ನೆನಪಿನ ಸಂತೆ…

– ಗೌರೀಶ ಬಾಗ್ವತ.

ಮೊದಲ ನೋಟ, ಮುಗುಳ್ನಗು, ತುಸು ಸಂಕೋಚ, ಆದರೂ ಮನದಲಿ ನಿರಾಳ ಮನೋಬಾವ, ತಿಳಿದೋ ತಿಳಿಯದೆಯೋ ನಾ ಅವಳಲ್ಲಿ ಲೀನವಾಗಾಯ್ತು. ಗೊತ್ತಿಲ್ಲದೇ ಮೂಡಿದೆ ಸುಂದರ ಬಾವನೆ. ಪದಗಳಿಗೆ ಸಿಗದ ಅನುಬೂತಿ ಅದು. ಆಕಸ್ಮಿಕ ಪರಿಚಯ, ನಂತರ ಅನುದಿನವೂ ಬೇಟಿ, ಮಾತುಕತೆ, ಸುತ್ತಾಟ ನಡೆದಿತ್ತು. ಅವಳು ನಕ್ಕರೆ ಸ್ವರ‍್ಗಲೋಕದ ಪಾರಿಜಾತ ಕೈ ಸೇರಿದ ಅನುಬೂತಿ, ದುಕ್ಕದಲ್ಲಿದ್ದರೆ ಆಕಾಶವೇ ಕಳಚಿ ಬಿದ್ದಂತ ಸಂಗತಿ. ಇಶ್ಟಾದರೂ ಒಮ್ಮೆಯೂ ನನ್ನ ಬಾವ ಲಹರಿಗಳ ಕದ ತೆರೆಯುವ ಪ್ರಯತ್ನ ನಡೆಯಲಿಲ್ಲ. ಸಮಯ ಕಳೆದಿತ್ತು. ಅಳುಕು ಮನದಲ್ಲಿ, ಸೆಳೆತ ಅವಳಲ್ಲಿ. ಬದಲಾಗಿರಲಿಲ್ಲ ದಿನಚರಿ, ತೆರೆಯಲಿಲ್ಲ ಕನಸುಗಳ ತಿಜೋರಿ.

ಅದೊಂದು ದಿನ… ಅವಳ ಮನೆಗದಾರೋ ಬಂದು ವ್ಯಾಪಾರ ಕುದುರಿಸಿ ಹೋಗಿದ್ದರು. ಮನಸ್ಸಿಲ್ಲದ ಮನಸ್ಸಲ್ಲಿ ಒಪ್ಪಿದ್ದಳು ಇವಳು, ನಾನಂತೂ ತಿಜೋರಿ ತೆರೆಯದಿರುವುದೇ ಕಾರಣ. ಮದುವೆಯ ಕರಯೋಲೆಯೊಂದಿಗೆ ಇಟ್ಟಿದ್ದಳವಳು ನಾ ಎಂದೋ ಕೊಡಿಸಿದ್ದ ಬಳೆಗಳನ್ನ. ಬಳೆಯ ಬಣ್ಣ ಮಾಸಿತ್ತು, ನನ್ನ ಬಾವನೆಗಳೂ ಕೂಡ ಆ ಬಳೆಗಳೇ ಅವಳುಡಿಸಿ ಹೋದ ಸಂಕೋಲೆಗಳಂತೆ ಅನುದಿನವೂ ಬಾಸವಾಗುತ್ತಿತ್ತು…

ಅದೊಂದು ಮುಂಜಾನೆ ಕಂಡಳು ಅವಳು, ಸಂತೆಯ ಪೇಟೆಯಲ್ಲಿ… ಮುಕ ನೋಡಿದೊಡನೆ ನಾ ನಿಶ್ಚಲನಾಗಿಬಿಟ್ಟೆ, ಸಂಕೋಲೆಯ ಬಂದನ ಇರಬಹುದು.

ಮೊದಲೇ ಹೇಳಬಾರದಿತ್ತೆ ಗೆಳೆಯ, ನಾ ನಿನ್ನ ಸೇರ ಬಯಸಿದವಳು, ನೀ ಹೇಳದಿರುವ ಪರಿಣಾಮವಿದು

ಅವಳ ಮನದ ಮಾತುಗಳು ನುಗ್ಗಿದ್ದವು ನನ್ನೆಡೆಗೆ ಆ ನೋಟದಲಿ. ನಾನಂತೂ ಅವಳ ನೆನಪಿನ ಸಂತೆಯಲಿ ಒಬ್ಬಂಟಿಯಾಗಿ ನಿಂತಿದ್ದೆ. ಅವಳೆಂದೋ ದೂರವಾಗಿದ್ದಳು…

ಈ ಪ್ರೀತಿಯ
ಬಿರುಮಳೆಯ ಆರಂಬ
ಎಂದಾಯ್ತೋ ನೆನಪಿಲ್ಲ
ಮುಗುಳ್ನಗುತಾ
ಬಯದಲಿ ನಿನ್ನ ಬೇಟಿಯಾದ
ಆ ದಿನವು ನೆನಪಿಲ್ಲ
ಮಳೆ ನಿಂತು
ಮನದಲಿ ನೀನಿಲ್ಲದ ಬರಗಾಲ
ಬಂದದ್ದು ಸಹ ನೆನಪಿಲ್ಲ
ನೆನಪುಗಳ ನೆನಪಲಿ
ನೆಪಮಾತ್ರಕ್ಕೂ ನಿನ್ನ
ನೆನಪು ನನ್ನ ಬಿಟ್ಟಿಲ್ಲ
ಓ ಗೆಳತಿ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: