ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ

– ಸುಹಾಸ್ ಮೌದ್ಗಲ್ಯ.

ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ
ಕೂಗಲಿ ನೀನು ಎಂದು ಪ್ರತಿ ಕ್ಶಣವೂ ಕಾಯುವೆ

ನಿನ್ನ ನೋಡುತ ನಾನು ಬರೆದೆನು ಎರಡು ಸಾಲನು
ಬಂದು ಓದು ಒಮ್ಮೆ ಅದನು ಕೇಳದೆ ಬೇರೆ ಏನನು
ಹಾಗೆ ನೋಡು ಕಣ್ಣು ಮಿಟುಕಿಸದೆ ಸ್ವಲ್ಪ ನನ್ನನು
ಮತ್ತೆ ಬರೆಯುವೆ ಎರಡು ಸಾಲು ನೋಡಿ ನಿನ್ನನು

ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ
ಕೂಗಲಿ ನೀನು ಎಂದು ಪ್ರತಿ ಬಾರೀ ಬೇಡುವೆ

ನಿನ್ನ ನೋಡದೆ ಒಂದು ದಿನವೂ ನಾನು ಇರೆನು
ಅದಕ್ಕೆ ನಿನ್ನ ಕನಸಲ್ಲಿ ತಪ್ಪದೆ ಬಂದೇ ಬರುವೆನು
ನಿನ್ನ ನೋಡುತ ಕನಸೋ ನನಸೋ ಮರೆವೆನು
ನಿನ್ನ ನೋಡಿದ ಕುಶಿಯಲಿ ರಾಜನಂತೆ ಮೆರೆವೆನು

ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ
ಕೂಗಲಿ ನೀ ಎಂದು ಹಗಲುಗನಸು ಕಾಣುವೆ

ಬರುವೆ ಹಿಂದೆ ನೋಡುತ ನೀ ಮುಡಿದ ಹೂವನು
ತಿರುಗಿ ನೋಡು ಕೇಳುತ ನಾ ಬರೆದ ಹಾಡನು
ನೋಡಿದರು ನೋಡದ ಹಾಗೆ ನಾ ಇರುವೆನು
ಗಮನಿಸು ನನ್ನ ನಾಟಕವ ನೋಡುತ ನನ್ನನು

ಕೂಗಿದ ಕ್ಶಣವೇ ನಾನು ನಿನ್ನ ಮುಂದಿರುವೆ
ಕೂಗದೆ ಏಕೆ ಹೀಗೆ ನೀ ನನ್ನ ಕಾಡುವೆ

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: