
ಹಳದಿ ಹೂಗಳ ರಾಶಿಯ ಮದ್ಯೆ…
– ವಿನು ರವಿ.
ಹಳದಿ ಹೂಗಳ ರಾಶಿಯ
ಮದ್ಯೆ ತಿಳಿ ಬಣ್ಣದ
ಕಲ್ಲು ಬೆಂಚು..
ನಡಿಗೆ ಸಾಕಾಗಿ
ದಣಿವಾರಿಸುತ ಕುಳಿತ ನನಗೆ
ಕಂಡರು ಆ ದಂಪತಿಗಳು…
ಎಂತ ಸುಂದರ ಜೋಡಿ..!
ಕೆನ್ನೆ ತುಂಬ ಅರಿಸಿಣವೇನೂ
ಇಲ್ಲ, ಆದರೂ ಹಣೆ ತುಂಬಾ
ದುಂಡು ಕುಂಕುಮ
ಅರಳು ಕಂಗಳಲ್ಲಿ ತಾರೆಯ
ಹೊಳಪೇನೂ ಇಲ್ಲ
ಆದರೂ ದೀಪದ ಕುಡಿಯ
ಹೊಂಬೆಳಕಿನ ಕಾಂತಿ..!
ಹಣೆಯ ಮೇಲೆ ಮುಂಗುರುಳಿನ
ಲಾಸ್ಯವಿಲ್ಲ. ಆದರೂ
ಚಿತ್ರ ಬರೆದಂತೆ
ಬೈತಲೆಯ ಸೊಬಗು..!
ನಸು ನೀಲಿಯ ಸೀರೆಯುಟ್ಟ
ಆಕೆಯಲ್ಲೇನೋ ಹೊಸತನದ
ಹುರುಪು..!
ಜೊತೆಯಲ್ಲೇ ಹೆಜ್ಜೆಗೊಂದು
ಹೆಜ್ಜೆ ಬೆಸೆದ ಆತನದು
ದೀರ ಗಂಬೀರ ನಡೆ
ತುಸು ಗಂಬೀರ ವದನ
ಆದರೂ ತಿಳಿನಗೆ ಬೀರುವ
ತೀಕ್ಶ್ಣ ಕಂಗಳು,
ನೀಟಾದ ಉಡುಪು…
ಮೆಲುನುಡಿಗಳ ವಿನಿಮಯದ
ಜೊತೆಗೆ ನಡಿಗೆಯ
ಆನಂದವನ್ನು ಆಸ್ವಾದಿಸುತ್ತಾ
ಹೊರಟ ಆ ದಂಪತಿಗಳು
ವರುಣನ ಸಿಂಚನಕೆ
ಮುಕದ ತುಂಬಾ ಎರಚಿದ
ತಣ್ಣನೆಯ ಹನಿಗಳ
ಸುಕವನನುಬವಿಸುತ
ಕುಳಿತ ನನಗೆ
ದಾಂಪತ್ಯದೊಳಗಿನ
ಪ್ರೇಮ ಸಾಂಗತ್ಯದ ಬೆಸುಗೆಯ
ನಿಜಾರ‍್ತದಂತೆ ಕಂಡರು
(ಚಿತ್ರ ಸೆಲೆ: pixabay.com)