ಸಾವು : ನನ್ನ ಅನಿಸಿಕೆ

– ಪ್ರಶಾಂತ. ಆರ್. ಮುಜಗೊಂಡ.

ಸಾವು ಎಂದರೆ ಜನ ಅಂಜುವರೇಕೆ? ಸಾವು ಎಂದರೆ ಮುದುಡುವರು ಯಾಕೆ? ಸಾವು ಎಲ್ಲರಿಗೂ ಬರುವುದೇ? ಸಾವಿನಿಂದ ತಪ್ಪಿಸಿಕೊಳ್ಳಲು ಸಾದ್ಯವಿಲ್ಲವೇ? ದ್ಯಾನ-ತಪಸ್ಸು ಮಾಡಿ ಸಾವಿನಿಂದ ತಪ್ಪಿಸಿಕೊಳ್ಳಬಹುದೇ? ಸಾವಿನಿಂದ ಮನುಶ್ಯ ಮಾಡಿರುವ ಪಾಪ-ಪುಣ್ಯಗಳ ಅಂತ್ಯವಾಗುವುದೇ? ಸಾವಿನ ಬಳಿಕ ಮರುಹುಟ್ಟು ಇದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವುದೇ? ಹಾಗಿದ್ದರೆ ಸಾವಿನ ಮರ‍್ಮವಾದರೂ ಏನು?

ಹುಟ್ಟಿದ ಪ್ರತಿ ಜೀವಿಯೂ ಒಮ್ಮೆ ಸಾಯಲೇಬೇಕು. ಜೀವನ ಎಂಬ ಪಯಣದಲ್ಲಿ ಹುಟ್ಟು ಎಂಬುದು ಪ್ರಾರಂಬವಾದರೆ, ಸಾವು ಅಂತ್ಯ. ಜೀವನ ಎಂಬ ಕಟ್ಟಿಗೆಯ ತುಂಡಿಗೆ ಹುಟ್ಟು ಒಂದು ತುದಿಯಾದರೆ, ಸಾವು ಇನ್ನೊಂದು ತುದಿ. ಹುಟ್ಟಿದ ಯಾವುದೇ ಜೀವಿಯಾಗಲೀ ತನಗೆ ಸಾವು ಬರದೇ ಇರಲಿ ಎನ್ನುವಂತಿಲ್ಲ. ಸಾವು ಹತ್ತಿರಕ್ಕೆ ಸುಳಿಯದೆ ಇರಲಿ, ಸಾವನ್ನು ಕಾಣದೆ ಇರಲಿ ಎಂದು ಏನೆಲ್ಲ ಎಚ್ಚರ ವಹಿಸಿಕೊಂಡರೂ ಅದು ಯಾರನ್ನೂ ಬಿಟ್ಟಿಲ್ಲ, ಬಿಡುವುದೂ ಇಲ್ಲ. ಸಾವು ಬೆನ್ನಿಗೆ ಅಂಟಿಕೊಂಡಿದ್ದ ಬೇತಾಳ ಇದ್ದಂತೆ. ಅದು ಯಾವಾಗಲು ಬೆನ್ನ ಹಿಂದೆಯೇ ಇರುವುದು. ಸಾವೇ ಬರಬಾರದೆಂದು ಗೋರ ತಪಸ್ಸನ್ನು ಮಾಡಿ ವರ ಪಡೆದ ರಾವಣ, ಮಹಿಶಾಸುರ, ಹಿರಣ್ಯಕಶಿಪು ಏನಾದರು? ಮ್ರುತ್ಯುಂಜಯನನ್ನು ಆರಾದಿಸಿ ಆತ್ಮಲಿಂಗವನ್ನು ಪಡೆದ ರಾವಣನಿಗೆ ಮ್ರುತ್ಯುವನ್ನು ಜಯಿಸಲಾಗಲಿಲ್ಲ, ಬ್ರಹ್ಮನಿಂದ ವರ ಪಡೆದ ಮಹಿಶಾಸುರ, ಹಿರಣ್ಯಕಶಿಪು ಎಲ್ಲರೂ ಕೊನೆಗೆ ಕಂಡಿದ್ದು ಸಾವೇ.

ಹಾಗಾದರೆ ಸಾಮಾನ್ಯರು ಸಾವಿನಿಂದ ಮುಕ್ತಿ ಪಡೆಯಲು ಆಗುವುದೇ? ಇದು ಸಾದ್ಯವೇ? ಸಾಮಾನ್ಯರಾದ ನಮಗೆ ಸಾವಿನ ಬಗ್ಗೆ ಕೇಳಿದರೆ ಸಾಕು, ಎದೆಯಲ್ಲಿ ಬಯ, ಹೊಟ್ಟೆಯಲ್ಲಿ ಅದೇನೊ ಕಸಿವಿಸಿ, ಮೈನಡುಕ, ಮನದಲ್ಲಿ ಅತೀವ ಬೀತಿ. ಆ ಸಮಯದಲ್ಲಿ ತಲೆಯಲ್ಲಿ ಓಡಾಡುವ ಆಲೋಚನೆಗಳಿಗೆ ಲೆಕ್ಕವಿಲ್ಲ. ಸಾವಿನ ಸುದ್ದಿಯಿಂದ ಆಗುವ ಸಂಕಟ, ದುಕ್ಕ – ಬಿಳಿಯ ಆಗಸದಲ್ಲಿ ಮುಸುಕಿದ ಕಾರ‍್ಮೋಡದಂತೆ.

‘ಸಾವು ಒದಗುವುದು ಹೆಸರಿಗೆ’ ಅನ್ನುವುದಾದರೆ, ಒಬ್ಬ ವ್ಯಕ್ತಿಯ ಸಾವಿನ ಬಳಿಕ ಅವರ ಹೆಸರನ್ನು ನಾವು ಎಲ್ಲಿಯೂ ಬಳಸುವುದಿಲ್ಲವೆ? ಒಬ್ಬ ವ್ಯಕ್ತಿಯ ಸಾವಿನ ಜೊತೆ ಅವರ ಹೆಸರನ್ನು ಮರೆತುಬಿಡುತ್ತೆವೆಯೆ? ಇಲ್ಲ. ಸಾವಿನ ನಂತರವೂ ವ್ಯಕ್ತಿಯ ಹೆಸರನ್ನು ಬಳಸುವುದುಂಟು. ಸತ್ತ ವ್ಯಕ್ತಿ ಮಹಾನ್ ಸಾದಕರಾಗಿದ್ದರೆ ಅವರ ಹೆಸರನ್ನು ಕೆಲವು ಬೀದಿಗಳಿಗೆ, ದೊಡ್ಡ-ದೊಡ್ಡ ಸಂಸ್ತೆಗಳಿಗೆ, ಶಾಲಾ-ಕಾಲೇಜುಗಳು ಹೀಗೆ ಹಲವು ಕಡೆ ಕಾಣಸಿಗಬಹುದು. ಹಾಗಾದರೆ ಸಾವು ‘ಹೆಸರಿಗಲ್ಲ’ ಎಂದಾಯಿತು.

ಅಪಗಾತ ಸಂಬವಿಸಿದಾಗ, ವ್ಯಕ್ತಿಯ ಅಂಗಾಂಗಗಳು ತುಂಡರಿಸಿ ಹೋದರೂ ಕೂಡ ಕೆಲವೊಮ್ಮೆ ಸಾವು ಸಂಬವಿಸುವುದಿಲ್ಲ. ಆತ್ಮ ಯಾವುದನ್ನು ತೊರೆಯುತ್ತದೆಯೋ, ಯಾವುದನ್ನು ಬಿಟ್ಟು ಹೋಗುವುದೋ ಆಗ ಸಾವು ಸಂಬವಿಸುತ್ತದೆ. ಅಂದರೆ ಸಾವು ದೇಹಕ್ಕಶ್ಟೇ, ಆತ್ಮಕ್ಕೆ ಅಲ್ಲ. ಅದು ಸದಾ ಅಮರ. ಬಗವದ್ಗೀತೆಯಲಿ ಕ್ರಿಶ್ಣ ಹೇಳುವಂತೆ, “ದೇಹ ಎಂಬುದು ನಾಶವಾಗಿ ಹೋಗುವುದು, ಆದರೆ ಆತ್ಮ ಎಂಬುದು ಸೂಕ್ಶ್ಮವಾದುದು, ಸಾವಿಲ್ಲದುದು”. ಆತ್ಮ ಅಗೋಚರವಾದದು, ನಿಗೂಡವಾದದು. ಅದು ದೇಹದ ಒಳಗೂ ಇರುವುದು, ಹೊರಗೂ ಇರುವುದು. ಆತ್ಮ ಮನುಶ್ಯನ ಶರೀರದದಲ್ಲಿ ಇರುವಾಗ ಕೂಡ ಆನಂದದಿಂದ ಇರುವುದು. ದೇಹದಿಂದ ಹೊರ ಹೋದಾಗಲೂ ಅದು ಆನಂದದಿಂದಿರುವುದು.

ಕಶ್ಟ ಸುಕಗಳು ಬಂದು ಹೋಗುವಂತಹವು. ಅವು ಯಾವುದೂ ಶಾಶ್ವತವಾದುದಲ್ಲ, ಸಾವು ಬಂದರೂ ಸಾವನ್ನು ಸಂತಸದಿಂದ ಸ್ವೀಕರಿಸಬೇಕು. ಇರುವಶ್ಟು ದಿನ, ಪ್ರತಿ ಕ್ಶಣವನ್ನು – ದುಕ್ಕ ಆಗಲಿ, ಕುಶಿ ಆಗಲಿ ಯಾವುದಾದರು ಸರಿ, ಅನುಬವಿಸುತ್ತ, ಆನುಸರಿಸುತ್ತ ಜೀವನವನ್ನು ಸಾಗಿಸಬೇಕು. ಆತ್ಮ ಎಂಬುದು ಅವಿನಾಶವಾದದು, ಸಾವು ಶರೀರಕ್ಕೆ ಹೊರತು ಆತ್ಮಕ್ಕೆ ಅಲ್ಲ ಎಂಬ ಸತ್ಯವನ್ನು ಅರಿತು, ನಾವು ಸತ್ತ ಮೇಲೆಯೂ ಆತ್ಮದೊಂದಿಗೆ ಅಮರವಾಗಿರುತ್ತೇವೆ ಎಂದು ತಿಳಿಯೋಣ . ಸಾವು ಎಂಬುದು ಮನುಶ್ಯನಿಗೆ ದೊರೆತ ಅಪರೂಪದ ಅವಕಾಶ ಎಂದುಕೊಂಡು, ಜವಾಬ್ದಾರಿಗಳನ್ನು ನಿಬಾಯಿಸುತ್ತಾ, ಅಂದುಕೊಂಡ ಗುರಿಯನ್ನು ಮುಟ್ಟುವುದೇ ನಿಜವಾದ ಜೀವನ ಎಂದು ಸಂತಸದಿಂದ ಬದುಕೋಣ.

(ಚಿತ್ರ ಸೆಲೆ: publicdomainpictures.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications