
Summer Sun Child Family Boy Kid Happy Happiness
ಪುಟ್ಟನ ಗೋಳು
ಸಾರೆಗಮದಲ್ಲಿ ಹಾಡನು ಹಾಡ್ಸಿ
ತಾರೆಯಾಗಿಸಿಬಿಟ್ರು
ಕಣ್ಣು ಮುಚ್ಚಿ ತೆಗೆಯೋದರಲ್ಲಿ
ಹೀರೊ ಹೆಸರು ಕೊಟ್ರು!
ಪ್ರೀತಿ ತುಂಬಿ ಹಾಡುವ ಕುಶಿಯನು
ಸ್ಪರ್ದೆಗಿಟ್ಟುಬಿಟ್ರು
ಕೀರ್ತಿ ಬಹುಮಾನದಾಸೆ ತೋರ್ಸಿ
ಬಂದಿಸಿಟ್ಟುಬಿಟ್ರು!
ಉಪ್ಪು ಕಾರ ಹಚ್ಚಿ ಹೊಗಳಿ
ಅಟ್ಟಕ್ಕೇರಿಸಿಬಿಟ್ರು
ಮುಗ್ದ ಮನದಿ ಹಾಡುವ ಹಾಡಿನ
ಚಟ್ಟ ಕಟ್ಟಿಬಿಟ್ರು!
ಓದು ಶಾಲೆ ಮನೆ ಮಟ ಮರೆಸಿ
ಗಾಣಕೆ ಹೂಡಿಬಿಟ್ರು
ಹಿಂಡಿಹಿಂಡಿ ಹಿಪ್ಪೆ ಮಾಡಿ
ನರಕಕೆ ದೂಡಿಬಿಟ್ರು!
ಗೆದ್ದು ಬಂದ ಗೆಳೆಯ ಎಂದು
ಹಾಡಿಹೊಗಳಿಬಿಟ್ರು
ಮೊದಲಿನ ಪ್ರೀತಿ ಸಲುಗೆ ತೋರದೆ
ದೂರಕೆ ನಿಂತುಬಿಟ್ರು!
ಅಜ್ಜಿ-ತಾತ ಬಂದು-ಬಳಗ
ಹೆಮ್ಮೆತಾಳಿಬಿಟ್ರು!
ಅಪ್ಪಿ ತಬ್ಬಿ ಮುದ್ದಾಡಲಾರದೆ
ದೊಡ್ಡವನ ಮಾಡಿಬಿಟ್ರು!
ತಂದೆ-ತಾಯಿ ಅಣ್ಣ-ತಮ್ಮರೆಲ್ಲ
ತುಟ್ಟಿಯಾಗಿಬಿಟ್ರು
ತಾರಾಪಟ್ಟಕೆ ನನ್ನ ಬಾಲ್ಯವ
ಬಲಿಯ ಕೊಟ್ಟುಬಿಟ್ರು!
(ಚಿತ್ರ ಸೆಲೆ: freegreatpicture.com)