‘ನಾವೆಲ್ಲರೂ ಒಂದೇ’ ಎಂದು ಸಾರುತ್ತಿರುವ ಜರ‍್ಮನಿಯ ‘ಬ್ರಿಡ್ಜ್ ಮಂಗ’

– ಕೆ.ವಿ.ಶಶಿದರ.

ಜರ‍್ಮನಿ ನಾಡಿನ ಹೈಡೆಲ್‍ಬರ‍್ಗ್ ಸೇತುವೆಯ ಪಶ್ಚಿಮ ತುದಿಯಲ್ಲಿ ಬ್ರಿಡ್ಜ್ ಮಂಗದ ಕಂಚಿನ ವಿಗ್ರಹವಿದೆ. ಇದರ ರೂವಾರಿ ಪ್ರೊಪೆಸರ್ ಗೆರ‍್ನೊಟ್ ರಂಪ್ಸ್. 1979ರಲ್ಲಿ ಇದನ್ನು ಇಲ್ಲಿ ಸ್ತಾಪಿಸಲಾಯಿತು. ಈ ಮಂಗ ನೋಡುಗರ ಕಣ್ಣಿಗೆ ಕೈಯಲ್ಲಿ ಕನ್ನಡಿಯನ್ನು ಹಿಡಿದುಕೊಂಡಿರುವಂತೆ ಇದೆ.

ಆಲ್ಟೆ ಬ್ರೂಕೆಯ (ಹಳೆಯ ಬ್ರಿಡ್ಜ್) ಈ ಅಸಾಮಾನ್ಯ ಮಂಗನ ವಿಗ್ರಹ ತನ್ನ ಕೈಯಲ್ಲಿ ಹಿಡಿದಿರುವ ಕನ್ನಡಿಯ ಮಹತ್ವವೇನು?

ದಂತಕತೆಯಂತೆ ಹೈಡೆಲ್‍ಬರ‍್ಗ್ ನ ಹಳೆಯ ಸೇತುವೆ ಮೇಲೆ ಪ್ರಯಾಣಿಸುವವರಿಗೆ, ಸೇತುವೆಯನ್ನು ದಾಟಿದ ಮೇಲೆ ತಾವು ಎಲ್ಲಿಂದ ಬಂದೆವು ಎಂದು ತಿರುಗೊಮ್ಮೆ ನೋಡಲು ಈ ಮಂಗನ ವಿಗ್ರಹ ನೆನಪಿಸುತ್ತದೆ. ಇದರ ಪ್ರಮುಕ ಉದ್ದೇಶ ಹೈಡೆಲ್‍ಬರ‍್ಗ್ ಸೇತುವೆಯ ಆಚೀಚೆ ನೆಲೆಸಿರುವವರು ಯಾರು ಯಾರಿಗೂ ಕಮ್ಮಿಯಿಲ್ಲ ಎಲ್ಲರೂ ಸಮಾನರು ಎಂದು ತಿಳಿಸುವುದು.

1979ರಲ್ಲಿ ಪ್ರೊಪೆಸರ್ ಗೆರ‍್ನೊಟ್ ರಂಪ್ಸ್ ಅವರು ಕೆತ್ತಿದ ಈ ಕಂಚಿನ ಪ್ರತಿಮೆಯಲ್ಲಿ ಹಲವು ವಿಶೇಶತೆಗಳಿವೆ. ಎಡಗೈಯಲ್ಲಿ ಪುಟ್ಟ ಕನ್ನಡಿಯನ್ನು ಹಿಡಿದುಕೊಂಡು ನಿಂತಿರುವಂತೆ ಈ ಮಂಗನ ಪ್ರತಿಮೆಯಿದೆ. ದುಶ್ಟ ಕಣ್ಣುಗಳಿಂದ ದ್ರುಶ್ಟಿಯಾಗುವುದನ್ನು ತಡೆಗಟ್ಟಲು ಇದರ ಕೈ ಬೆರಳುಗಳನ್ನು ಕೊಂಬಿನ ರೀತಿಯಲ್ಲಿ ರಚಿಸಲಾಗಿದೆ. ಮುಕದ ಬಾಗ ಪೂರ‍್ತಿ ಟೊಳ್ಳಾಗಿದ್ದು ಕಣ್ಣುಗಳು ರಂದ್ರದಂತಿವೆ. ಪ್ರವಾಸಿಗರು ಈ ಬಾಗವನ್ನು ಮುಕವಾಡದಂತೆ ಬಳಸಿಕೊಂಡು ಅಲ್ಲಿ ತಮ್ಮ ತಲೆಯನ್ನು ತೂರಿಸಿ ಸೆಲ್ಪಿ ಪಡೆಯಲು ಅನುಕೂಲವಾಗಿದೆ.

15ನೇ ಶತಮಾನದಲ್ಲಿ ಇದೇ ಸ್ತಳದಲ್ಲಿ ಇದೇ ತರಹದ ಮಂಗನ ವಿಗ್ರಹ ಸ್ತಾಪನೆಯಾಗಿತ್ತು ಎಂದು ಇತಿಹಾಸ ಹೇಳುತ್ತದೆ. ಆ ಅವತಾರ ಈಗಿನದಕ್ಕಿಂತ ಕೊಂಚ ಬಿನ್ನ. ಬಲಗೈಯಲ್ಲಿ ಕನ್ನಡಿ ಹಿಡಿದಿದ್ದು ಎಡದ ಕೈ ಬೆನ್ನಿನ ಮೇಲೆ ಇರುವಂತೆ ಕಟ್ಟಲಾಗಿತ್ತು. ಹೈಡೆಲ್‍ಬರ‍್ಗ್ ಪಟ್ಟಣದ ಕೆಲವು ಹಳೆಯ ಚಿತ್ರಗಳನ್ನು ಗಮನಿಸಿದಾಗ ಮಂಗನ ವಿಗ್ರಹವು ಹಳೆಯ ಸೇತುವೆಯ ಉತ್ತರ ತುದಿಯಲ್ಲಿರುವ ಗೋಪುರದ ಪಕ್ಕದಲ್ಲಿ ಸ್ತಾಪನೆಯಾಗಿರುವಂತೆ ಕಂಡುಬರುತ್ತದೆ. ದುರಾದ್ರುಶ್ಟವಶಾತ್ ಈ ವಿಗ್ರಹವು 1689 ರಿಂದ 1693 ರವರೆಗೆ ನಡೆದ ಪ್ಯಾಲಸ್ಟೈನ್ ಯುದ್ದದ ಸಮಯದಲ್ಲಿ ಕಾಣೆಯಾಯಿತು.

ಹೈಡೆಲ್‍ಬರ‍್ಗ್ ಸೇತುವೆಯ ಮಂಗ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ

ಇದು ಹೆಚ್ಚು ಜನಪ್ರಿಯವಾಗಿರುವುದು ಅದರಿಂದ ಲಬಿಸುತ್ತದೆನ್ನಲಾದ ವರಗಳಿಂದ. ಹೈಡೆಲ್‍ಬರ‍್ಗ್ ಗೆ ಮತ್ತೆ ಹಿಂದಿರುಗ ಬೇಕಾದಲ್ಲಿ ಬ್ರಿಡ್ಜ್ ಮಂಗನ ಬೆರಳುಗಳನ್ನು ಮುಟ್ಟಿದರೆ ಸಾಕು. ಮಂಗನ ಕೈಯಲ್ಲಿರುವ ಕನ್ನಡಿಯನ್ನು ಮುಟ್ಟಿದಲ್ಲಿ ಐಶ್ವರ‍್ಯವೂ ಹಾಗೂ ಅದರ ಬಳಿಯಿರುವ ಇಲಿಯನ್ನು ಮುಟ್ಟಿದರೆ ಸಂತಾನ ಪ್ರಾಪ್ತಿಯಾಗುತ್ತದೆಂಬ ನಂಬಿಕೆ ಪ್ರವಾಸಿಗರದು.

ಹೈಡೆಲ್‍ಬರ‍್ಗ್ ಸೇತುವೆಯ ಮಂಗನ ಬಳಿಯಿರುವ ಇಲಿಯ ಹತ್ತಿರ ಒಂದು ಪಲಕವಿದೆ. ಅದರಲ್ಲಿ ಬಾರೂಕ್ ಬರಹಗಾರ ಮಾರ‍್ಟಿನ್ ಜೀಲರ್ 1632ರಲ್ಲಿ ಮಂಗನ ಬಗ್ಗೆ ಬರೆದ ಈ ಕೆಳಗಿನ ಪದ್ಯವನ್ನು ಬರೆಯಲಾಗಿದೆ.

Was thustu mich hie angaff en?/Hastu nicht gesehen den alten Affen zu Heydelberg/Sich dich hin und her/Da findestu wol meines gleichen mehr.

ಕನ್ನಡದಲ್ಲಿ;

ನೀನೇಕೆ ನನ್ನನ್ನು ದುರುಗುಟ್ಟುವೆ?
ಹೈಡೆಲ್‍ಬರ‍್ಗ್‍ನ ಪುರಾತನ ಮಂಗವನ್ನು ಕಂಡಿಲ್ಲವೇ?
ಹಿಂದೆ ಮುಂದೆ ತಿರುಗಿ ನೋಡು
ಎಲ್ಲಾ ಕಡೆ ನಮ್ಮಂತಹುದನ್ನೇ ಕಾಣುವೆ!

(ಮಾಹಿತಿ ಸೆಲೆ: travelsignposts.comatlasobscura.com )
(ಚಿತ್ರ ಸೆಲೆ: wiki/monkey, wiki/mouse)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: