ನಗೆಯ ಮಾರಿತಂದೆಯ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.

ವಚನಗಳು, Vachanas

 

ಕಲ್ಲಿಯ ಹಾಕಿ ನೆಲ್ಲವ ತುಳಿದು
ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ
ವಾಗದ್ವೈತವ ಕಲಿತು
ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು
ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ
ಅದೇತರ ನುಡಿ ಮಾತಿನ ಮರೆ
ಆತುರ ವೈರಿ ಮಾರೇಶ್ವರಾ.

ಮಾತಿನ ಮೋಡಿಯಿಂದಲೇ ಜನರ ಮಯ್ ಮನಗಳನ್ನು ಮರುಳುಗೊಳಿಸಿ, ತನಗೆ ಬೇಕಾದುದೆಲ್ಲವನ್ನೂ ದೋಚುವ/ಲಪಟಾಯಿಸುವ/ಸುಲಿಯುವ ನಯವಂಚಕರನ್ನು/ಕಪಟಿಗಳನ್ನು ಈ ವಚನದಲ್ಲಿ ಟೀಕಿಸಲಾಗಿದೆ.

‘ಮಾತಿನ ಮೋಡಿ’ ಎಂದರೆ, ‘ವ್ಯಕ್ತಿಯು ತಾನಾಡುವ ಮಾತುಗಳಿಂದಲೇ ಜನಮನವನ್ನು ತನ್ನತ್ತ ಸೆಳೆದುಕೊಂಡು, ಅವರನ್ನು ಮುದಗೊಳಿಸಿ, ತಾನು ಹೇಳಿದುದೆಲ್ಲವನ್ನೂ ನಿಜ/ಸತ್ಯ/ದಿಟವೆಂದು ನಂಬಿ ನಡೆಯುವಂತೆ ಪ್ರಚೋದಿಸುವ/ಹುರುಪುಗೊಳಿಸುವ ಕುಶಲತೆ/ಪರಿಣತಿ/ಚಾಕಚಕ್ಯತೆ/ಜಾಣತನ’..

( ಕಲ್ಲಿ=ನೂಲು/ಹಗ್ಗದಿಂದ ಹೆಣೆದು ಮಾಡಿದ ಬಲೆ/ಸರಗುಣಿಕೆಯ ಬಲೆ/ಜೀರುಗುಣಿಕೆಯ ಬಲೆ/ಪ್ರಾಣಿಗಳನ್ನು ಹಕ್ಕಿಗಳನ್ನು ಹಿಡಿಯುವುದಕ್ಕಾಗಿ ಮಾಡಿರುವ ಬಲೆ; ಹಾಕಿ=ಒಡ್ಡಿ/ಎಸೆದು/ಇಟ್ಟು/ನೆಟ್ಟು; ಕಲ್ಲಿಯ ಹಾಕಿ=ಬಲೆಯನ್ನು ಒಡ್ಡಿ/ಹಾಕಿ; ನೆಲ್ಲು+ಅ; ನೆಲ್ಲು=ಬತ್ತ/ಒಂದು ಬಗೆಯ ದಾನ್ಯ/ಕಾಳು; ನೆಲ್ಲ=ಬತ್ತದ ಕಾಳುಗಳನ್ನು; ತುಳಿದು=ನೆಟ್ಟು/ನಾಟಿಸಿ/ನೆಲದ ಮೇಲೆ ಹರಡಿ/ಸಿಕ್ಕಿಸಿ; ಗುಬ್ಬಿ=ಒಂದು ಬಗೆಯ ಹಕ್ಕಿ; ಸಿಕ್ಕಿಸುವ=ಸೆರೆ ಹಿಡಿಯುವ/ಬಲೆಗೆ ಬೀಳುವಂತೆ ಮಾಡುವ; ಕಳ್ಳನ್+ಅಂತೆ; ಕಳ್ಳ=ಜನಗಳ ಒಡವೆ ವಸ್ತುಗಳನ್ನು ಕದಿಯುವವನು/ದೋಚುವವನು/ಜೀವವನ್ನು ತೆಗೆಯುವವನು; ಅಂತೆ=ಹಾಗೆ/ಆ ರೀತಿಯಲ್ಲಿ;

ವಾಕ್+ಅದ್ವೈತ=ವಾಗದ್ವೈತ; ವಾಕ್=ನುಡಿ/ಮಾತು; ಅದ್ವೈತ=ಜೀವಾತ್ಮ ಮತ್ತು ಪರಮಾತ್ಮ ಎಂಬುವು ಬೇರೆ ಬೇರೆಯಲ್ಲ, ಅವೆರಡೂ ಒಂದೇ ಎಂಬ ನಿಲುವು; ವಾಗದ್ವೈತವ ಕಲಿತು= ‘ಯಾವುದೇ ಸಂಗತಿಯನ್ನು ಕುರಿತ ಚರ‍್ಚೆಯ ಸನ್ನಿವೇಶದಲ್ಲಿ ಎದುರಾಳಿಯನ್ನು ಮನವನ್ನು ಸೆಳೆಯುವಂತಹ/ಮೆಚ್ಚಿಸುವಂತಹ/ಸೋಲಿಸುವಂತಹ ಮಾತುಗಾರಿಕೆಯನ್ನು ಹೊಂದಿರುವುದು—ಮಾತಿನ ಬಳಕೆಯಲ್ಲಿ ಹೆಚ್ಚಿನ ಜಾಣ್ಮೆಯನ್ನು ಕರಗತ ಮಾಡಿಕೊಂಡಿರುವುದು—ಆಡುವುದು ಒಂದು, ಮಾಡುವುದು ಮತ್ತೊಂದು ಎನಿಸುವಂತಹ ಇಬ್ಬಗೆಯ ನಡೆನುಡಿಯನ್ನು ಅಳವಡಿಸಿಕೊಂಡಿರುವುದು—ತನ್ನ ನಿಜಜೀವನದಲ್ಲಿ ಆಚರಿಸಿ ತೋರಿಸದ ದೊಡ್ಡ ದೊಡ್ಡ ಆದರ‍್ಶದ ನುಡಿಗಳನ್ನಾಡುವುದರಲ್ಲಿ ಚತುರತೆಯನ್ನು ಗಳಿಸಿರುವುದು’ ಎಂಬ ತಿರುಳಿನಲ್ಲಿ ಬಳಕೆಯಾಗಿರುವ ನುಡಿಗಟ್ಟು;

ಸಂಸ್ಕೃತ=ಒಂದು ನುಡಿ/ಇಂಡಿಯಾ ದೇಶದ ಪ್ರಾಚೀನ ಜನಸಮುದಾಯದ ಸಂಸ್ಕ್ರುತಿ, ನಾಗರಿಕತೆ ಮತ್ತು ಸಾಮಾಜಿಕ ಜೀವನದ ಸಂಗತಿಗಳನ್ನು ನಿರೂಪಿಸುವ ವೇದ, ಉಪನಿಶತ್ತು, ವಾಲ್ಮೀಕಿ ರಾಮಾಯಣ, ವ್ಯಾಸ ಮಹಾಬಾರತ, ಬಗವದ್ಗೀತೆ ಮತ್ತು ಪುರಾಣಗಳೆಲ್ಲವೂ ಸಂಸ್ಕ್ರುತ ನುಡಿಯಲ್ಲಿ ರಚನೆಗೊಂಡಿವೆ/ಸಂಸ್ಕ್ರುತವನ್ನು ಕೆಲವರು ದೇವನುಡಿಯೆಂದು ನಂಬಿ ಹೆಮ್ಮೆಯಿಂದ ಕೊಂಡಾಡುತ್ತಾರೆ; ಮಾತು=ನುಡಿ/ಸೊಲ್ಲು/ಹೇಳಿಕೆ; ಸಂಸ್ಕೃತದ ಮಾತು=ವೇದ/ಉಪನಿಶತ್ತು/ರಾಮಾಯಣ/ಮಹಾಬಾರತ/ಬಗವದ್ಗೀತೆ/ಪುರಾಣಗಳಲ್ಲಿ ಮಾನವ ಸಮುದಾಯದ ಒಳಿತಿನ ನಡೆನುಡಿಗಳಿಗೆ ದಾರಿ ತೋರುವ ನೀತಿ, ನಿಯಮ ಮತ್ತು ಆದರ‍್ಶವನ್ನು ನಿರೂಪಣೆ ಮಾಡಿರುವ ಪ್ರಸಂಗಗಳಿಂದ ಆಯ್ದುಕೊಂಡಿರುವ ಮಾತುಗಳು/ನುಡಿಗಳು/ಹೇಳಿಕೆಗಳು; ಪಸರ=ಅಂಗಡಿ/ಅಂಗಡಿಯ ಸರಕು/ಮಾರಾಟ ಮಾಡಲೆಂದು ಜೋಡಿಸಿಟ್ಟಿರುವ ವಸ್ತುಗಳು; ಮುಂದೆ=ಎದುರಿಗೆ/ಮುಂದುಗಡೆ; ಇಕ್ಕಿ+ಕೊಂಡು; ಇಕ್ಕು=ಇರಿಸು/ಹರಡು/ಹಾಸು/ಇಡು; ಇಕ್ಕಿಕೊಂಡು=ಹರಡಿಕೊಂಡು;

ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು=ಕೇಳುಗರ ಗಮನವನ್ನು ತಮ್ಮತ್ತ ಸೆಳೆಯಲು/ಕೇಳುಗರು ತಮ್ಮ ಮಾತುಗಳನ್ನು ನಂಬುವಂತೆ ಮಾಡಲೆಂದು ಸಂಸ್ಕ್ರುತದ ಹೊತ್ತಿಗೆಗಳಿಂದ ನೀತಿ/ನಿಯಮ/ಆದರ‍್ಶದ ಬಾಳ್ವೆಯನ್ನು ನಿರೂಪಿಸುವ ಹೇಳಿಕೆಗಳನ್ನು ಪದೇ ಪದೇ ಬಳಸುತ್ತಾ/ವ್ಯಾಪಾರಿಯು ತನ್ನ ವಸ್ತುಗಳ ಮಾರಾಟಕ್ಕಾಗಿ ಅಂಗಡಿಯನ್ನು ತೆರೆದಂತೆ ಜಾತಿ/ಮತದ ಒಕ್ಕೂಟಗಳಲ್ಲಿ ನೇತಾರರಾಗಿರುವ ಜಾತಿ ಜಗದ್ಗುರುಗಳು, ದೇವಮಾನವರು ಮತ್ತು ವಂಚನೆಯ ಉದ್ದೇಶವನ್ನು ಹೊಂದಿರುವ ಕೆಲ ಗುರುಹಿರಿಯರು ಜನರನ್ನು ಮರಳುಗೊಳಿಸಿ ಸಂಪತ್ತನ್ನು ಸಂಪಾದಿಸಲೆಂದು ಸಂಸ್ಕ್ರುತದ ನುಡಿಯನ್ನು ವ್ಯಾಪಾರದ ಸರಕನ್ನಾಗಿ ಮಾಡಿಕೊಂಡಿದ್ದಾರೆ ಎಂಬ ರೂಪಕದ ತಿರುಳಿನಲ್ಲಿ ಈ ಸೊಲ್ಲು ಬಳಕೆಯಾಗಿದೆ;

ಮತ್ಸ್ಯ=ಮೀನು; ವಕ್ತ್ರ+ಅಲ್ಲಿ; ವಕ್ತ್ರ=ಬಾಯಿ; ಗ್ರಾಸ=ಆಹಾರ/ಊಟ/ತುತ್ತು; ಹಾಕು+ಅವನ್+ಅಂತೆ; ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವುದು=ಕೆರೆಕಟ್ಟೆಬಾವಿ, ಹೊಳೆ-ನದಿ-ಕಡಲಿನಲ್ಲಿರುವ ಜಲಚರವಾದ ಮೀನನ್ನು ಹಿಡಿಯುವಾಗ, ಗಾಳದ ತುದಿಗೆ ಎರೆಹುಳವನ್ನು ಇಲ್ಲವೇ ಇನ್ನಿತರ ಕಡ್ಡಿಕಾಳುಗಳನ್ನು ಸಿಕ್ಕಿಸುತ್ತಾರೆ. ಗಾಳದ ತುದಿಯಲ್ಲಿರುವ ಆಹಾರದ ತುಣುಕನ್ನು ಕಂಡು ಆಸೆಯಿಂದ ಅದರತ್ತ ಬಂದು ಮೀನು ತನ್ನ ನಾಲಗೆಯನ್ನು/ಬಾಯನ್ನು ಹಾಕುತ್ತಿದ್ದಂತೆಯೇ, ಗಾಳದ ಕೊಂಡಿಗೆ ಸಿಕ್ಕಿ ಬಲಿಯಾಗುತ್ತದೆ; ಸುಂದರವಾದ/ಮನಸೆಳೆಯುವ ಮಾತುಗಳಿಂದಲೇ ಜನರನ್ನು ಮೋಸಗೊಳಿಸಿ, ತಮ್ಮ ಹಿತಕ್ಕಾಗಿ ಜನರನ್ನು ಬಲಿ ತೆಗೆದುಕೊಳ್ಳುವ ವಂಚಕರ ವರ‍್ತನೆಯನ್ನು ಈ ರೂಪಕದ ಮೂಲಕ ಚಿತ್ರಿಸಲಾಗಿದೆ;

ಅದು+ಏತರ; ಅದು=ತನ್ನ ಹಿತಕ್ಕಾಗಿ ಇತರರನ್ನು ವಂಚಿಸುವುದು; ಏತರ=ಯಾವ ಬಗೆಯದು/ಯಾವ ರೀತಿಯದು; ಅದೇತರ ನುಡಿ=ಇಂತಹ ಮಾತುಗಳಿಂದ ಒಳಿತು ಹೇಗೆ ಉಂಟಾಗುತ್ತದೆ; ಮರೆ=ಮುಚ್ಚು/ಅಡಗಿಸು/ಗುಟ್ಟು/ರಹಸ್ಯ/ಕಪಟ/ಮೋಸ; ಮಾತಿನ ಮರೆ= ಒಳ್ಳೆಯತನದ/ಆದರ‍್ಶದ/ನೀತಿಯ/ನಿಯಮದ ಮಾತುಗಳ ಹಿಂದೆ ವಂಚನೆ/ಕಪಟತನದ ಆಲೋಚನೆಗಳನ್ನು ಮನದಲ್ಲಿ ಅಡಗಿಸಿಕೊಂಡಿರುವುದು; ಆತುರವೈರಿ ಮಾರೇಶ್ವರಾ=ನಗೆಯ ಮಾರಿತಂದೆಯ ವಚನಗಳ ಅಂಕಿತನಾಮ.)

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: