ಕಲೀಲ್ ಗಿಬ್ರಾನ್ ನ ಕತೆ: ಕಲೆಯ ಮೌಲ್ಯ

– ಪ್ರಕಾಶ ಪರ‍್ವತೀಕರ.

ರಾಜ ತನ್ನ ಹೆಂಡತಿಗೆ ಕೋಪದಿಂದ ನುಡಿದ,

” ರಾಣಿ, ರಾಣಿಯ ಅಂತಸ್ತಿನ ಹಾಗೆ ನಿನ್ನ ನಡತೆ ಇಲ್ಲವೇ ಇಲ್ಲ. ನನ್ನ ದರ‍್ಮಪತ್ನಿ ಆಗಲು ನೀನು ಕಿಂಚಿತ್ತೂ ಅರ‍್ಹಳಿಲ್ಲ. ನೀನು ವಿವೇಕವಿಲ್ಲದ, ನಿಶ್ಪ್ರಯೋಜಕ ಸ್ತ್ರೀ ಆಗಿರುವೆ”

ರಾಣಿ ಸಿಟ್ಟಾಗಿ ನುಡಿದಳು,

” ಪ್ರಪಂಚದಲ್ಲಿ ನಾನೇ ದೊಡ್ಡ ರಾಜ ಎಂಬ ಬ್ರಮೆಯಲ್ಲಿ ನೀವು ಇದ್ದೀರಿ. ಆದರೆ ನಿಜ ಸಂಗತಿ ಏನೆಂದರೆ ನೀವು ಮಹಾ ಮೂರ‍್ಕರಾಗಿದ್ದೀರಿ”

ರಾಜನಿಗೆ ಸಿಟ್ಟು ಬಂದಿತು. ಕೈಯಲ್ಲಿದ್ದ ರಾಜದಂಡದಿಂದ ರಾಣಿಯ ತಲೆಗೆ ಹೊಡೆದ. ಬಂಗಾರದ ರಾಜದಂಡ ರಾಣಿಯ ನೆತ್ತರಿನಲ್ಲಿ ತೋಯ್ದು ತೊಪ್ಪೆಯಾಯಿತು.

ಅದೇ ವೇಳೆಗೆ ಮಂತ್ರಿಯ ಆಗಮನವಾಯಿತು. ಆತ ರಾಜನಿಗೆ ತಲೆ ಬಾಗಿಸಿ ನುಡಿದ,

”ಮಹಾರಾಜರೇ, ಈ ರಾಜದಂಡವನ್ನು ದೇಶದ ಪ್ರಸಿದ್ದ ಕಲಾಕಾರರು ಮಾಡಿಕೊಟ್ಟಿದ್ದಾರೆ. ಅತ್ಯಂತ ದುಕ್ಕದ ವಿಶಯವೇನೆಂದರೆ, ಕಾಲ ಸರಿದಂತೆ ಈ ಜಗತ್ತು ನಿಮ್ಮನ್ನು ಹಾಗು ಮಹಾರಾಣಿಯವರನ್ನು ಮರೆಯುತ್ತದೆ. ಆದರೆ ಕಲೆಯ ಅದ್ವಿತೀಯ ನಮೂನೆಯಾದ ಈ ರಾಜದಂಡ ಮಾತ್ರ ನೂರಾರು ವರ‍್ಶ ಸುರಕ್ಶಿತವಾಗಿ ಇರುತ್ತದೆ”

“ಮೇಲಾಗಿ, ಮಹಾರಾಜರು ಈ ಬಂಗಾರದ ರಾಜದಂಡದಿಂದ ಮಹಾರಾಣಿಯವರ ತಲೆ ಒಡೆದು ರಕ್ತ ಹರಿಸಿರುವುದರಿಂದ, ರಾಜದಂಡಕ್ಕೆ ಇನ್ನೂ ಹೆಚ್ಚಿನ ಮಹತ್ವ ಬಂದಿದೆ. ಅಲ್ಲದೆ ಅದಕ್ಕೆ ಐತಿಹಾಸಿಕ ಮೌಲ್ಯ ಪ್ರಾಪ್ತಿಯಾಗಿದೆ”

( ಮಾಹಿತಿ ಸೆಲೆ: gutenberg.net.au )

( ಚಿತ್ರ ಸೆಲೆ: wikipedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: