ರಾಜಕುಮಾರ ಕಳಿಸಿದ 3 ಕಾಣಿಕೆಗಳು
ಆತ ಅತ್ಯಂತ ಸಾತ್ವಿಕ, ದಯಾಳು ರಾಜಕುಮಾರ. ಪ್ರಜೆಗಳು ಅವನನ್ನು ಬಹಳ ಪ್ರೀತಿಸುತ್ತಿದ್ದರು. ಮನಸ್ಸಿನಿಂದ ಅವನನ್ನು ಆದರಿಸುತ್ತಿದ್ದರು. ಆದರೆ ಅದೇ ಊರಿನಲ್ಲಿ ಕೆಟ್ಟ ಮನುಶ್ಯನೊಬ್ಬ ಇದ್ದ. ಈ ರಾಜಕುಮಾರನ ಮೇಲೆ ವಿನಾಕಾರಣ ಕತ್ತಿ ಮಸೆಯುತ್ತಿದ್ದ. ಎಲ್ಲರ ಎದುರು ರಾಜಕುಮಾರನ ವಿರುದ್ದ ವಿಶ ಕಾರುತ್ತಿದ್ದ. ರಾಜಕುಮಾರನಿಗೆ ಈತನ ಬಗ್ಗೆ ಎಲ್ಲವೂ ತಿಳಿದಿತ್ತು. ಆದರೂ ಆತ ಸುಮ್ಮನಿದ್ದ. ಆದರೆ ಅದು ಅತಿರೇಕಕ್ಕೆ ತಲುಪಿದಾಗ ರಾಜಕುಮಾರ ಒಂದು ರಾತ್ರಿ, ತನ್ನ ಸೇವಕನ ಕಡೆಯಿಂದ ಮೂರು ಕಾಣಿಕೆಗಳನ್ನು ಆ ಕೆಟ್ಟವನಿಗೆ ಕಳಿಸಿಕೊಟ್ಟ.
ಸೇವಕ, ದುಶ್ಟನಲ್ಲಿ ಬಂದು ಅರಿಕೆ ಮಾಡಿಕೊಂಡ.
“ಮಹನೀಯರೆ, ರಾಜಕುಮಾರರು ತಮಗಾಗಿ ಗೋದಿ ಹಿಟ್ಟು, ಸಾಬೂನು ಹಾಗು ಸಕ್ಕರೆಯನ್ನು ಕಳುಹಿಸಿದ್ದಾರೆ. ದಯವಿಟ್ಟು ಸ್ವೀಕರಿಸಿರಿ”
ಆ ಕಾಣಿಕೆಗಳನ್ನು ನೋಡಿ ದುಶ್ಟನಿಗೆ ಅತೀ ನಲಿವಾಯಿತು. ಗರ್ವದಿಂದ ಮತ್ತಿಶ್ಟು ಬಿಗಿದ. ಈ ಸಮಾಚಾರ ತಿಳಿಸಲು ಆತ ಪಾದ್ರಿಯ ಕಡೆಗೆ ಹೋದ,
“ನೋಡಿ, ರಾಜಕುಮಾರನಿಗೆ ನನ್ನ ಮೇಲೆ ಎಶ್ಟು ಅಬಿಮಾನವಿದೆ ?”
ಪಾದ್ರಿ ನಕ್ಕು ನುಡಿದ,
“ರಾಜಕುಮಾರ ಬಹಳ ಬುದ್ದಿವಂತನೆಂದು ತಿಳಿಯಿತು. ಹಾಗೇ ನೀನು ಎಶ್ಟು ದಡ್ಡನಿದ್ದಿ ಎಂಬುದರ ಅರಿವೂ ಆಯಿತು. ರಾಜಕುಮಾರ ನಿನಗೆ ಹೇಳಬೇಕಾದುದನ್ನು ಮೌಕಿಕವಾಗಿ ಹೇಳದೇ ಸಂಕೇತದ ಮೂಲಕ ನಿನಗೆ ಕಾಣಿಕೆಯ ರೂಪದಿಂದ ಕಳಿಸಿದ್ದಾನೆ ಅಶ್ಟೇ ಎಂಬುದು ನಿನಗೆ ತಿಳಿಯದೇ ಹೋಯಿತು.
ಗೋದಿ ಹಿಟ್ಟು – ನಿನ್ನ ಬರಿದಾದ ಹೊಟ್ಟೆಗಾಗಿ
ಸಾಬೂನು – ನಿನ್ನ ಮನಸಿನ ಹೊಲಸು ತೊಳೆಯಲು
ಸಕ್ಕರೆ – ನಿನ್ನ ನಾಲಿಗೆಯಿಂದ ಹೊರಡುವ ಕಹಿ ಮಾತುಗಳನ್ನು ಸಿಹಿ ಮಾಡಲು ಕಳುಹಿಸಿದ್ದಾನೆ”
ದುಶ್ಟನಿಗೆ ತನ್ನ ಬಗ್ಗೆ ನಾಚಿಕೆಯಾಯಿತು. ಆದರೆ ರಾಜಕುಮಾರನ ವಿರುದ್ದ ಇದ್ದ ಹಗೆ ಇನ್ನೂ ಹೆಚ್ಚಾಯಿತು. ಹಾಗೇ, ತಾನೇನೆಂದು ತಿಳಿಸಿದ ಪಾದ್ರಿಯ ಮೇಲೂ ಸಿಟ್ಟು ಇನ್ನೂ ಹೆಚ್ಚಾಯಿತು. ಆದರೆ ದುಶ್ಟನಿಂದ ರಾಜಕುಮಾರನ ಬಗ್ಗೆ ಕೆಟ್ಟ ಮಾತುಗಳು ಮತ್ತೆ ಕೇಳಿ ಬರಲಿಲ್ಲ.
( ಮಾಹಿತಿ ಸೆಲೆ: gutenberg.net.au)
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು