ಊರ ಹಬ್ಬ
– ಸುರಬಿ ಲತಾ.
ಮೂರು ವರ‍್ಶಕ್ಕೊಮ್ಮೆ
ಬಂದಿತೊಂದು ಊರ ಹಬ್ಬ
ಜಗಮಗಿಸಿದೆ ಬೀದಿ ಬೀದಿಗಳಲಿ
ಕ್ರುತಕ ಬೀದಿ ದೀಪ
ಡೋಲಿನ ಸದ್ದು ಎಲ್ಲೆಡೆ
ಬಾಂಬುಗಳು ಎಸೆದಂತೆ ನನ್ನೆಡೆ
ಕುಣಿದರು ದೊಡ್ಡವರು ಹುಡುಗರು
ಅದನೋಡಿ ನಲಿದರು ಮನೆಯವರು
ಬೇದಬಾವ ಎಲ್ಲಿದೆ ಇಲ್ಲಿ
ಒಂದಾಗಿ ನಲಿದರು ನಗೆಯ ಚೆಲ್ಲಿ
ಸಾಲು ದೀಪಗಳ ನಡುವೆ
ಹೊತ್ತು ನಡೆದರು ಹೆಂಗೆಳೆಯರು
ಅಲಂಕರಿಸಿದ ಪೂಜೆಯ ತಟ್ಟೆ
ತೊಟ್ಟಿದ್ದರು ಬಣ್ಣ ಬಣ್ಣದ ಬಟ್ಟೆ
ಕಟ್ಟಿ ಹಾಕಿದ್ದ ಕುರಿಯ
ಮೈ ಕೈ ತುಂಬಿತ್ತು
ಒಂದೇ ಸಮನೆ ಬಯದಿ
ಅರಚುತ್ತ ಅತ್ತ ಇತ್ತ ನೋಡುತ್ತಿತ್ತು
ಎದೆಯಲ್ಲಿ ಸಣ್ಣ ನೋವು ನನಗೇಕೋ
ತಿಳಿಯದಾಯಿತು ಯಾರಿಗೆ ಹೇಳಬೇಕೋ
ದೇವತೆಗಳ ಆರಾದನೆ ಬಕ್ತಿಯಿಂದ
ನಡೆಯುತ್ತಿತ್ತು, ನೆನೆದಾಗ
ಕುರಿಗಳ ಮಾರಣಹೋಮ
ನನ್ನ ಕಣ್ಣು ನೆನೆದಿತ್ತು
ತಪ್ಪೋ ಸರಿಯೋ
ನಾನೊಂದೂ ಅರಿಯೆ
ಸಂಪ್ರದಾಯ ಬದಲಿಸಲಾಗದಾ
ಹರಿಯೇ?
( ಚಿತ್ರ ಸೆಲೆ: vijaykarnataka.indiatimes.com )
ಇತ್ತೀಚಿನ ಅನಿಸಿಕೆಗಳು