ಗಣಪ : ಶ್ರಮ ಸಂಸ್ಕ್ರುತಿಯ ನೇತಾರ

– ಚಂದ್ರಗೌಡ ಕುಲಕರ‍್ಣಿ.

ಪ್ರತಿಮಾ ಶಾಸ್ತ್ರಜ್ನರಿಂದ ಹಿಡಿದು ಶಿಲ್ಪಿಗಳನ್ನು, ಚಿತ್ರಕಲಾವಿದರನ್ನು, ಸಾಹಿತಿ – ಸಮಾಜ ಚಿಂತಕರನ್ನು ತನ್ನತ್ತ ಸೆಳೆದ ಆಯಸ್ಕಾಂತದಂತಹ ವ್ಯಕ್ತಿತ್ವ ನಮ್ಮ ಗಣಪತಿಯದು. ಆದಿಮ ಕಾಲದ ಜೀವನದಲ್ಲಿ ಮಣ್ಣಿನ ಮಗನಾಗಿ (ಗೌರಿ, ಗಿರಿಜೆ = ಬೂಮಿ), ಬೆವರ ಸಂಸ್ಕ್ರುತಿಯ ಪ್ರತಿನಿದಿಯಾದ ಗಣಪ ತನಗಿಂತ ಮೊದಲಿನ ಕುರಿ-ಪಶು ಪಾಲನೆಯ ಹಂತ ದಾಟಿ ಅವೆರಡನ್ನು ಪೂರಕವಾಗಿಸಿಕೊಂಡು ನದಿ ದಡದ ಬೂಮಿಯಲ್ಲಿ ಬೀಜ ಬಿತ್ತಿ ಬೆಳೆ ಬೆಳೆದ ಒಕ್ಕಲಿಗನಾದ.

ಗಣಪತಿ ಎಂಬ ಹೆಸರಿನಲ್ಲಿ ಸಂಗಟಕ, ಸಂಗಟನೆಯ ನಾಯಕ ಎಂಬ ಅರ‍್ತ ಅಡಗಿದೆ. ಬೆವರಿನಲ್ಲಿಯೇ ಹುಟ್ಟಿಬಂದ ಗಣಪ (ಗೌರಿಯ ಬೆವರಿನ ಮಣ್ಣಿನಿಂದ) ಶ್ರಮ ಸಂಸ್ಕ್ರುತಿಯ ಪ್ರೇರಕ! ಬೀಜ ಬಿತ್ತಿ ಬೆಳೆಯುವದನ್ನು ಕಂಡು ಹಿಡಿದ ಸಂಶೋದಕ! ಒಕ್ಕಲುತನಕ್ಕೆ ಬೇಕಾದ ಬೇರೆ ಬೇರೆ ಸಲಕರಣೆಗಳನ್ನು ಕಂಡು ಹಿಡಿದು ಬಳಸಿದ ಜೀವದಾಯಕ ತಂತ್ರಜ್ನಾನಿ! ಕ್ರುಶಿ ಜೀವನಕ್ಕೆ ಅಡೆತಡೆಯಾದ ಕರಕಿಯನ್ನು ಕಾಲಕಾಲಕ್ಕೆ ಕಿತ್ತು ಬೂಮಿಯ ಸತ್ವವನ್ನು ಕಾಪಾಡಿಕೊಳ್ಳಬೇಕೆಂದು, ಕ್ರುಶಿ ಸಮ್ರುದ್ದಿಯ ದವಸ ದಾನ್ಯಗಳನ್ನು ನಾಶ ಮಾಡುವ ಇಲಿಯನ್ನು ನಿಯಂತ್ರಿಸಬೇಕೆಂದು ಹೇಳಿದ ಕ್ರುಶಿ ಅರಿವಿಗ. ಶ್ರಮದಿಂದ ಬೆವರು ಸುರಿಸುತ್ತ ದೇಹದ, ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಹೇಳಿದ ಮೊದಲ ಜೀವ ವೈದ್ಯ.

ಕುರಿ ಮತ್ತು ಪಶು ಸಂಪತ್ತನ್ನು ನಂಬಿದ ಆದಿಮ ಜೀವನದಲ್ಲಿ ಪಶು ಮತ್ತು ಕುರಿಗಳ ಸಗಣಿ-ಹಿಕ್ಕಿಯನ್ನು ಗೊಬ್ಬರವಾಗಿಸಿ ಬೂಮಿಯನ್ನು ಹದಗೊಳಿಸಿ ಸತ್ವಶಾಲಿಯಾದ ಬೀಜಗಳನ್ನು ಬಿತ್ತಿ ಬೆಳೆಯುವ, ಬೆಳೆದ ದವಸ-ದಾನ್ಯಗಳನ್ನು ಕಾಪಾಡಿಕೊಳ್ಳುವ, ಆರೋಗ್ಯ ಪೂರ‍್ಣವಾದ ಅಡಿಗೆಯನ್ನಾಗಿಸಿ ಉಣ್ಣಲು ಕಳಿಸಿದ ಕ್ರಾಂತಿ ಪುರುಶ. ತಂದೆ ಶಿವನ ಪಶು ಪಾಲನೆಯ ವಿದಾನವನ್ನು ತಿರಸ್ಕರಿಸದೆ, ಅದಕ್ಕೂ ಮೊದಲಿನ ಕುರಿ ಪಾಲನೆಯ ವಿದಾನವನ್ನೂ ತಿರಸ್ಕರಿಸದೆ ಅವರಿಗಿಂತ ವಿನೂತನವಾದ, ನಿಸರ‍್ಗದ ಚಟುವಟಿಕೆಗೆ ವಿರೋದವಲ್ಲದ ಬೇಸಾಯವನ್ನು ಕಂಡು ಹಿಡಿದದ್ದು ಮತ್ತು ಅದನ್ನು ಪರಿಣಾಮಕಾರಿಯಾಗಿ ಬಳಕೆಗೆ ತಂದದ್ದು, ಅಂತಹ ಜಾನಪದ ಸಂಸ್ಕ್ರುತಿಗೆ ಒಡೆಯನಾದದ್ದು ಸಾಮಾನ್ಯವಾದುದಲ್ಲ.

ಅಂತೆಯೇ ಈ ಗಣಪ ಎಲ್ಲ ಕಲೆಗಳಿಗೆ ಮೂಲ ಪುರುಶನಾಗಿದ್ದಾನೆ. ಆದಿ ಮೂರುತಿಯಾಗಿದ್ದಾನೆ. ಕ್ರುಶಿಯರಿಮೆ, ಅರಿಮೆ, ತಂತ್ರ ಅರಿಮೆ, ಸಂಸ್ಕ್ರುತಿ ಚಿಂತನೆ, ತತ್ವಜ್ನಾನ ಮುಂತಾದ ಸಾಮಾಜಿಕ ಹಿತವನ್ನೊಳಗೊಂಡ ವಿಶಿಶ್ಟ ಬದುಕಿನ ಕಲೆ ಕಂಡು ಹಿಡಿದವನಿಗೆ, ಸಾಹಿತ್ಯ, ಸಂಗೀತ, ನಾಟಕ, ಬಯಲಾಟ, ವ್ಯವಹಾರಗಳಲ್ಲಿಯೂ ಅದ್ಬುತ ಪ್ರತಿಬೆ ಇದೆಯಂದೇ ತಿಳಿದು ಎಲ್ಲ ಕಲೆಗಳಿಗೂ ಈ ಗಣಪನನ್ನು ಮೂಲ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ವ್ಯಾಸ ಬಾರತ ಬರೆದವನಿಗೆ, ಕರ‍್ನಾಟಕ ಸಂಗೀತದ ಮೂಲ ಪುರುಶನಾದವನಿಗೆ ಇವೆಲ್ಲ ಸಲ್ಲಬೇಕಾದ ಅರ‍್ಹತೆಗಳೇ.

ಶ್ರಮ ಸಂಸ್ಕ್ರುತಿಯ ಈ ನೇತಾರನಿಗೆ ನೈವೇದ್ಯದ ವಸ್ತುಗಳು ಕರಕಿ ಹಣ್ಣು ಹಂಪಲಗಳು. ಅನಂತರದ ಕಾಲದಲ್ಲಿ ಪಾಕ ಪ್ರಾವೀಣ್ಯತೆಯಿಂದ ಹುಟ್ಟಿ ಬಂದ ಮೋದಕ- ಹಪ್ಪಳಗಳು ಸೇರ‍್ಪಡೆಯಾದವು. ಹೀಗೆ ಪೂಜೆಗೆ ಯೋಗ್ಯನಾದ ಗಣಪತಿ ನಮ್ಮ ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ದೇಶಪ್ರೇಮದ ದೇವರಾಗಿಯೂ ಪ್ರಸಿದ್ದಿ ಪಡೆದ. ಈಗೀಗ ನಾಗರಿಕ, ವ್ಯಾವಹಾರಿಕ,ಯಾಂತ್ರಿಕ ಲೋಕಕ್ಕೆ ಕಾಲಿಟ್ಟು ನಗರ ದೇವನಾದ. ಅದ್ದೂರಿ ಆಡಂಬರದ ಆಚರಣೆಗೆ ಕಾರಣನಾದ.

ಹೀಗೆ ಕಾಲ ಕಾಲಕ್ಕೆ ಪ್ರಸ್ತುತತೆಯನ್ನು ಪಡೆದು ರೂಪಕವಾಗುತ್ತ ಬಂದಿರುವ ಈ ಗಣಪ ನ್ಯಾನೋ ಯುಗದಲ್ಲಿ ಯಾವ ರೂಪ ಪಡೆಯುತ್ತಾನೆಂಬುದನ್ನು ಊಹಿಸಲು ಸಾದ್ಯವಿಲ್ಲ. ನೂರಾರು ಕತೆಗಳಲ್ಲಿ, ನೂರಾರು ಬಗೆಯಲ್ಲಿ ಬಣ್ಣಿತವಾದ ಗಣಪ ಕಾಲದ ಪರಿವರ‍್ತನೆಗೆ ಹೊಂದಿಕೊಳ್ಳುವವನಾಗಿದ್ದಾನೆ. ಅಂತೆಯೇ ಆತನ ಸುತ್ತಲೂ ಅಗಣಿತ ಕತೆಗಳು ಹುಟ್ಟಿಕೊಂಡಿವೆ. ನಮ್ಮ ಬದುಕಿನಲ್ಲಿ ಅನೇಕ ಅರ‍್ತ ವಲಯಗಳನ್ನು ಉದ್ದೀಪನಗೊಳಿಸುವ ಗಣಪ ನನ್ನ ಅರಿವಿನ ಮಿತಿಯಲ್ಲಿ ಕಂಡದ್ದು ಹೀಗೆ. ಚಿಂತಕರು, ತಾವು ಕಂಡ ಹೊಸ ಅರ‍್ತ ವಲಯಗಳನ್ನು ಸದಾ ಹಂಚಿಕೊಂಡು ಅರಿವಿನ ಹಾದಿಗೆ ಹೊಸತನ ತರಬೇಕೆಂದು ನನ್ನ ಆಶಯ.

( ಚಿತ್ರ ಸೆಲೆ:  shortday.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: