ಕತೆ: ಯಾವ ಹೂವು ಯಾರ ಮುಡಿಗೋ? (ಕಂತು-1)

– ಸುರಬಿ ಲತಾ.

ಒಲವು, ನೋವು, Love, Heartbreak

ಕವನಾಳ ಮನದಲ್ಲಿ ಏನೋ ಬಯ, ಮುಂದೆ ಏನಾಗುವುದೋ ಎಂಬ ಆತಂಕ. ಏಕೆ ಹೀಗೆ?

ಸುದಾ ನನಗೆ ಆಶ್ರಯ ಕೊಟ್ಟ ವಳು, ಅನಾತಳಾದ ನನಗೆ ಸುದಾನೇ ಎಲ್ಲಾ. ಸುದಾ ಶ್ರೀಮಂತೆ. ತಂದೆ, ತಾಯಿ ಅಮೇರಿಕಾದಲ್ಲಿ ನೆಲೆಸಿಹರು. ಸುದಾಗೆ ಇಂಡಿಯಾದಲ್ಲೇ ಇರಬೇಕೆಂಬ ಆಸೆ. ಇಲ್ಲೇ ತನ್ನದೇ ಆಪೀಸ್ ನಲ್ಲಿ ನನಗೂ ಕೆಲಸ ಕೊಟ್ಟು ತನ್ನ ತಂಗಿಯಂತೆ ಸಲಹುತ್ತಿರುವಳು. ಅವಳು, ನಾನು ಮಾತ್ರ ಈ ವಿಶಾಲವಾದ ಮನೆಯಲ್ಲಿ. ತಾನೇ ಎಲ್ಲಾ ಮನೆ ಕೆಲಸ, ಅಡುಗೆ ಮಾಡಿ ನಂತರ ಆಪೀಸ್ ಗೆ ಹೊರಡುವಳು.

**************************************

ಸುಹಾಸ್, ಸುದಾ ಆಪ್ತ ಸ್ನೇಹಿತರು. ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ. ಏನೇ ಆದರೂ, ತಮ್ಮಿಬ್ಬರ ನಡುವೆ ವಿಶಯಗಳನ್ನು ಹಂಚಿಕೊಳುತ್ತಿದ್ದರು. ಈಗ ಕವನಾ ಕೂಡ ಅವರ ಜೊತೆ ಇರುತ್ತಿದ್ದಳು. ಕವನಾ ಅವಳಿಗೇ ತಿಳಿಯದಂತೆ ಸುಹಾಸ್ ನನ್ನು ಪ್ರೀತಿಸತೊಡಗಿದ್ದಳು. ಎಶ್ಟೋ ಸಾರಿ, ‘ಇಲ್ಲ ಇದು ತಪ್ಪು. ಸುದಾ, ಸುಹಾಸ್ ನನ್ನು ಇಶ್ಟ ಪಡುತ್ತಿದ್ದಾಳೆ. ಅವರ ಮದ್ಯೆ ನಾನು ಹೋಗಬಾರದು’ ಎಂದು ತೀರ‍್ಮಾನಿಸಿ ಅವರಿಬ್ಬರೂ ಇರುವಾಗ, ಇವಳು ದೂರವೇ ಇರುತ್ತಿದ್ದಳು. ಆದರೂ ಅವಳ ಮನಸ್ಸು ಕದ್ದು ಕದ್ದು ಅವನನ್ನು ನೋಡುವಂತೆ ಮಾಡಿತ್ತು.

ಸುಹಾಸ್ ಮನೆಗೆ ಬರುತ್ತಿದ್ದಾನೆ ಎಂದರೆ ಅವನಿಗಿಶ್ಟವಾದ ಅಡುಗೆ ಮಾಡಿ ಇಡುತ್ತಿದ್ದಳು. ತಾನು ಮಾತ್ರ ಅವನ ಮುಂದೆ ಹೋಗುತ್ತಿರಲಿಲ್ಲ. ಅವರಿಬ್ಬರೂ ತಿಂದು ಹೋದ ಮೇಲೆ ತಾನು ತಿನ್ನುತ್ತಿದ್ದಳು.

ಅಂದು ಸುದಾ, ಸುಹಾಸ್  ಊಟಿಗೆ ಹೋಗುವ ಪ್ಲಾನ್ ಹಾಕಿಕೊಂಡಿದ್ದರು. ಕವನಾ ತಾನು ಬರುವುದಿಲ್ಲವೆಂದರೂ, ಹಟಮಾರಿ ಸುದಾ ಬಿಟ್ಟಿರಲಿಲ್ಲ. ಕವನಾ ಕೂಡ ಹೊರಡಲು ತಯಾರಿ ನಡೆಸಿದಳು.

**************************************

ಊಟಿಯ ಸುಂದರ ಸೊಬಗು ಎಲ್ಲರ ಮನಸೂರೆ ಮಾಡಿತ್ತು. ಎರಡು ದಿನ ಕಳೆದು ಹೋಗಿತ್ತು. ಮಾರನೆಯ ದಿನ ಅವರು ತಮ್ಮ ಮನೆಗೆ ಮರಳಬೇಕಿತ್ತು.

ಅಂದು ಸಂಜೆ ಸುಹಾಸ್, ಸುದಾ ಇಬ್ಬರೂ ಹೊರಹೋಗಲು ರೆಡಿಯಾಗಿದ್ದರು. ಕವನಾ ತಾನು ರೂಮಿನಲ್ಲೇ ಇರುವುದಾಗಿ ತಿಳಿಸಿದಳು. ಅವರಿಬ್ಬರೂ ಹೊರಗೆ ಹೋದ ಮೇಲೆ, ಕವನಾಗೆ ಏನೋ ತಳಮಳ. ತನಗೇ ಗೊತ್ತಿಲ್ಲದೇ ಸುಹಾಸ್ ನನ್ನು ಆರಾದಿಸುತ್ತಿದ್ದಳು. ಅವನಲ್ಲೇ ತನ್ನ ಜೀವವಿರಿಸಿದ್ದಳು. ಆದರೂ ಅವರಿಬ್ಬರಿಗೂ ಗೊತ್ತಾಗದ ರೀತಿಯಲ್ಲಿ ಇದ್ದುಬಿಟ್ಟಿದ್ದಳು.

ಸುಹಾಸ್ ನ ಶರ‍್ಟನ್ನು ತನ್ನ ಎದೆಗೆ ತಬ್ಬಿ ಹಿಡಿದು ಮೈ ಮರೆತವಳಿಗೆ, ತನ್ನ ಕಣ್ಣಿನಿಂದ ಸುರಿಯುತ್ತಿದ್ದ ಕಣ್ಣೀರನ್ನು ಒರೆಸಲು ತಿಳಿಯದಾಯಿತು. ಅವಳಿಗೆ ತಿಳಿಯದೇ ಹೊರ ಬಂದಿತ್ತು ಮಾತು “ಇಲ್ಲ ನಿನ್ನ ಬಿಟ್ಟು ಕೊಡಲು ಸಾದ್ಯವಿಲ್ಲ”.

ತಬ್ಬಿ ಹಿಡಿದ ಶರಟಿನೊಂದಿಗೆ ಹಾಗೆ ಮಲಗಿದವಳಿಗೆ ಯಾವಾಗ ನಿದ್ದೆ ಬಂದಿತೋ ಅರಿವಾಗಲಿಲ್ಲ. ಎಚ್ಚರಗೊಂಡಾಗ 8 ಗಂಟೆಯಾಗಿದ್ದು ತಿಳಿಯಿತು. ಅವಳಿಗೆ ಎಚ್ಚರವಾದಾಗ, ಮಲಗುವಾಗ ತಬ್ಬಿ ಹಿಡಿದಿದ್ದ ಶರತ್ ನ ಶರ‍್ಟು ಇರಲಿಲ್ಲ. ತಾನು ತಬ್ಬಿ ಹಿಡಿದ ಶರ‍್ಟು ಎಲ್ಲಿ ಹೋಯಿತು? ಯಾರು ತೆಗೆದುಕೊಂಡು ಹೋದರು? ರೂಮಿನಲ್ಲಿ ಯಾರೂ ಇರಲಿಲ್ಲ. ಅವಳಿಗೆ ಗೊಂದಲ, ಬಯ. ಯಾರು ಬಂದು ಹೋಗಿರಬಹುದು? ಸುದಾ, ಸುಹಾಸ್ ಇಬ್ಬರಿಗಾಗಿ ಕಾದಳು.

ರಾತ್ರಿ 12 ಗಂಟೆ ಯ ಸಮಯ ಸುಹಾಸ್, ಸುದಾ ಬಂದವರೇ ಏನೂ ಮಾತಾನಾಡದೇ ಅವರವರ ರೂಮಿಗೆ ಹೋದರು. ಅವಳಿಗೆ ಏನೂ ಮಾಡಬೇಕೆಂದು ತಿಳಿಯದಾಯಿತು. ರಾತ್ರಿಯೆಲ್ಲಾ ಯೋಚನೆಯಲ್ಲಿ ಮುಳುಗಿದ್ದ ಅವಳಿಗೆ, ನಿದ್ದೆ ಬಂದಿದ್ದು ಬೆಳಗಿನ ಜಾವ!

(ಮುಂದುವರೆಯುವುದು)

( ಚಿತ್ರ ಸೆಲೆ: sciencecare.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: