ಕರುಣೆ, ಅಹಿಂಸೆ, ಶಾಂತಿ ಸಂದೇಶ ಸಾರಿದ ಮಹಾವೀರರು
ಬಾರತದಲ್ಲಿ ಅನೇಕ ದರ್ಮಗಳಿವೆ. ಎಲ್ಲಾ ದರ್ಮಗಳಿಗೂ ತಮ್ಮದೇಯಾದ ವಿಶಿಶ್ಟ ತತ್ವಗಳಿವೆ, ಆಚರಣೆಗಳಿವೆ. ಅವುಗಳಲ್ಲಿ ಪ್ರಾಚೀನವೂ ಹಾಗೂ ವಿಶಿಶ್ಟ ಆಚರಣೆಗಳೊಂದಿಗೆ ತನ್ನ ಮೂಲ ತತ್ವಗಳಲ್ಲಿ ಅನಾದಿಕಾಲದಿಂದಲೂ ಹೆಚ್ಚೇನು ಬದಲಾವಣೆಗಳನ್ನೊಪ್ಪದೇ ಇರುವುದು ‘ಜೈನ ದರ್ಮ’. ಈ ದರ್ಮವನ್ನು ಬೋದನೆಮಾಡಿದ ಮಹಾಪುರುಶರಿಗೆ ‘ತೀರ್ತಂಕರ’ ಎನ್ನುತ್ತಾರೆ. ಇವರಿಗೆ ‘ಜಿನ’ ಎಂದೂ ಕರೆಯುತ್ತಾರೆ. ‘ಜಿನ’ ಎಂದರೆ ರಾಗ ದ್ವೇಶಗಳನ್ನು ಗೆದ್ದವನು ಎಂದರ್ತ. ಜಿನನು ಬೋದಿಸಿದ ದರ್ಮವೇ ಜೈನ ದರ್ಮ. ಕರ್ಮ ಮತ್ತು ಪುನರ್ಜನ್ಮವನ್ನು ನಂಬುವ ಜೈನರು ತಾವು ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳಿಂದ ಈಗಿರು ಜನ್ಮ ಲಬಿಸಿದೆ, ಈ ಜನ್ಮದಲ್ಲಿ ಮಾಡುವ ಪಾಪ ಪುಣ್ಯದ ಕರ್ಮಗಳಿಂದ ಮುಂದಿನ ಜನ್ಮ ಪ್ರಾಪ್ತಿಯಾಗುತ್ತದೆ ಎಂದು ನಂಬಿರುವವರು. ಈಗ ಬಾರತದ ಎಲ್ಲಾ ರಾಜ್ಯಗಳಲ್ಲಿ ಆಚರಣೆಯಲ್ಲಿರುವ ಈ ದರ್ಮ , ಹಿಂದೆ ಜಗತ್ತಿನ ಅನೇಕ ರಾಶ್ಟ್ರಗಳಲ್ಲಿ ಅಸ್ತಿತ್ವದಲ್ಲಿತ್ತು ಎಂದು ಹೇಳಲಾಗುತ್ತದೆ.
ಈ ಯುಗದ ಆರಂಬದಲ್ಲಿ ಜೈನ ದರ್ಮವನ್ನು ವ್ರುಶಬದೇವನು ಮೊದಲು ಬೋದಿಸಿದನು, ಅವನಿಗೆ ‘ಆದಿ ತೀರ್ತಂಕರ’ ಎಂದು ಕರೆದರು. ವ್ರುಶಬದೇವನ ಹಿರಿಯ ಪುತ್ರ ’ಬರತ ಚಕ್ರವರ್ತಿ’. ಅಯೋದ್ಯೆಯ ಚಕ್ರವರ್ತಿಯನ್ನಾಗಿಸಿ ಬರತನಿಗೆ ಅದಿಕಾರ ಕೊಟ್ಟರೆ ಕಿರಿಯನಾದ ’ಬಾಹುಬಲಿ’ಗೆ ಈಗಿನ ಪಾಕಿಸ್ತಾನದಲ್ಲಿರುವ ತಕ್ಶಶಿಲೆಯನೊಪ್ಪಿಸಿ ತನ್ನ ಸರ್ವಸ್ವವನ್ನೂ ತ್ಯಜಿಸಿ ಬೌತಿಕ ಬಾರವನ್ನು ಮಕ್ಕಳಿಗೊಪ್ಪಿಸಿ ವ್ರುಶಬದೇವ ತಪಸ್ಸಿಗೆ ಹೋಗಿ ಜ್ನಾನಿಯಾಗಿ, ಜಿನನಾದ, ತೀರ್ತಂಕರನಾದ. ಬಹಳ ಹಿಂದಿನ ಕಾಲದಲ್ಲಿ ಜೈನ ದರ್ಮವನ್ನು ಪ್ರಚಾರ ಮಾಡಿದವರಲ್ಲಿ ಇವರು ಪ್ರಮುಕರು. ಆದಿ ತೀರ್ತಂಕರರ ತರುವಾಯ ಕಾಲಕಾಲಕ್ಕೆ ಇಪ್ಪತ್ಮೂರು ಜನ ತೀರ್ತಂಕರರು ಆಗಿದ್ದಾರೆ. ಅವರೆಲ್ಲ ಸಾಂಸಾರಿಕ ಬದುಕನ್ನು ಬಿಟ್ಟು, ಸನ್ಯಾಸವನ್ನು ಸ್ವೀಕರಿಸಿ, ಕಟೋರ ತಪಸ್ಸು ಮಾಡಿ, ಸತ್ಯದ ಸ್ವರೂಪವನ್ನರಿತು, ಲೋಕಹಿತಕ್ಕಾಗಿ ಜನರಿಗೆ ಜಿನ ದರ್ಮ ಬೋದಿಸಿದ್ದಾರೆ. ಅವರಲ್ಲಿ ಆದಿನಾತ, ನೇಮಿನಾತ, ಪಾರ್ಶ್ವನಾತ ಮತ್ತು ಮಹಾವೀರರು ಪ್ರಸಿದ್ದರಾದವರು. ಜೈನ ತತ್ವಗಳನ್ನು ಹೆಚ್ಚು ಪ್ರಚಾರಮಾಡಿದವರಲ್ಲಿ ಕೊನೆಯ ಹಾಗೂ ಇಪ್ಪತ್ನಾಲ್ಕನೆಯವರೇ ‘ಬಗವಾನ ಮಹಾವೀರರು’. ತಮ್ಮ ನಡೆ-ನುಡಿ-ಆಚರಣೆಗಳಿಂದ, ಸಾದನೆ-ಬೋದನೆಯಿಂದ, ತಾತ್ವಿಕ ಚಿಂತನೆಗಳಿಂದ ಜೈನ ದರ್ಮವನ್ನು ಹೆಚ್ಚು ಪ್ರಚಾರಕ್ಕೆ ತಂದವರು.
ಇಂದಿನ ಬಿಹಾರ ರಾಜ್ಯದ ಚಂಪಾರಣ್ಯ, ಮುಜಪರ್ಪುರ ಹಾಗೂ ದರಬಾಂಗ ಜಿಲ್ಲೆಯನ್ನೊಳಗೊಂಡ ಒಂದು ರಾಜ್ಯವಿತ್ತು ಅದನ್ನು ’ವಿದೇಹ’ ರಾಜ್ಯವೆಂದು ಕರೆಯುತಿದ್ದರು. ಗಂಡಕೀ ನದಿಯ ಎರಡೂ ಬದಿಗಳಲ್ಲಿ ಬಹು ವಿಶಾಲವಾಗಿ ಹಬ್ಬಿದ ರಾಜ್ಯ. ಈ ರಾಜ್ಯದ ರಾಜದಾನಿ ವೈಶಾಲಿಯಾಗಿತ್ತು. ಅನೇಕ ಉಪನಗರಗಳನ್ನೊಳಗೊಂಡ ಈ ರಾಜ್ಯದಲ್ಲಿ ಕುಂಡಪುರವೂ ಒಂದು. ಸಿದ್ದಾರ್ತ ಕುಂಡಪುರದ ದೊರೆಯಾಗಿದ್ದ. ಇವುಗಳನ್ನು ’ಗಣ’ ಎಂದು ಕರೆಯುತ್ತಿದ್ದರು. ಗಣಗಳನ್ನಾಳುವ ರಾಜನೊಬ್ಬ ಇರುತ್ತಿದ್ದ. ಅವನಿಗೆ ’ಗಣರಾಜ’ ಎಂದೂ, ಗಣರಾಜರುಗಳ ಮೇಲೊಬ್ಬ ಇರುತ್ತಿದ್ದ ರಾಜನಿಗೆ ’ಅದಿರಾಜ’ ಎಂದೂ ಕರೆಯಲಾಗುತ್ತಿತ್ತು. ವೈಶಾಲಿಯನ್ನು ಆಳುತ್ತಿದ್ದ ಅದಿರಾಜ ಚೇಟಕರಾಜ, ವಿದೇಹ ರಾಜ್ಯದ ಸಾಮ್ರಾಟನಾಗಿದ್ದನು.
ಈ ಚೇಟಕ ರಾಜನ ಮಗಳಾದ ತ್ರಿಶಲಾದೇವಿಯನ್ನು ತಮ್ಮ ಅದೀನದ ಕುಂಡಪುರದ ಗಣರಾಜನಗಿದ್ದ ಸಿದ್ದಾರ್ತನಿಗೆ ಕೊಟ್ಟು ಮದುವೆ ಮಾಡಿದ್ದರು. ಸಿದ್ದಾರ್ತ ಹಾಗೂ ತ್ರಿಶಲಾದೇವಿಯರು ಸದಾಚಾರ ಸಂಪನ್ನರು ಜೈನ ಪರಂಪರೆಯ 23 ನೇ ತೀರ್ತಂಕರ ಪಾರ್ಶ್ವನಾತರ ಅನುಯಾಯಿಗಳಾಗಿದ್ದರು. ಸದಾಚಾರಿಗಳು ಸದ್ಗುಣ ಸಂಪನ್ನರು ಅಗಿದ್ದ ಅವರಿಗೆ ಕ್ರಿ.ಪೂ.599 ನೇ ಇಸವಿಯ ಚೈತ್ರ ಮಾಸದಲ್ಲಿ ಹುಟ್ಟಿದವರೇ ಮಹಾವೀರ. ಇವರಿಗೆ ವೀರ, ವರ್ದಮಾನ, ಅತಿವೀರ, ಸನ್ಮತಿ ಎಂಬ ಹೆಸರುಗಳಿದ್ದವು. ಆರಂಬದ ಮೂವತ್ತು ವರ್ಶ ಮನೆಯಲ್ಲಿದ್ದು ಬ್ರಹ್ಮಚರ್ಯ,ಆತ್ಮದ್ಯಾನ,ಅದ್ಯಯನ ಮಾಡಿದರು. ನಂತರ ರಾಜಪದವಿಯನ್ನು ತ್ಯಜಿಸಿ ಸನ್ಯಾಸ ಸ್ವೀಕರಿಸಲನುವಾದರು. ತಮ್ಮ ಮೂವತ್ತನೆ ವರ್ಶದಲ್ಲಿ ಸನ್ಯಾಸ ದೀಕ್ಶೆ ಸ್ವೀಕರಿಸಿ ತಮ್ಮ ತಲೆ ಕೂದಲನ್ನು ತಾವೇ ಕಿತ್ತುಕೊಂಡು ಮುನಿಯಾದರು. ಸಂಯಮಿಯಾಗಿ ಬೌತಿಕ ಮೋಹ ತ್ಯಜಿಸಿದರು. ರಾಜ ವೈಬವ, ಸುಕ ಬೋಗಗಳು ಕ್ಶಣಿಕ, ಶಾಶ್ವತ ಸುಕ ಆತ್ಮಕಲ್ಯಾಣದಲ್ಲಿದೆ ಎಂಬ ಸತ್ಯ ಅರಿತು ತ್ಯಾಗ ಮಾರ್ಗದಿ ಸಾಗಿದರು.
ಹನ್ನೆರಡು ವರ್ಶ ಕಟಿಣ ತಪಸ್ಸು, ದ್ಯಾನದಿಂದ ಕಂಡುಕೊಂಡ ಸತ್ಯವನ್ನು ಜನರಿಗೆ ತಿಳಿಸಲು ಸಮಕಾಲೀನ ಜನ ಬಾಶೆಯಾಗಿದ್ದ ಪ್ರಾಕ್ರುತದ ಅರ್ದಮಾಗದಿಯಲ್ಲಿ ಜನ ಸಾಮಾನ್ಯರಿಗೆ ತಿಳಿಯುವಂತೆ ತತ್ವಗಳನ್ನು ಬೋದಿಸಿದರು ಮಹಾವೀರರು. ಮಂದಿಯೂ ಕೂಡ ಮಹಾವೀರರ ವಾಣಿಗಾಗಿ ಹಾತೊರೆಯುತಿದ್ದರು. ರಾಜರಾದಿಯಾಗಿ ಸಾಮಾನ್ಯ ಜನ ಮಹಾವೀರರ ಬೋದನೆ ಕೇಳಲು ಸೇರಲಾರಂಬಿಸಿದರು. ಹೀಗೆ ಮಹಾವೀರರ ಉಪದೇಶಕ್ಕೆ ಆಯೋಜನೆಗೊಂಡ ದರ್ಮ ಸಬೆಯನ್ನು ’ಸಮವಸರಣ’ ಎಂದು ಕರೆದರು. ಜಾತಿ-ಲಿಂಗ-ಮೇಲು-ಕೀಳು ಎಂಬ ಬೇದವಿಲ್ಲದೆ ಜನರೆಲ್ಲ ಸಮವಸರಣದಲ್ಲಿ ಮಹಾವೀರರ ಉಪದೇಶ ಕೇಳಲು ಸೇರುತಿದ್ದರು. ಆ ಕಾಲದಲ್ಲಿ ಬಹುಶಹ ಈಗಿರುವಂತೆ ಸಾಮಾಜಿಕ ದಾರ್ಮಿಕ ಆರ್ತಿಕ ಸಮಸ್ಯೆಗಳು ಇದ್ದಿರಬಹುದು, ಹಾಗಾಗಿಯೇ ಮಹಾವೀರರ ಉಪದೇಶಗಳು ವ್ಯವಸ್ತೆಗೆ ಹೊಸ ದಿಕ್ಕನ್ನು ಬೆಳಕನ್ನು ತೋರಿದವು.
ಮಹಾವೀರರು “ದರ್ಮ ಎಂಬುದು ಕೇವಲ ಕೇಳಿ ಆನಂದಿಸುವುದಕ್ಕಲ್ಲ, ಆಚರಣೆಯ ಮಾರ್ಗವಾಗಬೇಕು, ಜಗತ್ತಿನ ಎಲ್ಲ ಜೀವಿಗಳೊಡನೆ ದಯಾ ಬಾವದಿಂದ ಇರಬೇಕು, ದಯವೇ ದರ್ಮದ ಮೂಲ, ಅಹಿಂಸೆಯೇ ಪರಮ ದರ್ಮ. ಇದು ಉಪದೇಶ ನೀಡುವುದಕಲ್ಲ ನಿತ್ಯ ಆಚರಣೆ ಆಗಬೇಕು. ಒಳ್ಳೆಯ ನಡತೆಯಿಂದ ಜೀವನ ರೂಪಿಸಿಕೊಳ್ಳಲು ಸಾದ್ಯ, ಪ್ರತಿಯೊಬ್ಬನ ಶರೀರದಲ್ಲಿ ಪರಮಾತ್ಮನಿದ್ದಾನೆ. ಎಲ್ಲರಿಗೂ ಪರಮಾತ್ಮನಾಗುವ ಯೋಗ್ಯತೆ ಇದೆ. ಅದನ್ನರಿತು ಬಾಳಬೇಕು” ಎಂಬ ಸಂದೇಶವನ್ನು ಸಾರಿದರು. ವೈಚಾರಿಕ ಕ್ಶೇತ್ರದಲ್ಲಿ ‘ಅನೇಕಾಂತ’ ಸಿದ್ದಾಂತವನ್ನು ಎಲ್ಲರಿಗೂ ತಿಳಿಸಿದರು. ಅಹಿಂಸೆ, ಸತ್ಯ, ಅಚೌರ್ಯ, ಬ್ರಹ್ಮಚರ್ಯ ಹಾಗೂ ಅಪರಿಗ್ರಹ ಮೊದಲಾದ ಮೌಲಿಕ ವಿಚಾರಗಳನ್ನು ಬೋದಿಸಿದರು. ತಮ್ಮ ತಮ್ಮ ವಿಚಾರಗಳಲ್ಲಿರುವ ಸತ್ಯಾಂಶವನ್ನು ಚರ್ಚಿಸಿ ತಿಳಿದುಕೊಳ್ಳುವುದರಿಂದ ಸಮಾಜದಲ್ಲಿ ಒಬ್ಬರನ್ನೊಬ್ಬರು ತಿಳಿದುಕೊಳ್ಳುವಂತಾಗಿ ಶಾಂತಿ ನೆಲೆಸಿತು. ಸಮ್ಯಕ್ ಜ್ನಾನ, ಸಮ್ಯಕ್ ದರ್ಶನ ಹಾಗೂ ಸಮ್ಯಕ್ ಚಾರಿತ್ರ್ಯ ಎಂಬ ರತ್ನತ್ರಯಗಳು ಹಾಗೂ ಪಂಚಾಣು ವ್ರತಗಳಾದ ಅಹಿಂಸೆ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳನ್ನು ಮಹಾವೀರರು ಬೋದಿಸಿದರು. ಇಂದಿನ ಜಗತ್ತಿಗೆ ಮಹಾವೀರನ ತತ್ವಗಳ ಆಚರಣೆಯ ಅವಶ್ಯಕತೆ ಗೋಚರಿಸುತ್ತಿದೆ. ಸಾವಿರಾರು ವರ್ಶಗಳ ಹಿಂದೆಯೇ ಬೋದಿಸಿದ ವರ್ದಮಾನರ ವಿಚಾರಗಳು ಇಂದಿಗೂ ಪ್ರಸ್ತುತ.
ತಮ್ಮ ಎಪ್ಪತ್ತೆರಡನೇ ವಯಸ್ಸಿನವರೆಗೂ ದರ್ಮ ಬೋದನೆ ಮಾಡಿ ಕ್ರಿ.ಪೂ.527 ರ ಕಾರ್ತಿಕ ಮಾಸದ ಕ್ರುಶ್ಣ ಪಕ್ಶ ಚತುರ್ದಶಿಯ ದಿನದಂದು ಮಹಾವೀರರು ನಿರ್ವಾಣ ಹೊಂದಿದರು.
( ಚಿತ್ರ ಸೆಲೆ: wikipedia )
ಇತ್ತೀಚಿನ ಅನಿಸಿಕೆಗಳು