ಯೂಟ್ಯೂಬ್ ಹುಟ್ಟಿದ್ದು ಹೇಗೆ?
– ರತೀಶ ರತ್ನಾಕರ.
ಅದು 2005ರ ಆಸುಪಾಸು. ಮಿಂದಾಣ(website), ಮಿಂಚಂಚೆಗಳು ಸಾಮಾನ್ಯ ಮಂದಿಯ ಬಳಕೆಗೆ ಹತ್ತಿರವಾಗುತ್ತಿದ್ದ ಕಾಲ. ಆದರೂ ಈಗಿರುವಂತೆ ಯಾರು ಬೇಕಾದರು ಹೊಸದೊಂದು ಮಿಂದಾಣವನ್ನೋ, ಮಿಂಬಾಗಿಲನ್ನೋ ಹುಟ್ಟುಹಾಕಿ ತಮ್ಮ ಮಾಹಿತಿ, ಬರಹ, ಚಿತ್ರ ಇಲ್ಲವೇ ವೀಡಿಯೋಗಳನ್ನು ಉಳಿದವರಿಗೆ ಹಂಚಿಕೊಳ್ಳುವಂತಹ ಆಯ್ಕೆ ಇರಲಿಲ್ಲ. ಯಾಹೂ, ಗೂಗಲ್, ಮೈಕ್ರೋಸಾಪ್ಟ್ ನಂತಹ ದೊಡ್ಡ ಕಂಪನಿಗಳು ಮಾತ್ರ ಮಿಂದಾಣಗಳ ಮೂಲಕ ತಮ್ಮ ಮಾಹಿತಿ ಹಾಗೂ ಸುದ್ದಿಗಳನ್ನು ಹಂಚಿಕೊಳ್ಳುವ ತಾಕತ್ತನ್ನು ಹೊಂದಿದ್ದವು.
ಸಾಮಾನ್ಯ ಬಳಕೆದಾರರೂ ಕೂಡ ತಮ್ಮ ಮಾಹಿತಿ, ಚಿತ್ರ ಹಾಗೂ ವೀಡಿಯೋಗಳನ್ನು ಉಳಿದವರಿಗೆ ಹಂಚಿಕೊಳ್ಳುವಂತಿರಬೇಕು ಎಂಬ ಪ್ರಯತ್ನಗಳೂ ಅಲ್ಲಲ್ಲಿ ನಡೆಯುತ್ತಿದ್ದವು. ಈ ಪ್ರಯತ್ನಗಳಿಂದಾಗಿಯೇ ಹಲವಾರು ಕೂಡಣಕಟ್ಟೆಗಳು (Social Networks) ಹುಟ್ಟಿಕೊಂಡವು. ಆದರೂ ಮಿಂದಾಣದಲ್ಲಿಯೇ ನೇರವಾಗಿ ವೀಡಿಯೋಗಳನ್ನು ನೋಡುವುದು, ತಮ್ಮ ವೀಡಿಯೋಗಳನ್ನು ಉಳಿದವರೊಂದಿಗೆ ಹಂಚಿಕೊಳ್ಳುವುದು ಹಾಗೂ ಒಂದೇ ಕಡೆ ಹಲವು ಬಗೆಯ ವೀಡಿಯೋಗಳನ್ನು ಕೂಡಿಡುವ ಯಾವುದೇ ಆಯ್ಕೆ ಇರಲಿಲ್ಲ.
ಹೀಗಿರುವಾಗ, ವೀಡಿಯೋಗಳನ್ನು ಹಂಚಿಕೊಳ್ಳಲು ನೆರವಾಗುವ ಚಳಕವೊಂದನ್ನು ಹೊರತರಬೇಕು ಎಂಬ ಪ್ರಯತ್ನದಲ್ಲಿದ್ದ ಚ್ಯಾಡ್ ಹರ್ಲಿ(Chad Hurley), ಸ್ಟೀವ್ ಚೆನ್ (Steve Chen) ಹಾಗೂ ಜಾವೆದ್ ಕರೀಮ್ (Jawed Karim) ಎಂಬ ಮೂವರು ಸೇರಿ ಹುಟ್ಟುಹಾಕಿದ ಕಂಪನಿಯೇ ಯೂಟ್ಯೂಬ್!
ಇವರಿಗೇಕೆ ಯೂಟ್ಯೂಬ್ ಬೇಕಾಗಿತ್ತು?
ಚ್ಯಾಡ್ ಹರ್ಲಿ ಓದಿದ್ದು ಪೆನ್ಸಿಲ್ವೇನಿಯಾದ ಇಂಡಿಯಾನ ಕಲಿಕೆವೀಡಿನಲ್ಲಿ(university), ಸ್ಟೀವ್ ಚೆನ್ ಹಾಗೂ ಜಾವೆದ್ ಕರೀಮ್ ಓದಿದ್ದು ಇಲಿನಾಯ್ಸ್ ನಾಡಿನಲ್ಲಿರುವ ಇಲಿನಾಯ್ಸ್ ಕಲಿಕೆವೀಡಿನಲ್ಲಿ. ಈ ಮೂವರು ಪರಿಚಿತರಾಗಿದ್ದು ಕ್ಯಾಲಿಪೋರ್ನಿಯಾದ ಪೇಪಾಲ್(PayPal) ಕಂಪನಿಯಲ್ಲಿ ಕೆಲಸಮಾಡುವಾಗ. ಹೊಸದೇನಾದರು ಮಾಡಬೇಕು ಎಂಬ ತುಡಿತವಿದ್ದ ಮೂವರು ಆಗಿನ ಮಾರುಕಟ್ಟೆಯ ಬೇಡಿಕೆಗಳನ್ನು ಅರಿಯತೊಡಗಿದರು, ಅದರಂತೆ ವೀಡಿಯೋಗಳನ್ನು ಹಂಚಿಕೊಳ್ಳಲು ಹೊಸ ತಾಣವೊಂದು ಬೇಕಿದೆ ಎಂಬುದನ್ನು ತಿಳಿಯಲು ಇವರಿಗೆ ಹೆಚ್ಚು ಹೊತ್ತು ಹಿಡಿಯಲಿಲ್ಲ. ಅಲ್ಲದೇ, ಅವರ ನಡುವೆ ನಡೆದ ಹಲವು ಸಂಗತಿಗಳೂ ಕೂಡ ಈ ಬೇಡಿಕೆಗೆ ಇಂಬು ನೀಡಿದ್ದವು;
1. ಜನವರಿ, 2005 ರ ಒಂದು ಸಂಜೆ ಸ್ಯಾನ್ಪ್ರಾನ್ಸಿಸ್ಕೊದಲ್ಲಿದ್ದ ಚೆನ್ ಮನೆಯಲ್ಲಿ ಒಂದು ನಲಿಕೂಟವನ್ನು ಏರ್ಪಡಿಸಲಾಗಿತ್ತು. ಅದಕ್ಕೆ ಕರೀಮ್ ಹೋಗಿರಲಿಲ್ಲ. ಆ ನಲಿಕೂಟದ ವೀಡಿಯೋಗಳನ್ನು ಕರೀಮ್ನೊಂದಿಗೆ ಹಂಚಿಕೊಳ್ಳಬೇಕೆಂದು ಚೆನ್ ಹಾಗೂ ಹರ್ಲಿ ತುಂಬಾ ಪ್ರಯತ್ನಪಟ್ಟರು. ವೀಡಿಯೋದ ಅಳತೆ ತುಂಬಾ ದೊಡ್ಡದಾಗಿದ್ದರಿಂದ ಮಿಂಚೆಯ ಮೂಲಕ ಆ ವೀಡಿಯೋ ಅನ್ನು ಹಂಚಿಕೊಳ್ಳಲು ಆಗಲಿಲ್ಲ. ಅಲ್ಲದೇ ಯಾವುದೇ ಮಿಂದಾಣದ ಮೂಲಕವು ಅವರು ವೀಡಿಯೋ ಹಂಚಿಕೊಳ್ಳುವಂತಿರಲಿಲ್ಲ!
2. 2004 ರಲ್ಲಿ ಇಂಡೋನೇಶಿಯಾಕ್ಕೆ ಅಪ್ಪಳಿಸಿದ ಸುನಾಮಿಯ ಕುರಿತು ಇಡೀ ಜಗತ್ತೇ ಮಾತನಾಡುತ್ತಿತ್ತು. ಇದರ ಬಗ್ಗೆ ಹೆಚ್ಚಿನ ವಿವರ ತಿಳಿಯಬಯಸಿದ್ದ ಕರೀಮ್ಗೆ ಯಾವ ವೀಡಿಯೋ ಆಗಲಿ ಸುದ್ದಿತುಣುಕಾಗಲಿ ಮಿಂದಾಣಗಳಲ್ಲಿ ಸಿಕ್ಕಿರಲಿಲ್ಲ.
3. 2004 ರಲ್ಲಿ ಟೆಕ್ಸಾಸ್ ನಲ್ಲಿ ನಡೆದ ಸೂಪರ್ ಬೌಲ್ ಕಾರ್ಯಕ್ರಮದಲ್ಲಿ, ಹಾಡುಗಾರ್ತಿ ಜಾನೆಟ್ ಜಾಕ್ಸನ್ ಬಟ್ಟೆಯನ್ನು ಕೈತಪ್ಪಿ ಎಳೆದಿದ್ದ ಜಸ್ಟಿನ್ ಟಿಂಬರ್ಲೇಕ್ ಕುರಿತು ಹಲವಾರು ಸುದ್ದಿಗಳು ಹಬ್ಬಿದ್ದವು, ಅದರ ಕುರಿತೂ ಯಾವುದೇ ವೀಡಿಯೋಗಳು ಮಿಂದಾಣಗಳಲ್ಲಿ ಕರೀಮ್ ಗೆ ಸಿಕ್ಕಿರಲಿಲ್ಲ.
4. ಕೂಡಣಕಟ್ಟೆಗಳು ಅಂಬೆಗಾಲಿಡುತ್ತಿದ್ದ ಆ ಹೊತ್ತಿನಲ್ಲಿ ಹಾಟ್ ಆರ್ ನಾಟ್ ಡಾಟ್ ಕಾಮ್ (hotornot.com) ಎಂಬ ಡೇಟಿಂಗ್ ಮಿಂದಾಣ ತುಂಬಾ ಹೆಸರುಮಾಡಿತ್ತು. ಆ ಮಿಂದಾಣದಲ್ಲಿ, ಬಳಕೆದಾರರೇ ಒಂದು ಕಾತೆಯನ್ನು ತೆರೆದು ತಮ್ಮ ಪರಿಚಯ ಹಾಗೂ ಆಸಕ್ತಿಗಳ ವಿವರವನ್ನು ಉಳಿದ ಬಳಕೆದಾರರೊಂದಿಗೆ ಹಂಚಿಕೊಳ್ಳುವ ಆಯ್ಕೆ ಇತ್ತು. ಈ ಮಿಂದಾಣ ಕರೀಮ್, ಚೆನ್ ಹಾಗು ಹರ್ಲಿಯವರನ್ನು ಸೆಳೆದಿತ್ತು. ಇದೇ ಬಗೆಯಲ್ಲಿ ಸಾಮಾನ್ಯ ಬಳಕೆದಾರರು ತಮ್ಮ ಪರಿಚಯದ, ತಮ್ಮ ಮೆಚ್ಚಿನ ವೀಡಿಯೋಗಳನ್ನು ಉಳಿದವರಿಗೆ ಹಂಚಿಕೊಳ್ಳುವಂತೆ ಆಗುವ ಮಿಂದಾಣವೊಂದನ್ನು ಮಾಡಬೇಕು ಎಂಬ ಅವರ ಗುರಿಯನ್ನು ಗಟ್ಟಿಮಾಡಿಸಿತ್ತು.
(ಮೇಲಿನ ಮೊದಲನೇ ಸಂಗತಿಯಲ್ಲಿ ತಿಳಿಸಿದ ನಲಿಕೂಟ ಎಂದಿಗೂ ನಡೆದಿರಲಿಲ್ಲ, ಇದೊಂದು ಕಟ್ಟುಕತೆ ಎಂಬ ಸುದ್ದಿಯೂ ಇದೆ. ಇದರ ಕುರಿತು ಮೂವರಿಂದಲೂ ಆಗಾಗ ಗೊಂದಲದ ಹೇಳಿಕೆಗಳು ಹೊರಬಂದಿವೆ. ಆದರೆ ಯೂಟ್ಯೂಬ್ ಹುಟ್ಟಿಗೆ ಇದೂ ಒಂದು ಕಾರಣ ಎಂಬ ನಂಬಿಕೆ ಇನ್ನೂ ಇದೆ.)
ಯೂಟ್ಯೂಬಿಗೆ ಏರಿಸಿದ ಮೊದಲ ವೀಡಿಯೋ ಯಾವುದು ಗೊತ್ತಾ?
ಪೆಬ್ರವರಿ, 14 2005 ರಂದು www.youtube.com ಎಂಬ ನೆಲೆಯ ಹೆಸರನ್ನು ನೋಂದಾಯಿಸಲಾಯಿತು. ತಮ್ಮ ತಮ್ಮ ಮನೆಗಳಿಂದಲೇ ಮೊದಲ ಕೆಲಸವನ್ನು ಮೂವರು ಆರಂಬಿಸಿದರು. ಏಪ್ರಿಲ್ 23, 2005 ರಂದು ಮೊಟ್ಟಮೊದಲ ವೀಡಿಯೋ ಅನ್ನು ಯೂಟ್ಯೂಬಿಗೆ ಏರಿಸಿದರು. ಜಾವೇದ್ ಕರೀಮ್ ಬೇಟಿನೀಡಿದ್ದ, ಪ್ರಾಣಿ ಸಂಗ್ರಹಾಲಯದಲ್ಲಿ ತೆಗೆದಿದ್ದ 19 ಸೆಕೆಂಡುಗಳ ವೀಡಿಯೋ ಅದಾಗಿತ್ತು.
ಈಗಿರುವಂತೆ ಯೂಟ್ಯೂಬಿನಲ್ಲಿ ಆಗ ನಮಗೆ ಬೇಕಾದ ವೀಡಿಯೋ ಹುಡುಕುವ ಆಯ್ಕೆ ಇರಲಿಲ್ಲ. ಅಲ್ಲದೇ 10 ನಿಮಿಶಗಳಿಗಿಂತ ದೊಡ್ಡದಾದ ವೀಡಿಯೋಗಳನ್ನು ಏರಿಸಲು ಆಗುತ್ತಿರಲಿಲ್ಲ. ಕೆಲವು ಪುಟ್ಟ ಪುಟ್ಟ ವೀಡಿಯೋಗಳನ್ನು ಏರಿಸಿ ಮಂದಿಯನ್ನು ಸೆಳೆಯುವ ಪ್ರಯತ್ನವನ್ನು ಈ ಹೊಸಬರ ತಂಡ ಮಾಡುತ್ತಿತ್ತು. ಮೊದಲಿಗೆ ಯೂಟ್ಯೂಬನ್ನು ತಮ್ಮ ಪರಿಚಯದ ವೀಡಿಯೋ ಹಾಕಿ, ತಮಗೆ ಬೇಕಾದ ಗೆಳೆಯರು/ಸಂಗಾತಿಯನ್ನು ಆಯ್ಕೆ ಮಾಡುವ ಡೇಟಿಂಗ್ ಮಿಂದಾಣ ಎಂದು ಕರೆದರು. ಲಾಸ್ ಏಂಜಲೀಸ್ ಹಾಗೂ ಲಾಸ್ ವೇಗಾಸಿನಲ್ಲಿರುವ ಯಾವುದೇ ಹುಡುಗಿ ತಮ್ಮ ಪರಿಚಯದ ವೀಡಿಯೋ ಅನ್ನು ಯೂಟ್ಯೂಬಿಗೆ ಏರಿಸಿದರೆ ಅವರಿಗೆ 20 ಡಾಲರ್ ಹಣವನ್ನು ಬಹುಮಾನವಾಗಿ ನೀಡಲಾಗುವುದು ಎಂಬ ಬಯಲರಿಕೆಯನ್ನೂ ಮಾಡಿದರು.
ಇಶ್ಟೆಲ್ಲಾ ಪ್ರಯತ್ನಗಳಿದ್ದರೂ ಹೆಚ್ಚಿನ ವೀಡಿಯೋಗಳು ಯೂಟ್ಯೂಬಿಗೆ ಹರಿದು ಬರಲಿಲ್ಲ. ಅಲ್ಲದೇ ಬಳಕೆದಾರರಿಗೆ ಇನ್ನಶ್ಟು ಹತ್ತಿರವಾಗಿಸಲು ಹಲವು ಮಾರ್ಪಾಟುಗಳಾಗಬೇಕಿತ್ತು, ಅದಕ್ಕೆ ಬೇಕಾದ ಹಣ ಮೂವರ ಬಳಿಯೂ ಇರಲಿಲ್ಲ. ಆದರೆ ನವೆಂಬರ್ 2005ರ ಹೊತ್ತಿಗೆ ಸೆಕೋಯ ಕ್ಯಾಪಿಟಲ್ (Sequoia Capital) ಎಂಬ ಹೂಡಿಕೆದಾರ ಕಂಪನಿ, 11.5 ಮಿಲಿಯನ್ ಡಾಲರ್ ನಶ್ಟು ಹಣವನ್ನು ಹೂಡಲು ಮುಂದೆ ಬಂದಿತು. ಈ ಹೂಡಿಕೆಯ ಹಣದಿಂದ ಯೂಟ್ಯೂಬಿನ ಮೊದಲ ಕಚೇರಿಯನ್ನು ಕ್ಯಾಲಿಪೋರ್ನಿಯಾದ ಸ್ಯಾನ್ ಮಟಾವ್ ನಗರದಲ್ಲಿ ತೆರೆದರು. ಜಪನೀಸ್ ರೆಸ್ಟೋರೆಂಟ್ ಹಾಗೂ ಪೀಜ್ಜಾ ಅಂಗಡಿಯ ಮಹಡಿಯಲ್ಲಿ ಕಚೇರಿಯು ತನ್ನ ಕೆಲಸವನ್ನು ಆರಂಬಿಸಿ, ಮಂದಿಗೆ ಹತ್ತಿರವಾಗಲು ಹೊಸ ಹೊಸ ಮಾರ್ಪಾಟುಗಳನ್ನು ಹೊರತಂದಿತು.
ಯೂಟ್ಯೂಬ್ ಮೆಲ್ಲಗೆ ಮಂದಿಯನ್ನು ಸೆಳೆಯುತ್ತಿದ್ದಂತೆ ಹೊಸ ಬಳಕೆದಾರರ ಎಣಿಕೆ ದಿನೇ ದಿನೇ ಹೆಚ್ಚುತ್ತಾ ಹೋಯಿತು. ಹಲವು ಕಂಪನಿಯವರೂ ಕೂಡ ತಮ್ಮ ಬಯಲರಿಕೆಯ ವೀಡಿಯೋ ಮಾಡಿ ಯೂಟ್ಯೂಬಿನಲ್ಲಿ ಹೊರತರಲು ಮನಸ್ಸು ಮಾಡಿದರು. ಅದೇ ಹೊತ್ತಿಗೆ, ಹೆಸರುವಾಸಿ ಪುಟ್ಬಾಲ್ ಆಟಗಾರನಾದ ರೊನಾಲ್ಡಿನೊ ನಟಿಸಿದ್ದ ನೈಕಿ (NIKE) ಕಂಪನಿಯ ಬಯಲರಿಕೆಯೊಂದು ಯೂಟ್ಯೂಬಿನಲ್ಲಿ ದೊಡ್ಡ ಸದ್ದು ಮಾಡಿತು. ನವೆಂಬರ್ 2005 ರಲ್ಲಿ ಹೊರಬಂದ ಈ ಬಯಲರಿಕೆಯ ವೀಡಿಯೋ 10 ಲಕ್ಶಕ್ಕೂ ಹೆಚ್ಚಿನ ನೋಟಗಳನ್ನು ಪಡೆದು, 10 ಲಕ್ಶ ನೋಟಗಳನ್ನು ದಾಟಿದ ಮೊದಲ ವೀಡಿಯೋ ಎಂದೂ ಹೆಸರುಗಳಿಸಿತು.
ಡಿಸೆಂಬರ್ 2005 ರ ಹೊತ್ತಿಗೆ ಯೂಟ್ಯೂಬಿಗೆ ದಿನಕ್ಕೆ 80 ಲಕ್ಶ ನೋಟಗಳು ಹರಿದು ಬರುವಂತಾಯಿತು. ಬಳಿಕ ಜುಲೈ 2006 ಅಂದರೆ ಕೇವಲ 8 ತಿಂಗಳಲ್ಲಿ ದಿನಕ್ಕೆ 10 ಕೋಟಿ ನೋಟಗಳು ಹರಿದು ಬರುವ ಮಟ್ಟಕ್ಕೆ ಇದು ಬೆಳೆದಿತ್ತು! ಆ ಹೊತ್ತಿನಲ್ಲಿ ದಿನಕ್ಕೆ 65,000 ಹೊಸ ವೀಡಿಯೋಗಳು ಹರಿದುಬರುತ್ತಿದ್ದವು.
ಕೊನೆಗೂ ಗೂಗಲ್ ಹುಡುಕಿತ್ತು ಯೂಟ್ಯೂಬನ್ನು!
ಬಿರುಸಿನಿಂದ ಬೆಳೆಯುತ್ತಿದ್ದ ಯೂಟ್ಯೂಬಿನ ಮೇಲೆ ದೊಡ್ಡ ದೊಡ್ಡ ಕಂಪನಿಗಳಾದ ಯಾಹೂ, ಮೈಕ್ರೋಸಾಪ್ಟ್, ಗೂಗಲ್ ನ ಕಣ್ಣುಗಳು ಬಿದ್ದವು. ಹೇಗಾದರು ಮಾಡಿ ಇದನ್ನು ಕೊಂಡುಕೊಳ್ಳಬೇಕೆಂಬ ತುಡಿತ ಅವರಲ್ಲಿತ್ತು. ಅದಕ್ಕಾಗಿ ಹಲವು ಸುತ್ತಿನ ಮಾತುಕತೆಯನ್ನೂ ನಡೆಸಿದ್ದರು. ಈ ಪೈಪೋಟಿಯಲ್ಲಿ ಕೊನೆಗೆ ಗೆದ್ದಿದ್ದು ಗೂಗಲ್! ನವೆಂಬರ್ 13, 2006 ರಂದು, 1.65 ಬಿಲಿಯನ್ ಡಾಲರ್ ಗೆ ಯೂಟ್ಯೂಬಿನ ಮಾರಾಟವಾಯಿತು. ಆ ಹೊತ್ತಿನಲ್ಲಿ ಯೂಟ್ಯೂಬಿನಲ್ಲಿ 65 ಮಂದಿ ಕೆಲಸ ಮಾಡುತ್ತಿದ್ದರು.
ಕಂಪನಿ ಶುರುವಾದ ಕೇವಲ ಒಂದೂವರೆ ವರುಶದೊಳಗೆ ಹೆಮ್ಮರವಾಗಿ ಬೆಳೆದು, ದೊಡ್ಡ ಮೊತ್ತಕ್ಕೆ ಮಾರಾಟವಾದ ಕೆಲವೇ ಕೆಲವು ಎತ್ತುಗೆಗಳಲ್ಲಿ ಯೂಟ್ಯೂಬ್ ಕೂಡ ಒಂದು. ಇದಾದ ಬಳಿಕ ಗೂಗಲ್ ನ ಅಡಿಯಲ್ಲಿ ಇದು ಇನ್ನೂ ದೊಡ್ಡದಾಗಿ ಬೆಳೆಯಿತು. ಇತ್ತೀಚೆಗೆ ಅಂದರೆ ಆಗಸ್ಟ್ 2015 ರಂದು ಗೂಗಲ್ ಜೊತೆಗಿದ್ದ ಯೂಟ್ಯೂಬ್, ಗೂಗಲ್ ಸರ್ಚ್, ಆಂಡ್ರಾಯ್ಡ್ ಹೀಗೆ ಇನ್ನಿತರ ಕಂಪನಿಗಳನ್ನು ಬೇರೆ ಬೇರೆ ಕವಲುಗಳಾಗಿ ಮಾಡಿ ಅವುಗಳ ಕೆಲಸವನ್ನು ಮಾಡಿಕೊಂಡು ಹೋಗುವಂತೆ ಮಾಡಲಾಯಿತು. ಈ ಎಲ್ಲಾ ಕವಲುಗಳ ಒಕ್ಕೂಟಕ್ಕೆ ಒಡೆಯನಾಗಿರುವಂತೆ ಆಲ್ಪಾಬೆಟ್ (Alphabet Inc) ಎಂಬ ಕಂಪನಿಯೊಂದನ್ನು ಗೂಗಲ್ ಹುಟ್ಟುಹಾಕಿದೆ. ಹಾಗಾಗಿ ಅಲ್ಪಾಬೆಟ್ ಕಂಪನಿಯ ಅಡಿಯಲ್ಲಿ ಯೂಟ್ಯೂಬ್ ಈಗ ಕೆಲಸ ಮಾಡುತ್ತಿದೆ. ಆಲ್ಪಾಬೆಟ್ ನ ಒತ್ತಾಸೆಯೊಂದಿಗೆ ಇನ್ನೂ ಎತ್ತರಕ್ಕೆ ಬೆಳೆಯುವ ಹಮ್ಮುಗೆಗಳನ್ನು ಹಾಕಿಕೊಂಡಿದೆ.
ಈಗಂತು ಯೂಟ್ಯೂಬಿಗೆ ಯೂಟ್ಯೂಬೇ ಸಾಟಿ!
1. ಗೂಗಲ್ ಬಿಟ್ಟರೆ ತುಂಬಾ ಹೆಚ್ಚು ಬೇಟಿನೀಡುವ ಮಿಂದಾಣ, ಅಂದರೆ ಎರಡನೇ ಮಂದಿಮೆಚ್ಚಿನ ತಾಣವಿದು.
2. ಒಂದು ತಿಂಗಳಿಗೆ 15 ಬಿಲಿಯನ್ (1.5 ಸಾವಿರ ಕೋಟಿ) ನೋಟಗಳು ಹರಿದು ಬರುತ್ತವೆ!
3. 100 ಕೋಟಿಗಿಂತಲೂ ಹೆಚ್ಚು ಯೂಟ್ಯೂಬ್ ಕಾತೆಗಳಿವೆ.
4. ಪೆಬ್ರವರಿ 2017 ರ ಮಾಹಿತಿಯ ಪ್ರಕಾರ ಒಂದು ದಿನಕ್ಕೆ 100 ಕೋಟಿ ಗಂಟೆಗಳಶ್ಟು ಕಾಲದ ವೀಡಿಯೋ ಯೂಟ್ಯೂಬಿನಲ್ಲಿ ನೋಡಲಾಗುತ್ತಂತೆ! ಹಾಗೆಯೇ ಒಂದು ನಿಮಿಶಕ್ಕೆ 400 ಗಂಟೆಗಳ ಕಾಲ ನೋಡಲಾಗುವಂತ ವೀಡಿಯೋಗಳನ್ನು ಏರಿಸಲಾಗುತ್ತಂತೆ!
5. ಯೂಟ್ಯೂಬ್ 76 ನುಡಿಗಳಲ್ಲಿ ಸಿಗುತ್ತಿದೆ (ಕನ್ನಡದಲ್ಲಿಯೂ ಇದೆ)!
6. ಮಂದಿಮೆಚ್ಚುಗೆ ಗಳಿಸಿದ್ದ ‘ಗಂಗಮ್ ಸ್ಟೈಲ್’ ಹಾಡು ಅದೆಶ್ಟು ನೋಟಗಳನ್ನು ಹರಿಸಿತ್ತು ಎಂದರೆ, ಆ ನೋಟಗಳ ಹರಿವನ್ನು ತಾಳುವುದಕ್ಕಾಗಿ ಯೂಟ್ಯೂಬ್ ತನ್ನ ಚಳಕದಲ್ಲಿ ಹಲವಾರು ಮಾರ್ಪಾಟುಗಳನ್ನು ಮಾಡಬೇಕಾಯಿತು.
7. ಯುನಿವರ್ಸಲ್ ಟ್ಯೂಬ್ ಅಂಡ್ ರೋಲ್ಪಾರ್ಮ್ ಎಕ್ವಿಪ್ಮೆಂಟ್ ಎಂಬ ಲೋಹದ ಕೊಳವೆ(tube)ಗಳನ್ನು ಮಾಡುವ ಕಂಪನಿಯೊಂದು, ಯೂಟ್ಯೂಬಿನ ಮೇಲೆ ನವೆಂಬರ್ 2006 ರಂದು ಮೊಕದ್ದಮೆಯನ್ನು ಹಾಕಿತ್ತು. ಯುನಿವರ್ಸಲ್ ಟ್ಯೂಬಿನ ಮಿಂದಾಣದ ಹೆಸರು www.utube.com ಎಂದಾಗಿತ್ತು, youtube.com ಬದಲು ಹಲವಾರು ಬಳಕೆದಾರರು utube.com ಎಂದು ಹುಡುಕುತ್ತಿದ್ದರಿಂದ ಯುನಿವರ್ಸಲ್ ಟ್ಯೂಬಿನವರಿಗೆ ಬೇಡದ ನೋಟಗಳು ತುಂಬಾ ಹರಿದುಬಂದು ಅವರ ಮಿಂದಾಣವನ್ನು ತೊಂದರೆಗೆ ಒಳಪಡಿಸಿತ್ತು. ಅದಕ್ಕಾಗಿ ಯೂಟ್ಯೂಬಿನ ಮೇಲೆ ಮೊಕದ್ದಮೆಯನ್ನು ಹೂಡಿತ್ತು, ಆದರೆ ಈ ಮೊಕದ್ದಮೆ ನಿಲ್ಲಲಿಲ್ಲ. ಬಳಿಕ ಯುನಿವರ್ಸಲ್ ಟ್ಯೂಬಿನವರು ತಮ್ಮ ಮಿಂದಾಣವನ್ನು utubeonline.com ಎಂದು ಮಾರ್ಪಡಿಸಿಕೊಂಡರು.
(ಮಾಹಿತಿ ಸೆಲೆ: wiki/youtube, wiki/youtubeHistory, mashable.com, content.time.com )
(ಚಿತ್ರ ಸೆಲೆ: pixabay, wikimedia, haikudeck.com)
ಇತ್ತೀಚಿನ ಅನಿಸಿಕೆಗಳು