು ಪೂರೈಸಬೇಕು. ಆಹಾರ, ಮನೆ, ಮಕ್ಕಳ ವಿದ್ಯಾಬ್ಯಾಸ, ಇತ್ಯಾದಿ. ಇದು ಮುಗಿಯದ ಪಟ್ಟಿ. ಅಶ್ಟೆಲ್ಲ ಆದಮೇಲೆ ಮಕ್ಕಳಿಗೆ ಒಂದಶ್ಟು ಆಸ್ತಿ ಬಿಟ್ಟುಹೋಗದಿದ್ದರೆ ಮಕ್ಕಳ ಹಾಗು ಸಮಾಜದ ದ್ರುಶ್ಟಿಯಲ್ಲಿ ಒಳ್ಳೆಯ ಪೋಶಕರು ಎಂದೆನಿಸಿಕೊಳ್ಳರು. ಇಂತಹ ಆರ‍್ತಿಕ ಒತ್ತಡಗಳು ಮನುಶ್ಯನನ್ನು ಕೆಟ್ಟ ಕೆಲಸಕ್ಕೆ ಕೈ ಹಾಕಲು ಪ್ರೇರೇಪಿಸುತ್ತವೆ.

ಕುಟುಂಬದ ಎಲ್ಲ ಸದಸ್ಯರು ಆರ‍್ತಿಕವಾಗಿ ಸ್ವಾವಲಂಬಿಗಳಾಗಬೇಕು. ಮಕ್ಕಳಲ್ಲಿ ಸ್ವಾವಲಂಬನೆ ಮತ್ತು ಸ್ವಾಬಿಮಾನ ಬೆಳೆಯುವಂತೆ ಶಿಕ್ಶಣವನ್ನು ರೂಪಿಸಬೇಕು. ಪಿತ್ರಾರ‍್ಜಿತ ಆಸ್ತಿಯಮೇಲೆ ಅವಲಂಬಿಸದೆ, ಸ್ವಂತ ದುಡಿಮೆಯಮೇಲೆ ಬದುಕುವ ಬಗೆ ರೂಪಿಸಬೇಕು. ನಮ್ಮ ಇಶ್ಟಾರ‍್ತಗಳು ಹಾಗು ಏನೇ ಗುರಿಗಳಿದ್ದರು, ನಮ್ಮ ಸ್ವಂತ ಶ್ರಮದಿಂದ ಪೂರೈಸಿಕೊಳ್ಳುವುದೇ ನಿಜವಾದ ಗುರಿ ಸಾದಿಸಿದಂತೆ.

( ಚಿತ್ರ ಸೆಲೆ: macopharma.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: