ಪುಟ್ಟ ಕತೆ:  ಮೊದಲ ಪಾಸ್ ವರ‍್ಡ್

– ಕೆ.ವಿ.ಶಶಿದರ.

ಆತ ಬಹಳ ದೊಡ್ಡ ಕಂಪನಿಯಲ್ಲಿ ಏಳಂಕಿ ಸಂಬಳ ಪಡೆಯುವ ಉನ್ನತ ಅದಿಕಾರಿ. ಇರಲಿಕ್ಕೆ ಐಶಾರಾಮಿ ಮನೆ. ಕೈಗೊಂದು ಕಾಲಿಗೊಂದು ಆಳುಗಳು. ಅವನ, ಅವನ ಕುಟುಂಬದವರ ಉಪಯೋಗಕ್ಕೆ 3-4 ದುಬಾರಿ ವಿದೇಶಿ ಕಾರುಗಳು, ಜೊತೆ ಡ್ರೈವರ್‍ಗಳು. ಅಶ್ಟೇ ಏಕೆ ಅವನ ಎಲ್ಲಾ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಿತ್ತು ಕಂಪೆನಿ. ಈ ಅದಿಕಾರಿಯನ್ನು ಕಾಣಲು ಅಲ್ಲಿನ ಉದ್ಯೋಗಿಗಳೇ ದಿನಗಟ್ಟಲೆ ಕಾಯಬೇಕು.

ಇಂತಹ ಉನ್ನತ ಅದಿಕಾರಿ ಕಂಪನಿಯ ಉದ್ಯೋಗಿಗಳ ಜೊತೆ ಮುಕ್ತ ಚರ‍್ಚೆಗೆ ದಿನ ಮತ್ತು ಸಮಯ ನಿಗದಿಗೊಳಿಸಿ ಆಹ್ವಾನಿಸಿದ್ದು ಎಲ್ಲಾ ಉದ್ಯೋಗಿಗಳಿಗೆ ಅಚ್ಚರಿಯಾಗಿತ್ತು. ಅವರೆಲ್ಲರ ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳು ಹುಟ್ಟಿದ್ದವು.

ಪ್ರಶ್ನೆಗಳನ್ನು ಕೇಳುವ ಆ ದಿನ ಬಂದೇ ಬಿಟ್ಟಿತು. 3-4 ಗಂಟೆ ಮುಕ್ತ ಚರ‍್ಚೆಯ ನಂತರ ಕೊನೆಯ ಪ್ರಶ್ನೆಗೆ ಬಂದಿತ್ತು ಸಬೆ. ಹಿಂದಿನ ಚೇರಿನಲ್ಲಿ ಕುಳಿತಿದ್ದವನೊಬ್ಬ ಎದ್ದು ನಿಂತ.

“ಸರ್, ಈ ಕಂಪನಿಯಲ್ಲಿ ಬಡತನದ ಹಿನ್ನೆಲೆಯವರಿಗೆ ಮಾತ್ರ ಆದ್ಯತೆ ಎಂಬ ದೂರಿದೆ. ಬಹುಶಹ ಕಡಿಮೆ ಪಗಾರಕ್ಕೆ ಅವರು ಒಪ್ಪುತ್ತಾರೆಂಬ ಕಾರಣವಾ? ಇದಕ್ಕೆ ತಮ್ಮ ಪ್ರತಿಕ್ರಿಯೆ ಏನು? ತಾವು ಏನಂತೀರಿ?” ಅವ ಕೇಳಿದ.

ಈತ ಕೊಂಚವೂ ವಿಚಲಿತನಾಗಲಿಲ್ಲ. ಎಂದಿನ ಗಾಂಬೀರ‍್ಯದಲ್ಲೇ “ಈ ವಿಶಯದ ಬಗ್ಗೆ ದೀರ‍್ಗವಾಗಿ ಚರ‍್ಚಿಸಲು ಇದು ಸೂಕ್ತ ವೇದಿಕೆಯಲ್ಲ. ನಿಮ್ಮ ಊಹೆ ತಪ್ಪು ಎಂದು ಮಾತ್ರ ಹೇಳಬಲ್ಲೆ”

“ಅದಕ್ಕೆ ಕಾರಣವಾಗಿರುವುದು ನನ್ನ ಮೊದಲ ಪಾಸ್ ವರ‍್ಡ್. ಅದು ನನ್ನ ಹಿಂದಿನ ದಿನಗಳನ್ನು ನೆನಪು ಮಾಡುತ್ತಾ ನನ್ನನ್ನು ಯಾವಾಗಲೂ ಎಚ್ಚರಿಸುತ್ತಿರುತ್ತಿದೆ”

ಮಾತು ನಿಲ್ಲಿಸಿ ಎಲ್ಲರ ಮುಕವನ್ನು ಒಮ್ಮೆ ನೋಡಿದನು. ಕುತೂಹಲದ ಚಾಯೆ ಎಲ್ಲರ ಮುಕದಲ್ಲೂ ಎದ್ದು ಕಾಣಿಸುತ್ತಿತ್ತು. ಅವರ ಮೊದಲ ಪಾಸ್‌ವರ‍್ಡ್‌ಗೂ ಬಡವರ ಬಗೆಗಿನ ಒಲವಿಗೂ ಇರಬಹುದಾದ ಸಂಬಂದ ಏನಿರಬಹುದು? ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು.

“ಅದು ……”,  ಹತ್ತು ಸೆಕೆಂಡುಗಳ ಮೌನ ಮುರಿದ ಅವನು, ಹಿಂದಕ್ಕೆ ತಿರುಗಿ ಬಿಳೀ ಬೋರ‍್ಡ್ ಮೇಲೆ ಬಣ್ಣದ ಶಾಯಿಯಲ್ಲಿ ದೊಡ್ಡದಾಗಿ ಪಾಸ್ ವರ‍್ಡ್ ಬರೆದು ಕಣ್ಣೊರೆಸಿಕೊಳ್ಳುತ್ತಾ ಹೊರಟೇ ಹೋದನು.

“ವಾರಾನ್ನ@ಸ್ಕೂಲ್‍ಕಾಲೇಜ್”

( ಚಿತ್ರ ಸೆಲೆ: phandroid.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.