‘ಶರಣೆ ಸತ್ಯಕ್ಕನ ವಚನವೇ ದಾರಿದೀಪವಾಯಿತು’

– ಶರಣು ಗೊಲ್ಲರ.

ಒಂದು ದಿನ ದಾರವಾಡದ ಬೀದಿಯಲ್ಲಿ ಹೊರಟಿರುವಾಗ ರಸ್ತೆಯಲ್ಲಿ ಹತ್ತು ರೂಪಾಯಿಯ ನೋಟೊಂದು ಬಿದ್ದಿತ್ತು. ಅದನ್ಯಾರೂ ನೋಡದೆ ನಾನೇ ಎತ್ತಿಕೊಂಡರೆ ಅದೇ ದುಡ್ಡಿನಲ್ಲಿ ಆಟೋರಿಕ್ಶಾ ಹತ್ತಿಕೊಂಡು ಮನೆಗೆ ಹೋಗಬಹುದಿತ್ತು. ಅಂತೆಯೇ ಆ ನೋಟನ್ನು ಎತ್ತಿಕೊಳ್ಳಲು ನಾಲ್ಕು ಹೆಜ್ಜೆಯಿಟ್ಟು ಮುಂದೆ ಹೊರಟೆ. ಆದರೆ ಕೊನೆಗೆ, ಆ ಕಡೆಗೆ ತಿರುಗಿಯೂ ಸಹ ನೋಡದೆ ಮನೆಯ ದಾರಿ ಹಿಡಿದು ಹೊರಟು ಹೋದೆ‌. ನಾನು ಹತ್ತು ರೂಪಾಯಿಯ ನೋಟನ್ನು ಎತ್ತಿಕೊಳ್ಳದೆ ಸುಮ್ಮನೆ ಬಂದಿದ್ದಕ್ಕೆ ಕಾರಣ 12 ನೆಯ ಶತಮಾನದಲ್ಲಿ, ಕಸಗೂಡಿಸುವ ಕಾಯಕ ಮಾಡುತ್ತಿದ್ದ “ಸತ್ಯಕ್ಕ” ಎಂಬ ಶರಣೆಯ ಒಂದು ವಚನ. ಆ ವಚನ ಹೀಗಿದೆ.

ಲಂಚವಂಚನಕ್ಕೆ ಕೈಯಾನದಭಾಷೆ.
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ,
ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ.
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.

ಶರಣೆ ಸತ್ಯಕ್ಕ, ದಾರಿಯಲ್ಲಿ/ಬಟ್ಟೆಯಲ್ಲಿ ಪರರ ಹೊನ್ನು, ವಸ್ತ್ರ, ಹಣ ಏನೇ ಬಿದ್ದಿದ್ದರೂ, ನಾನು ಕೈಯಿಂದ ಮುಟ್ಟಿದರೂ ನನ್ನನ್ನು ನರಕದಲ್ಲಿಯೇ ಅದ್ದಿಬಿಡು ಅಂತಾಳೆ. ಶರಣರ ಕಾಲದಲ್ಲಿಯೂ ಬ್ರಶ್ಟಾಚಾರ, ಮೋಸ, ದರೋಡೆಗಳು ಮತ್ತು ನಿರುದ್ಯೋಗವೂ ಇತ್ತು. ಆದರೂ ಅವರು ಪರರ ಹಣಕ್ಕೆ ಎರಗುತ್ತಿರಲಿಲ್ಲ. ತಮ್ಮ ಕಾಲಮೇಲೆ ತಾವು ನಿಂತು ಇತರರಿಗೂ ಮಾದರಿಯಾಗಿದ್ದರು. ಈ ವಚನ ನನಗೆ ತಿಳಿಯದೇ ಹೋಗಿದ್ದಿದ್ದರೆ ನಾನು ಆ ಸಮಯದಲ್ಲಿ ಲೋಬಿಯಾಗಿರುತ್ತಿದ್ದೆ, ಪರಮಾತ್ಮನಿಂದ ದೂರವಾಗಿರುತ್ತಿದ್ದೆ. ಆಶೆಯೆಂಬ ಪಾಶದಿಂದ ಬಿಡಿಸಿದ್ದು ಅಸಾಮಾನ್ಯ ಹೆಣ್ಣಿನ ಈ ವಚನ. ಇದೇ ನನಗೆ ದಾರಿದೀಪವಾಯಿತು.

ಇನ್ನೊಂದು ವಚನದಲ್ಲಿ ಶರಣೆ ಸತ್ಯಕ್ಕ ಅಂತರಂಗದಲಿ ಮೋಸ, ದುರಾಸೆ, ದುರಾಲೋಚನೆಗಳ ಸುಳಿಗೆ ಸಿಕ್ಕು, ಬಹಿರಂಗದಲ್ಲಿ ಕೇವಲ ಪೂಜೆ, ಅರ‍್ಚನೆ, ಮಂತ್ರಗಳ ಜಪಿಸಿದರೆ ಪ್ರಯೋಜನವಿಲ್ಲ ಎಂದು ಹೇಳುತ್ತಾಳೆ.

ಅರ್ಚನೆ ಪೂಜನೆ ನೇಮವಲ್ಲ;
ಮಂತ್ರತಂತ್ರ ನೇಮವಲ್ಲ;
ಧೂಪ ದೀಪಾರತಿ ನೇಮವಲ್ಲ;
ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ

ಶರಣ-ಶರಣೆಯರು ಚಿತ್ತ ಚಂಚಲ ಮಾಡಿಕೊಳ್ಳದೇ, ಚಲ ಉಳ್ಳವರಾಗಿ ನುಡಿಗೆ ತಕ್ಕ ಹಾಗೆ ನಡೆಯುತ್ತಿದ್ದರು. ‘ನುಡಿದಂತೆಯೇ ನಡೆ, ಇದೇ ಜನ್ಮ ಕಡೆ’ ಎಂದು ತಮ್ಮ ಕಾಯಕವನ್ನೇ ಕೈಲಾಸವನ್ನಾಗಿ ಮಾಡಿಕೊಂಡಿದ್ದರು. ‘ಆಶೆಯೆಂಬುದು ಅರಸಂಗಲ್ಲದೇ ಶಿವಬಕ್ತರಿಗುಂಟೆ ಅಯ್ಯಾ’ ಎಂದು ಆಯ್ದಕ್ಕಿ ಲಕ್ಕಮ್ಮ ಪ್ರಶ್ನೆ ಮಾಡುತ್ತಾಳೆ. ಗಂಟೆಗಟ್ಟಲೇ ಗಂಟೆ ಬಾರಿಸಿಕೊಂಡು ಅರ‍್ಚನೆ, ಪೂಜೆ ಮಾಡುತ್ತಾ ಕೂಡುವುದು ನೇಮವಲ್ಲ. ಪರರ ಹಣಕ್ಕೆ, ಪರಸ್ತ್ರೀಯರ, ಪರದೈವಗಳ ಆಸೆ ಪಡದಿರುವುದೇ ನೇಮ ಅಂತಾಳೆ ಸತ್ಯಕ್ಕ. ತಮ್ಮ ಬದುಕಿನ ಆದರ‍್ಶಗಳೊಂದಿಗೆ ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ ತಿದ್ದಿದ್ದಾರೆ ನಮ್ಮ ಶಿವಶರಣ-ಶರಣೆಯರು.

ಶಿವಶರಣ-ಶರಣೆಯರ ವಚನಗಳು ಮಂದಿಯನ್ನು ಅಡ್ಡದಾರಿಗೆ ಹೋಗದಂತೆ ಸಜ್ಜನರ ರೀತಿಯಲ್ಲಿ ಬದುಕುವಂತೆ ಮಾಡುತ್ತವೆ. ಬಸವಾದಿ ಪ್ರಮತರು ಅಚ್ಚಗನ್ನಡದ ಬೇಸಾಯಗಾರರು. ಜನರಿಗೆ, ಜನರಾಡುವ ಬಾಶೆಯಲ್ಲಿಯೇ ವಚನಗಳ ಮುಕಾಂತರ ತಿಳುವಳಿಕೆಯನ್ನು ಅವರು ನೀಡಿದರು. ಈ ಸಮಾಜ ಬ್ರಶ್ಟಾಚಾರ, ಅತ್ಯಾಚಾರ, ಮೋಸ-ವಂಚನೆ, ದರೋಡೆ, ಮೂಡನಂಬಿಕೆ ಮುಂತಾದ ಅನೀತಿ, ಅನಾಚಾರಗಳಿಂದ ಹೊರಬರಬೇಕಾದರೆ, ನಮಗೆ ಸರಳವಾಗಿ ಅರ‍್ತವಾಗುವ ಕನ್ನಡ ಬಾಶೆಯಲ್ಲಿನ ವಚನಗಳಿಂದ ಮಾತ್ರ ಸಾದ್ಯವೆಂದು ಹೇಳಬಹುದು.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks