ಜೇಡರಹುಳು ಹೇಗೆ ಬಲೆಯನ್ನು ಕಟ್ಟುತ್ತದೆ?

– ನಾಗರಾಜ್ ಬದ್ರಾ.

ಮೊದಲಿಗೆ ನೀರಿನಲ್ಲಿ ಬದುಕುತ್ತಿದ್ದ ಜೇಡರ ಹುಳುಗಳು ಕಾಲಕಳೆದಂತೆ ನೆಲದ ಮೇಲೆ ಬದುಕಲು ಪ್ರಾರಂಬಿಸಿದವು. ಬಳಿಕ ತಮ್ಮ ಉಳಿಯುವಿಕೆಗಾಗಿ ನೂಲನ್ನು ತಯಾರಿಸುವ ಚಳಕವನ್ನು ಕಂಡುಕೊಂಡವು. ಮೊದಲಿಗೆ ನೂಲಿನ ಚಿಕ್ಕ ಚಿಕ್ಕ ಸಾಲುಗಳನ್ನು ದಾರಿತೋರುಗವಾಗಿ ಬಳಸುತ್ತಿದ್ದ ಜೇಡರ ಹುಳಗಳು ಹಂತಹಂತವಾಗಿ ಬೇಟೆಗಾಗಿ ಬಲೆಯನ್ನು ಹೆಣೆಯಲು ಬಳಸಲು ಪ್ರಾರಂಬಿಸಿದವು.

ಜೇಡರ ಬಲೆಯು ಕನಿಶ್ಟ 100 ಮಿಲಿಯನ್ ವರ‍್ಶಗಳ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಸುಮಾರು 50,000 ಸಾವಿರಕ್ಕಿಂತ ಹೆಚ್ಚಿನ ಜಾತಿಯ ಜೇಡರ ಹುಳುಗಳಿದ್ದು, ಎಲ್ಲವೂ ಬಲೆಯನ್ನು ಹೆಣೆಯುವುದಿಲ್ಲ. ಕೆಲವೊಂದು ಜಾತಿಯ ಜೇಡರ ಹುಳುಗಳು ಬರೀ ನೂಲನ್ನು ಮಾತ್ರ ತಯಾರಿಸುತ್ತವೆ. ಬಲೆಯು ಅವುಗಳಿಗೆ ತನ್ನ ಬೇಟೆಯನ್ನು ಹಿಡಿಯಲು ನೆರವಾಗುವುದಲ್ಲದೇ, ತಿನ್ನಲು ಬೇಕಾಗುವ ಊಟವನ್ನು ಕೂಡಿಹಾಕಲು ಕೂಡ ನೆರವಾಗುತ್ತದೆ. ಇನ್ನೊಂದು ಅಪರೂಪದ ಸಂಗತಿ ಎಂದರೆ ಹೆಣ್ಣು ಜೇಡರ ಹುಳು ಮಾತ್ರ ಬಲೆಯನ್ನು ಹೆಣೆಯುತ್ತದೆ.

ಜೇಡರಹುಳು ಬಲೆಯನ್ನು ಕಟ್ಟುವ ಹಂತಗಳು

  • ಮೊದಲಿಗೆ ಹುಳವು ಯಾವ ಎರಡು ವಸ್ತುಗಳ ನಡುವೆ ಬಲೆಯನ್ನು ಹೆಣೆಯಬೇಕೆಂದು ತೀರ‍್ಮಾನಿಸುತ್ತದೆ.
  • ಗಾಳಿಯ ಬಿರುಸು ಹೆಚ್ಚಿರುವ ಜಾಗದಲ್ಲಿ ಬಲೆಯನ್ನು ಹೆಣೆಯಲು ತೊಂದರೆ ಆಗುವುದರಿಂದ, ಅದು ತಾನು ಆಯ್ಕೆ ಮಾಡಿಕೊಂಡಿರುವ ಜಾಗದಲ್ಲಿನ ಗಾಳಿಯ ಬಿರುಸನ್ನು (blow) ಪರಿಶೀಲಿಸುತ್ತದೆ. ಅದಕ್ಕಾಗಿ ಬಲೆಯನ್ನು ಹೆಣೆಯಲು ಆಯ್ಕೆಮಾಡಿಕೊಂಡಿರುವ ಜಾಗದಲ್ಲಿ ಒಂದು ಕಡೆಗೆ ನೂಲನ್ನು ಕಟ್ಟುತ್ತದೆ. ಈ ನೂಲನ್ನು ಕಟ್ಟುವ ಕೆಲಸವನ್ನು ಹೆಚ್ಚಾಗಿ ಬೆಳಗಿನ ಹೊತ್ತಿನಲ್ಲಿ ಮಾಡುತ್ತದೆ.
  • ದಿನವಿಡೀ ಕಾದು, ಇರುಳಿನ ಹೊತ್ತಿಗೆ ಬಂದು ಬೆಳಗ್ಗೆ ಕಟ್ಟಿದ್ದ ನೂಲು ಇನ್ನೂ ಅಲ್ಲೇ ಇದೆಯೋ ಇಲ್ಲವೋ ಎಂದು ನೋಡುತ್ತದೆ. ಆ ನೂಲು ಅಲ್ಲಿಯೇ ಇದ್ದರೆ ಆ ಜಾಗದಲ್ಲಿ ಗಾಳಿಯ ಬಿರುಸು ಕಡಿಮೆ ಇದೆ ಎಂದು ತೀರ‍್ಮಾನಿಸಿ ಬಲೆಯನ್ನು ಹೆಣೆಯಲು ಆರಂಬಿಸುತ್ತದೆ, ಇಲ್ಲವೆಂದರೆ ಗಾಳಿಯ ಬಿರುಸು ಕಡಿಮೆ ಇರುವ ಮತ್ತೊಂದು ಜಾಗವನ್ನು ಹುಡುಕುತ್ತಾ ಹೋಗುತ್ತದೆ.
  • ಬಲೆಯನ್ನು ಕಟ್ಟಲು ಜಾಗವು ಸರಿಹೊಂದಿದ ಬಳಿಕ ಮೊದಲಿಗೆ ಕಟ್ಟಿದ್ದ ನೂಲನ್ನು ಇನ್ನು ಹೆಚ್ಚು ಗಟ್ಟಿಯಾಗಿಸಿ ಇನ್ನೊಂದು ವಸ್ತುವಿನ ತುದಿಗೆ ಕಟ್ಟುತ್ತದೆ. ಇದು ಎರಡೂ ವಸ್ತುಗಳ ನಡುವೆ ಸೇತುವೆಯ ರೂಪದಲ್ಲಿರುತ್ತದೆ. ಆದ್ದರಿಂದ ಇದನ್ನು ಸೇತುವೆ ನೂಲು ಎಂದು ಕರೆಯುತ್ತಾರೆ.
  • ನೂಲನ್ನು ಕಟ್ಟಿದ್ದ ಎರಡೂ ತುದಿಗಳಿಂದ ಒಂದೊಂದು ನೂಲನ್ನು ತಂದು, ಮೂರನೆಯ ಜಾಗವನ್ನು ಗುರುತಿಸಿ ಅಲ್ಲಿಗೆ ಆ ನೂಲುಗಳನ್ನು ಕಟ್ಟುತ್ತದೆ. ಇದನ್ನು ಹಿಡಿಗೂಟದ ನೂಲು ಎಂದು ಕರೆಯುತ್ತಾರೆ. ಸೇತುವೆ ನೂಲು ಮತ್ತು ಹಿಡಿಗೂಟದ ನೂಲುಗಳು ಸೇರಿ ಈ ಬಲೆಯು ಮುಮ್ಮೂಲೆಯ(triangle) ಆಕಾರದಲ್ಲಿ ಇರುತ್ತದೆ. ಮುಂದೆ ಜೇಡರ ಹುಳು ತನಗೆ ಬೇಕಾದಶ್ಟು ಹಿಡಿಗೂಟದ ನೂಲುಗಳನ್ನು ಬೇರೆ ಬೇರೆ ಜಾಗಗಳಲ್ಲಿ ಕಟ್ಟುತ್ತಾ ಹೋಗುತ್ತದೆ. ಹಿಡಿಗೂಟದ ನೂಲನ್ನು ಕಟ್ಟಿರುವ ಜಾಗಕ್ಕೆ ಹಿಡಿಗೂಟದ ನೆಲೆ ಎಂದು ಕರೆಯುತ್ತಾರೆ.
  • ಬಳಿಕ ಹಿಡಿಗೂಟದ ನೂಲುಗಳನ್ನು ಒಂದಕ್ಕೊಂದು ಜೋಡಣೆ ಮಾಡಲು ಅವುಗಳ ನಡುವೆ ಕೆಲವು ನೂಲುಗಳನ್ನು ಹೆಣೆಯುತ್ತದೆ. ಇವುಗಳನ್ನು ಇಟ್ಟಳದ ನೂಲುಗಳು (frame threads) ಎಂದು ಕರೆಯುತ್ತಾರೆ.
  • ಆಮೇಲೆ ಬಲೆಯ ನಡುವಿನ ಜಾಗದಿಂದ ಹಿಡಿಗೂಟದ ನೂಲುಗಳಿಗೆ ಕೆಲವು ನೂಲುಗಳನ್ನು ಹೆಣೆಯುತ್ತದೆ. ಇವುಗಳನ್ನು ಬೀರುಗೆರೆ ನೂಲುಗಳು (radial silk) ಎಂದು ಕರೆಯುತ್ತಾರೆ. ಇಟ್ಟಳದ ಹಾಗೂ ಬೀರುಗೆರೆಯ ನೂಲುಗಳು ಜಿಗುಟಾಗಿರುವುದಿಲ್ಲ, ಆದ್ದರಿಂದ ಜೇಡರ ಹುಳು ಬಲೆಯಲ್ಲಿ ಇವುಗಳ ಮೇಲೆಯೇ ನಡೆದಾಡುತ್ತದೆ. ಈ ಎರಡೂ ಬಗೆಯ ನೂಲುಗಳು ಬೇಟೆಯನ್ನು ಸೆರೆಹಿಡಿಯಲು ನೆರವಾಗುತ್ತವೆ.
  • ಬಳಿಕ ಜೇಡರ ಹುಳು ಬಲೆಯ ನಡುವಿನ ಜಾಗದಿಂದ ತನಗೆ ಬೇಕಾಗಿರುವ ಮಾದರಿಯಲ್ಲಿ ಬೇಟೆಯನ್ನು ಸೆರೆಹಿಡಿಯುವ ನೂಲನ್ನು ಹೆಣೆಯುತ್ತದೆ. ಈ ನೂಲು ಜಿಗುಟಾಗಿದ್ದು, ಇದನ್ನು ಒತ್ತಾಸೆಯ ನೂಲು (auxiliary silk) ಎಂದು ಕರೆಯುತ್ತಾರೆ.

ಜೇಡರ ಹುಳು ಸಾಮಾನ್ಯವಾಗಿ ಬಲೆಯಲ್ಲಿ ನಡುವಿನ ಜಾಗದಲ್ಲಿರುತ್ತದೆ. ಚಿಕ್ಕ ಚಿಕ್ಕ ಹುಳುಗಳು ಬಲೆಯಲ್ಲಿ ಸಿಕ್ಕಿಬಿದ್ದರೆ, ಅದರಲ್ಲಿನ ಜಿಗುಟಾದ ನೂಲುಗಳಲ್ಲಿ ಅಂಟಿಕೊಳ್ಳುತ್ತವೆ. ಬಳಿಕ ಜೇಡರ ಹುಳು ತನ್ನ ನಂಜಿನ ಹಲ್ಲುಗಳನ್ನು ಬಳಸಿ ಸಿಕ್ಕಿಬಿದ್ದಿರುವ ಹುಳುಗಳನ್ನು ಸಾಯಿಸಿ ತಿನ್ನುತ್ತದೆ. ಇವು ತನ್ನ ಪಂಜಗಳಿಂದ ಬಲೆಯನ್ನು ಹೆಣೆಯುತ್ತವೆ. ಸಾಮಾನ್ಯವಾಗಿ ಬಲೆಯನ್ನು ಹೆಣೆಯುವ ಅಳವು ಹೊಂದಿರುವವು ಮೂರು ಪಂಜಗಳನ್ನು ಹೊಂದಿದ್ದರೆ, ಬಲೆಯನ್ನು ಹೆಣೆಯದ ಜೇಡರ ಹುಳುಗಳು ಎರಡು ಪಂಜಗಳನ್ನು ಹೊಂದಿರುತ್ತವೆ.

ಜೇಡರ ಬಲೆಯ ಕೆಲವು ಬಗೆಗಳು

ಉಂಡೆ ಆಕಾರದ ಬಲೆ (Orb Web): ಇದು ಸಾಮಾನ್ಯವಾಗಿ ಕಂಡುಬರುವ ಬಲೆಯ ಬಗೆಯಾಗಿದ್ದು, ಈ ರೀತಿಯ ಬಲೆಯನ್ನು ಅರಾನೀಡೆ (Araneidae) ಕುಟುಂಬಕ್ಕೆ ಸೇರಿದ ಜೇಡರ ಹುಳುಗಳು ಹೆಣೆಯುತ್ತವೆ. ಉಂಡೆ ಆಕಾರದ ಬಲೆಗಳು ಹೆಚ್ಚಾಗಿ ಹೊರಾಂಗಣದಲ್ಲಿಯೇ ಕಂಡುಬರುತ್ತವೆ.

ಗೋಜಲಾಕಾರದ ಬಲೆ (tangle Web): ಈ ಬಗೆಯ ಬಲೆಯನ್ನು ತೆರಿಡಿಡೇಗೆ (Theridiidae) ಕುಟುಂಬಕ್ಕೆ ಸೇರಿದ ಜೇಡರ ಹುಳುಗಳು ಹೆಣೆಯುತ್ತವೆ. ಇವುಗಳು ಯಾವುದೇ ರೀತಿಯ ವ್ಯವಸ್ತಿತವಾದ ಆಕಾರವನ್ನು ಹೊಂದಿರುವುದಿಲ್ಲ. ಬದಲಿಗೆ ಜಾಗಕ್ಕೆ ತಕ್ಕಂತೆ ನೂಲನ್ನು ಕಟ್ಟಲಾಗಿರುತ್ತದೆ. ಉದಾಹರಣೆಗೆ ಮನೆಯಲ್ಲಿ ಕಾಣಿಸಿಕೊಳ್ಳುವ ಜೇಡರ ಹುಳುವಿನ ಬಲೆಗಳು.

ಹಾಳೆಯಾಕಾರದ ಬಲೆ (Sheet Web): ಲಿನಿಪಿಡೆ (Linyphiidae) ಕುಟುಂಬಕ್ಕೆ ಸೇರಿದ ಜೇಡರ ಹುಳುಗಳು ಹುಲ್ಲಿನ ತುದಿಗಳು ಅತವಾ ಮರದ ಕೊಂಬೆಗಳ ಮೇಲೆ ನೂಲಿನ ಹಾಳೆಯಂತೆ ಬಲೆಯನ್ನು ಹೆಣೆಯುತ್ತವೆ.

ಕೊಳವೆ ಆಕಾರದ ಬಲೆ (Funnel Web): ಅತ್ಯಂತ ಹೆಸರುವಾಸಿಯಾದ ಅಜೆಲೆನಿಡೆ (Agelenidae) ಕುಟುಂಬಕ್ಕೆ ಸೇರಿದ ಜೇಡರ ಹುಳುಗಳು ಈ ಬಲೆಯನ್ನು ಹೆಣೆಯುತ್ತವೆ. ಕೊಳವೆ ಆಕಾರದ ಬಲೆಗಳು ಮೇಲಿನಿಂದ ನೋಡಲು ಚಪ್ಪಟೆಯಾಗಿ ಕಾಣುತ್ತದೆ ಆದರೆ ಇವುಗಳ ಎರಡೂ ತುದಿಗಳು ಕೂಡ ತೆರೆದಿರುತ್ತವೆ. ಇದು ಅಪಾಯದ ಹೊತ್ತಿನಲ್ಲಿ ಜೇಡರ ಹುಳುವಿಗೆ ಎರಡೂ ಕಡೆಯಿಂದ ತಪ್ಪಿಸಿಕೊಳ್ಳಲು ನೆರವಾಗುತ್ತದೆ. ಈ ರೀತಿಯ ಬಲೆಯಲ್ಲಿ ಜೇಡರ ಹುಳು ಸೆರೆ ಸಿಕ್ಕಿರುವ ಅದರ ಬೇಟೆಯನ್ನು ಅವುಗಳ ಅದುರುವಿಕೆಯಿಂದ ಕಂಡುಹಿಡಿಯುತ್ತದೆ.

ಗುಮ್ಮಟ (dome) ಆಕಾರದ ಬಲೆ: ಇದು ತಲೆಕೆಳಗಾದ ಬಟ್ಟಲಿನಂತಹ ಡೊಂಕಾದ ರಚನೆಯನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಈ ರೀತಿಯ ಬಲೆಯನ್ನು ರಶ್ಯಾದ ಗುಡಾರ (tent) ಜೇಡರ ಹುಳುಗಳು ಹೆಣೆಯುತ್ತವೆ.

ಜೇಡರ ಹುಳುಗಳು ಈ ರೀತಿಯ ಇನ್ನು ಹಲವಾರು ಬಗೆಯ ಬಲೆಗಳನ್ನು ಹೆಣೆಯುತ್ತವೆ.

ವಿಶ್ವದ ಅತ್ಯಂತ ದೊಡ್ಡ ಜೇಡರ ಬಲೆ

ಡಾರ‍್ವಿನ್‍ನ ತೊಗಟೆ ಜೇಡರ ಹುಳು (Darwin’s bark spider) ವಿಶ್ವದ ಅತ್ಯಂತ ದೊಡ್ಡ ಉಂಡೆ ಆಕಾರದ ಜೇಡರ ಬಲೆಯನ್ನು ಹೆಣೆದಿದ್ದು, ಇದು ಸುಮಾರು 900 ರಿಂದ 28,000 ಚದರ ಸೆಂಟಿಮೀಟರುಗಳಶ್ಟು ಸುತ್ತಳತೆಯ ಹಾಗೂ ಸುಮಾರು 82 ಅಡಿ ಉದ್ದದ ಹಿಡಿಗೂಟದ ನೂಲುಗಳನ್ನು ಹೊಂದಿದೆ. ಈ ಬಲೆಯು 2009 ರಲ್ಲಿ ಮಡಗಾಸ್ಕರ್ (Madagascar) ಅಲ್ಲಿನ ಅಂಡಾಸಿಬೆ-ಮಂಟಾಡಿಯಾ ರಾಶ್ಟ್ರೀಯ ಉದ್ಯಾನವನದಲ್ಲಿ (Andasibe-Mantadia National Park) ಕಂಡುಬಂದಿದ್ದು, ಇದರ ನೂಲು ಅತ್ಯಂತ ಗಟ್ಟಿಯಾದ ಅಡಕವನ್ನು (material) ಹೊಂದಿದೆ ಎಂದು ಅರಕೆ ಒಂದರಿಂದ ತಿಳಿದು ಬಂದಿದೆ.

ಜೇಡರ ನೂಲು

ಜೇಡರ ಹುಳುಗಳು ತಮ್ಮ ಹೊಟ್ಟೆಯಲ್ಲಿರುವ ಸ್ಪಿನ್ನರೆಟ್ ಸುರಿಗೆಗಳು (spinneret glands) ಹೊರಹಾಕುವ ಮುನ್ನನ್ನು (protein) ಬಳಸಿ ನೂಲನ್ನು ತಯಾರಿಸುತ್ತವೆ. ಇವುಗಳಲ್ಲಿ ಹಲವಾರು ಸುರಿಗೆಗಳಿದ್ದು, ಪ್ರತಿಯೊಂದು ಸುರಿಗೆಯು ಒಂದು ವಿಶೇಶ ಕೆಲಸಕ್ಕೆ ನೂಲನ್ನು ತಯಾರಿಸುತ್ತವೆ. ಉದಾಹರಣೆಗೆ ಒಂದು ಸುರಿಗೆಯು ಬೇಟೆಯನ್ನು ಹಿಡಿಯಲು ಬೇಕಾದ ಜಿಗುಟಾದ ನೂಲನ್ನು ತಯಾರಿಸಿದರೆ, ಇನ್ನೊಂದು ಹಿಡಿದ ಬೇಟೆಯನ್ನು ಸುತ್ತಲು ಜಿನುಗು (fine) ನೂಲನ್ನು ತಯಾರಿಸುತ್ತದೆ. ಕೆಲವೊಂದು ಜೇಡರ ಹುಳುಗಳು ತಮ್ಮ ಜೀವಮಾನದಲ್ಲಿ ಸುಮಾರು 8 ಬಗೆಯ ನೂಲನ್ನು ತಯಾರಿಸುವ ಅಳವನ್ನು ಹೊಂದಿವೆ.

ಸಾಮಾನ್ಯವಾಗಿ ಗಂಡು ಜೇಡರ ಹುಳುಗಳು 3 ಸುರಿಗೆಗಳನ್ನು ಹೊಂದಿರುತ್ತವೆ. ಆದರೆ ಹೆಣ್ಣುಗಳಲ್ಲಿ ಮೊಟ್ಟೆಗಳಿಗಾಗಿ ಒಂದು ಹೆಚ್ಚಿನ ಸುರಿಗೆ ಇರುವುದರಿಂದ ಅವುಗಳು ಒಟ್ಟು ನಾಲ್ಕು ಸುರಿಗೆಗಳನ್ನು ಹೊಂದಿರುತ್ತವೆ. ಜೇಡರ ಹುಳುಗಳು ಒಂದು ನೂಲನ್ನು ಅಂಟಿಕೊಳ್ಳುವಂತೆ ಅತವಾ ಅಂಟಿಕೊಳ್ಳದಂತೆ ನೇಯಬಹುದು. ಹಾಗೆಯೇ ಅವುಗಳು ನೂಲಿನ ಕೆಲವು ಬಾಗಗಳನ್ನು ಮಾತ್ರ ಅಂಟಿಕೊಳ್ಳುವಂತೆ ಕೂಡ ಮಾಡಬಹುದು.

ಜೇಡರ ಹುಳುವಿನ ನೂಲು ಹಾಗೂ ಬಲೆಯ ಕುರಿತು ಕೆಲವುಸಂಗತಿಗಳು

• ಜೇಡರ ಹುಳುವಿನ ನೂಲಿನಲ್ಲಿ ಬಾಳುಕಟ್ಟುಕ ಕೆ ( vitamin K ) ಇರುವುದರಿಂದ ಇದನ್ನು ಗಾಯವನ್ನು ವಾಸಿಮಾಡಲು ಬಳಸುತ್ತಾರೆ.
• ಜೇಡರ ಹುಳುವಿನ ನೂಲು ಅದೇ ದುಂಡಗಲದ (diameter) ಉಕ್ಕಿಗಿಂತ ಐದು ಪಟ್ಟು ಗಟ್ಟಿಯಾಗಿರುತ್ತದೆ.
• ಮನುಶ್ಯನಿಗೆ ಜೇಡರ ಹುಳುವಿನ ನೂಲಿನಂತಹ ನೂಲನ್ನು ತಯಾರಿಸಲು ಇಲ್ಲಿವರೆಗೂ ಸಾದ್ಯವಾಗಿಲ್ಲ.
• ಜೇಡರ ಹುಳುವಿನ ನೂಲಿನಲ್ಲಿ ಮುನ್ನು(protein) ಇರುವುದರಿಂದ ಕೆಲವೊಂದು ಬಗೆಯ ಜೇಡರ ಹುಳುಗಳು ತಮ್ಮ ಶಕ್ತಿ ಹಾಗೂ ಮೈಯಲ್ಲಿ ನೂಲಿನ ಮಟ್ಟವನ್ನು ಉಳಿಸಿಕೊಳ್ಳಲು ತಮ್ಮ ನೂಲನ್ನೇ ತಿನ್ನುತ್ತವೆ.
• ಕೆಲವೊಂದು ದೊಡ್ಡ ಗಾತ್ರದ ಜೇಡರ ಹುಳುಗಳು ಹಕ್ಕಿಗಳನ್ನು ಕೂಡ ತಿನ್ನುತ್ತವೆ.
• ಜೇಡರ ಹುಳುಗಳು ನೀಲಿ ಬಣ್ಣದ ನೆತ್ತರು ಹೊಂದಿರುತ್ತವೆ. ಹಿಮೋಗ್ಲೊಬಿನ್ ಬದಲು ಹಿಮೋಸಿಯನಿನ್ ಇರುವುದರಿಂದ ಇವುಗಳ ನೆತ್ತರು ನೀಲಿಯಾಗಿರುತ್ತದೆ.
• ಕಪ್ಪು ಬಣ್ಣದ ಜೇಡರ ಹುಳುವಿನ ನಂಜು ಹಾವಿನ ನಂಜಿಗಿಂತ 15 ಪಟ್ಟು ಹೆಚ್ಚಾಗಿರುತ್ತದೆ.

(ಮಾಹಿತಿ ಹಾಗೂ ಚಿತ್ರ ಸೆಲೆ: wikiwonderopolis.orgbaynature.orgwesternexterminator.comtonyhakim.com.au, conservation.unibaas.chbrisbaneinsects.com, pixabay)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.